“ಒಂದು ಉದ್ದೇಶದಲ್ಲಿ ನಂಬಿಕೆ ಇರುವ ಕಾರಣ ಜನ ಚಳುವಳಿಗಳನ್ನು ಸೇರಿಕೊಳ್ಳುವುದಿಲ್ಲ, ಬದಲಾಗಿ ಅವರು ತಮ್ಮ ಬದುಕಿನಲ್ಲಿನ ಕೊರತೆಯನ್ನು ತುಂಬಿಕೊಳ್ಳಲು ಮೂವಮೆಂಟ್ ಗಳಲ್ಲಿ ಭಾಗವಹಿಸುತ್ತಾರೆ ಅನ್ನುತ್ತಾರೆ” ಎರಿಕ್ ಹಾಪರ್ । ಸಂಗ್ರಹಾನುವಾದ : ಚಿದಂಬರ ನರೇಂದ್ರ
1953 ರಲ್ಲಿ ಬರಹಗಾರ ಎರಿಕ್ ಹಾಪರ್ ಮಂಡಿಸಿದ ವಾದ ಏನೆಂದರೆ, ಉಗ್ರ ಐಡಿಯಾಲೊಜಿಗಳಿಗೆ ಮತ್ತು ತೀವ್ರವಾದಿ ಉದ್ದೇಶಗಳಿಗೆ ಬಹುತೇಕ ವೈರಿಗಳ ಅವಶ್ಯಕತೆ ಇರುತ್ತದೆ. ಇಂಥ ವೈರತ್ವ ಜನಗಳನ್ನು ಒಂದು ಮಾಡಿ ಒಂದು ಐಡೆಂಟಿಟಿಯನ್ನು ಸೃಷ್ಟಿ ಮಾಡುತ್ತದೆಯೇನೋ ಹೌದು ಆದರೆ ಅದು ತನ್ನ ವಿನಾಶದ ಬೀಜಗಳನ್ನು ತಾನೇ ಬಿತ್ತುತ್ತದೆ ಕೂಡ.
ತಮ್ಮ ಪುಸ್ತಕ The True Believer ನಲ್ಲಿ ಹಾಪರ್ ಏನು ಹೇಳುತ್ತಾರೆಂದರೆ, ಒಂದು ಉದ್ದೇಶದಲ್ಲಿ ನಂಬಿಕೆ ಇರುವ ಕಾರಣ ಜನ ಚಳುವಳಿಗಳನ್ನು ಸೇರಿಕೊಳ್ಳುವುದಿಲ್ಲ, ಬದಲಾಗಿ ಅವರು ತಮ್ಮ ಬದುಕಿನಲ್ಲಿನ ಕೊರತೆಯನ್ನು ತುಂಬಿಕೊಳ್ಳಲು ಮೂವಮೆಂಟ್ ಗಳಲ್ಲಿ ಭಾಗವಹಿಸುತ್ತಾರೆ. ಚಳುವಳಿ ಅವರಿಗೆ ಬದುಕಿನ ಉದ್ದೇಶವನ್ನೂ, ಐಡೆಂಟಿಟಿಯನ್ನೂ ಮತ್ತು ಬ್ಲೇಮ್ ಮಾಡಲು ವಿರೋಧಿಗಳನ್ನು ಸಾಧ್ಯಮಾಡುತ್ತದೆ.
