ವಿಶ್ವದ ಆಧ್ಯಾತ್ಮಿಕತೆ, ನೀತಿಗಳನ್ನು ಕುರಿತ ಬೌದ್ಧ ದರ್ಶನವೇ ಎಚ್ಚರದ ಗಮನದ ಐದು ಅಂಶಗಳು… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 4: ಶಾಂತಿ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 4.13 : ಶಾಂತಿ । ಎಚ್ಚರದ ಗಮನದ ಪಂಚ ಆಚಾರಗಳು
ವಿಶ್ವದ ಆಧ್ಯಾತ್ಮಿಕತೆ, ನೀತಿಗಳನ್ನು ಕುರಿತ ಬೌದ್ಧ ದರ್ಶನವೇ ಎಚ್ಚರದ ಗಮನದ ಐದು ಅಂಶಗಳು.
ಬುದ್ಧ ನಿರೂಪಿಸಿದ ನಾಲ್ಕು ಉದಾತ್ತ ಸತ್ಯಗಳು, ಎಂಟು ಉದಾತ್ತ ದಾರಿಗಳ ಮೂರ್ತ ಸ್ವರೂಪಗಳೇ ಆಗಿವೆ. ಸರಿಯಾದ ತಿಳಿವಿನ, ನಿಜವಾದ ಪ್ರೀತಿಯ ದಾರಿಯಲ್ಲಿ ಸಾಗಿದರೆ ನಮ್ಮ ನೋವು ಸಂಕಟಗಳು ವಾಸಿಯಾಗುತ್ತವೆ, ಬದಲಾವಣೆ ನಡೆಯುತ್ತದೆ, ನಮ್ಮೊಳಗೆ ಮತ್ತು ಇಡೀ ಜಗತ್ತಿನಲ್ಲಿ ಸಂತೋಷ ತುಂಬುತ್ತದೆ.
ಎಚ್ಚರದ ಗಮನದ ಐದು ಅಂಶಗಳನ್ನುT ಅವಳವಡಿಸಿಕೊಳ್ಳುವುದೆಂದರೆ ಒಳ ಇರುವಿಕೆಯ ಅಥವ ನಿಜ ನೋಟದ ಸಂಪಾದನೆ. ನಿಜದ ನೋಟವು ಎಲ್ಲ ತಾರತಮ್ಯ, ಅಸಹನೆ, ಸಿಟ್ಟು, ಭಯ, ಹತಾಶೆಗಳನ್ನು ಇಲ್ಲವಾಗಿಸುತ್ತದೆ. ಎಚ್ಚರದ ಗಮನದ ಐದು ಅಂಶಗಳನ್ನು ಅಳವಡಿಸಿಕೊಂಡರೆ ನಾವು ಆಗಲೇ ಬೋಧಿಸತ್ವನ ದಾರಿಯಲ್ಲಿದ್ದೇವೆ. ಇಂಥ ಅರಿವು ನಮ್ಮಲ್ಲಿದ್ದರೆ ಈ ಕ್ಷಣದ ಗೊಂದಲವಾಗಲೀ ನಾಳಿನ ಭಯವಾಗಲೀ ಇರುವುದಿಲ್ಲ.
