ನಾವು ಕೆಟ್ಟವರಾಗಿದ್ದೇವೆ ಎನ್ನುವುದು ಸಮಸ್ಯೆಯಲ್ಲ, ಆದರೆ…

ಸುಮಾರು 3 ಲಕ್ಷ ವರ್ಷಗಳ ಕಾಲ, ಮಾನವರು ಶಕ್ತಿಹೀನರಾಗಿದ್ದರೂ ಸುರಕ್ಷಿತವಾಗಿದ್ದರು. ಹೌದು, ಪ್ರಕೃತಿ ನಮ್ಮನ್ನು ಮತ್ತೆ ಮತ್ತೆ ನಾಶಮಾಡಬಹುದಾಗಿತ್ತು; ಹಾಗೆಯೇ ನಾವು ಒಬ್ಬರನ್ನೊಬ್ಬರು ಕೊಲ್ಲುತ್ತಲೇ ಬಂದಿದ್ದೆವು. ಆದರೆ ಸಂಪೂರ್ಣ ಮಾನವ ಪ್ರಭೇದವನ್ನೇ ಅಳಿಸಿಹಾಕುವಷ್ಟು ಶಕ್ತಿ ನಮ್ಮಲ್ಲಿ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಜೀವಶಾಸ್ತ್ರಜ್ಞ ಎಡ್ವರ್ಡ್ ವಿಲ್ಸನ್ ಅವರು, “ಮಾನವರ ಸಮಸ್ಯೆಯೆಂದರೆ, ನಮ್ಮ ಭಾವನೆಗಳು ಪ್ರಾಚೀನ ಶಿಲಾಯುಗದ ಕಾಲದವು; ನಮ್ಮ ಸಂಸ್ಥೆಗಳು ಮಧ್ಯಯುಗದವು; ಆದರೆ ನಮ್ಮ ತಂತ್ರಜ್ಞಾನ ದೇವರಷ್ಟೇ ಶಕ್ತಿಶಾಲಿಯಾಗಿದೆ” ಎಂದು ವಾದಿಸುತ್ತಾರೆ.

ಟೋಬಿ ಆರ್ಡ್, ಈ ಸಮಸ್ಯೆ ಕೇವಲ ಒಂದು ಸೈದ್ಧಾಂತಿಕ ಸಮಸ್ಯೆಯಲ್ಲ; ಅದು ಮಾನವ ಅಸ್ತಿತ್ವಕ್ಕೇ ಸಂಬಂಧಿಸಿದ ಸಮಸ್ಯೆ ಎಂದು ವಾದಿಸುತ್ತಾರೆ.
ತಮ್ಮ The Precipice ಎಂಬ ಪುಸ್ತಕದಲ್ಲಿ, ನಾವು ಈಗ ಒಂದು ನಿರ್ಣಾಯಕ ತಿರುವಿನ ಹಂತವನ್ನು ತಲುಪಿದ್ದೇವೆ ಎಂದು ಆರ್ಡ್ ಹೇಳುತ್ತಾರೆ.

ಸುಮಾರು 3 ಲಕ್ಷ ವರ್ಷಗಳ ಕಾಲ, ಮಾನವರು ಶಕ್ತಿಹೀನರಾಗಿದ್ದರೂ ಸುರಕ್ಷಿತವಾಗಿದ್ದರು. ಹೌದು, ಪ್ರಕೃತಿ ನಮ್ಮನ್ನು ಮತ್ತೆ ಮತ್ತೆ ನಾಶಮಾಡಬಹುದಾಗಿತ್ತು; ಹಾಗೆಯೇ ನಾವು ಒಬ್ಬರನ್ನೊಬ್ಬರು ಕೊಲ್ಲುತ್ತಲೇ ಬಂದಿದ್ದೆವು. ಆದರೆ ಸಂಪೂರ್ಣ ಮಾನವ ಪ್ರಭೇದವನ್ನೇ ಅಳಿಸಿಹಾಕುವಷ್ಟು ಶಕ್ತಿ ನಮ್ಮಲ್ಲಿ ಇರಲಿಲ್ಲ.

ಈಗ ಪರಿಸ್ಥಿತಿ ಬದಲಾಗಿದೆ.

