ಗಾಂಧೀಜಿಯವರು (ಮೋಹನ ದಾಸ ಕರಮಚಂದ ಗಾಂಧಿ) ದಕ್ಷಿಣ ಆಫ್ರಿಕಾದಲ್ಲಿ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರು. ಆ ಸಂದರ್ಭದಲ್ಲಿ ತಮ್ಮ ಅಸ್ತಿತ್ವದ ಪ್ರಶ್ನೆ ಅವರನ್ನು ತೀವ್ರವಾಗಿ ಕಾಡುತ್ತಿತ್ತು. ತಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಅವರು ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದ ಜೈನಗುರು ಶ್ರೀಮದ್ ರಾಜಚಂದ್ರರಿಗೆ 27 ಪ್ರಶ್ನೆಗಳನ್ನೊಳಗೊಂದ ಪತ್ರ ಬರೆದಿದ್ದರು ಮತ್ತು ಅವರಿಂದ ಸೂಕ್ತ ಸಮಾಧಾನ ನೀಡುವ ಉತ್ತರಗಳನ್ನು ಪಡೆದಿದ್ದರು. ಅವುಗಳಲ್ಲಿ 3 ಪ್ರಶ್ನೋತ್ತರಗಳ ಅನುವಾದ ಇಲ್ಲಿದೆ । ಸಂಗ್ರಹ – ಅನುವಾದ : ಚೇತನಾ ತೀರ್ಥಹಳ್ಳಿ
ಮೋಹನ ದಾಸ (ಗಾಂಧಿ): ಆತ್ಮ ಎಂದರೇನು ಮತ್ತು ಅದರ ಕಾರ್ಯಗಳೇನು? ಕರ್ಮಗಳು ಅದನ್ನು ಬಂಧಿಸುತ್ತವೆಯೇ?
ಶ್ರೀಮದ್ ರಾಜಚಂದ್ರ : ಭೌತಿಕ ವಸ್ತುಗಳು ಜಡ; ಅಭೌತಿಕವಾದ ಆತ್ಮವು ಚೈತನ್ಯಶೀಲ. ಭೌತಿಕ ವಸ್ತುಗಳು ನಶ್ವರವಾದಂಥವು. ಅವುಕಾಲಾನಂತರದಲ್ಲಿ ತಮ್ಮ ರೂಪವನ್ನು ಬದಲಾಯಿಸುತ್ತವೆ. ಆದರೆ ಆತ್ಮವು ಶಾಶ್ವತ. ಅದು ಅನಾದಿ, ಅನಂತ. ಭೌತಿಕ ಮೂಲವಸ್ತುಗಳಿಂದ ಆತ್ಮವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅದೇ ರೀತಿ, ಅವುಗಳಿಂದ ಆತ್ಮವನ್ನು ನಾಶಮಾಡಲೂ ಸಾಧ್ಯವಿಲ್ಲ, ಏಕೆಂದರೆ ಚೈತನ್ಯವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ತನ್ನ ಶುದ್ಧ ಸ್ಥಿತಿಯಲ್ಲಿ, ಆತ್ಮವು ತನ್ನದೇ ಆದ ಜ್ಞಾನ, ಶಾಂತಿ ಮತ್ತು ಸಮಭಾವದ ಸೃಷ್ಟಿಕರ್ತನಾಗಿರುತ್ತದೆ. ಆತ್ಮವು ಅಜ್ಞಾನದಿಂದ ವರ್ತಿಸಿದಾಗ, ಅದು ವಿಕಾರ ಭಾವಗಳನ್ನು (ಕ್ರೋಧ ಅಥವಾ ಲೋಭದಂತಹ) ಸೃಷ್ಟಿಸುತ್ತದೆ ಮತ್ತು ತನ್ನದೇ ಆದ ಕರ್ಮಗಳಿಂದ ಬಂಧಿಸಲ್ಪಡುತ್ತದೆ.
ಮೋಹನ ದಾಸ (ಗಾಂಧಿ) : ಪರಮಾತ್ಮ ಎಂದರೆ ಯಾರು? ಅವನು ಈ ಬ್ರಹ್ಮಾಂಡದ ಸೃಷ್ಟಿಕರ್ತನೇ?