೧. ಬದುಕಿಗೆ ಗೌರವ
ಬದುಕಿನ ವಿನಾಶದಿಂದ ಆಗುವ ನೋವು ಸಂಕಟಗಳ ಎಚ್ಚರ ಇರುವುದರಿಂದ ನಾನು ಒಳ ಇರುವಿಕೆ, ಕರುಣೆ ಮತ್ತು ತಿಳಿವಳಿಕೆಗಳ ಒಳನೋಟಕ್ಕೆ, ಮನುಷ್ಯ, ಪ್ರಾಣಿ, ಸಸ್ಯ ಮತ್ತು ಲೋಹಗಳನ್ನು ಕಾಪಾಡಲು ಬದ್ಧನಾಗಿರುತ್ತೇನೆ. ಕೊಲ್ಲದಿರುವ, ಕೊಲ್ಲಲು ಬೇರೆಯವರಿಗೆ ಅವಕಾಶಕೊಡದಿರಲು, ಜಗತ್ತಿನಲ್ಲಿ ನಡೆಯುವ ಯಾವುದೇ ಕೊಲೆಯ ಕೃತ್ಯಕ್ಕೆ ನನ್ನ ಮಾತು, ಆಲೋಚನೆ, ಬದುಕಿನ ಕ್ರಮಗಳಲ್ಲಿ ಸಮರ್ಥನೆ ನೀಡದಿರಲು ಬದ್ಧನಾಗಿರುತ್ತನೆ. ಸಿಟ್ಟು, ಭಯ, ದುರಾಸೆ, ಅಸಹನೆಗಳಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಬಲ್ಲೆ. ಈ ಭಾವ ಮತ್ತು ಇಂಥ ಕ್ರಿಯೆಗಳು ನಾನು ಬೇರೆ ಲೋಕ ಬೇರೆ ಎಂಬ ಆಲೋಚನೆಯಿಂದ, ಮೇಲು ಕೀಳುಗಳ ಭಾವನೆಯಿಂದ ಹುಟ್ಟುತ್ತದೆಂದು ಬಲ್ಲೆ. ಆದ್ದರಿಂದ ಮನಸ್ಸನ್ನು ಮುಕ್ತವಾಗಿರಿಸಿಕೊಂಡು, ದುರಭಿಮಾನಕ್ಕೆ ಎಡೆಕೊಡದೆ, ಹಿಂಸೆ, ದುರಭಿಮಾನ, ಮತತತ್ವಗಳಿಗೆ ಗಂಟು ಬೀಳದೆ ನನ್ನೊಳಗೂ ಲೋಕದಲ್ಲೂ ಇರುವ ಹಿಂಸೆಯನ್ನು ಬದಲಾಯಿಸಲು ಬದ್ಧನಾಗಿದ್ದೇನೆ.
೨. ನಿಜ ಸಂತೋಷ
ಶೋಷಣೆ, ಸಾಮಾಜಿಕ ಅನ್ಯಾಯ, ಕಳ್ಳತನ, ದಮನಗಳ ಕಾರಣದಿಂದ ಹುಟ್ಟುವ ನೋವು ನರಳಾಟಗಳ ಅರಿವು ಇರುವುದರಿಂದ ನನ್ನ ಆಲೋಚನೆ, ಮಾತು, ಕ್ರಿಯೆಗಳಲ್ಲಿ ಔದಾರ್ಯವನ್ನು ತಂದುಕೊಳ್ಳಲು ಬದ್ಧನಾಗಿದ್ದೇನೆ. ಏನನ್ನೂ ಕದಿಯದಿರುವ, ಬೇರೆಯವರ ಸ್ವತ್ತನ್ನು ನನ್ನದಾಗಿ ಮಾಡಿಕೊಳ್ಳದಿರುವ, ನನ್ನ ಸಮಯ, ಶಕಿ, ಮತ್ತು ಇತರ ಸಂಪನ್ಮೂಲಗಳನ್ನು ಅಗತ್ಯವಿರುವ ಇತರರಿಗಾಗಿ ಬಳಸುತ್ತೇನೆ. ಬೇರೆಯವರ ಸಂತೋಷ ಮತ್ತು ದುಃಖಗಳು ನನ್ನ ಸಂತೋಷ ಮತ್ತು ದುಃಖಗಳಿಗಿಂತ ಬೇರೆಯಲ್ಲ, ಅರಿವು ಮತ್ತು ಕರುಣೆ ಇರದೆ ನಿಜವಾದ ಸಂತೋಷ ದೊರೆಯುವುದಿಲ್ಲ , ಅಧಿಕಾರ, ಕೀರ್ತಿ, ಸಂಪತ್ತು, ದೈಹಿಕ ಸುಖಗಳ ಬೆನ್ನು ಹತ್ತಿ ಹೋದರೆ ನೋವು, ನರಳಾಟ ಹಿಂಸೆಗಳಷ್ಟೇ ದೊರೆಯುತ್ತವೆಂದು ಅರಿತಿದ್ದೇನೆ. ಸಂತೋಷವು ನನ್ನ ಮನೋಧರ್ಮವನ್ನು ಅವಲಂಬಿಸಿರುತ್ತದೆಯೇ ಹೊರತು ಹೊರಗಿನ ಪರಿಸ್ಥಿತಿಯನ್ನಲ್ಲ ಎಂದು ತಿಳಿದಿದೆ. ಆದ್ದರಿಮದ ಸಂತೋಷವಾಗಿರಲು ಬೇಕಾದ ಪರಿಸರ ಇದ್ದೇ ಇದೆ ಎಂತು ಇಳಿದು ಈ ಕ್ಷಣದ ಬದುಕಿನಲ್ಲೇ ಸಂತೋವಾಗಿರುತ್ತೇನೆ.
