ದೇವರ ಹೊರತಾಗಿ, ಧರ್ಮದ ಹೊರತಾಗಿ, ನಾಸ್ತಿಕತೆ ನಮಗೆ ನೈತಿಕತೆಯ ಒಂದು ಗಟ್ಟಿಮುಟ್ಟಾದ ತಳಹದಿಯನ್ನು ಒದಗಿಸಿಕೊಡಬಲ್ಲದೆ? ದೊಸ್ತೋವಸ್ಕಿಯ ಮಹಾಕಾದಂಬರಿ Brothers Karamazov ನಲ್ಲಿ ಐವಾನ್ ಎನ್ನುವ ಹೆಸರಿನ ಪಾತ್ರವೊಂದಿದೆ. ಆ ಪಾತ್ರ ಹೇಳುವಂತೆ, ದೇವರು ಮತ್ತು ಅಮರತ್ವ ಇರದೇ ಹೋಗಿದ್ದರೆ, ಆಗ ಎಲ್ಲವೂ ಕಾನೂನು ಬದ್ಧವಾಗಿರುತ್ತಿತ್ತು (without God & Immortality all things are lawful) : ಸಂಗ್ರಹಾನುವಾದ: ಚಿದಂಬರ ನರೇಂದ್ರ
ನೀವು ನಾಸ್ತಿಕರಾಗಿದ್ದರೆ ಈ ಮುಂದಿನ ಚರ್ಚೆ ನಿಮ್ಮನ್ನು ಕೊಂಚ ಅಧೀರರನ್ನಾಗಿಸಬಹುದು. ಒಮ್ಮೆ ಮಹಾ ಕಾದಂಬರಿಕಾರ ಫಿದೋರ್ ದೊಸ್ತೋವಸ್ಕಿ ಹೇಳುತ್ತಾನೆ , ದೇವರು ಇಲ್ಲದೇ ಹೋದರೆ ಆಗ ಎಲ್ಲಕ್ಕೂ ಅನುಮತಿ ಇರುತ್ತಿತ್ತು. ನಿಮ್ಮ ಪ್ರಕಾರ ಒಬ್ಬರ ಜೀವ ತೆಗೆಯುವುದು ತಪ್ಪು, ಆದರೆ ಯಾಕೆ ತಪ್ಪು? ಸಮಾಜ ಹಾಗೆ ಮಾಡುವುದು ತಪ್ಪು ಎಂದು ಹೇಳಿರುವುದರಿಂದ ಅದು ತಪ್ಪಾ? ಹಾಗಾದರೆ ಇದು ಕೇವಲ ಬಹುಸಂಖ್ಯಾತ ಜನರ ಓಪಿನಿಯನ್ ಅಷ್ಟೇ. ಅಥವಾ ಇನ್ನೊಬ್ಬರನ್ನು ಕೊಲ್ಲುವುದು ಯಾಕೆ ತಪ್ಪೆಂದರೆ, ಲಕ್ಷಾಂತರ ವರ್ಷಗಳ ಮನುಷ್ಯನ ವಿಕಾಸದ ಕಾರಣವಾಗಿ ಮನುಷ್ಯನೊಳಗೆ ಸಹಾನುಭೂತಿ (empathy) ಹುಟ್ಟಿಕೊಂಡಿರುವ ಕಾರಣವಾಗಿ ? ಹಾಗಾದರೆ ಇದು ಕೇವಲ ಜೀವಶಾಸ್ತ್ರ ಮಾತ್ರ. ಆದ್ದರಿಂದ ಈ ಯಾವ ಸಂಗತಿಗಳೂ ಕೊಲೆಯನ್ನು ವಸ್ತುನಿಷ್ಠವಾಗಿ ತಪ್ಪೆಂದು ಪ್ರೂವ್ ಮಾಡುವುದಿಲ್ಲ. ಇವು ಕೇವಲ ನಮ್ಮ ವೈಯಕ್ತಿಕ ಆದ್ಯತೆಗಳು.
