ಹರಿವ ನೀರು

ಎಲ್ಲವೂ ಕ್ಷಣಿಕ ಎಂಬ  ತಾತ್ವಿಕ ಪ್ರಶ್ನೆಯನ್ನು ಎದುರಿಟ್ಟುಕೊಂಡು ಆಧ್ಯಾತ್ಮಿಕವಲ್ಲದ ಆಯಾಮದಲ್ಲಿ ‘ಹರಿವ ನೀರಿದು’ ಎನ್ನುವ ಧೀರ್ಘ ಕವಿತೆಯೊಂದನ್ನು (ಕವಿತಾ ಸಂಕಲನಕ್ಕೂ ಅದೇ ಹೆಸರಿದೆ) ಗಂಗಾಧರ ಚಿತ್ತಾಲರು ಬರೆದಿದ್ದಾರೆ. ಈ ಕವಿತೆಯನ್ನೊಳಗೊಂಡ ಅದೇ ಹೆಸರಿನ ಸಂಕಲನ 1970 ರಲ್ಲಿ ಪ್ರಕಟವಾಯಿತು. ಇದು ಆ ಕಾಲದಲ್ಲಿ ಬಹು ಚರ್ಚಿತವಾದ ಕವಿತೆಯೂ ಹೌದು… | ಶ್ರೀಪಾದ ಹೆಗಡೆ

‘ಯಾವನೂ ಅದೇ ನದಿಯಲ್ಲಿ ಮತ್ತೊಮ್ಮೆ ಕಾಲಿಡಲಾರ ಏಕೆಂದರೆ ಅಷ್ಟು ಹೊತ್ತಿಗೆ ಅದು ಅದೇ ನದಿಯಾಗಿ ಉಳಿದಿರುವುದಿಲ್ಲ ಮತ್ತು ಅವನೂ ಅದೇ ವ್ಯಕ್ತಿಯಾಗಿ ಉಳಿದಿರುವುದಿಲ್ಲ.’ ಇದು ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಬದುಕಿದ್ದ ಹೆರಾಕ್ಲಿಟಸ್ (Heraclitus) ಎಂಬ ಗ್ರೀಕ ತತ್ವಜ್ಞಾನಿ ಹೇಳಿದ ಮಾತು. ಸರಿಸುಮಾರು ಇವನ ಸಮಕಾಲೀನನಾದ ಬುದ್ಧ ಹೇಳಿದ್ದೂ ಇದನ್ನೇ ಅಂದರೆ ಈ ವಿಶ್ವ ಮತ್ತು ಅದರಲ್ಲಿನ ಪ್ರತಿಯೊಂದೂ ಅನುಕ್ಷಣವೂ ಬದಲಾಗುತ್ತಲೇ ಇರುತ್ತದೆ, ಶಾಶ್ವತ ಎನ್ನುವುದಿಲ್ಲ ಎಂದು. ಹಾಗಾಗಿ ಅವಿನಾಶಿಯಾದ ಆತ್ಮದ ಅಸ್ತಿತ್ವವನ್ನು ಬೌದ್ಧ ಧರ್ಮ ಪ್ರಶ್ನಿಸುತ್ತದೆ ಮಾತ್ರ ಅಲ್ಲ ಪೂರ್ತಿಯಾಗಿ ಅದನ್ನು ಅಲ್ಲಗಳೆಯುತ್ತದೆ.

ಎಲ್ಲವೂ ಕ್ಷಣಿಕ ಎಂಬ ಇದೇ ತಾತ್ವಿಕ ಪ್ರಶ್ನೆಯನ್ನು ಎದುರಿಟ್ಟುಕೊಂಡು ಆಧ್ಯಾತ್ಮಿಕವಲ್ಲದ ಆಯಾಮದಲ್ಲಿ ‘ಹರಿವ ನೀರಿದು’ ಎನ್ನುವ ಧೀರ್ಘ ಕವಿತೆಯೊಂದನ್ನು (ಕವಿತಾ ಸಂಕಲನಕ್ಕೂ ಅದೇ ಹೆಸರಿದೆ) ಗಂಗಾಧರ ಚಿತ್ತಾಲರು ಬರೆದಿದ್ದಾರೆ. ಈ ಕವಿತೆಯನ್ನೊಳಗೊಂಡ ಅದೇ ಹೆಸರಿನ ಸಂಕಲನ 1970 ರಲ್ಲಿ ಪ್ರಕಟವಾಯಿತು. ಇದು ಆ ಕಾಲದಲ್ಲಿ ಬಹು ಚರ್ಚಿತವಾದ ಕವಿತೆಯೂ ಹೌದು.

