ನೀವು ಯಾವಾಗಲೂ ಒಬ್ಬರೇ ಇರಲು ಬಯಸುತ್ತೀರಾದ್ದರಿಂದ, ಬಹುತೇಕರು ನಿಮ್ಮನ್ನು ಅಂತರ್ಮುಖಿಗಳು ಎಂದುಕೊಳ್ಳುತ್ತಾರೆ. ಆದರೆ ವಾಸ್ತವವೇ ಬೇರೆ, ನಿಮಗೆ ಒಂಟಿತನ ಇಷ್ಟವಾಗುವುದಿಲ್ಲ, ನಿಮಗೆ ಇಷ್ಟವಾಗೋದು ಪ್ರಶಾಂತತೆ. ಈ ಎರಡು ಸನ್ನಿವೇಶಗಳ ನಡುವಿನ ವ್ಯತ್ಯಾಸ ಅಪಾರ ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಒಂಟಿತನ ಮತ್ತು ಏಕಾಂತ
ಎರಡೂ ಬೇರೆ ಬೇರೆ.
ಒಂಟಿತನ ಕಾಡುತ್ತಿರುವಾಗ,
ಸರಿಯಾದ ದಾರಿಯಲ್ಲಿದ್ದೇವೆಂದು
ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುವುದು
ಬಹಳ ಸುಲಭ.
ಏಕಾಂತ ಒಳ್ಳೆಯದು.
ಇಲ್ಲಿಯೂ ಇರುವುದು ಕೇವಲ ನಾವು ಮಾತ್ರ,
ಆದರೆ ಒಂಟಿತನದ ಜಿಗುಪ್ಸೆ ಇಲ್ಲಿಲ್ಲ.
ಕನ್ನಡಿಯಂಥ ಸಂಗಾತಿಯನ್ನ ಹುಡುಕಿ.
ಆ ಇನ್ನೊಬ್ಬರ ಹೃದಯದಲ್ಲಿ ಮಾತ್ರ
ನೀವು ನಿಮ್ಮ ನಿಜವನ್ನು ಕಾಣುವಿರಿ
ಮತ್ತು
ನಿಮ್ಮೊಳಗಿನ ಭಗವಂತನನ್ನು ಕೂಡ.
~ ಶಮ್ಸ್ ತಬ್ರೀಝಿ
ನೀವು ಯಾವಾಗಲೂ ಒಬ್ಬರೇ ಇರಲು ಬಯಸುತ್ತೀರಾದ್ದರಿಂದ, ಬಹುತೇಕರು ನಿಮ್ಮನ್ನು ಅಂತರ್ಮುಖಿಗಳು ಎಂದುಕೊಳ್ಳುತ್ತಾರೆ. ಆದರೆ ವಾಸ್ತವವೇ ಬೇರೆ, ನಿಮಗೆ ಒಂಟಿತನ ಇಷ್ಟವಾಗುವುದಿಲ್ಲ, ನಿಮಗೆ ಇಷ್ಟವಾಗೋದು ಪ್ರಶಾಂತತೆ. ಈ ಎರಡು ಸನ್ನಿವೇಶಗಳ ನಡುವಿನ ವ್ಯತ್ಯಾಸ ಅಪಾರ.
ಬಹಳಷ್ಟು ಜನರ ನಡುವೆ ಇರುವುದು ನಿಮ್ಮನ್ನು drain ಮಾಡುತ್ತದೆ. ಅಲ್ಲಿ ನಿಮಗೆ ಅಭಿನಯ ಮಾಡಬೇಕಾಗುತ್ತದೆ, ನಿಮ್ಮ ಮಾತುಗಳನ್ನು ಫಿಲ್ಟರ್ ಮಾಡಬೇಕಾಗುತ್ತದೆ, ನಿಮ್ಮನ್ನು ನೀವು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಈ ಎಲ್ಲವೂ ಬಹಳ ತ್ರಾಸದಾಯಕ, ಇದು ನಿಮ್ಮನ್ನು ಬಳಲಿಸಿ ಬಿಡುತ್ತದೆ. ಆದ್ದರಿಂದ ನೀವು ಜನರಿಂದ ದೂರ ಇರಲು ಬಯಸುತ್ತೀರಿ. ಜನರು ನಿಮಗೆ ಬೇಡವಾಗಿರೋದು ನೀವು ಅವರನ್ನು ದ್ವೇಷಿಸುವ ಕಾರಣದಿಂದಲ್ಲ ಬದಲಾಗಿ ಈ ಒಡನಾಟ ನಿಮ್ಮಿಂದ ನಿಮ್ಮ ಎನರ್ಜಿಯನ್ನು drain ಮಾಡಿ ಬಿಡುತ್ತದೆ ಎನ್ನುವ ಕಾರಣದಿಂದ.
ಆದರೆ ಸಮಾನ ಮನಸ್ಕ, ಸೂಕ್ತ ಜನರು ನಿಮ್ಮ ಸುತ್ತ ಇದ್ದಾಗ ನೀವು ಪೂರ್ಣವಾಗಿ ಬದಲಾಗಿಬಿಡುತ್ತೀರಿ. ಅಲ್ಲಿ ನೀವು ಗಂಟೆಗಟ್ಟಲೇ ಮಾತನಾಡುತ್ತಿರಿ, ಮುಕ್ತವಾಗಿ ನಗುತ್ತೀರಿ, ನೀವು ನಿಮ್ಮ ಅತ್ಯಂತ ನೈಜ ಆವೃತ್ತಿಯಲ್ಲಿ ಕಾಣಿಸಿಕೊಳ್ಳುತ್ತೀರಿ. ಯಾಕೆಂದರೆ ಈ ಜನರ ಎದುರು ನಿಮಗೆ ನಾಟಕ ಮಾಡಬೇಕಿಲ್ಲ, ಅವರು ನಿಮ್ಮನ್ನು ಜಡ್ಜ್ ಮಾಡುವುದಿಲ್ಲ, ಅವರು ನಿಮಗೆ ಸಮಾಧಾನ ನೀಡುತ್ತಾರೆ, ಪ್ರಶಾಂತತೆಯನ್ನು ನೀಡುತ್ತಾರೆ.
ನಿಜದ ಸಂಗತಿ ಎಂದರೆ ನೀವು ಇಂಟ್ರೊವರ್ಟ್ ಅಲ್ಲ. ನೀವು ಕೇವಲ ಸಿಲೆಕ್ಟಿವ್ ಆಗಿದ್ದೀರಿ. ನೀವು ನಿಮ್ಮ ಎನರ್ಜಿ drain ಮಾಡುವ ಜನರಿಂದ ತಪ್ಪಿಸಿಕೊಳ್ಳುತ್ತೀರಿ ಮತ್ತು ನಿಮ್ಮೊಳಗೆ ಎನರ್ಜಿ ತುಂಬುವ ಜನರೊಂದಿಗೆ ಮುಕ್ತವಾಗಿ ಬೆರೆಯುತ್ತೀರಿ. ಆದ್ದರಿಂದ ವಿಷಯ ಯಾವತ್ತೂ ಒಂಟಿತನದ್ದು ಆಗಿರಲೇ ಇಲ್ಲ, ನಿಮ್ಮ ಆದ್ಯತೆ ಯಾವಾಗಲೂ ಪ್ರಶಾಂತತೆಯಾಗಿತ್ತು.