ಹಾಗಾದರೆ ಈಗ ನಮ್ಮ ಮುಂದೆ ಇರುವ ಪ್ರಶ್ನೆ, ದೇವರ ಹೊರತಾಗಿ, ಧರ್ಮದ ಹೊರತಾಗಿ, ನಾಸ್ತಿಕತೆ ನಮಗೆ ನೈತಿಕತೆಯ ಒಂದು ಗಟ್ಟಿಮುಟ್ಟಾದ ತಳಹದಿಯನ್ನು ಒದಗಿಸಿಕೊಡಬಲ್ಲದೆ? ದೊಸ್ತೋವಸ್ಕಿಯ ಮಹಾಕಾದಂಬರಿ Brothers Karamazov ನಲ್ಲಿ ಐವಾನ್ ಎನ್ನುವ ಹೆಸರಿನ ಪಾತ್ರವೊಂದಿದೆ. ಆ ಪಾತ್ರ ಹೇಳುವಂತೆ, ದೇವರು ಮತ್ತು ಅಮರತ್ವ ಇರದೇ ಹೋಗಿದ್ದರೆ, ಆಗ ಎಲ್ಲವೂ ಕಾನೂನು ಬದ್ಧವಾಗಿರುತ್ತಿತ್ತು (without God & Immortality all things are lawful). ಈ ಸಾಲಿನ ಅರ್ಥ, ಎಲ್ಲರೂ ಒಮ್ಮೆಲೇ ಕೆಟ್ಟವರಾಗಿಬಿಡುತ್ತಿದ್ದರು ಎಂದಲ್ಲ. ಇದರ ಅರ್ಥ, ದೇವರ ಕುರಿತಾದ ನಂಬಿಕೆ ಇರದೇ ಹೋಗಿದ್ದರೆ, ಸಾವಿನ ನಂತರದ ಬದುಕಿನ ಬಗ್ಗೆ ವಿಶ್ವಾಸ ಇರದೇ ಹೋಗಿದ್ದರೆ, ಸ್ವರ್ಗ ನರಕಗಳ ಬಗ್ಗೆ ನಂಬಿಕೆ ಇರದೇ ಹೋಗಿದ್ದರೆ, ಜನ ಎಲ್ಲವನ್ನೂ ಜಸ್ಟೀಫೈ ಮಾಡಬಲ್ಲವರಾಗಿರುತ್ತಿದ್ದರು; ಅದು ಒಬ್ಬರನ್ನು ಕೊಲೆ ಮಾಡುವುದಾಗಿರಬಹುದು ಅಥವಾ ಒಬ್ಬರಿಗೆ ದ್ರೋಹ ಮಾಡುವುದಾಗಿರಬಹುದು.
ಒಂದು ವೇಳೆ, ಮೇಲೆ ಕುಳಿತುಕೊಂಡು ನಮ್ಮನ್ನು ೨೪ ಗಂಟೆಯೂ ಗಮನಿಸುವ ದೇವರ ಕುರಿತಾದ ನಂಬಿಕೆಯೊಂದು ಇಲ್ಲದೇ ಹೋಗಿದ್ದರೆ, ಅಥವಾ ಸಾವಿನ ನಂತರದ ಪರಿಣಾಮಗಳ ಬಗ್ಗೆ ಯಾವ ವಿಶ್ವಾಸವೂ ಇಲ್ಲದೇ ಹೊಗಿದ್ದರೆ, ಈ ನೈತಿಕ ಬಾಧ್ಯತೆ (moral obligation) ಎನ್ನುವ ಸಂಗತಿ ಹುಟ್ಟುತ್ತಿದ್ದಾದರೂ ಎಲ್ಲಿಂದ?
