ಸುಳ್ಳು ಸಮ್ಮತಿಯ ಪರಿಣಾಮ

ವಾಸ್ತವದಲ್ಲಿ, ಮನುಷ್ಯರು ವೈವಿಧ್ಯಮಯರು. ಇಡೀ ಜಗತ್ತನ್ನು ಯಾರೊಬ್ಬರ ಗುಹೆಯೊಳಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ, ಆಗಾಗ್ಗೆ ನಮ್ಮ ಗುಹೆಯಿಂದ ಹೊರಗೆ ಬಂದು ಸುತ್ತಲೂ ಸ್ವಲ್ಪ ನೋಡಬೇಕು । ಕನ್ನಡಕ್ಕೆ : ಚಿದಂಬರ ನರೇಂದ್ರ

ಪೀಟರ್ ಒಬ್ಬ ಜನಾಂಗೀಯ ದ್ವೇಷಿ. ಅವನು ತನ್ನ ಸಮಯವನ್ನೆಲ್ಲಾ ಜನಾಂಗೀಯ ದ್ವೇಷವನ್ನು ಹರಡುವ ವೇದಿಕೆಗಳಲ್ಲಿ ಕಳೆಯುತ್ತಾನೆ. ಅಲ್ಲಿ ಕೋಪ, ದ್ವೇಷ ಮತ್ತು ವಿಷಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಿರುತ್ತಾನೆ. ಆದರೆ ಒಂದು ದಿನ ಅವನು ಅಂಗಡಿಗೆ ಹೋದಾಗ, ಅಲ್ಲಿ ವಿವಿಧ ಜನಾಂಗಗಳು ಮತ್ತು ವಿಭಿನ್ನ ಹಿನ್ನೆಲೆಯ ಜನರು ಪರಸ್ಪರ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ನಗುತ್ತಾ, ಸ್ನೇಹದಿಂದ ಬೆರೆಯುತ್ತಿರುವುದನ್ನು ನೋಡಿ ಅವನಿಗೆ ಆಶ್ಚರ್ಯವಾಗುತ್ತದೆ.

ಬೆಕ್ಕಿ ಒಂದು ನಿರ್ದಿಷ್ಟ ಸಿನಿಮಾವನ್ನು ತಾನು ಎಂದಿಗೂ ನೋಡುವುದಿಲ್ಲ ಎಂದು ಹೇಳುತ್ತಾಳೆ. ಏಕೆಂದರೆ, ನಿರ್ದೇಶಕರು ಮಾಡಿದ ಯಾವುದೋ ಕೆಲಸ ಅಥವಾ ಅವರು ಹೇಳಿದ ಯಾವುದೋ ಮಾತಿನ ಕಾರಣದಿಂದ, ತಮ್ಮ ಸಮುದಾಯದ ಎಲ್ಲರೂ ಆ ಸಿನಿಮಾವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಆಕೆ ನಂಬುತ್ತಾಳೆ. ಆದರೆ ನಂತರ ಆ ಸಿನಿಮಾ ಸಾರ್ವಕಾಲಿಕವಾಗಿ ಅತ್ಯಂತ ಜನಪ್ರಿಯ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ ಎಂದು ಓದಿದಾಗ, ಬೆಕ್ಕಿಗೆ ಆಶ್ಚರ್ಯವೂ ಗೊಂದಲವೂ ಉಂಟಾಗುತ್ತದೆ.

ಇವುಗಳನ್ನು ‘False Consensus Effect’ — ‘ಸುಳ್ಳು ಸಮ್ಮತಿಯ ಪರಿಣಾಮ’ ಎಂದು ಕರೆಯಲಾಗುವ ಮನೋವೈಜ್ಞಾನಿಕ ವಿದ್ಯಮಾನದ ಎರಡು ಉದಾಹರಣೆಗಳೆಂದು ಹೇಳಬಹುದು.