೩. ನಿಜ ಪ್ರೀತಿ
ಲೈಂಗಿಕ ದುರ್ವರ್ತನೆಯಿಂದ ಉಂಟಾಗುವ ಸಂಕಟ ನೋವುಗಳ ಬಗ್ಗೆ ಎಚ್ಚರವಿರುವುದರಿಂದ ವ್ಯಕ್ತಿ, ದಂಪತಿ, ಕುಟುಂಬ ಮತ್ತು ಸಮಾಜದ ಹಿತವನ್ನು ಕಾಪಾಡುವುದರಲ್ಲಿ ನನ್ನ ಹೊಣೆಗಾರಿಕೆ ಇದೆಯೆಂದು ತಿಳಿದಿದ್ದೇನೆ. ಮೈಯ ಆಸೆ ಪ್ರೀತಿಯಲ್ಲವೆಂದು ಗೊತ್ತಿದೆ. ಮೈಯ ಆಸೆಗೆ ಲೈಂಗಿಕ ಚಟುವಟಿಕೆ ನಡೆಸಿದರೆ ಸ್ವತಃ ನನಗೂ ಬೇರೆಯವರಿಗೂ ಹಾನಿಯಾಗುತ್ತದೆ. ನಿಜವಾದ ಪ್ರೀತಿ ಇರದೆ ಲೈಂಗಿಕ ಚಟುವಟಿಕೆಗೆ ತೊಡಗುವುದಿಲ್ಲ, ಆಳವಾದ ದೀರ್ಘಕಾಲದ ಬದ್ಧತೆ ಇರದೆ ಲೈಂಗಿಕ ಸಂಬಂಧಕ್ಕೆ ಮುಂದಾಗುವುದಿಲ್ಲವೆಂದು ನಿರ್ಧಾರ ಮಾಡಿದ್ದೇನೆ. ಲೈಂಗಿಕ ದುರ್ವರ್ತನೆಯಿಂದ ಮಕ್ಕಳು, ದಂಪತಿ ಮತ್ತು ಕುಟುಂಬಗಳು ಛಿದ್ರವಾಗದ ಹಾಗೆ ಕಾಪಾಡಲು ಪ್ರಯತ್ನಡುತ್ತೇನೆ. ಮೈ ಮನಸುಗಳೆರಡೂ ಒಂದೇ ಎಂದು ಗೊತ್ತಿದೆ. ಆದ್ದರಿಂದ ಮೃದುವಾದ ಪ್ರೀತಿ, ಕರುಣೆ, ಸಹಾನುಭೂತಿ, ಸಂತೋಷ, ಒಳಗೊಳ್ಳುವಿಕೆ ಎಂಬ ಮೂಲ ಅಂಶಗಳಿರುವ ಪ್ರೀತಿಯನ್ನು ಅಳವಡಿಸಿಕೊಂಡು ನನಗೂ ಬೇರೆಯವರಿಗೂ ಹಿತವಾಗುವ ಹಾಗ ಬದುಕುತ್ತೇನೆ.