ಇದಕ್ಕೆ ಉತ್ತರ, social contract (ಸಾಮಾಜಿಕ ಒಪ್ಪಂದ) ಎಂದು ನಾಸ್ತಿಕರು ಹೇಳುತ್ತಾರೆ. ಹಾಗೆಂದರೆ, ಕೊಲೆ ಮಾಡುವುದು ತಪ್ಪು ಎಂದು ಸಮಾಜದ ನಾವೆಲ್ಲರೂ ಕೂಡಿ ಮಾಡಿದಂಥ ಒಂದು ನಿರ್ಧಾರ, ಆಗ ಮಾತ್ರ ಸಮಾಜ ಸುಲಲಿತವಾಗಿ ಕಾರ್ಯನಿರ್ವಹಿಸಬಲ್ಲದು. ಆದರೆ ಇದು ನೈತಿಕತೆ ಅಲ್ಲ, ಇದು ಅನುಕೂಲಕರ ವಾದ (convenience), ಇದು ಪ್ರ್ಯಾಕ್ಟಿಕಲ್ ಥಿಂಕಿಂಗ್. ಯೋಚನೆ ಮಾಡಿ ನೋಡಿ, ಮುಂದೊಂದು ದಿನ ಸಮಾಜ, ಹಿಂಸೆಯಿಂದ ಉಪಯೋಗ ಇದೆ ಎಂದು ನಿರ್ಧರಿಸಿದರೆ, ನಾಜಿ ಜರ್ಮನಿಯಲ್ಲಿ ಆದಂತೆ, ಆಗ ಹಿಂಸೆ ಎಲ್ಲರಿಗೂ ಒಪ್ಪಿತವಾಗುತ್ತದೆ. ಆದರೆ ಇದು ನೈತಿಕ ಆಗಬಲ್ಲದೆ?
ಕೆಲವು ನಾಸ್ತಿಕರು ಹೇಳುತ್ತಾರೆ, ಮನುಷ್ಯನ ವಿಕಾಸದ ಕಾರಣವಾಗಿ ಮನುಷ್ಯನೊಳಗೆ empathy ಹುಟ್ಟಿಕೊಂಡಿದೆ ಎಂದು. ನಿಜ ಆದರೆ empathy ಕೇವಲ ಒಂದು ಫೀಲಿಂಗ್, ಇದು ನಿಯಮ ಅಲ್ಲ, ಕಾನೂನು ಅಲ್ಲ. ಕೆಲವರು ಈ ಸಹಾನುಭೂತಿಯನ್ನು ಫೀಲ್ ಕೂಡ ಮಾಡಿಕೊಳ್ಳುವುದಿಲ್ಲ, ಉದಾಹರಣೆಗೆ psychopath ಗಳು. ಹಾಗಾದರೆ ಸೈಕೋಪ್ಯಾಥ್ ಗಳಿಗೆ ಇನ್ನೊಬ್ಬರಿಗೆ ಹಾನಿ ಮಾಡುವ ಅಧಿಕಾರವಿದೆಯೇ? ಹಾಗಾದರೆ ಮನುಷ್ಯನ evolution ನಿಂದಾಗಿ ಮನುಷ್ಯನಿಗೆ, ಆಕ್ರಮಣಶೀಲತೆ, ಹಿಂಸೆ, ಬುಡಕಟ್ಟುತನ ಇವೆಲ್ಲ ಕೂಡ ಬಂದಿವೆಯಲ್ಲ, ಮನುಷ್ಯ ಇವುಗಳನ್ನೂ ಅನುಸರಿಸಬೇಕೆ?
ಕೆಲವು ನಾಸ್ತಿಕರ ಪ್ರಕಾರ ಇನ್ನೊಬ್ಬರಿಗೆ ನೋವು ನೀಡುವುದು ತಪ್ಪು, ನೋವು ಅನುಭವಿಸುವುದು ತಪ್ಪು, ಆದರೆ ವಸ್ತುನಿಷ್ಠವಾಗಿ ಯಾಕೆ ನೋವು ಕೊಡುವುದು, ಅನುಭವಿಸುವುದು ತಪ್ಪು? ನಿಮಗೆ ನೋವಾಗುತ್ತದೆ, ನನಗೆ ನೋವಾಗುತ್ತದೆ ಆದರೆ, ನಮ್ಮ ಈ ಫೀಲ್ಂಗ್ ಸಾರ್ವತ್ರಿಕ ಸತ್ಯ ಅಲ್ಲ. ದೊಸ್ತೋವಸ್ಕಿ, ನಾಸ್ತಿಕರು ಅನೈತಿಕ ಜನ ಎಂದು ಹೇಳುತ್ತಿಲ್ಲ. ಅವನು ನಾಸ್ತಿಕತೆ, ನೈತಿಕತೆಗೆ ಒಂದು ಗಟ್ಟಿ ತಳಪಾಯ ಹಾಕಿಕೊಡುವುದಿಲ್ಲ ಎಂದು ಮಾತ್ರ ಹೇಳುತ್ತಿದ್ದಾನೆ. ದೇವರ ಹೊರತಾಗಿ, ನೈತಿಕತೆ ಎನ್ನುವ ಸಂಗತಿ ಕೇವಲ ಒಬ್ಬರ ವೈಯಕ್ತಿಕ ಆದ್ಯತೆಯಾಗಿ, ಸಾಮಾಜಿಕ ಒಪ್ಪಂದವಾಗಿ, ಒಂದು ಭಾವ ಮಾತ್ರವಾಗಿ ಉಳಿದುಬಿಡುತ್ತದೆ. ಮತ್ತು ಈ ಎಲ್ಲವೂ ನಮ್ಮ ಮೇಲೆ ಯಾವ ಒತ್ತಡಗಳನ್ನೂ, ಕಟ್ಟುಪಾಡುಗಳನ್ನ ಹೇರುವುದಿಲ್ಲ.