ಅಣ್ವಸ್ತ್ರಗಳು, ಕೃತಕ ಬುದ್ಧಿಮತ್ತೆ (AI), ಮತ್ತು ಕೃತಕ/ಸಂಶ್ಲೇಷಿತ ಜೀವಶಾಸ್ತ್ರ (synthetic biology) , ಇವುಗಳೆಲ್ಲವೂ ಕೇವಲ ಮಾನವಕುಲವನ್ನೇ ಸಂಪೂರ್ಣವಾಗಿ ನಾಶಮಾಡುವ ಸಾಮರ್ಥ್ಯ ಹೊಂದಿರುವುದಷ್ಟೇ ಅಲ್ಲ ; ಭೂಮಿಯೇ ಮಾನವ ಜೀವನಕ್ಕೆ ವಾಸಯೋಗ್ಯವಾಗದಂತೆ ಮಾಡುವಷ್ಟು ಅಪಾಯಕಾರಿ ಶಕ್ತಿಯನ್ನು ಹೊಂದಿವೆ. ಸರಳವಾಗಿ ಹೇಳುವುದಾದರೆ: ಹಿಂದೆ ಮನುಷ್ಯನಿಗೆ ಜಗತ್ತನ್ನು ನಾಶಮಾಡುವಷ್ಟು ಶಕ್ತಿ ಇರಲಿಲ್ಲ. ಈಗ ಆ ಶಕ್ತಿ ನಮ್ಮ ಕೈಯಲ್ಲಿದೆ. ಆದರೆ ನಮ್ಮ ಭಾವನೆಗಳು, ಸಾಮಾಜಿಕ ವ್ಯವಸ್ಥೆಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳು ಆ ಶಕ್ತಿಗೆ ತಕ್ಕಂತೆ ಬೆಳೆದಿಲ್ಲ. ಅದೇ ಟೋಬಿ ಆರ್ಡ್ ಸೂಚಿಸುವ ಅಸ್ತಿತ್ವದ ಅಪಾಯ.

ಆದರೆ, ನಮ್ಮನ್ನು ನಿಯಂತ್ರಿಸುವ ವ್ಯವಸ್ಥೆಗಳು, ರಾಷ್ಟ್ರ,ಗಳು, ರಾಜ್ಯಗಳು, ಪರಸ್ಪರ ಸ್ಪರ್ಧಿಸುವ ಬಣಗಳು, ಮತ್ತು ನಿಧಾನಗತಿಯ ಆಡಳಿತ ವ್ಯವಸ್ಥೆಗಳು, ಇವೆಲ್ಲವೂ ಮಧ್ಯಯುಗದ ಮನಸ್ಥಿತಿಯನ್ನು ಆಧರಿಸಿ ನಿರ್ಮಾಣಗೊಂಡಿವೆ. ಅವು ಸೀಮಿತ ಮತದಾನದ ಹಕ್ಕು ಹೊಂದಿದ್ದ, ಕೃಷಿ ಆಧಾರಿತ ಸಮಾಜಗಳಿಗೆ ಮತ್ತು ಇಂಟರ್ನೆಟ್‌ ಇಲ್ಲದ ಜಗತ್ತಿಗೆ ಹೊಂದುವಂತೆ ರೂಪುಗೊಂಡಿವೆ. ಮತ್ತೊಂದೆಡೆ, ಆ ಸಮಾಜಗಳೊಳಗೆ ಬದುಕುತ್ತಿರುವ ಮನುಷ್ಯರ ಮನೋವಿಜ್ಞಾನ ಇನ್ನೂ ಶಿಲಾಯುಗದ ಮನಸ್ಥಿತಿಯನ್ನೇ ಹೊಂದಿದೆ. ನಾವು ಇತರರ ಬಗ್ಗೆ ಹರಟೆ ಹೊಡೆಯಲು, ಸೇಡು ತೀರಿಸಿಕೊಳ್ಳಲು ಮತ್ತು ಸಣ್ಣ ಗುಂಪುಗಳಲ್ಲಿ ಬದುಕಲು ವಿಕಸನಗೊಂಡಿದ್ದೇವೆ.

