ಅಂದು ಮಧ್ಯಾಹ್ನ ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡಿದ ನಂತರ, ಸ್ವಸ್ತಿ ಒಬ್ಬನೇ ನಡೆದಾಡುತ್ತಾ ಚಂಕ್ರಮಣ ಧ್ಯಾನ ಅಭ್ಯಾಸ ಮಾಡಿದ. ಇತರರಿಗೆ ಎದುರಾಗುವುದನ್ನು ತಪ್ಪಿಸಲು ಅವನು ಒಂದು ಖಾಲಿ ದಾರಿಯನ್ನು ಆರಿಸಿಕೊಂಡಿದ್ದ. ತಮ್ಮ-ತಂಗಿಯರು ಹಾಗೂ ಹಳ್ಳಿಯ ನೆನಪುಗಳು ಅವನ ಮನಸ್ಸನ್ನು ಆವರಿಸಿದ್ದವು. ಅದರಿಂದಾಗಿ ತನ್ನ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸುವುದು ಅವನಿಗೆ ಕಷ್ಟವಾಯಿತು । ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
ಹೊಸ ಪರಿಸರ, ಸ್ವಸ್ತಿಯ ಗೊಂದಲ । ಎಮ್ಮೆ ಕಾಯುವುದು #2.2
ಬುದ್ಧನ ಮಾತುಗಳು ಹೃದಯದಲ್ಲಿ ಅಚ್ಚಳಿಯದೆ ಉಳಿಯುವ ಮಾತುಗಳಾಗಿದ್ದವು. ಅದರಲ್ಲಿ ಬಂದಿದ್ದ ‘ಆರು ಇಂದ್ರಿಯಗಳು,’ ‘ನಾಲ್ಕು ಆರ್ಯ ಸತ್ಯಗಳು,’ ‘ಸಹಜ ಪ್ರಜ್ಞೆಯ ನಾಲ್ಕು ನೆಲೆಗಳು’ ಮುಂತಾದ ಪದಗಳ ಅರ್ಥ ಸ್ವಸ್ತಿಗೆ ಇನ್ನೂ ತಿಳಿದಿರಲಿಲ್ಲ ಎಂಬುದು ನಿಜ. ಈ ಪದಗಳನ್ನು ವಿವರಿಸುವಂತೆ ಅವನು ಅನಂತರ ರಾಹುಲನನ್ನು ಕೇಳಬಹುದಾಗಿತ್ತು. ಆದರೆ ಬುದ್ಧನ ಮಾತುಗಳ ಮೂಲ ಅರ್ಥ ತನಗೆ ಅರ್ಥವಾಗಿದೆ ಎಂಬುದು ಅವನಿಗೆ ತಿಳಿದಿತ್ತು.
ಬುದ್ಧ ಮಾತು ಮುಂದುವರೆಸಿದ. ಎಮ್ಮೆಗಳು ನಡೆಯಲು ಸುರಕ್ಷಿತವಾದ ದಾರಿಯನ್ನು ಆರಿಸುವ ಬಗ್ಗೆ ಅವನು ಸಭೆಗೆ ತಿಳಿಸಿದ. ದಾರಿಯಲ್ಲಿ ಮುಳ್ಳುಗಳು ಬೆಳೆದಿದ್ದರೆ, ಎಮ್ಮೆಗಳಿಗೆ ಗಾಯಗಳಾಗಿ ಅದರಲ್ಲಿ ಸೋಂಕು ಉಂಟಾಗಬಹುದು. ಗಾಯಗಳನ್ನು ಹೇಗೆ ಉಪಚರಿಸಬೇಕೆಂದು ಎಮ್ಮೆ ಕಾಯುವ ಹುಡುಗನಿಗೆ ತಿಳಿದಿಲ್ಲದಿದ್ದರೆ, ಎಮ್ಮೆಗಳಿಗೆ ಜ್ವರ ಬಂದು ಅವು ಸಾಯಲೂಬಹುದು. ಧರ್ಮ ಮಾರ್ಗದ ಆಚರಣೆಯೂ ಇದೇ ರೀತಿ ಇರುತ್ತದೆ. ಒಬ್ಬ ಬಿಕ್ಖು ಸರಿಯಾದ ಮಾರ್ಗವನ್ನು ಕಂಡುಕೊಳ್ಳದಿದ್ದರೆ, ಅವನ ಮನಸ್ಸು ಮತ್ತು ದೇಹ ಎರಡೂ ಗಾಯಗೊಳ್ಳಬಹುದು. ದುರಾಸೆ ಮತ್ತು ಕೋಪ ಅವನ ಗಾಯಗಳನ್ನು ಮತ್ತಷ್ಟು ವಿಷಮಗೊಳಿಸಿ, ಜ್ಞಾನೋದಯದ ಹಾದಿಗೆ ಅಡ್ಡಿಯಾಗುವಷ್ಟರ ಮಟ್ಟಿಗೆ ಸೋಂಕು ಉಲ್ಬಣಗೊಳ್ಳಬಹುದು.
