ಅವಕಾಶ ಕಸಿಯುವ overthinking

ಬುರಿದಾನ್ ನ ಪ್ರಕಾರ, ಕೆಲವು ಜನರ ಮನಸ್ಸು ಹೀಗಿರುತ್ತದೆ. ಅವರು ಅತಿಯಾಗಿ ಯೋಚಿಸುವವರು (overthinkers). ಪ್ರತಿಯೊಂದು ನಿರ್ಧಾರಕ್ಕೂ ಕೇವಲ ಒಂದೇ ಒಂದು ಪರಿಪೂರ್ಣ ಉತ್ತರ ಎಲ್ಲೋ ಅಡಗಿದೆ, ಮತ್ತು ಅದನ್ನು ಕಂಡುಹಿಡಿಯಲೇ ಬೇಕು ಎಂದು ಅವರು ಬಯಸುತ್ತಾರೆ. ಆದ್ದರಿಂದ, ಸಂಪೂರ್ಣ ಖಚಿತತೆ ಮತ್ತು ಪರಿಪೂರ್ಣತೆ ದೊರೆಯುವವರೆಗೆ ಯಾವುದೇ ನಿರ್ಧಾರಕ್ಕೆ ಬದ್ಧರಾಗಲು ಅವರು ಹಿಂಜರಿಯುತ್ತಾರೆ. ಅದರ ಪರಿಣಾಮವಾಗಿ ಅವರು ನಿರ್ಧಾರವನ್ನೇ ತೆಗೆದುಕೊಳ್ಳದೆ ಸುಮ್ಮನಾಗುತ್ತಾರೆ ~ ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

14ನೇ ಶತಮಾನದ ಫ್ರೆಂಚ್ ತತ್ವಜ್ಞಾನಿ ಜೀನ್ ಬುರಿದಾನ್ ಒಂದು ಸರಳವಾದ ನಿಯಮವನ್ನು ಹೇಳುತ್ತಾರೆ : “ಪರಿಪೂರ್ಣತೆಯ ಹುಡುಕಾಟವು ಒಳ್ಳೆಯದನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.” ಅಂದರೆ, ಇನ್ನೂ ಉತ್ತಮವಾದ ಆಯ್ಕೆಯ ನಿರೀಕ್ಷೆಯಲ್ಲಿ ಅನಂತಕಾಲ ಕಾಯುವುದಕ್ಕಿಂತ, ಸಧ್ಯ ಗೊತ್ತಿರುವ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವುದು ಉತ್ತಮ.

ಬುರಿದಾನ್ ಒಂದು ಕತ್ತೆಯ ಉದಾಹರಣೆಯನ್ನು ನೀಡುತ್ತಾರೆ. ಒಂದು ಕತ್ತೆಯ ಮುಂದೆ ಎರಡು ಹುಲ್ಲಿನ ಕಟ್ಟುಗಳಿವೆ ಎಂದು ಊಹಿಸಿ. ಎರಡೂ ಒಂದೇ ಗಾತ್ರದವು, ಒಂದೇ ಅಂತರದಲ್ಲಿವೆ, ಮತ್ತು ಎರಡೂ ಅಷ್ಟೇ ರುಚಿಕರವಾಗಿವೆ. ಕತ್ತೆ ಸಂಪೂರ್ಣವಾಗಿ rational ಆಗಿರುವುದರಿಂದ, ಯಾವ ಹುಲ್ಲಿನ ಕಟ್ಟನ್ನು ಆರಿಸಬೇಕು ಎನ್ನುವುದನ್ನು ನಿರ್ಧರಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ. ಅದು ಮತ್ತೆ ಮತ್ತೆ ಯೋಚಿಸುತ್ತದೆ, ಲೆಕ್ಕ ಹಾಕುತ್ತದೆ, ಎಲ್ಲಾ ಸಾಧ್ಯತೆಗಳನ್ನು ತೂಗಿ ನೋಡುತ್ತದೆ, ಆದರೆ ಯಾವುದೇ ತೀರ್ಮಾನಕ್ಕೆ ಬರದೇ ಕಾಲ ಕಳೆಯುತ್ತದೆ. ಕೊನೆಗೆ, ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೆ ಹಸಿವಿನಿಂದಲೇ ಸಾಯುತ್ತದೆ.