ಒಂದು ವೇಳೆ ಮನುಷ್ಯ ಸಮಾಜವನ್ನು ಕೇರ್ ಮಾಡುವುದಿಲ್ಲವಾದರೆ,ಸಹಾನುಭೂತಿಯನ್ನು ಫೀಲ್ ಮಾಡುವುದಿಲ್ಲವಾದರೆ, ಹಿಂಸೆಯಿಂದ ಉಪಯೋಗ ಇದೆ ಎಂದು ಯೋಚಿಸುತ್ತಾನಾದರೆ, ಆಗ ತಪ್ಪು ಮಾಡುವುದರಿಂದ ಅವನನ್ನು ಯಾವ ಸಂಗತಿ ತಡೆಯಬಹುದು? ಶಿಕ್ಷೆ ಅವನನ್ನು ತಡೆಯಬಹುದಾ? ಆದರೆ ಶಿಕ್ಷೆ, ಒಂದು ಭಯ, ಒಂದು ಪರಿಣಾಮ ಮಾತ್ರ, ಅದು ನೈತಿಕತೆ ಅಲ್ಲ. ಅಥವಾ ಅವನನ್ನು ಕಾನೂನು ತಡೆ ಹಿಡಿಯಬಲ್ಲದೆ? ಆದರೆ ಕಾನೂನುಗಳನ್ನು ಮಾಡುವುದು ಜನರೇ ಅಲ್ಲವೇ? ಅವರೇ ಆ ಕಾನೂನುಗಳನ್ನು ಮುಂದೆ ಬದಲಿಸಬಲ್ಲರು ಕೂಡ.
ಹಾಗಾದರೆ ನೀವು ನಾಸ್ತಿಕರಾದರೆ ಈಗ ಹೇಳಿ, ನಿಮಗೆ ಉಪಯೋಗ ಆಗುತ್ತದೆಯಾದರೆ, ಇನ್ನೊಬ್ಬರಿಗೆ ನೀವು ಯಾಕೆ ಹಾನಿ ಮಾಡಬಾರದು? ಹೀಗೆ ಮಾಡುವುದು ತಪ್ಪು ಎಂದು ಮಾತ್ರ ಹೇಳಿಬಿಡಬೇಡಿ. ಹೀಗೆ ಮಾಡುವುದು ಯಾಕೆ ತಪ್ಪು ಎಂದು ಹೇಳಿ. ದೇವರ ಅಸ್ತಿತ್ವದ ಕುರಿತಾದ ನಂಬಿಕೆಯ ಹೊರತಾಗಿ, ಸಾವಿನ ನಂತರದ ಬದುಕಿನ ಆಮಿಷದ ಹೊರತಾಗಿ, ಕಾಸ್ಮಿಕ್ ನ್ಯಾಯದ ವಿಶ್ವಾಸದ ಹೊರತಾಗಿ, ಇನ್ನೊಬ್ಬರಿಗೆ ಹಾನಿ ಮಾಡುವುದು ಯಾಕೆ ತಪ್ಪು ಹೇಳಿ.