ನಿರಂತರ ಹರಿಯುತ್ತಿರುವ ಕಾಲ ಪ್ರವಾಹದಲ್ಲಿ ಬದುಕಿನ ಅನುಭವಗಳನ್ನು ಅನೇಕ ಆಯಾಮಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡುವ ಕನ್ನಡದ ಒಂದು ಮಹತ್ವದ ಕವಿತೆ ಇದು. ಬಹು ದೊಡ್ಡ ತಾತ್ವಿಕ ಪ್ರಶ್ನೆಯನ್ನಿಟ್ಟುಕೊಂಡು ವ್ಯಕ್ತಿ ಮತ್ತು ಸಮಷ್ಟಿಯ ಬದುಕನ್ನು ಈ ಕವಿತೆ ಪರೀಕ್ಷಿಸುತ್ತದೆ. ಕಾಲ ಪ್ರವಾಹದಲ್ಲಿ ಬದುಕು ಸದಾ ಹರಿಯುವ ನದಿಯ ನೀರಿನ ಹನಿಯಂತೆ ಕ್ಷಣಿಕವಾದರೂ ಪ್ರತಿ ಕ್ಷಣವೂ ನಿಜವೆನ್ನಿಸುವಂತೆ ಮಾಡಿ ವರ್ತಮಾನವನ್ನು ಸದಾ ಸತ್ಯವಾಗಿಸುತ್ತದೆ. ಸಮಷ್ಟಿ ಬದುಕೂ ಸಹ ಈ ಕಾಲ ಪ್ರವಾಹದಲ್ಲಿ ಭವಿತವ್ಯವನ್ನು ಬೆಳೆಯುತ್ತಾ, ನಶ್ವರತೆಯನ್ನೇ ಫಲಿಸುತ್ತಾ, ಅದನ್ನೇ ಕುಡಿಯೊಡೆಯ ಬಿಟ್ಟು ಶಾಶ್ವತೆಯನ್ನು ನಿಲ್ಲಿಸುವ ಪರಿಯನ್ನು ಬಹು ವಿಸ್ತಾರವಾದ ಭಿತ್ತಿಯಲ್ಲಿ ನಮಗೆ ಈ ಕವಿತೆ ಕಾಣಿಸುತ್ತದೆ.

ಚಿತ್ತಾಲರ ಬಹು ಮುಖ್ಯ ಕವಿತೆಗಳನ್ನು ಹಿಂದೊಮ್ಮೆ ಚರ್ಚಿಸಿದ್ದೆ. ಈ ಕವಿತೆಗೆ ಸಂಬಂಧಿಸಿದ ಅದರೊಳೊಂದು ಭಾಗವನ್ನು ಇನ್ನೊಮ್ಮೆ ನಿಮ್ಮ ಮುಂದಿಡುತ್ತಿರುವೆ.

ಗಂಗಾಧರ ಚಿತ್ತಾಲರ ಮೂರನೆ ಸಂಕಲನ ’ಹರಿವ ನೀರಿದು’  ಹತ್ತು ಕವಿತೆಗಳನ್ನೊಳಗೊಂಡು ಅನಂತಮೂರ್ತಿಯವರ ಮುನ್ನುಡಿಯೊಂದಿಗೆ ೧೯೭೦ರಲ್ಲಿ ಹೊರಬಂತು. ಸಂಕಲನದ ಶೀರ್ಷಿಕೆಯ ಹೆಸರಿನ ’ಹರಿವ ನೀರಿದು’ ಚಿತ್ತಾಲರ ಸರ್ವ ಶಕ್ತಿಯೂ ಒದಗಿ ಬಂದಿರುವ ಕವನವೆಂದು ಅನಂತಮೂರ್ತಿಯವರು ಅಭಿಪ್ರಾಯ ಪಡುತ್ತಾರೆ. ಇದು ಜೀವನಾನುಭವವನ್ನು ತಾತ್ವಿಕ ವಿಚಾರದ ಮಟ್ಟದಲ್ಲಿ ಪರೀಕ್ಷಿಸಿ, ದಾರ್ಶನಿಕವಾಗಿ ಒಡಮೂಡಿಸುವ ಪ್ರಯತ್ನವೆಂದು ಈ ಕವಿತೆಯನ್ನು ಅವರು ವ್ಯಾಖ್ಯಾನಿಸಿದ್ದಾರೆ.

