ಪ್ರಾಚೀನ ಗ್ರೀಕರು ಪ್ರತಿಯೊಂದು ರೀತಿಯ ಆಡಳಿತ ವ್ಯವಸ್ಥೆಯಲ್ಲಿಯೂ ತನ್ನದೇ ಆದ ದೋಷಗಳಿವೆ ಎಂದು ವಾದಿಸಿದ್ದರು… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಪ್ರಜಾಪ್ರಭುತ್ವವೆಂಬುದು ಅಸಂಬದ್ಧವಾದದ್ದು. ಕಾಳಜಿಯಿಲ್ಲದ, ರಾಜಕೀಯದ ಬಗ್ಗೆ ಅರಿವೇ ಇಲ್ಲದ ಜನಸಮೂಹವು ಚೆನ್ನಾಗಿ ಮಾತನಾಡುವ, ನೋಡಲು ಆಕರ್ಷಕವಾಗಿರುವ ಯಾರನ್ನೋ ಮತ ಹಾಕಿ ಅಧಿಕಾರಕ್ಕೆ ತರುತ್ತದೆ. ಕೊನೆಗೆ ಏನಾಗುತ್ತದೆ ಎಂದರೆ, ಆಡಳಿತದ ಬಗ್ಗೆ ಏನೂ ತಿಳಿಯದ ಜನಸಮೂಹದ ಆಳ್ವಿಕೆಯೇ ರೂಪುಗೊಳ್ಳುತ್ತದೆ. ಆದರೆ ಪಾಲಿಬಿಯಸ್‌ನ ಪ್ರಕಾರ, ಇದಕ್ಕಿಂತ ಉತ್ತಮವಾದ ಒಂದು ಮಾರ್ಗವಿದೆ.
ಪ್ಲೇಟೋ ಪ್ರಜಾಪ್ರಭುತ್ವವನ್ನು ಒಂದು ಹಡಗಿಗೆ ಹೋಲಿಸಿದ್ದಾನೆ. ಈ ಹಡಗನ್ನು ಒಬ್ಬ ನಾಯಕ ನಡೆಸುತ್ತಿರುತ್ತಾನೆ. ಆದರೆ ಆ ನಾಯಕನು “ಕಿವುಡ ಮತ್ತು ದೂರದೃಷ್ಟಿಯಿಲ್ಲದವನು!” ಅಂದರೆ, ತನ್ನ ಕೆಲಸದಲ್ಲಿ ಅಷ್ಟೇನೂ ಸಮರ್ಥನಲ್ಲದವನು. ಇದನ್ನು ಕಂಡು ಹಡಗಿನಲ್ಲಿರುವ ಸಿಬ್ಬಂದಿ, ಹಡಗಿನ ನಿಯಂತ್ರಣವನ್ನು ತಾವೇ ತೆಗೆದುಕೊಳ್ಳಬಹುದು ಎಂದು ಭಾವಿಸುತ್ತಾರೆ. ಅವರು, “ಹಡಗು ನಡೆಸುವುದು ಬಹಳ ಸುಲಭ. ಯಾರಾದರೂ ಹಡಗನ್ನು ನಡೆಸಬಹುದು!” ಎಂದು ತಿಳಿದುಕೊಂಡಿರುತ್ತಾರೆ. ನಂತರ ನಾಯಕನ ಸ್ಥಾನವನ್ನು ಪಡೆಯಲು ಪರಸ್ಪರ ತಳ್ಳಾಟ, ಜಗಳ, ಕುತಂತ್ರಗಳಲ್ಲಿ ತೊಡಗುತ್ತಾರೆ. ಆದರೆ ವಾಸ್ತವವಾಗಿ, ಹಡಗನ್ನು ನಡೆಸುವುದು ಸುಲಭದ ಕೆಲಸವಲ್ಲ; ಪ್ರತಿಯೊಬ್ಬರೂ ನಾಯಕನಾಗಲು ಸಾಧ್ಯವಿಲ್ಲ. ಪರಿಣಾಮವಾಗಿ, ಹಡಗು ನಾಶವಾಗುತ್ತದೆ.
ಪ್ರಾಚೀನ ಗ್ರೀಕರು ಪ್ರತಿಯೊಂದು ರೀತಿಯ ಆಡಳಿತ ವ್ಯವಸ್ಥೆಯಲ್ಲಿಯೂ ತನ್ನದೇ ಆದ ದೋಷಗಳಿವೆ ಎಂದು ವಾದಿಸಿದ್ದರು. ರಾಜಪ್ರಭುತ್ವ (Monarchy) ಅಂತಿಮವಾಗಿ ಕ್ರೂರ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಆ ಸರ್ವಾಧಿಕಾರದಿಂದ Aristocracy ಹುಟ್ಟಿಕೊಳ್ಳುತ್ತದೆ. ಆದರೆ ಕಾಲಕ್ರಮೇಣ Aristocracyಯ ಆಡಳಿತವೂ ಭ್ರಷ್ಟವಾಗಿ, ತಮ್ಮ ಸ್ವಂತ ಹಿತಾಸಕ್ತಿಗಳನ್ನು ಮಾತ್ರ ಕಾಪಾಡಿಕೊಳ್ಳುವ ವ್ಯವಸ್ಥೆಯಾಗಿ ಮಾರ್ಪಡುತ್ತದೆ. ಇದರಿಂದಾಗಿ ಪ್ರಜಾಪ್ರಭುತ್ವ (Democracy) ಬರುತ್ತದೆ. ಆದರೆ ಪ್ರಜಾಪ್ರಭುತ್ವವೂ ಕ್ರಮೇಣ ಜನಸಮೂಹದ ಅರಾಜಕ ಆಡಳಿತವಾಗಿ (Mob rule) ಬದಲಾಗುತ್ತದೆ. ಇದು ಮುಂದೆ ಅರಾಜಕತೆಗೆ (Anarchy) ದಾರಿ ಮಾಡಿಕೊಡುತ್ತದೆ. ಆಗ ಜನರು ಮತ್ತೆ ಒಬ್ಬ ಬಲಿಷ್ಠ ನಾಯಕನಿಗಾಗಿ ಹಂಬಲಿಸುತ್ತಾರೆ. ಹೀಗೆ ಮತ್ತೆ ರಾಜಪ್ರಭುತ್ವವೇ ಮರಳಿ ಬರುತ್ತದೆ.
