‘ಕಲಿಕೆ’ ಎಂದರೆ ನಿಜವಾಗಿ ಏನು?

ಕಲಿಕೆಯ ನಿಜವಾದ ಸವಾಲು ಹೊಸ ವಿಷಯವನ್ನು ತಿಳಿದುಕೊಳ್ಳುವುದಲ್ಲ; ತಿಳಿದುಕೊಂಡದ್ದನ್ನು ಮರೆಯದಂತೆ ನೋಡಿಕೊಳ್ಳುವುದಾಗಿದೆ. ಇದರಿಂದ ನಾವು ಎರಡು ಮುಖ್ಯ ವಿಷಯಗಳನ್ನು ತಿಳಿದುಕೊಳ್ಳಬಹುದು । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನೀವು ಯಾವುದನ್ನಾದರೂ ಇನ್ನಷ್ಟು ಉತ್ತಮವಾಗಿ ಕಲಿಯಬೇಕೆಂದಿದ್ದರೆ, ‘ಕಲಿಕೆ’ ಎಂದರೆ ನಿಜವಾಗಿ ಏನು ಎನ್ನುವುದನ್ನೇ ಹೊಸ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಕಲಿಕೆ ಎಂದರೆ ಹೊಸ ವಿಷಯವನ್ನು ಓದುವುದು ಅಥವಾ ಯಾವುದನ್ನಾದರೂ ಮೊದಲ ಬಾರಿಗೆ ತಿಳಿದುಕೊಳ್ಳುವುದಷ್ಟೇ ಅಲ್ಲ. ಕಲಿಕೆ ಎಂದರೆ ಮರೆತುಹೋಗುವಿಕೆಯ ವಿರುದ್ಧ ನಿರಂತರವಾಗಿ ನಡೆಸುವ ಹೋರಾಟ. ನಮ್ಮ ಮನಸ್ಸು ಹಳೆಯ ವಿಷಯಗಳನ್ನು ಅಳಿಸಿಹಾಕಿ, ಹೊಸ ವಿಷಯಗಳಿಗೆ ಜಾಗ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಆ ಸ್ವಾಭಾವಿಕ ಪ್ರವೃತ್ತಿಯನ್ನು ತಡೆಯುವ ಅಂತ್ಯವಿಲ್ಲದ ಪ್ರಯತ್ನವೇ ಕಲಿಕೆ.

ಬಹಳಷ್ಟು ಜನರು ‘ಲರ್ನಿಂಗ್ ಕರ್ವ್’ (Learning Curve) ಬಗ್ಗೆ ಕೇಳಿರಬಹುದು. ಆದರೆ ಬಹುಶಃ ಅದಕ್ಕಿಂತ ಮುಖ್ಯವಾದುದು 19ನೇ ಶತಮಾನದ ಮನೋವಿಜ್ಞಾನಿ ಹರ್ಮನ್ ಎಬ್ಬಿಂಗ್‌ಹೌಸ್ (Hermann Ebbinghaus) ಅವರು ವಿವರಿಸಿದ ‘ಫರ್ಗೆಟಿಂಗ್ ಕರ್ವ್’ (Forgetting Curve) — ಅಂದರೆ ಮರೆವಿನ ರೇಖೆ. ಎಬ್ಬಿಂಗ್‌ಹೌಸ್ ನಡೆಸಿದ ವಿವಿಧ ಅಧ್ಯಯನಗಳು ತೋರಿಸಿದ ಪ್ರಕಾರ, ನಾವು ಯಾವುದನ್ನಾದರೂ ಕಲಿತ ನಂತರದ ಮೊದಲ 20 ನಿಮಿಷಗಳಲ್ಲೇ ನಮ್ಮ ನೆನಪಿನ ಕುಸಿತ ಅತ್ಯಂತ ವೇಗವಾಗಿರುತ್ತದೆ. ನಂತರ, ಮೊದಲ ಒಂದು ಗಂಟೆಯೊಳಗೆ ನಾವು ನೆನಪಿನ ಬಹುಪಾಲನ್ನು ಕಳೆದುಕೊಳ್ಳುತ್ತೇವೆ, ಆಗ ಸರಿಸುಮಾರು ಅರ್ಧದಷ್ಟು ಮಾಹಿತಿ ಮಾತ್ರ ನೆನಪಲ್ಲಿ ಉಳಿಯಬಹುದು.

ಒಂದು ಅಥವಾ ಎರಡು ದಿನಗಳ ನಂತರ ಮರೆವಿನ ವೇಗ ಸ್ವಲ್ಪ ನಿಧಾನವಾಗಿ ಸ್ಥಿರವಾಗುತ್ತದೆ. ಆದರೆ ಅದು ಒಬ್ಬೊಬ್ಬರ ಜೀವನಶೈಲಿಯ ಅಂಶಗಳಾದ ಒತ್ತಡ, ನಿದ್ರೆ ಮತ್ತು ಇತರ ಕಾರಣಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ನಿಮಗೆ ನೆನಪಿಟ್ಟುಕೊಳ್ಳಲು 20 ಆಟಿಕೆಗಳ ಹೆಸರುಗಳನ್ನು ನೀಡಿದರೆ, ಹೆಚ್ಚಿನ ಜನರು ಒಂದು ಗಂಟೆಯ ನಂತರ ಅವುಗಳಲ್ಲಿ ಸುಮಾರು 10 ಆಟಿಕೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಆದರೆ ಒಂದು ವಾರದ ನಂತರ ಸುಮಾರು 3 ಆಟಿಕೆಗಳಷ್ಟೇ ನೆನಪಿನಲ್ಲಿ ಉಳಿದಿರಬಹುದು.

