ಬದುಕನ್ನು ನಿರ್ದೇಶಿಸುವ ಅಂಶಗಳು

ನಮ್ಮ ಜೀವನವು ಅನೇಕ ಬಾರಿ ಕಾಕತಾಳೀಯ ಘಟನೆಗಳು ಮತ್ತು ಅನಿರೀಕ್ಷಿತ ಸಂದರ್ಭಗಳಿಂದ ನಿರ್ದೇಶಿಸಲ್ಪಡುತ್ತದೆ. ಆದರೆ ಅದೃಷ್ಟ ಅಥವಾ ಆಕಸ್ಮಿಕ ಘಟನೆಗಳಿಂದ ಪ್ರಭಾವಿತರಾಗುವುದು ಎಂದರೆ ನಾವು ನಿಷ್ಕ್ರಿಯರಾಗಿರಬೇಕು ಅಥವಾ ಭಯಪಡಬೇಕು ಎಂದರ್ಥವಲ್ಲ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಇಲ್ಲಿ ಎರಡು ಜೀವನಗಳ ಕುರಿತಾದ ಎರಡು ಕಥೆಗಳಿವೆ.

ಒಂದು, ಹೆನ್ರಿ ದಟ್ಟವಾದ ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದಾನೆ. ದಟ್ಟವಾದ ಗಿಡಗಂಟಿಗಳು ಮತ್ತು ಜಿಗುಟಾದ ಕೆಸರಿನ ನಡುವೆ ಸಾಗುವುದು ತುಂಬಾ ಕಷ್ಟ. ಬೆವರು ಸುರಿಯುತ್ತಾ, ಶ್ರಮಪಟ್ಟು ನಡೆಯುತ್ತಿರುವಾಗ, ಇದ್ದಕ್ಕಿದ್ದಂತೆ ಒಂದು ತಿರುವನ್ನು ದಾಟಿದಾಗ ಅವನ ಕಣ್ಣಿಗೆ ಉಸಿರುಗಟ್ಟಿಸುವಷ್ಟು ಸುಂದರವಾದ ದೃಶ್ಯವೊಂದು ಕಾಣಿಸುತ್ತದೆ. ಮುಸ್ಸಂಜೆಯ ಆಕಾಶವು ಸಮುದ್ರತೀರದ ಮೇಲೆ ತನ್ನ ಬಣ್ಣಗಳನ್ನು ಹರಡಿಕೊಂಡಿರುವ ಆ ಅದ್ಭುತ ಸೌಂದರ್ಯವನ್ನು ಕಂಡು ಅವನು ಆಶ್ಚರ್ಯದಿಂದ ಉಸಿರು ಬಿಗೆ ಹಿಡಿಯುತ್ತಾನೆ. ಆ ಕ್ಷಣದಲ್ಲಿ, ತಾನು ದೇವರನ್ನು ಕಂಡಂತಾಯಿತು ಎಂದು ಅವನಿಗೆ ಅನಿಸುತ್ತದೆ.

ಎರಡು, ನೀನಾ ತನ್ನ ಭಾಷಣಕ್ಕಾಗಿ ಮೂರು ತಿಂಗಳುಗಳ ಕಾಲ ಅದನ್ನು ಬರೆಯುತ್ತಾ, ಅಭ್ಯಾಸ ಮಾಡುತ್ತಾ, ಅದರ ಬಗ್ಗೆಯೇ ಸದಾ ಚಿಂತಿಸುತ್ತಾ ಕಳೆದಿದ್ದಾಳೆ. ಅದು ಅವಳ ವೃತ್ತಿಜೀವನವನ್ನು ನಿರ್ಧರಿಸಬಹುದಾದ ಮಹತ್ವದ ಕ್ಷಣ. ಯಾವುದೇ ಟಿಪ್ಪಣಿಗಳಾಗಲಿ, ಸೂಚನೆಗಳಾಗಲಿ ಇಲ್ಲದೆ, ಸಾವಿರಕ್ಕೂ ಹೆಚ್ಚು ಜನರ ಮುಂದೆ ಅವಳು ಮಾತನಾಡಬೇಕಿದೆ. ಆ ದೊಡ್ಡ ದಿನ ಬರುತ್ತದೆ. ಆದರೆ ಬೆಳಿಗ್ಗೆ ಎದ್ದಾಗ ಅವಳಿಗೆ ಹೊಟ್ಟೆಯ ತೊಂದರೆ ಕಾಣಿಸಿಕೊಳ್ಳುತ್ತದೆ.

ಈ ಎರಡೂ ಕಥೆಗಳು ನಮ್ಮ ಜೀವನವು ಎಷ್ಟರ ಮಟ್ಟಿಗೆ ಮತ್ತು ಎಷ್ಟು ಬಾರಿ ಆಕಸ್ಮಿಕ ಘಟನೆಗಳು ಅಥವಾ ಅನಿರೀಕ್ಷಿತ ಸಂದರ್ಭಗಳಿಂದ ನಿರ್ದೇಶಿಸಲ್ಪಡುತ್ತದೆ ಎನ್ನುವುದನ್ನು ತೋರಿಸುತ್ತವೆ.