ಕವಿತೆಯ ಮೊದಲ ಭಾಗದಲ್ಲಿ ಕಾಲ ಮತ್ತು ಜೀವನವನ್ನು ಸಾಂಪ್ರದಾಯಿಕ ಪ್ರತಿಮೆಯಾದ ಹರಿವ ನೀರಿಗೆ ಹೊಲಿಸಿಲಾಗಿದೆ. ಈ ಭಾಗದ ಕಾವ್ಯ  ಪೂರ್ತಿಯಾಗಿ ಗ್ರಾಂಥಿಕ ಭಾಷೆಯಿಂದ ಕೂಡಿದ್ದು ಘೋಷ ಲಯ ದೊಂದಿಗೆ ಗಂಭೀರವಾಗಿ ಹರಿಯುವ ನದಿಯ ಶಬ್ದಕ್ಕೆ ಸಂವಾದಿಯಾದಂತಿದೆ. ಮುಂದಿನ ಭಾಗಗಳಲ್ಲಿ ಕವಿತೆ ಆಡುಮಾತಿನ ಲಯದತ್ತ ಹೊರಳತ್ತದೆ ಮತ್ತು ಭಾವಕ್ಕೆ ತಕ್ಕ ಹಾಗೆ ಗ್ರಾಂಥಿಕ ಭಾಷೆ ಮತ್ತು ಆಡು ಮಾತು ಇವೆರಡರ ಲಯ ವೈವಿಧ್ಯತೆಯ ಹೆಣಿಗೆಯಿಂದ ಕೂಡಿದೆ.

‘ಹರಿವ ನೀರಿದು
     ಮರಳಿ ಮೂಲದೆಡೆ
ಹರಿಯಲಾರದ
     ನಿರತ ಏಕಮುಖಗಾಮಿ
ಹೊಳೆ
ಹರಿದಷ್ಟು
      ಮರೆಯೊಳಗಡುವ ನಿರಂತರ ಪಾತ್ರ
ಹರಿದಷ್ಟು
      ಸುತ್ತುವರಿವುದು
ಇದೀಗ ಈ ಕ್ಷಣವಾಗಿಯೇ ಮಾತ್ರ’

ಎರಡನೆಯ ಭಾಗದಲ್ಲಿ ಕಾಲವನ್ನು ಕೇವಲ ಪ್ರವಾಹವಾಗಿ ಮಾತ್ರ ಕಾಣದೆ ಕ್ಷಣಿಕತೆ ಮತ್ತು ಶಾಶ್ವತತೆಯನ್ನು ಹಿಡಿದಿಟ್ಟ ಮುಹೂರ್ತವನ್ನಾಗಿ ಕವಿ ಕಾಣುತ್ತಾನೆ.
‘ಏಸು ಹಗಲುಗಳೆದ್ದು ಹಗಲುಗಳು ಮುಳುಗಿದರು
ನಿತ್ಯ ಇಂದಿನ ಬಿಸಿಲು
ಏಸು ಯುಗಗಳ ಕೊಯಿಲು ಕೊಯ್ದರೂ ಒತ್ತೊತ್ತಿ
ಬಂದೆ ಬಹ
ಶತ ಶತ ಸಹಸ್ರ ಸಂತತಿಯುಸಿರು
ಎಂದು ಕಂಡರು
                    ವರ್ತಮಾನದಂಗಳದಲ್ಲಿ
ಒಕ್ಕಿದಷ್ಟೂ ಬೆಳೆವ ಭವಿತವ್ಯದ ಪೈರು’

ಮೂರನೆ ಭಾಗದಲ್ಲಿ ಕಾಲದ ಕಲ್ಪನೆ ಇಲ್ಲದೆ ಬೆಳೆವ ಮಗು ಮತ್ತು ಸಾವಿನ ಭಯವಿನ್ನೂ ತಟ್ಟದ, ಕಾಲದ ಎಗ್ಗಿಲ್ಲದ ಯುವಕನ ಜೀವನೋತ್ಸಾಹದ ಚಿತ್ರ ಬರುತ್ತದೆ.

‘ಆಗ ತಾನೆ ಹುಟ್ಟಿ ಹದುಳುವ ಹಸುಳೆಗೇಕೆ ಹೊತ್ತಿನ ಚಿಂತೆ
ಬಾಯ್ತುಂಬ ಮೊಲೆಯಾಗಿ ಜಗವುಣಿಸುತಿರುವಾಗ ?’
‘ಆಗ ತಾನೆ ಮೀಸೆ ಮೂಡುವ ತರಳಗೇಕೆ ಹೊತ್ತಿನ ಚಿಂತೆ
ಬೇರೊಂದು ಹದ ಬಂದು ಮಗಮಗಿಸುತಿರುವಾಗ ?’
“ಕಣ್ಣು ಕಟ್ಟಿರೆ ಸುತ್ತ ಏರಿಕೆಯದೇ ಚಿಹ್ನ!”