ಬುದ್ಧ ಸ್ವಲ್ಪ ಹೊತ್ತು ಸುಮ್ಮನಾದ. ಅವನು ತನ್ನ ಪಕ್ಕ ಬಂದು ನಿಲ್ಲುವಂತೆ ಸ್ವಸ್ತಿಗೆ ಸನ್ನೆ ಮಾಡಿದ. ಸ್ವಸ್ತಿ ಕೈಮುಗಿದುಕೊಂಡು ನಿಂತಾಗ, ಬುದ್ಧ ಮುಗುಳ್ನಗುತ್ತಲೇ ಸ್ವಸ್ತಿಯನ್ನು ಸಭೆಗೆ ಪರಿಚಯಿಸಿದ:
“ಹತ್ತು ವರ್ಷಗಳ ಹಿಂದೆ ನಾನು ಗಯೆಯ ಬಳಿಯ ಕಾಡಿನಲ್ಲಿ ಸ್ವಸ್ತಿಯನ್ನು ಭೇಟಿಯಾದೆ. ಅದು ನನಗೆ ಜ್ಞಾನೋದಯವಾಗುವ ಸ್ವಲ್ಪ ಮುಂಚಿನ ಮಾತು. ಆಗ ಇವನಿಗೆ ಹನ್ನೊಂದು ವರ್ಷ ವಯಸ್ಸು. ನಾನು ಬೋಧಿ ವೃಕ್ಷದ ಕೆಳಗೆ ಕುಳಿತುಕೊಳ್ಳಲು ಆಸನವಾಗಿ ಬಳಸಿದ ದರ್ಭೆ ಹುಲ್ಲನ್ನು ಹೆಗಲ ಮೇಲೆ ಹೊತ್ತು ತಂದುಕೊಟ್ಟಿದ್ದು ಇದೇ ಸ್ವಸ್ತಿ. ಎಮ್ಮೆಗಳ ಬಗ್ಗೆ ನಾನು ಏನೆಲ್ಲಾ ಬೋಧಿಸಿದನೋ, ಅದೆಲ್ಲವನ್ನೂ ನಾನು ಇವನಿಂದಲೇ ಕಲಿತದ್ದು. ಇವನೊಬ್ಬ ಒಳ್ಳೆಯ ಎಮ್ಮೆಗಾಹಿಯೆಂದು ನನಗೆ ತಿಳಿದಿತ್ತು, ಈಗ ಇವನೊಬ್ಬ ಉತ್ತಮ ಬಿಕ್ಖುವೂ ಆಗುತ್ತಾನೆಂದು ನನಗೆ ತಿಳಿದಿದೆ.”