ಇದನ್ನೇ “ಬುರಿದಾನ್‌ನ ಕತ್ತೆ” (Buridan’s Ass) ಎಂದು ಕರೆಯಲಾಗುತ್ತದೆ. ಬುರಿದಾನ್ ನ ಪ್ರಕಾರ, ಕೆಲವು ಜನರ ಮನಸ್ಸು ಹೀಗಿರುತ್ತದೆ. ಅವರು ಅತಿಯಾಗಿ ಯೋಚಿಸುವವರು (overthinkers). ಪ್ರತಿಯೊಂದು ನಿರ್ಧಾರಕ್ಕೂ ಕೇವಲ ಒಂದೇ ಒಂದು ಪರಿಪೂರ್ಣ ಉತ್ತರ ಎಲ್ಲೋ ಅಡಗಿದೆ, ಮತ್ತು ಅದನ್ನು ಕಂಡುಹಿಡಿಯಲೇ ಬೇಕು ಎಂದು ಅವರು ಬಯಸುತ್ತಾರೆ. ಆದ್ದರಿಂದ, ಸಂಪೂರ್ಣ ಖಚಿತತೆ ಮತ್ತು ಪರಿಪೂರ್ಣತೆ ದೊರೆಯುವವರೆಗೆ ಯಾವುದೇ ನಿರ್ಧಾರಕ್ಕೆ ಬದ್ಧರಾಗಲು ಅವರು ಹಿಂಜರಿಯುತ್ತಾರೆ. ಅದರ ಪರಿಣಾಮವಾಗಿ ಅವರು ನಿರ್ಧಾರವನ್ನೇ ತೆಗೆದುಕೊಳ್ಳದೆ ಸುಮ್ಮನಾಗುತ್ತಾರೆ.

ಆದರೆ ಬುರಿದಾನ್‌ನ ಕತ್ತೆ ನಮಗೆ ಒಂದು ಮಹತ್ವದ ಪಾಠವನ್ನು ಕಲಿಸುತ್ತದೆ. ಕೆಲವು ನಿರ್ಧಾರಗಳಿಗೆ “ಅತ್ಯುತ್ತಮ” ಎಂಬ ಒಂದೇ ಒಂದು ಉತ್ತರ ಇರುವುದಿಲ್ಲ. ಎರಡು ಅಥವಾ ಹೆಚ್ಚಿನ ಆಯ್ಕೆಗಳು ಸಮಾನವಾಗಿ ಉತ್ತಮವಾಗಿದ್ದರೆ, ಅಥವಾ ಯಾವುದು ಉತ್ತಮ ಎನ್ನುವ ಲೆಕ್ಕಾಚಾರ ಎಂದಿಗೂ ಮುಗಿಯದಂತಿದ್ದರೆ, ನಾವು ಒಂದು ಆಯ್ಕೆಗೆ ಬದ್ಧರಾಗಲೇಬೇಕು. ಅದು ಆ ಎರಡರಲ್ಲಿ ಅತ್ಯುತ್ತಮ ಆಯ್ಕೆಯಾಗಿರದಿರಬಹುದು ಎನ್ನುವುದನ್ನು ತಿಳಿದಿದ್ದರೂ ನಾವು ನಿರ್ಧಾರ ತೆಗೆದುಕೊಳ್ಳಬೇಕು. ನಿಜವಾಗಿಯೂ ಅದು ಅತ್ಯುತ್ತಮ ಆಯ್ಕೆಯಾಗಿತ್ತೋ ಇಲ್ಲವೋ ಎನ್ನುವುದು ನಮಗೆ ಎಂದಿಗೂ ತಿಳಿಯದಿರಬಹುದು. ಆದರೂ, ನಿರ್ಧಾರವಿಲ್ಲದೆ ನಿಂತುಕೊಳ್ಳುವುದಕ್ಕಿಂತ, ಒಂದು ದಾರಿಯನ್ನು ಆರಿಸಿ ಮುಂದೆ ಸಾಗುವುದೇ ಜೀವನದಲ್ಲಿ ಹೆಚ್ಚು ಜಾಣತನದ ನಡೆ.

ಏಕೆಂದರೆ ಜೀವನದಲ್ಲಿ ಕೆಲವೊಮ್ಮೆ ಯಾವ ದಾರಿಯನ್ನು ಆರಿಸಬೇಕು ಎನ್ನುವುದು ನಮಗೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಕೆಲವೊಮ್ಮೆ ಸುಲಭವಾದ ಉತ್ತರಗಳೂ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಾವು ಸಂದೇಹದಲ್ಲೇ ಕಾಲಹರಣ ಮಾಡುತ್ತಾ, ನಿರ್ಧಾರವಿಲ್ಲದೆ ನಿಂತುಕೊಳ್ಳುವುದು ಸಾಧ್ಯವಿಲ್ಲ. ಹಾಗೆ ಮಾಡಿದರೆ ಬುರಿದಾನ್‌ನ ಕತ್ತೆಯಂತೆಯೇ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ, ನಮ್ಮ ಮುಂದೆ ಇರುವ ಆಯ್ಕೆಗಳಲ್ಲಿ ಒಂದನ್ನು ಧೈರ್ಯದಿಂದ ಆರಿಸಲೇಬೇಕು. ಅಂದರೆ, ಆ ಎರಡು ಹುಲ್ಲಿನ ಕಟ್ಟುಗಳಲ್ಲಿ ಒಂದನ್ನು ತಿನ್ನಲು ಆಯ್ಕೆ ಮಾಡಿಕೊಂಡಂತೆ, ಜೀವನದಲ್ಲಿಯೂ ನಾವು ಒಂದು ನಿರ್ಧಾರವನ್ನು ತೆಗೆದುಕೊಂಡು ಮುಂದೆ ಸಾಗಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.