ಆರ್ಡ್ ಹೇಳುವುದೇನೆಂದರೆ, ನಾವು ಕೆಟ್ಟವರಾಗಿದ್ದೇವೆ ಎನ್ನುವುದು ಸಮಸ್ಯೆಯಲ್ಲ; ನಮ್ಮ ಸಾಧನಗಳು ಮತ್ತು ತಂತ್ರಜ್ಞಾನಗಳು ನಮ್ಮ ವಿಕಾಸಾತ್ಮಕ ಜೀವಶಾಸ್ತ್ರವನ್ನು ಮೀರಿ ಬಹಳ ಮುಂದೆ ಹೋಗಿವೆ ಎನ್ನುವುದೇ ಸಮಸ್ಯೆ.
ನಮ್ಮ ಮೆದುಳು ಇನ್ನೂ ಯಾರು ಮೇಲು, ಯಾರು ಕೆಳಗೆ ಎಂಬ ಪ್ರಾಬಲ್ಯದ ಶ್ರೇಣಿಗಳನ್ನು ಬೆನ್ನಟ್ಟುತ್ತದೆ. ಆದರೆ ನಮ್ಮ ತಂತ್ರಜ್ಞಾನಗಳು ಈಗ ಸಂಪೂರ್ಣ ಮಾನವ ಪ್ರಭೇದವನ್ನೇ ಅಳಿಸಿಹಾಕುವಷ್ಟು ಶಕ್ತಿಶಾಲಿಯಾಗಿವೆ. ಆದರೆ ಆರ್ಡ್ ನಿರಾಶಾವಾದಿಯಲ್ಲ.
ನಮ್ಮಲ್ಲಿ ಇನ್ನೂ ಸಂಪೂರ್ಣ ಮಾನವಕುಲವನ್ನು ಒಳಗೊಂಡ ಒಂದು ಸಾಮೂಹಿಕ ಚೇತನವನ್ನು (species-wide consciousness) ಬೆಳೆಸುವ ಸಾಮರ್ಥ್ಯವಿದೆ ಎಂದು ಅವರು ನಂಬುತ್ತಾರೆ. ಹಾಗೆಯೇ, ನಮ್ಮ ತಂತ್ರಜ್ಞಾನ ಹೊಂದಿರುವ ಶಕ್ತಿಗೆ ತಕ್ಕಂತೆ ಸಂಸ್ಥೆಗಳು ಮತ್ತು ಆಡಳಿತ ವ್ಯವಸ್ಥೆಗಳನ್ನು ನಿರ್ಮಿಸುವ ಬುದ್ಧಿವಂತಿಕೆಯೂ ನಮ್ಮಲ್ಲಿದೆ ಎಂದು ಅವರು ನಂಬುತ್ತಾರೆ.

ಆದರೆ ಪ್ರಶ್ನೆ ಏನೆಂದರೆ, ನಾವು ಇದನ್ನು ಸಮಯಕ್ಕೆ ಸರಿಯಾಗಿ ಅರಿತುಕೊಳ್ಳುತ್ತೇವೆಯೇ? ಅಥವಾ, ಅದಕ್ಕೂ ಬಹಳ ಮುಂಚೆಯೇ, ತಪ್ಪು ಮನಸ್ಥಿತಿಯಲ್ಲಿರುವ ತಪ್ಪು ವ್ಯಕ್ತಿಯೊಬ್ಬನು ಆ ದೊಡ್ಡ ಕೆಂಪು ಗುಂಡಿಯನ್ನು ಒತ್ತಿಬಿಡುತ್ತಾನೆಯೇ? ಇಲ್ಲಿ “ದೊಡ್ಡ ಕೆಂಪು ಗುಂಡಿ” ಎನ್ನುವುದು ರೂಪಕ , ಅಣ್ವಸ್ತ್ರಗಳಂತಹ ಮಾನವಕುಲವನ್ನು ನಾಶಮಾಡಬಲ್ಲ ಶಕ್ತಿಯನ್ನು ಯಾರಾದರೂ ತಪ್ಪಾಗಿ ಬಳಸುವ ಅಪಾಯವನ್ನು ಸೂಚಿಸುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.