ಸಂಗ್ರಹ ಮತ್ತು ಅನುವಾದ:ಚಿದಂಬರ ನರೇಂದ್ರ
1958ರಲ್ಲಿ ಮನೋವಿಜ್ಞಾನಿ ಲಾರೆನ್ಸ್ ಕೋಲ್ಬರ್ಗ್ (Lawrence Kohlberg) ವ್ಯಕ್ತಿಯ ನೈತಿಕ ಬೆಳವಣಿಗೆ ಎಷ್ಟರ ಮಟ್ಟಿಗೆ ಆಗಿದೆ ಎನ್ನುವುದನ್ನು ಅಳೆಯಲು ‘ಹೈನ್ಸ್‌ನ ದ್ವಂದ್ವ’ (Heinz Dilemma) ಎಂಬ ನೈತಿಕ ಪ್ರಶ್ನೆಯನ್ನು ರೂಪಿಸಿದರು. ನಿಮ್ಮ ನೈತಿಕ ಬೆಳವಣಿಗೆ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಲು ನೀವೂ ಇದನ್ನು ಪ್ರಯತ್ನಿಸಿ ನೋಡಿ.
ಹೈನ್ಸ್ ಎಂಬ ವ್ಯಕ್ತಿಯ ಪತ್ನಿ, ಮರಣದ ಅಂಚಿನಲ್ಲಿದ್ದಾಳೆ ಎಂದು ಊಹಿಸಿಕೊಳ್ಳಿ. ಅವಳನ್ನು ಉಳಿಸಬಹುದಾದ ಒಂದು ಔಷಧಿ ಇದೆ. ಆದರೆ ಆ ಔಷಧಿ ಬಹಳ ದುಬಾರಿಯಾಗಿದೆ. ಅದನ್ನು ಪಡೆಯಲು ಇರುವ ಏಕೈಕ ಮಾರ್ಗವೆಂದರೆ ಅದನ್ನು ಕದಿಯುವುದು.
ನಿಮ್ಮ ಆಯ್ಕೆಗಳಿವು:
* ಹೈನ್ಸ್ ಆ ಔಷಧಿಯನ್ನು ಕದಿಯಬಾರದು.
* ಹೈನ್ಸ್ ಔಷಧಿಯನ್ನು ಕದಿಯಬೇಕು, ಆದರೆ ಅದಕ್ಕಾಗಿ ಜೈಲಿಗೆ ಹೋಗಬೇಕು.
* ಹೈನ್ಸ್ ಔಷಧಿಯನ್ನು ಕದಿಯಬೇಕು, ಆದರೆ ಅದಕ್ಕಾಗಿ ಜೈಲಿಗೆ ಹೋಗಬಾರದು.
ಈ ರೀತಿಯ ಉತ್ತರಗಳ ಆಧಾರದ ಮೇಲೆ ಕೋಲ್ಬರ್ಗ್ ನೈತಿಕ ಬೆಳವಣಿಗೆಯ ಮೂರು ಹಂತಗಳನ್ನು ವಿವರಿಸಿದರು.
1. ಪೂರ್ವ-ಸಾಂಪ್ರದಾಯಿಕ ಹಂತ (Pre-conventional)
ಇದು ನೈತಿಕ ಬೆಳವಣಿಗೆಯ ಆರಂಭಿಕ ಹಂತ. ಇಲ್ಲಿ ವ್ಯಕ್ತಿಯ ನಡೆ ಮುಖ್ಯವಾಗಿ ಸ್ವಾರ್ಥ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಅಥವಾ ಬಹುಮಾನ ಪಡೆಯುವ ಮನೋಭಾವದಿಂದ ನಿರ್ಧರಿಸಲ್ಪಡುತ್ತದೆ. ಉದಾಹರಣೆಗೆ, ಒಂದು ಮಗು ಶಿಕ್ಷೆಗೊಳಗಾಗಬಾರದು ಅಥವಾ ಐಸ್‌ಕ್ರೀಮ್ ಸಿಗಬೇಕು ಎಂಬ ಕಾರಣಕ್ಕಾಗಿ ಚೆನ್ನಾಗಿ ವರ್ತಿಸುತ್ತದೆ.