ಎಲ್ಲರ ಕಣ್ಣುಗಳೂ ಸ್ವಸ್ತಿಯ ಮೇಲಿದ್ದವು. ತನ್ನ ಕಿವಿ ಹಾಗೂ ಕೆನ್ನೆಗಳು ಝುಮ್ಮೆಂದು ಕೆಂಪಗಾಗುತ್ತಿರುವುದು ಅವನ ಅನುಭವಕ್ಕೂ ಬಂದಿತು. ಅಲ್ಲಿದ್ದವರೆಲ್ಲರೂ ಕೈಮುಗಿದು ಅವನಿಗೆ ನಮಸ್ಕರಿಸಿದರು, ಅವನೂ ಪ್ರತಿಯಾಗಿ ಅವರಿಗೆ ನಮಸ್ಕರಿಸಿದ. ಅನಂತರ ಬುದ್ಧನು ಎಚ್ಚರದಿಂದ ಉಸಿರಾಡುವ ಹದಿನಾರು ವಿಧಾನಗಳನ್ನು ಪಠಿಸುವಂತೆ ರಾಹುಲನಿಗೆ ಸೂಚಿಸಿ ತನ್ನ ಮಾತುಗಳನ್ನು ಕೊನೆಗೊಳಿಸಿದ. ರಾಹುಲ ಎದ್ದುನಿಂತು ಕೈಮುಗಿದು, ಗಂಟೆಯ ನಾದದಷ್ಟೇ ಸ್ಪಷ್ಟವಾದ ಮತ್ತು ನಿಚ್ಚಳವಾದ ದನಿಯಲ್ಲಿ ಪ್ರತಿಯೊಂದು ವಿಧಾನವನ್ನೂ ಪಠಿಸಿದ. ಆಮೇಲೆ ಇಡೀ ಸಂಘಕ್ಕೆ ತಲೆಬಾಗಿ ನಮಸ್ಕರಿಸಿದ. ಅನಂತರ ಬುದ್ಧ ಎದ್ದುನಿಂತು ನಿಧಾನವಾಗಿ ತನ್ನ ಕುಟಿಯತ್ತ ನಡೆದುಹೋದ. ಅವನು ಹೋದ ನಂತರ, ಸಭೆಯಲ್ಲಿದ್ದ ಎಲ್ಲಾ ಬಿಕ್ಖುಗಳೂ ತಮ್ಮ ಮಣೆಗಳನ್ನು ತೆಗೆದುಕೊಂಡು ಕಾಡಿನಲ್ಲಿರುವ ತಮ್ಮ ತಮ್ಮ ಜಾಗಗಳಿಗೆ ನಿಧಾನವಾಗಿ ನಡೆದುಹೋದರು. ಕೆಲವು ಬಿಕ್ಖುಗಳು ಎಲೆಮನೆಗಳಲ್ಲಿ ವಾಸಿಸುತ್ತಿದ್ದರು, ಇನ್ನು ಕೆಲವರು ಬಿದಿರು ಮೆಳೆಗಳ ಕೆಳಗೆ, ಹೊರಾಂಗಣದಲ್ಲೇ ಇರುತ್ತಿದ್ದರು. ಜೋರು ಮಳೆ ಬಂದಾಗ ಮಾತ್ರ ಅವರು ತಮ್ಮ ಮಣೆಗಳನ್ನೆತ್ತಿಕೊಂಡು ವಸತಿಯ ಗುಡಿಸಲುಗಳಲ್ಲಿ ಅಥವಾ ಉಪನ್ಯಾಸ ಮಂದಿರಗಳಲ್ಲಿ ಆಸರೆ ಪಡೆಯುತ್ತಿದ್ದರು.
ಸ್ವಸ್ತಿಯ ಗುರುವಾದ ಸಾರಿಪುತ್ತ, ಅವನಿಗೆ ರಾಹುಲನೊಂದಿಗೆ ಹೊರಗಡೆ ಜಾಗವನ್ನು ಹಂಚಿಕೊಳ್ಳಲು ಸೂಚಿಸಿದ್ದ. ರಾಹುಲ ಚಿಕ್ಕವನಿದ್ದಾಗ ತನ್ನ ಪೋಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುವಿನೊಡನೆ ಎಲೆಮನೆಯಲ್ಲಿ ಮಲಗಬೇಕಿತ್ತು. ಆದರೆ ಈಗ ಅವನಿಗೆ ಮರಗಳ ಕೆಳಗೆ ಒಂದು ಜಾಗ ಸಿಕ್ಕಿತ್ತು. ಅಲ್ಲಿ ರಾಹುಲನೊಂದಿಗೆ ಇರುವುದು ಸ್ವಸ್ತಿಗೆ ಸಂತೋಷ ತಂದಿತು.
ಅಂದು ಮಧ್ಯಾಹ್ನ ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡಿದ ನಂತರ, ಸ್ವಸ್ತಿ ಒಬ್ಬನೇ ನಡೆದಾಡುತ್ತಾ ಚಂಕ್ರಮಣ ಧ್ಯಾನ ಅಭ್ಯಾಸ ಮಾಡಿದ. ಇತರರಿಗೆ ಎದುರಾಗುವುದನ್ನು ತಪ್ಪಿಸಲು ಅವನು ಒಂದು ಖಾಲಿ ದಾರಿಯನ್ನು ಆರಿಸಿಕೊಂಡಿದ್ದ. ತಮ್ಮ-ತಂಗಿಯರು ಹಾಗೂ ಹಳ್ಳಿಯ ನೆನಪುಗಳು ಅವನ ಮನಸ್ಸನ್ನು ಆವರಿಸಿದ್ದವು. ಅದರಿಂದಾಗಿ ತನ್ನ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸುವುದು ಅವನಿಗೆ ಕಷ್ಟವಾಯಿತು.