ಅಂದರೆ, ಕಲಿಕೆಯ ನಿಜವಾದ ಸವಾಲು ಹೊಸ ವಿಷಯವನ್ನು ತಿಳಿದುಕೊಳ್ಳುವುದಲ್ಲ; ತಿಳಿದುಕೊಂಡದ್ದನ್ನು ಮರೆಯದಂತೆ ನೋಡಿಕೊಳ್ಳುವುದಾಗಿದೆ. ಇದರಿಂದ ನಾವು ಎರಡು ಮುಖ್ಯ ವಿಷಯಗಳನ್ನು ತಿಳಿದುಕೊಳ್ಳಬಹುದು.

ಮೊದಲನೆಯದು, ಪುನರಾವರ್ತನೆ ಮತ್ತು ಪುನರ್‌ಅಧ್ಯಯನ (Revision) ಎನ್ನುವುದೇ ನೆನಪು ಕಳೆದುಹೋಗುವುದನ್ನು ತಡೆಯಲು ಇರುವ ಅತ್ಯುತ್ತಮವಾದ, ಬಹುಶಃ ಏಕೈಕ ಪರಿಣಾಮಕಾರಿ ಮಾರ್ಗ.

ಎರಡನೆಯದು ನಮ್ಮ ಮನಸ್ಸಿನ ಸ್ವಭಾವಕ್ಕೆ ಸಂಬಂಧಿಸಿದ್ದು. ಮನಸ್ಸು ಯಾವುದನ್ನಾದರೂ ಮರೆತುಹೋಗುವುದಕ್ಕೆ ಕಾರಣ ಅದು ನಮ್ಮ ಮೇಲೆ ಕೋಪಗೊಂಡಿರುವುದರಿಂದಲೋ, ಅಥವಾ ಅದರಲ್ಲೇನಾದರೂ ದೌರ್ಬಲ್ಯವಿರುವುದರಿಂದಲೋ ಅಲ್ಲ. ಇನ್ನು ಮುಂದೆ ಉಪಯೋಗವಿಲ್ಲ ಎಂದು ಅದು ಭಾವಿಸುವ ವಿಷಯಗಳನ್ನು ಮನಸ್ಸು ಸಹಜವಾಗಿಯೇ ಮರೆತುಬಿಡುತ್ತದೆ. ಅದಕ್ಕೆ ಅಗತ್ಯವಿರುವುದನ್ನು ಮಾತ್ರ ಅದು ಉಳಿಸಿಕೊಳ್ಳುತ್ತದೆ. ಹೀಗಾಗಿ, ನೀವು ಏನನ್ನು ನೆನಪಿನಲ್ಲಿ ಉಳಿಸಿಕೊಳ್ಳುತ್ತೀರಿ ಎನ್ನುವುದು ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಜೀವನಶೈಲಿಯ ಪ್ರತಿಬಿಂಬವಾಗಿದೆ.

ಆದ್ದರಿಂದ, ಉತ್ತಮವಾಗಿ ಕಲಿಯುವ ಒಬ್ಬನು, ತನ್ನನ್ನು ತಾನು ಹೀಗೆ ಪ್ರಶ್ನಿಸಿಕೊಳ್ಳುವ ವ್ಯಕ್ತಿಯಾಗಿರುತ್ತಾನೆ:

“ನಾನು ಯಾವುದನ್ನು ಮರೆತುಬಿಡಬಹುದು?”
ಅಂದರೆ, ಅವನು ಮರೆವಿನ ವಿಷಯದಲ್ಲಿಯೂ

ಅವನು ತನ್ನನ್ನು ತಾನು ಹೀಗೆ ಕೇಳಿಕೊಳ್ಳುತ್ತಾನೆ:
“ನಾನು ಯಾವುದನ್ನು ಮರೆಯಲು ಸಿದ್ಧನಿದ್ದೇನೆ? ಮತ್ತು ಯಾವುದನ್ನು ಮರೆಯದಿರಲು ನಾನು ಏನು ಮಾಡಬಹುದು?”

ಉತ್ತಮ ಕಲಿಕೆಯೆಂದರೆ ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದಲ್ಲ. ನಮಗೆ ನಿಜವಾಗಿಯೂ ಮುಖ್ಯವಾದುದನ್ನು ಗುರುತಿಸಿ, ಅದನ್ನು ಮರೆಯದಂತೆ ಉದ್ದೇಶಪೂರ್ವಕವಾಗಿ ಪ್ರಯತ್ನಿಸುವುದೇ ಉತ್ತಮ ಕಲಿಕೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.