2. ಸಾಂಪ್ರದಾಯಿಕ ಹಂತ (Conventional)
ಮುಂದಿನ ಹಂತವೆಂದರೆ ಸಾಂಪ್ರದಾಯಿಕ ಹಂತ. ಇಲ್ಲಿ ವ್ಯಕ್ತಿಯಲ್ಲಿ ತಾನು ಸಮಾಜದೊಂದಿಗೆ ಸೇರಿಕೊಂಡಿರುವೆನೆಂಬ ಭಾವನೆ ಮತ್ತು ಇತರರೊಂದಿಗೆ ಹೊಂದಿಕೊಂಡು ನಡೆಯಬೇಕೆಂಬ ಬಯಕೆ ಬೆಳೆಯುತ್ತದೆ. ಕುಟುಂಬ, ಸಮುದಾಯ ಅಥವಾ ತನ್ನ ಸಾಮಾಜಿಕ ಗುಂಪಿನ ದೃಷ್ಟಿಯಲ್ಲಿ ‘ಒಳ್ಳೆಯ ವ್ಯಕ್ತಿ’ ಎಂದು ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ವ್ಯಕ್ತಿ ಸಾಮಾನ್ಯವಾಗಿ ನಿಯಮಗಳನ್ನು ಪಾಲಿಸುತ್ತಾನೆ.
3. ಉತ್ತರ-ಸಾಂಪ್ರದಾಯಿಕ ಹಂತ (Post-conventional)
ಕೊನೆಯ ಹಂತವೆಂದರೆ ಉತ್ತರ-ಸಾಂಪ್ರದಾಯಿಕ ಹಂತ. ಇದರಲ್ಲಿ ಅಧಿಕಾರವನ್ನು ಪ್ರಶ್ನಿಸುವ ಸಾಮರ್ಥ್ಯ ಮತ್ತು ಸ್ವತಂತ್ರ ನೈತಿಕ ಚಿಂತನೆ ಬೆಳೆಯುತ್ತದೆ. ಇಲ್ಲಿ ವ್ಯಕ್ತಿ ಕೇವಲ ಕಟ್ಟುನಿಟ್ಟಾದ ನಿಯಮಗಳು ಮತ್ತು ಕಾನೂನುಗಳನ್ನು ಅನುಸರಿಸುವುದಕ್ಕಿಂತ ನ್ಯಾಯ, ಸಮಾನತೆ ಮತ್ತು ನೀತಿಯಂತಹ ಮೂಲಭೂತ ತತ್ವಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾನೆ.
ಈ ಹಂತವು ಒಂದು ಮಹತ್ವದ ವಿಚಾರವನ್ನು ಒಪ್ಪಿಕೊಳ್ಳುತ್ತದೆ: ನೈತಿಕತೆ ಮತ್ತು ಕಾನೂನು ಯಾವಾಗಲೂ ಒಂದೇ ಆಗಿರುವುದಿಲ್ಲ. ಕೋಲ್ಬರ್ಗ್ ಅವರ ಪ್ರಕಾರ, ಪ್ರತಿಯೊಬ್ಬರೂ ಈ ಮೂರು ಹಂತಗಳನ್ನೂ ದಾಟಿ ಮುಂದೆ ಸಾಗುವುದಿಲ್ಲ.
ನಮ್ಮ ಸುತ್ತಲೂ, ಇತರರ ಮೆಚ್ಚುಗೆ ಪಡೆಯಬೇಕು ಎಂಬ ಕಾರಣಕ್ಕಾಗಿ ಮಾತ್ರ ನಡೆದುಕೊಳ್ಳುವವರನ್ನು ನಾವು ನೋಡುತ್ತೇವೆ. ಹಾಗೆಯೇ, ತಮ್ಮ ಗುಂಪಿಗೆ ಹೊಂದಿಕೊಳ್ಳಬೇಕು, ಎಲ್ಲರೂ ಒಪ್ಪಿಕೊಳ್ಳುವ ರೀತಿಯಲ್ಲಿ ಇರಬೇಕು ಎಂಬ ಕಾರಣಕ್ಕಾಗಿ ಮಾತ್ರ ನಡೆದುಕೊಳ್ಳುವವರನ್ನೂ ನೋಡುತ್ತೇವೆ.
ಆದರೆ ನಿಜವಾದ ಪ್ರಶ್ನೆ ಏನೆಂದರೆ:
ನಮ್ಮಲ್ಲಿ ಎಷ್ಟು ಮಂದಿ ಈ ಹಂತಗಳನ್ನು ನಿಜವಾಗಿಯೂ ಮೀರಿ, ಸ್ವತಂತ್ರವಾದ ನೈತಿಕ ಚಿಂತನೆಯ ಹಂತಕ್ಕೆ ತಲುಪಿದ್ದೇವೆ?
*******************************