ನೇರಂಜರಾ ನದಿಗೆ ಹೋಗುವ ದಾರಿಯ ಚಿತ್ರಣ ಅವನ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿತು. ಪುಟ್ಟ ಭೀಮಾ ತನ್ನ ಕಣ್ಣೀರನ್ನು ಅಡಗಿಸಲು ತಲೆ ತಗ್ಗಿಸಿ ಕುಳಿತಿರುವುದು ಮತ್ತು ರೂಪಕ ಒಬ್ಬನೇ ರಾಮ್ ಬೋಲನ ಎಮ್ಮೆಗಳನ್ನು ತೊಳೆಯುತ್ತಿರುವುದು ಅವನ ಕಣ್ಣಿಗೆ ಕಟ್ಟಿತು. ಅವನು ಈ ದೃಶ್ಯಗಳನ್ನು ಓಡಿಸಿ, ಕೇವಲ ತನ್ನ ಹೆಜ್ಜೆಗಳು ಮತ್ತು ಉಸಿರಾಟದ ಮೇಲೆ ಮಾತ್ರ ಗಮನಹರಿಸಲು ಪ್ರಯತ್ನಿಸಿದ. ಆದರೆ ಆ ಚಿತ್ರಣಗಳು ಮತ್ತೆ ಮತ್ತೆ ಅವನನ್ನು ಆವರಿಸುತ್ತಿದ್ದವು. ತನ್ನ ಅಭ್ಯಾಸದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುತ್ತಿಲ್ಲವಲ್ಲ ಎಂದು ಅವನಿಗೆ ನಾಚಿಕೆಯಾಯಿತು. ತಾನು ಬುದ್ಧನ ನಂಬಿಕೆಗೆ ಅರ್ಹನಲ್ಲವೆಂದೂ ಅವನಿಗೆ ಅನ್ನಿಸತೊಡಗಿತು. ನಡೆದಾಡುವ ಧ್ಯಾನ ಮುಗಿದ ನಂತರ ರಾಹುಲನ ಬಳಿ ಸಹಾಯ ಕೇಳಬೇಕೆಂದು ಅವನು ಅಂದುಕೊಂಡ.
ಅಂದು ಬೆಳಿಗ್ಗೆ ಬುದ್ಧ ತನ್ನ ಬೋಧನೆಯಲ್ಲಿ ಹೇಳಿದ್ದ ಹಲವಾರು ವಿಷಯಗಳು ಅವನಿಗೆ ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ರಾಹುಲ ಅವನ್ನು ಸರಳವಾಗಿ ವಿವರಿಸಬಲ್ಲನೆಂಬ ವಿಶ್ವಾಸ ಅವನಿಗಿತ್ತು. ರಾಹುಲನನ್ನು ನೆನೆದ ಮಾತ್ರಕ್ಕೇ ಅವನ ಮನಸ್ಸಿನಲ್ಲಿ ನೆಮ್ಮದಿ ಮೂಡಿತು. ಆಮೇಲೆ ನಿಧಾನವಾಗಿ ತನ್ನ ಉಸಿರಾಟ ಹಾಗೂ ಹೆಜ್ಜೆಯನ್ನು ಗಮನಿಸಲು ಅವನಿಗೆ ಸಾಧ್ಯವಾಯಿತು.
ಸ್ವಸ್ತಿಗೆ ರಾಹುಲನನ್ನು ಹುಡುಕಿಕೊಂಡು ಹೋಗಲು ಇನ್ನೂ ಅವಕಾಶ ಸಿಕ್ಕಿರಲಿಲ್ಲ, ಅಷ್ಟರಲ್ಲಿ ರಾಹುಲನೇ ಅವನನ್ನು ಹುಡುಕಿಕೊಂಡು ಬಂದ. ಅವನು ಸ್ವಸ್ತಿಯನ್ನು ಬಿದಿರಿನ ಮೆಳೆಗಳ ಬುಡಕ್ಕೆ ಕರೆದೊಯ್ದು, “ಮಧ್ಯಾಹ್ನ ನನಗೆ ಹಿರಿಯ ಬಿಕ್ಖು ಆನಂದರು ಸಿಕ್ಕಿದ್ದರು. ಬುದ್ಧರೊಡನೆ ನಿನ್ನ ಮೊದಲ ಭೇಟಿಯ ವಿವರ ತಿಳಿಯುವ ಕುತೂಹಲ ಅವರಿಗೆ” ಅಂದ.
