~ ಓಶೋ / The Rebel; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರಶ್ನೆ: ಬಂಡಾಯಗಾರನಿಗೆ ಮಾರ್ಗದರ್ಶನ ನೀಡುವುದು ಯಾರು?
ಓಶೋ: ಬಂಡಾಯದ ಸೌಂದರ್ಯವೇ ಇದು. ಬಂಡಾಯಗಾರನಿಗೆ ಯಾವುದೇ ಮಾರ್ಗದರ್ಶಿಯ ಅಗತ್ಯವಿಲ್ಲ. ಅವನೇ ತನ್ನ ಮಾರ್ಗದರ್ಶಿ, ಅವನೇ ತನ್ನ ದಾರಿ, ಅವನೇ ತನ್ನ ಭವಿಷ್ಯ.
ಬಂಡಾಯಗಾರನೇ ನಿಜವಾದ ಆಧ್ಯಾತ್ಮಿಕ ವ್ಯಕ್ತಿ.
ಅವನು ಯಾವುದೇ ಗುಂಪಿಗೆ ಸೇರಿದವನಲ್ಲ. ಯಾವುದೇ ವ್ಯವಸ್ಥೆಗೆ ಸೇರಿದವನಲ್ಲ. ಯಾವುದೇ ಸಂಘಟನೆಗೆ ಸೇರಿದವನಲ್ಲ. ಯಾವುದೇ ಫಿಲಾಸೊಫಿಗೂ ಸೇರಿದವನಲ್ಲ.
ಸರಳವಾಗಿ, ನಿರ್ಣಾಯಕವಾಗಿ ಹೇಳುವುದಾದರೆ, ಅವನು ತನ್ನನ್ನು ಇತರರಿಂದ ಎರವಲು ಪಡೆಯುವುದಿಲ್ಲ.
ಅವನು ತನ್ನೊಳಗೆ ಆಳವಾಗಿ ಇಳಿಯುತ್ತಾನೆ. ಅಲ್ಲಿ ತನ್ನದೇ ಆದ ಜೀವನದ ರಸವನ್ನು ಕಂಡುಕೊಳ್ಳುತ್ತಾನೆ; ತನ್ನದೇ ಆದ ಜೀವನದ ಮೂಲವನ್ನು ಕಂಡುಕೊಳ್ಳುತ್ತಾನೆ. ಹಾಗಾದರೆ ಅವನಿಗೆ ಯಾವುದಾದರೂ ನಿರ್ದಿಷ್ಟ ದಾರಿಯ ಅಗತ್ಯವಿದೆಯೇ ?
ನೀವು ಈಗಾಗಲೇ ಇಲ್ಲಿದ್ದೀರಿ.
ನೀವು ಅಸ್ತಿತ್ವದಲ್ಲಿದ್ದೀರಿ.
ನೀವು ಪ್ರಜ್ಞೆಯುಳ್ಳವರಾಗಿದ್ದೀರಿ.
ಮೂಲಭೂತವಾದ ಹುಡುಕಾಟಕ್ಕೆ ಅಗತ್ಯವಿರುವ ಎಲ್ಲವನ್ನೂ ಅಸ್ತಿತ್ವ ನಿಮಗೆ ಈಗಾಗಲೇ ನೀಡಿದೆ. ನಿಮ್ಮ ಪ್ರಜ್ಞೆಯೊಳಗೆ ನೋಡಿ; ಅದರ ಸ್ವಾದವನ್ನು ಕಂಡುಕೊಳ್ಳಿ. ನಿಮ್ಮ ಜೀವನದೊಳಗೆ ನೋಡಿ; ಅದರ ಚಿರಂತನತೆಯನ್ನು ಕಂಡುಕೊಳ್ಳಿ. ನಿಮ್ಮೊಳಗೆ ನೋಡಿ. ಆಗ ನೀವು ಅತ್ಯಂತ ಪವಿತ್ರವಾದ, ಅತ್ಯಂತ ಪೂಜ್ಯವಾದ ದೇವಾಲಯವು ನಿಮ್ಮದೇ ದೇಹ ಎನ್ನುವುದನ್ನು ಕಂಡುಕೊಳ್ಳುತ್ತೀರಿ.
ಏಕೆಂದರೆ ನಿಮ್ಮ ದೇಹದೊಳಗೆ ದೈವತ್ವವಿದೆ.
ದಿವ್ಯತೆಯಿದೆ. ಸುಂದರವಾದ ಎಲ್ಲವೂ ಇದೆ. ಸತ್ಯವಾದ ಎಲ್ಲವೂ ಇದೆ ಮೌಲ್ಯಯುತವಾದ ಎಲ್ಲವೂ ಇದೆ.
ನೀವು ಕೇಳುತ್ತೀರಿ:
“ಬಂಡಾಯಗಾರನಿಗೆ ಮಾರ್ಗದರ್ಶನ ನೀಡುವುದು ಯಾರು?”
ಅದೇ ಬಂಡಾಯಗಾರನ ಸೌಂದರ್ಯ, ಅವನಿಗೆ ಯಾವುದೇ ಮಾರ್ಗದರ್ಶಿಯ ಅಗತ್ಯವಿಲ್ಲ.
ಅವನೇ ತನ್ನ ಮಾರ್ಗದರ್ಶಿ.
ಅವನೇ ತನ್ನ ದಾರಿ.
ಅವನೇ ತನ್ನ ಫಿಲಾಸೊಫಿ.
ಅವನೇ ತನ್ನ ಭವಿಷ್ಯ.
“ನನಗೆ ಅಗತ್ಯವಿರುವ ಎಲ್ಲವೂ ನನ್ನೊಳಗೇ ಇದೆ. ಅಸ್ತಿತ್ವವೇ ನನ್ನ ಮನೆ. ನಾನು ಇಲ್ಲಿ ಅಪರಿಚಿತನಲ್ಲ.”
***********************************