ನಾಲ್ಕನೇ ಭಾಗದಲ್ಲಿ ಸಾವಿನ ನೆರಳನ್ನು ಸೂಚಿಸುವ ಬದುಕಿನ ಉತ್ತರಾರ್ಧದ ವರ್ಣನೆ ತದನಂತರ ಪ್ರತಿಯೊಂದು ಜೀವಿಗೂ ಕೊನೆಯ ತಾಣವಾದ ಸಾವಿನ ವರ್ಣನೆ ಮಾರ್ಮಿಕವಾಗಿ ಬಂದಿದೆ.

‘ತಡೆಯದೋ ಋತುಮಾನ
ತಡೆಯದೋ ಪ್ರಾಣಗತಿ
ತಡೆಯದವ್ಯಾಹತವು ಸರಿವ ಕಾಲ
ಏರಿ ತೀರಿದ ಮೇಲೆ ಬದುಕು ಬರಿ ಇಳಿಜಾರೆ
ಕವಿದು ಬಹ ನೆರಳುಗಳೆ
        ಸುತ್ತಲೆಲ್ಲ’
ಉಗಿದ ಬಾಣಕೆ
ಮೊದಲು ಏರ್ವ ಹಿಗ್ಗು
    ಕೊನೆಗೆ
    ಕಳಚಿ
    ತಲೆಯೇ
    ಕೆಳಗು.
ಜೀವದೊಡಲಲ್ಲೆ ನಿರ್ಜೀವಗೊಳಿಸುವಗೊಳಿಸುವ ಬಿರುಕು
ಸೋರುವದು ನೆರೆಗೆಂಪು ಬಿಳಚೆ ಗಲ್ಲ,
ಕೊನೆಗುಳಿವುದೊಂದೆ ಬೆಕ್ಕಸಗೊಂಡ ತಲೆಬುರುಡೆ
ಎದೆಯು ಝಲ್ಲೆನುವಂತೆ
ಕಿರಿದು ಹಲ್ಲ.’

ಐದನೆಯ ಭಾಗದಲ್ಲಿ ಬದುಕಿನ ಅರ್ಥವನ್ನು ಹುಡುಕುವ ಪ್ರಯತ್ನ ಕಾಣುತ್ತದೆ.

‘ಹಿಡಿಯಲಾರದುದು ಹಿಡಿದಿಡುವ ಹಂಬಲವೇಕೆ ?
ತುಂಬಲಾರೆವೆ ಅದನು ?
ತುಂಬು ತುಂಬು ’
ಮನುಷ್ಯ ತನ್ನನ್ನು ತಾನು ರೂಪಿಸಿಕೊಳ್ಳಬೇಕಾಗುತ್ತದೆ ಎನ್ನುವದನ್ನು ’ ಗೈ, ಆಗು, ಆಕಾರ ತಾಳು, ಹದವಡೆದು ಬಾ ’ ಎನ್ನುವ ಸಾಲು ಕ್ರಿಯಾಪದಗಳ ಹೊಂದಾಣಿಕೆಯ ಮೂಲಕ ನಿರೂಪಿಸುತ್ತದೆ.

‘ಈ ಜೀವಕ್ಷೇತ್ರದಲಿ
ಹೊಡೆತುಂಬಿ ನಿಂತಷ್ಟೆ,
ಉಡಿತುಂಬಿ ಬಂದಷ್ಟೆ
ದಾರಿಯ ಫಲ’

ಎನ್ನುವ ಸಾರ್ಥಕ ಸಾಲುಗಳೊಂದಿಗೆ ಈ ಭಾಗ ಮುಗಿಯುತ್ತದೆ. ಈ ಬದುಕನ್ನು ನಿರ್ದೇಶಿಸುವ ಕಾಣದ ಶಕ್ತಿಯ ಜಿಜ್ಞಾಸೆ ಮುಂದಿನ ಬಾಗದಲ್ಲಿ ನಡೆಯುತ್ತದೆ. ಆದರೆ ಯಾವ ಸಮಾಧಾನವೂ ಸಿಗದೆ ಮನುಷ್ಯನ ಜೀವನ ಸಾವಿನಲ್ಲಿ ಕೊನೆಗೊಳ್ಳುವದನ್ನು ಭೀಕರವಾದ ಸಾವಿನ ಚಿತ್ರಣ ಸೂಚಿಸುತ್ತದೆ.