೪. ಪ್ರೀತಿಯ ಮಾತು ಮತ್ತು ಗಹನವಾಗಿ ಆಲಿಸುವುದು
ಎಚ್ಚರವಿದೆ ಆಡಿದ ಮಾತು, ಬೇರೆಯವರು ಆಡಿದ ಮಾತನ್ನು ಗಮನವಿಟ್ಟು ಆಲಿಸದೆ ಇರುವುದು ಇವೆರಡೂ ನೋವು ಸಂಕಟಗಳನ್ನು ತರುತ್ತವೆ. ಮಾತಿನಲ್ಲಿ ಪ್ರೀತಿಯನ್ನು ಇರಿಸಿ, ಆಲಿಸುವಾಗ ಸಹಾನುಭೂತಿ ಇರಿಸಿಕೊಂಡು ನನ್ನೊಳಗೂ ಇತರರಲ್ಲೂ ಸಂತೋಷ, ನೆಮ್ಮದಿಗಳು ಬೆಳೆಯುವಂತೆ ಮಾಡುತ್ತೇನೆ. ಸಂತೋಷಕ್ಕೂ ದುಃಖಕ್ಕೂ ಮಾತು ಕಾರಣವೆಂದು ಗೊತ್ತಿರುವುದರಿಂದ ವಿಶ್ವಾಸ, ಸಂತೋಷ, ಭರವಸೆಗಳನ್ನು ಮೂಡಿಸುವಂಥ ಸತ್ಯವನ್ನೇ ಹೇಳಲು ಬದ್ಧನಾಗಿರುತ್ತೇನೆ. ನನ್ನೊಳಗೆ ಸಿಟ್ಟಿರುವಾಗ ಮಾತನಾಡದೆ ಸುಮ್ಮನಿರುತ್ತೇನೆ. ಉಸಿರಿನ ಮೇಲೆ ಗಮನವಿರಿಸಿ ನನ್ನ ಸಿಟ್ಟನ್ನು ಆಳವಾಗಿ ಅರಿಯಲು ಪ್ರಯತ್ನಿಸುತ್ತೇನೆ. ಸಿಟ್ಟಿನ ಬೇರು ಇರುವುದು ನನ್ನ ತಪ್ಪು ಗ್ರಹಿಕೆಯಲ್ಲಿ, ನನ್ನೊಳಗಿನ ಮತ್ತು ಇನ್ನೊಬ್ಬರ ಸಂಕಟವನ್ನು ಅರ್ಥಮಾಡಿಕೊಳ್ಳಲು ಆಗದಿರುವುದರಲ್ಲಿ ಎಂದು ಗೊತ್ತಿದೆ. ನನಗೂ ಮತ್ತೊಬ್ಬರಿಗೂ ಸಹಾಯವಾಗುವಂತೆ ಮಾತಾಡುತ್ತೇನೆ, ಬೇರೆಯವರ ಮಾತನ್ನು ಗಮನವಿಟ್ಟು ಆಲಿಸುತ್ತೇನೆ. ಹಾಗೆ ಮಾಡುತ್ತಾ ನಾನೂ ಮತ್ತು ಇತರರು ಕಷ್ಟದ ಸಂದರ್ಭಗಳನ್ನು ಬದಲಾಯಿಸಿಕೊಳ್ಳಲು ಆಗುತ್ತದೆ ಎಂದು ನಂಬಿದ್ದೇನೆ. ಖಚಿತವಾಗಿ ನನಗೆ ತಿಳಿಯದ ಸಂಗತಿಯನ್ನಾಗಲೀ ಸಾಂಗತ್ಯವನ್ನು ಕೆಡಿಸುವಂತ ಮಾತನ್ನಾಗಲೀ ನಾನು ಆಡುವುದಿಲ್ಲ. ಅರಿವು, ಪ್ರೀತಿ, ಸಂತೋಷ ಮತ್ತು ಒಳಗೊಳ್ಳುವಿಕೆಗಳು ಬೆಳೆಯುವ ಹಾಗೆ, ನನ್ನ ಪ್ರಜ್ಞೆಯ ಆಳದಲ್ಲಿರುವ ಸಿಟ್ಟು, ಹಿಂಸೆ, ಭಯಗಳು ಕಡಿಮೆಯಾಗುವ ಹಾಗೆ ಬದುಕುತ್ತೇನೆ.