ಶ್ರೀಮದ್ ರಾಜಚಂದ್ರ: ಪರಮಾತ್ಮ ಎಂದರೆ ಪ್ರತಿಯೊಂದು ಆತ್ಮದಲ್ಲೂ ಅಂತರ್ಗತವಾಗಿರುವ, ಶುದ್ಧವಾದ ಮತ್ತು ಸಂಪೂರ್ಣವಾಗಿ ಕರ್ಮಮುಕ್ತವಾದ ಆತ್ಯಂತಿಕ ಚೈತನ್ಯ ಸ್ವರೂಪ. ಪರಮಾತ್ಮನು ಪರಮ ಜ್ಞಾನ, ಶಕ್ತಿ ಮತ್ತು ಸಂಪೂರ್ಣ ಶಾಂತಿಯ ಮೂರ್ತರೂಪ. ಪರಮಾತ್ಮನು ವಿಶ್ವದ ಭೌತಿಕ ಅಂಶಗಳನ್ನು ಸೃಷ್ಟಿಸುವ ಯಾವುದೋ ಒಂದು ಬಾಹ್ಯ ಶಕ್ತಿಯಲ್ಲ, ಅವನು ಬ್ರಹ್ಮಾಂಡದ ನಿರ್ಮಾತೃವೂ ಅಲ್ಲ. ಈ ಬ್ರಹ್ಮಾಂಡವು ತನ್ನದೇ ಆದ ನೈಸರ್ಗಿಕ ನಿಯಮಗಳು ಮತ್ತು ಮೂಲವಸ್ತುಗಳಿಂದ ಹುಟ್ಟಿಕೊಂಡಿದೆ ಮತ್ತು ಅವುಗಳಿಂದಲೇ ನಡೆಯುತ್ತಿದೆ; ಪರಮಾತ್ಮ ಎಂದರೆ ಯಾವುದೇ ಆತ್ಮವು ತಲುಪಬಹುದಾದ ಅತ್ಯುನ್ನತ ಮತ್ತು ಸಂಪೂರ್ಣವಾಗಿ ಮುಕ್ತವಾದ ಆತ್ಯಂತಿಕ ಚೈತನ್ಯದ ಸ್ಥಿತಿ ಅಷ್ಟೇ.
ಮೋಹನ ದಾಸ (ಗಾಂಧಿ): ಮೋಕ್ಷ ಎಂದರೇನು?
ಶ್ರೀಮದ್ ರಾಜಚಂದ್ರ: ಕ್ರೋಧ, ಅಹಂಕಾರ, ಲೋಭ ಮತ್ತು ಅಜ್ಞಾನದಂತಹ ಆಂತರಿಕ ಬಂಧನಗಳಿಂದ ಆತ್ಮವು ಸಂಪೂರ್ಣವಾಗಿ ಬಿಡುಗಡೆ ಹೊಂದುವುದೇ ‘ಮೋಕ್ಷ’. ಇದು ಮರಣದ ನಂತರ ಆತ್ಮವು ಪ್ರಯಾಣಿಸುವ ಯಾವುದೇ ಭೌತಿಕ ಸ್ಥಳವಲ್ಲ. ಆತ್ಮವು ಪ್ರಾಪಂಚಿಕ ಬಂಧನಗಳಿಂದ ಮತ್ತು ದೇಹದ ಮೇಲಿನ ವ್ಯಾಮೋಹದಿಂದ ತನ್ನನ್ನು ತಾನು ಸಂಪೂರ್ಣವಾಗಿ ಮುಕ್ತಗೊಳಿಸಿಕೊಳ್ಳುವ ಒಂದು ಶುದ್ಧ ‘ಸ್ಥಿತಿ’. ಎಲ್ಲ ಬಗೆಯ ಮಿತಿಗಳಿಂದ ಮತ್ತು ದುಃಖದಿಂದ ಮುಕ್ತವಾಗಬೇಕೆಂಬ ಬಯಕೆಯು ಎಲ್ಲ ಜೀವಿಗಳಲ್ಲಿ ಕಂಡುಬರುತ್ತದೆ. ಈ ಬಯಕೆಯೇ ಮೋಕ್ಷದ ಅಸ್ತಿತ್ವಕ್ಕೆ ಅಂತಿಮ ಪುರಾವೆ.