ನಮ್ಮ ಸ್ನೇಹಿತರು, ಕುಟುಂಬದವರು ಅಥವಾ ನಮ್ಮ ಗುಂಪಿನ ಜನರೆಲ್ಲರೂ ಯಾವುದೋ ಒಂದು ವಿಷಯದಲ್ಲಿ ಒಂದೇ ರೀತಿಯಾಗಿ, ಬಹಳ ಗಟ್ಟಿಯಾಗಿ ಒಪ್ಪಿಕೊಂಡಿದ್ದಾರೆ ಎಂಬ ಕಾರಣಕ್ಕೆ, ನಮ್ಮ ಗುಂಪಿನ ಹೊರಗಿರುವ ಎಲ್ಲರೂ ಕೂಡ ಅದೇ ಅಭಿಪ್ರಾಯವನ್ನು ಹೊಂದಿರಬೇಕು ಎಂದು ನಾವು ಭಾವಿಸುವುದೇ ‘False Consensus Effect’. ಇದು ಒಂದು ರೀತಿಯ ‘Exposure Bias’ . ನಾವು ಯಾವುದನ್ನು ಹೆಚ್ಚು ನೋಡುತ್ತೇವೋ, ಯಾವುದನ್ನು ಹೆಚ್ಚು ಕೇಳುತ್ತೇವೋ, ಅದನ್ನೇ ಇಡೀ ಸಮಾಜದ ಸಾಮಾನ್ಯ ಅಭಿಪ್ರಾಯವೆಂದು ಭಾವಿಸುವ ಮನೋಭಾವ.

ಸುಮಾರು 600 ವರ್ಷಗಳ ಹಿಂದೆ, ಫ್ರಾನ್ಸಿಸ್ ಬೇಕನ್ ಇದನ್ನು ‘Idol of the Cave’ — ‘ಗುಹೆಯ ಭ್ರಮೆ’ ಎಂದು ಕರೆದಿದ್ದರು. ಮನುಷ್ಯರು ತಮ್ಮ ಸಣ್ಣ ಗುಹೆಯೇ ಇಡೀ ವಿಶ್ವ ಎಂದು ಭಾವಿಸುವ ಪ್ರವೃತ್ತಿ ಇದು. ನಮ್ಮ ನೈತಿಕತೆ, ನಮ್ಮ ನಡವಳಿಕೆ ಮತ್ತು ನಮ್ಮ ಆಲೋಚನಾ ವಿಧಾನವೇ ಎಲ್ಲರಿಗೂ ಸತ್ಯವಾಗಿರಬೇಕು ಎಂದು ನಾವು ಭಾವಿಸುತ್ತೇವೆ.
ಆದರೆ, ವಾಸ್ತವದಲ್ಲಿ, ಮನುಷ್ಯರು ವೈವಿಧ್ಯಮಯರು. ಇಡೀ ಜಗತ್ತನ್ನು ಯಾರೊಬ್ಬರ ಗುಹೆಯೊಳಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ, ಆಗಾಗ್ಗೆ ನಮ್ಮ ಗುಹೆಯಿಂದ ಹೊರಗೆ ಬಂದು ಸುತ್ತಲೂ ಸ್ವಲ್ಪ ನೋಡಬೇಕು.

ನಮ್ಮನ್ನು ಸುತ್ತುವರೆದಿರುವ ಅಲ್ಗಾರಿದಮ್‌ ಇಡೀ ಜಗತ್ತಲ್ಲ. ನಮ್ಮ ಸ್ನೇಹಿತರೇ ಇಡೀ ದೇಶವಲ್ಲ.
ಮತ್ತು ನಮ್ಮ ಗುಹೆಯೊಳಗೆ ಅತಿ ಜೋರಾಗಿ ಕೇಳಿಸುವ ಧ್ವನಿಗಳು, ಗುಹೆಯ ಹೊರಗೆ ಬಹುಶಃ ಕೇವಲ ಪಿಸುಮಾತಾಗಿರಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.