೫. ಪೋಷಣೆ ಮತ್ತು ಸ್ವಾಸ್ಥ್ಯ
ಎಚ್ಚರವಿರದೆ ವಸ್ತುಗಳನ್ನು ಕೊಳ್ಳುವುದರಿಂದ ಉಂಟಾಗುವ ನೋವು, ಸಂಕಟಗಳ ಎಚ್ಚರ ಇರುವುದರಿಂದ ನನ್ನ ಮೈ ಮನಸುಗಳ, ಕುಟುಂಬದ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಬದ್ಧನಾಗಿದ್ದೇನೆ. ಉಣ್ಣುವುದು, ಕುಡಿಯುವುದು, ವಸ್ತುಗಳನ್ನು ಕೊಳ್ಳುವುದು ಈ ಚಟುವಟಿಕೆಗಳಲ್ಲಿ ಎಚ್ಚರದ ಗಮನ ಇರಿಸಿಕೊಳ್ಳುತ್ತೇನೆ. ಜೂಜು, ಮದ್ಯಸೇವನೆ, ವಿಷಕಾರಿಗಳಾಗಿರುವ ಜಾಲತಾಣ, ಎಲೆಕ್ಟ್ರಾನಿಕ್ ಆಟ, ಟಿವಿ ಕಾರ್ಯಕ್ರಮ, ಮೂವಿ, ಪುಸ್ತಕ, ಸಂಭಾಷಣೆಗಳಿಂದ ದೂರವಿರುತ್ತೇನೆ.
ನನ್ನೊಳಗೂ ನನ್ನ ಸುತ್ತಲೂ ಇರುವ ಚೈತನ್ಯಶೀಲ, ಪೋಷಕ, ಸ್ವಸ್ಥ ಸಂಗತಿಗಳನ್ನು ಮಾತ್ರ ಅನುಭವಿಸುತ್ತೇನೆ. ಬದುಕಿನ ಈ ಕ್ಷಣದಿಂದ ದೂರಕ್ಕೆ ಒಯ್ಯುವ ಕಳವಳ, ಭಯ ಹಂಬಲಗಳನ್ನು ದೂರವಿಡುತ್ತೇನೆ. ನನ್ನ ಒಂಟಿತನ, ಕಳವಳ ಅಥವಾ ಭೋಗದ ಮೂಲಕ ಉಂಟಾಗುವ ನೋವು, ಸಂಕಟಗಳನ್ನು ಅಡಗಿಸಿ ಇಡುವುದದಿಲ್ಲ. ನನ್ನ ಮೈ, ಮನಸು, ಪ್ರಜ್ಞೆಗಳನ್ನು ಬೆಳೆಸುವ ನನ್ನ ಮತ್ತು ನನ್ನ ಕುಟುಂಬದ ಒಟ್ಟಾರೆ ಬೆಳವಣಿಗೆಗೆ ಸಹಾಯಕವಾಗುವ ರಿತಿಯಲ್ಲಿ ಬದುಕುತ್ತೇನೆ.
*
ಟಿಕ್ ನಾಟ್ ಹಾನ್ ಅವರು ಏನು ಮಾಡುವ ಮೂಲಕ, ಹೇಗೆ ಬದುಕುವ ಮೂಲಕ ಶಾಂತಿ, ನೆಮ್ಮದಿ, ಸಂತೋಷ ಕಾಣಬಹುದು ಎಂದು ಹೇಳುತ್ತಾರೆ. ನಾವು ಸಾಂಪ್ರದಾಯಿಕವೆಂದು ಭಾವಿಸುವ ಕೃತಿಗಳು ನಾವು ಏನು ಮಾಡದಿದ್ದರೆ ಬದುಕು ಚೆಲುವಾಗುತ್ತದೆ ಎಂದು ಹೇಳುತ್ತವ. ಪಂಪನ ಆದಿಪುರಾಣದ ಐದನೆಯ ಆಶ್ವಾಸದಲ್ಲಿ ಬರುವ ಪದ್ಯ ಮತ್ತು ಬಸವಣ್ಣನವರ ವಚನಗಳನ್ನು ನೋಡಿ. ಚಿರಪರಿಚಿತ ನೀತಿಬೋಧನೆ ಅನ್ನುವ ಉಡಾಫೆಯನ್ನು ಬಿಟ್ಟು ಗಮನವಿಟ್ಟು ಓದಿದರೆ, ಈ ಮಾತುಗಳ ಅರ್ಥ ನಮ್ಮೊಳಗಿನಿಂದ ಹೊಳೆದರೆ ಅದು ಬೆರಗು.