‘ಸೆಳೆಯ ಬಂದಾಗ ಕೊನೆಯ ಬಿಕ್ಕು
ತುಟಿಯ ಭೀತೋದ್ಗಾರ ತುಟಿಯ ಮೇಲೇ ಉಳಿದು
ತೆರಳುವೆವು
ಮಡಿಲೊಳಿಕ್ಕು’

ಮುಂದಿನ ಎರಡು ಭಾಗದಲ್ಲಿ ಮೃತ್ಯು ಪ್ರಜ್ಞೆಯ ಆಳವಾದ ಜಿಜ್ಞಾಸೆ ಮುಂದುವರೆದು ಕಾಲಾತೀತವಾದ ಈ ಪ್ರವಾಹದಲ್ಲಿ ಕಾಲಮಿತಿಯ ಬದುಕನ್ನು ಕೃತಜ್ಞೆತೆಯಿಂದ ಕವಿ ಸ್ವೀಕರಿಸುವ ಪರಿಯನ್ನು
ಕಾಣುತ್ತೇವೆ. ನಶ್ವರತೆಯನ್ನೆ ಫಲಿಸಿ ಕುಡಿಯೊಡೆದು ಶಾಶ್ವತೆಯನ್ನು ನಿಲ್ಲಿಸುವ ಮೂಲಕ ಜೀವನ ಸಾರ್ಥಕ್ಯವನ್ನು ಕಾಣುವ ಹಂಬಲವಿದೆ.

“ಇಲ್ಲಿ
ಕಾಲಾತೀತದಲ್ಲಿ
ಕಾಲಾಧೀನರಾಗಿ ಚರಿಸುವದೊಂದೆ
ಬೆರಗಿನರ್ಭಕ ದೃಷ್ಟಿ ಚಾಚಿ ಅಭ್ಯಾಗತರ ತೆರದಿ ನೆಲಸುವದೊಂದೆ
ನಶ್ವರತೆಯನೆ ಫಲಿಸಿ ಕುಡಿಯೊಡೆಯಬಿಟ್ಟು
ಶಾಶ್ವತಿಯ ನಿಲಿಸುವದೊಂದೆ.”

ಕೊನೆಯಲ್ಲಿ ಬೆರಗಿನ ಮುಗ್ದ ನೋಟದಿಂದ ಈ ಬ್ರಹ್ಮಾಂಡವನ್ನು ಕವಿ ನೋಡುತ್ತಾನೆ.

” ಈ ಮಹಾದ್ಭುತದಿ ಉದ್ಭವಿಸಿ ಬಂದಿಹೆವಲ್ಲ
ಅದೆ ಒಂದು ಹಿಗ್ಗು, ಎಚ್ಚೆತ್ತು ನಿಂತಿಹೆವಲ್ಲ
ಅದೆ ಒಂದು ನೆತ್ತರಲಿ ದಿನ ರಾತ್ರಿ ಹರಿವ ಸುಖ.”

ಈ ದೀರ್ಘ ಕವನದಲ್ಲಿ ಕವಿ ಎತ್ತರದಲ್ಲಿ ನಿಂತು ಉದಾತ್ತವಾಗಿ ಮಾತಾಡುತ್ತಿದ್ದಂತೆ ತೋರಿದರೂ ಗ್ರಾಂಥಿಕ ಭಾಷೆಯನ್ನೇ  ವಿವಿಧ ಲಯ ವೈವಿದ್ಯದಲ್ಲಿ ಪ್ರಯೋಗಿಸಿ ಅವಶ್ಯಕತೆಗೆ ತಕ್ಕಂತೆ ಆಡು ಮಾತಿನ ಲಯವನ್ನು ಬೆರೆಸಿ ಭಾವ ತೀವ್ರತೆಯನ್ನು ತಂದು ನವ್ಯದ ಯಾವ ತಂತ್ರವನ್ನೂ ಉಪಯೋಗಿಸದೆ ಒಂದು ಅತ್ಯಂತ ಯಶಸ್ವಿ ಕವಿತೆಯನ್ನಾಗಿ ಮಾಡಿದ್ದು ಕವಿಯ ದೊಡ್ಡ ಸಾಧನೆ ಎಂದೆ ಹೇಳಬಹುದು. ಓದುಗನ ಭಾವನೆಯನ್ನು ಕವಿತೆಯ ಉದ್ದಕ್ಕೂ ಉದ್ದೀಪಿಸುವದರ ಮೂಲಕ ಹೇಳಿಕೆಯ ಕಾವ್ಯ (Poem of statement) ಆಗುವ ಅಪಾಯದಿಂದಲೂ ಪಾರಾಗಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.