“ಆನಂದ ಯಾರು ರಾಹುಲ?”
“ಅವರು ಶಾಕ್ಯ ವಂಶದ ರಾಜಕುಮಾರ, ಬುದ್ಧರ ಸೋದರಸಂಬಂಧಿ ಕೂಡಾ. ಏಳು ವರ್ಷಗಳ ಹಿಂದೆ ಬಿಕ್ಖುವಾದರು. ಬುದ್ಧರಿಗೆ ಅವರೆಂದರೆ ಅಪಾರ ಪ್ರೀತಿ. ಅವರ ಆರೋಗ್ಯ ನೋಡಿಕೊಳ್ಳೋದು ಆನಂದರೇ. ಅವರು ನಾಳೆ ಸಂಜೆ ನಿನ್ನನ್ನು ಭೇಟಿ ಮಾಡಿಸೋಕೆ ಹೇಳಿದಾರೆ. ಬುದ್ಧರು ಗಯೆಯ ಕಾಡಿನಲ್ಲಿ ಕಳೆದ ಆ ದಿನಗಳ ಬಗ್ಗೆ ತಿಳಿಯಲು ನನಗೂ ಆಸೆಯಿದೆ.”
“ಬುದ್ಧರು ಅದರ ಬಗ್ಗೆ ಹೇಳಿಲ್ಲವೇ?”
“ವಿವರವಾಗಿ ಹೇಳಿಲ್ಲ. ಅದರ ಬಗ್ಗೆ ಅವರಿಗಿಂತ ಹೆಚ್ಚು ಕತೆಗಳು ನಿನ್ನ ಬಳಿ ಸಿಗ್ತವೆ ಅನ್ನೋ ಖಾತ್ರಿ ನನಗಿದೆ”
“ಹಾಗೇನಿಲ್ಲ. ನನಗೆ ನೆನಪಿರೋದನ್ನೆಲ್ಲ ಹೇಳ್ತೀನಿ. ಅದಕ್ಕೆ ಮೊದಲು, ಆನಂದರ ಬಗ್ಗೆ ಸ್ವಲ್ಪ ಹೇಳು. ಅವರ ಭೇಟಿ ನೆನೆಸಿಕೊಂಡೇ ನನಗೆ ನಡುಕವಾಗ್ತಿದೆ”
“ನೀನೇನೂ ಹೆದರಿಕೊಳ್ಬೇಡ. ಅವರು ತುಂಬಾ ಸ್ನೇಹಮಯಿ, ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸ್ತಾರೆ. ನಾನು ನಿನ್ನ ಮತ್ತು ನಿನ್ನ ಕುಟುಂಬದ ಬಗ್ಗೆ ಹೇಳಿದಾಗ ಅವರು ಖುಷಿಪಟ್ಟರು. ನಾಳೆ ಬೆಳಗ್ಗೆ ಭಿಕ್ಷಾಟನೆಗೆ ಮೊದಲು ಇಲ್ಲೇ ಸಿಗೋಣ. ನಾನೀಗ ನನ್ನ ಚೀವರ ತೊಳಿಯೋದಿದೆ, ನಾಳೆ ಸಮಯಕ್ಕೆ ಸರಿಯಾಗಿ ಅದು ಒಣಗಬೇಕಲ್ಲ?’
ರಾಹುಲ ಹೊರಡಲು ಎದ್ದು ನಿಂತಾಗ ಸ್ವಸ್ತಿ ಅವನ ಚೀವರವನ್ನು ಮೆಲ್ಲನೆ ಎಳೆಯುತ್ತಾ, “ನೀನು ಇನ್ನೂ ಸ್ವಲ್ಪ ಹೊತ್ತು ಜೊತೆಗಿರ್ತೀಯಾ? ನನಗೆ ನಿನ್ನ ಸಹಾಯ ಬೇಕು. ಬೆಳಿಗ್ಗೆ ಬುದ್ಧರು ಒಬ್ಬ ಬಿಕ್ಖು ಅನುಸರಿಸಬೇಕಾದ ಹನ್ನೊಂದು ಅಂಶಗಳ ಬಗ್ಗೆ ಹೇಳಿದ್ರಲ್ಲ, ನನಗೆ ಅದ್ಯಾವುದೂ ನೆನಪಾಗ್ತಿಲ್ಲ. ಅವನ್ನು ಮತ್ತೆ ಹೇಳ್ತೀಯಾ?” ಅಂದ.