ಆದರೆ ಪಾಲಿಬಿಯಸ್‌ನ ವಾದವೇನೆಂದರೆ, ಪರಿಪೂರ್ಣ ಆಡಳಿತ ವ್ಯವಸ್ಥೆಯು ಈ ಎಲ್ಲ ವ್ಯವಸ್ಥೆಗಳ ಅಂಶಗಳನ್ನು ಒಳಗೊಂಡಿರಬೇಕು. ಅದರಲ್ಲಿ ಒಬ್ಬ ಅಧ್ಯಕ್ಷನ ರೂಪದಲ್ಲಿ ರಾಜಪ್ರಭುತ್ವದ ಅಂಶ, ಸೆನೆಟ್‌ನ ರೂಪದಲ್ಲಿ Aristocracy ಆಡಳಿತದ ಅಂಶ, ಮತ್ತು ಸಂಸತ್ತು ಅಥವಾ ಕಾಂಗ್ರೆಸ್‌ನ ರೂಪದಲ್ಲಿ ಪ್ರಜಾಪ್ರಭುತ್ವದ ಅಂಶ ಇರಬೇಕು. ಬಹಳ ವರ್ಷಗಳ ನಂತರ, ಅಮೆರಿಕದ ಸಂವಿಧಾನದ ಸ್ಥಾಪಕ ಪಿತಾಮಹರು ಕೂಡ ಪಾಲಿಬಿಯಸ್‌ನ ಈ ವಿಚಾರವನ್ನು ಒಪ್ಪಿಕೊಂಡರು. ಅವರು ತಮ್ಮ ಸಂವಿಧಾನವನ್ನು ರೂಪಿಸುವಾಗ ಇಂತಹ ವಿಚಾರಗಳನ್ನು ಆಧಾರವಾಗಿಟ್ಟುಕೊಂಡರು.
ಪ್ಲೇಟೋನ ಪ್ರಕಾರ, ಸರ್ಕಾರದ ಎಲ್ಲಾ ಅಂಗಗಳೂ ಪರಸ್ಪರ ಒಮ್ಮತದಿಂದ ಕಾರ್ಯನಿರ್ವಹಿಸಬೇಕು. ಆದರೆ ಪಾಲಿಬಿಯಸ್‌ನ ಅಭಿಪ್ರಾಯವೇನೆಂದರೆ, ಪ್ರಜಾಪ್ರಭುತ್ವವು ಸದೃಢವಾಗಿ ಮತ್ತು ಜೀವಂತವಾಗಿ ಉಳಿಯಬೇಕಾದರೆ, ಒಂದು ಮಟ್ಟದ ಸೃಜನಾತ್ಮಕ ಭಿನ್ನಾಭಿಪ್ರಾಯವೂ ಅಗತ್ಯ. ಪ್ರಜಾಪ್ರಭುತ್ವ ಉಳಿದುಕೊಳ್ಳಲು, ಸರ್ಕಾರದ ವಿವಿಧ ಅಂಗಗಳಿಂದ ಬರುವ ವಿಭಿನ್ನ ಧ್ವನಿಗಳು ಮತ್ತು ಪರಸ್ಪರ ಸ್ಪರ್ಧಿಸುವ ಅಭಿಪ್ರಾಯಗಳು ಅಗತ್ಯ. ಅವು ಪ್ರಜಾಪ್ರಭುತ್ವದ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಮುಂದಿಡುತ್ತವೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯಾವುದೇ ಒಬ್ಬ ವ್ಯಕ್ತಿಯಾಗಲಿ ಅಥವಾ ಯಾವುದೇ ಒಂದು ಸಂಸ್ಥೆಯಾಗಲಿ ಅತಿಯಾದ ಅಧಿಕಾರವನ್ನು ಹೊಂದದಂತೆ ವ್ಯವಸ್ಥೆಯನ್ನು ರೂಪಿಸಬೇಕು.
ಅದಕ್ಕಾಗಿ ನಾವು “ಅಧಿಕಾರದ ಪರಸ್ಪರ ನಿಯಂತ್ರಣ ಮತ್ತು ಸಮತೋಲನ” (Checks and Balances) ಎಂಬ ವ್ಯವಸ್ಥೆಯನ್ನು ಹೊಂದಬೇಕು.