ಅರಿವನ್ನು ಹೊಸತು ಮಾಡುವುದು ಧರ್ಮ. ಅದನ್ನು ತಡೆಯುವುದು ಅಧರ್ಮ. ಸುಳ್ಳು ಹೇಳದೆ ಇರುವುದು, ಬೇರೆಯವರ ಹೆಣ್ಣನ್ನು ಬಯಸದೆ ಇರುವುದು, ಕೊಲ್ಲದಿರುವುದು, ಮೋಹವಿಲ್ಲದಿರುವುದು, ಆಸೆಗಳಿಂದ ಬಿಡಿಸಿಕೊಳ್ಳುವುದು ಧರ್ಮ
ಪುಸಿಯದುದು ಪರಾಂಗನೆಗಾ
ಟಿಸದುದು ಕೊಲ್ಲದುದು ಮೋಹಮಿಲ್ಲದದಱಿವಂ
ಪೊಸಯಿಸುವುದು ವೈರಾಗ್ಯದೆಡೆ
ಗೆಸಪುದು ಧರ್ಮಮದಱ ತಡೆವುದು ಅಧರ್ಮಂ [ಆಶ್ವಾಸ ೫, ೭೯]
ಬಸವಣ್ಣನವರ ಪ್ರಸಿದ್ಧ ವಚನ
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ

ಗುರು ಟಿಕ್ ನಾಟ್ ಹಾನ್ ಅವರ ಬೋಧನೆಗಳ ಸಂಗ್ರಹವಾಗಿರುವ, Melvin McLeod ಸಂಪಾದಿಸಿಕೊಟ್ಟಿರುವ The Pocket Thich Nhat Hanh ಕೃತಿಯನ್ನು ನಾನು ಅರ್ಥಮಾಡಿಕೊಂಡ ಬಗೆಯನ್ನು, ಅದು ನನ್ನಲ್ಲಿ ಮೂಡಿಸಿದ ಚಿಂತನೆಗಳನ್ನು ಓದುಗರೊಡನೆ ಹಂಚಿಕೊಳ್ಳುವ ಬರವಣಿಗೆಯ ಸರಣಿ ಈ ಸಂಚಿಕೆಯೊಡನೆ ಕೊನೆಗೊಳ್ಳುತ್ತದೆ. ಓದುವುದು, ಬರೆಯುವುದು, ಮಾತಾಡುವುದು ಇವೆಲ್ಲವೂ ಮುಖ್ಯ. ಇಂಥ ಚಟುವಟಿಕೆಗಳ ಮೂಲಕ ನಮ್ಮೊಳಗೆ ನಾವು ಅರಿವಿನ ಎಚ್ಚರ ಪಡೆಯಲು ಸಾಧ್ಯವಾಗುತ್ತದೆ ಅನ್ನುವ ನಂಬಿಕೆ,ಕ್ರಿಯೆಯಾಗಿ ಬದಲಾಗುತ್ತದೆಯೋ—ಅದನ್ನು ನಾವು ನಾವೇ ಕಂಡುಕೊಳ್ಳಬೇಕು.
ಈ ಸಂಚಿಕೆಯ ಬರಹಗಳನ್ನು ಓದಿ ಸ್ಪಂದಿಸಿದ ಎಲ್ಲರಿಗೂ ಕೃತಜ್ಞ.
ಬಸವಣ್ಣನವರ ಪತ್ನಿ ನೀಲಮ್ಮನವರ ವಚನಗಳ ಸಂವಾದದೊಂದಿಗೆ ಮತ್ತೆ ಸದ್ಯದಲ್ಲೇ ಭೇಟಿಯಾಗೋಣ. ನಮಸ್ಕಾರ.