ನೀವು ಯಾವುದೇ ಚಳುವಳಿಯನ್ನ ಗಮನಿಸಿ, ಅದು ರಾಜಕೀಯ, ಧಾರ್ಮಿಕ, ಸಾಮಾಜಿಕ, ಅಥವಾ ಸೈದ್ಧಾಂತಿಕ ಯಾವುದೇ ಚಳುವಳಿ ಆಗಿರಬಹುದು, ಅಲ್ಲಿ ಒಬ್ಬ ದೇವರು ಇಲ್ಲದಿದ್ದರೂ ಒಬ್ಬ ಸೈತಾನನಂತೂ ಇದ್ದೇ ಇರುತ್ತಾನೆ. ಏಕೆಂದರೆ ಅಲ್ಲಿ ಬಾಂಡಿಂಗ್ ಆಗಿ ಕೆಲಸ ಮಾಡುತ್ತಿರುವುದು ವೈರತ್ವ. ನಿಮ್ಮ ನೆರೆಯವರೊಂದಿಗೆ ನಿಮಗೆ, ಭವಿಷ್ಯ ಹೇಗಿರಬೇಕೆನ್ನುವ ಕುರಿತು ಒಮ್ಮತ ಇಲ್ಲದಿರಬಹುದು, ಆದರೆ ನಿಮ್ಮಿಬ್ಬರಿಗೂ ಒಬ್ಬ ಕಾಮನ್ ವೈರಿ ಇದ್ದಾಗ, ವೈರತ್ವ ನಿಮ್ಮನ್ನು ಒಂದಾಗಿಸುತ್ತದೆ.
ಮತ್ತು ಸನ್ನಿವೇಶ ಅಪಾಯಕಾರಿಯಾಗೋದು ಇಂಥ ಸಮಯದಲ್ಲಿಯೇ. ಚಳುವಳಿಯೊಂದು ವೈರತ್ವದ ಬುನಾದಿಯ ಮೇಲೆ ಕಟ್ಟಲ್ಪಟ್ಟಿರುವಾಗ ಅದಕ್ಕೆ ವೈರಿಗಳ ನಿರಂತರ ಸರಬರಾಜು ಬೇಕಾಗುತ್ತದೆ. ಮೂಲ ವೈರಿ ಸೋತರೂ ಅಲ್ಲಿ ಸಂಭ್ರಮವಿರುವುದಿಲ್ಲ. ಅದು. ಮತ್ತೊಬ್ಬ ವೈರಿಯನ್ನು ಹುಡುಕುತ್ತದೆ, ಅಕಸ್ಮಾತ್ ವೈರಿ ಹೊರಗೆ ಸಿಗದಿದ್ದಾಗ ಅದು ತನ್ನೊಳಗೇ ವೈರಿಯನ್ನು ಹುಡುಕುತ್ತದೆ. ಆಗ ನಿನ್ನೆಯ ನಂಬಿಕಸ್ತರು ಇಂದಿನ ದ್ರೋಹಿಗಳಾಗುತ್ತಾರೆ. ಹೀಗೆ ಪವಿತ್ರತೆಯ ವೃತ್ತ ಚಿಕ್ಕದಾಗುತ್ತ ಹೋಗಿ ಕೊನೆಗೊಮ್ಮೆ ಚಳುವಳಿ ನಾಶವಾಗಿಬಿಡುತ್ತದೆ. ಇಲ್ಲಿ ಯಾರೂ ಏನನ್ನೂ ಕಟ್ಟುತ್ತಿಲ್ಲ, ಎಲ್ಲರೂ ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುತ್ತಿದ್ದಾರೆ.
ಎಲ್ಲ ಚಳುವಳಿಗೂ ಇರುವ ಒಂದು ಲಿಟ್ಮಸ್ ಟೆಸ್ಟ್ ಏನೆಂದರೆ : ಚಳುವಳಿಯೊಂದು ಪ್ರೇಮ ಮತ್ತು ಕಟ್ಟುವಿಕೆಗಿಂತ, ದ್ವೇಷದ ಮೇಲೆ, ವೈರಿಗಳ ಹುಡುಕಾಟದಲ್ಲಿ ತನ್ನ ಹೆಚ್ಚಿನ ಸಮಯ ವ್ಯಯ ಮಾಡುತ್ತಿದ್ದರೆ, ಅದು ಚಳುವಳಿಯಲ್ಲ. ಅದು ನಿರಂತರವಾಗಿ ಇಂಧನವನ್ನು ಬಯಸುತ್ತಿರುವ hate machine. ಮತ್ತು ಇಲ್ಲಿ ಇಂಧನವಾಗಿ ಬಳಕೆಯಾಗುವವರು ಜನಗಳು.