ಮಾಂಟೇನ್ ಒಮ್ಮೆ, ನಮ್ಮ ಜೀವನದ ಎಷ್ಟು ದೊಡ್ಡ ಭಾಗವು ನಮ್ಮ ನಿಯಂತ್ರಣದ ಹೊರಗಿದೆ ಎನ್ನುವುದನ್ನು ನಾವು ಸರಿಯಾಗಿ ಅರಿತುಕೊಳ್ಳುವುದಿಲ್ಲ ಎಂದು ವಾದಿಸಿದ್ದ. ತನ್ನ ಜೀವನವನ್ನು ತಾನು ಎಷ್ಟು ಸೂಕ್ಷ್ಮವಾಗಿ ಮತ್ತು ಕ್ರಮಬದ್ಧವಾಗಿ ಯೋಜಿಸುತ್ತಿದ್ದೆ ಎನ್ನುವುದನ್ನು ಅವನು ನೆನಪಿಸಿಕೊಂಡ. ಆದರೆ ಒಂದು ದಿನ ಕುದುರೆಯಿಂದ ಕೆಳಗೆ ಬಿದ್ದ ಘಟನೆ ಅವನ ಎಲ್ಲ ಯೋಜನೆಗಳನ್ನೂ ತಲೆಕೆಳಗಾಗಿಸಿತು. ಅವನು ಗಂಭೀರವಾಗಿ ಗಾಯಗೊಂಡು, ಹಾಸಿಗೆ ಹಿಡಿದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಉಳಿಯಬೇಕಾಯಿತು.

ನಮ್ಮ ಜೀವನವು ಅನೇಕ ಬಾರಿ ಕಾಕತಾಳೀಯ ಘಟನೆಗಳು ಮತ್ತು ಅನಿರೀಕ್ಷಿತ ಸಂದರ್ಭಗಳಿಂದ ನಿರ್ದೇಶಿಸಲ್ಪಡುತ್ತದೆ. ಆದರೆ ಅದೃಷ್ಟ ಅಥವಾ ಆಕಸ್ಮಿಕ ಘಟನೆಗಳಿಂದ ಪ್ರಭಾವಿತರಾಗುವುದು ಎಂದರೆ ನಾವು ನಿಷ್ಕ್ರಿಯರಾಗಿರಬೇಕು ಅಥವಾ ಭಯಪಡಬೇಕು ಎಂದರ್ಥವಲ್ಲ.

ದಾವೋವಾದದ (Daoism) ಒಂದು ಪ್ರಮುಖ ಬೋಧನೆಯೆಂದರೆ, ಆಕಸ್ಮಿಕವಾಗಿ ಸಂಭವಿಸುವ ಘಟನೆಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವುದು ಮತ್ತು ವಿಶ್ವದಿಂದ ಬರುವ ಸಂಕೇತಗಳನ್ನು ಆಲಿಸುವುದು. ಗಾಳಿಯೊಂದಿಗೆ ತೂಗಾಡುವಂತೆ, ಜೀವನವು ನಮ್ಮ ಮುಂದೆ ಒಡ್ಡುವ ಅವಕಾಶಗಳೊಂದಿಗೆ ಹೊಂದಿಕೊಂಡು ಸಾಗಬೇಕು ಮತ್ತು ನಮಗೆ ದೊರೆಯುವ ಅವಕಾಶಗಳನ್ನು ಸಾಧ್ಯವಾದಷ್ಟು ಸದುಪಯೋಗಪಡಿಸಿಕೊಳ್ಳಬೇಕು.

ಜಗತ್ತಿನ ಬಗ್ಗೆ ನಿಮ್ಮ ದೃಷ್ಟಿಕೋನವನ್ನೇ ಬದಲಾಯಿಸುವಂತಹ, ನಿಮಗೆ ಒಂದು ಅಂಗಡಿಯಲ್ಲಿ ಅಗ್ಗವಾಗಿ ಸಿಕ್ಕ, ಯಾರೂ ಗಮನಿಸದ ಹಳೆಯ ಪುಸ್ತಕವಾಗಿರಬಹುದು; ಅಥವಾ ಒಂದು ಪಾರ್ಟಿಯಲ್ಲಿ ಆಕಸ್ಮಿಕವಾಗಿ ಪರಿಚಯವಾದ ಅಪರಿಚಿತ ವ್ಯಕ್ತಿಯಾಗಿರಬಹುದು, ಅವನು / ಅವಳು ಅಥವಾ ಅದು ನೀವು ಜೀವನವನ್ನು ನಡೆಸುವ ರೀತಿಯನ್ನೇ ಬದಲಾಯಿಸಬಹುದು.

ಜೀವನವು ಅನೇಕ ಬಾರಿ ನಾವು ಹೇಗಿರಬೇಕು ಎಂದು ಬಯಸುತ್ತೇವೋ ಹಾಗೆ ಇರುವುದರ ಬಗ್ಗೆ ಅಲ್ಲ.
ನಮಗೆ ಏನು ದೊರೆಯುತ್ತದೆಯೋ, ಅದರಿಂದ ನಾವು ಏನು ಮಾಡುತ್ತೇವೆ ಎನ್ನುವುದರ ಬಗ್ಗೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.