ಸಿಪೊಲ್ಲಾ ಅವರ ದೃಷ್ಟಿಯಲ್ಲಿ ಮೂರ್ಖತನ ಎನ್ನುವುದು ಬುದ್ಧಿಮತ್ತೆಯ ಕೊರತೆಯ IQಗೆ ಸಮಾನವಲ್ಲ. ಹಾಗೆಯೇ ಅದು ಸಾಮಾನ್ಯ ಅರ್ಥದಲ್ಲಿನ ದಡ್ಡತನವೂ ಅಲ್ಲ; ಅಪಾಯಗಳನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದಿರುವ ಅವಿವೇಕವೂ ಅಲ್ಲ… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಚಿಂತಕ ರಿಕ್ಕಿ ಜೆರ್ವೈಸ್ ಅವರು ಹೇಳುವಂತೆ : “ಮೂರ್ಖತನವೆನ್ನುವುದು ಸಾವಿನಂತೆ, ಅದರ ನೋವು ಅನುಭವಿಸುವವರು ಕೇವಲ ಮೂರ್ಖರು ಮಾತ್ರ ಅಲ್ಲ, ಅವರ ಸುತ್ತಲಿರುವ ಇತರರು ಕೂಡ.” ಇತಿಹಾಸಕಾರ ಹಾಗೂ ಅರ್ಥಶಾಸ್ತ್ರಜ್ಞ ಕಾರ್ಲೊ ಸಿಪೊಲ್ಲಾ ಅವರ ಪ್ರಕಾರವೂ ಇದು ಸಂಪೂರ್ಣ ಸತ್ಯ.
1976ರಲ್ಲಿ ಸಿಪೊಲ್ಲಾ ಅವರು ತಮ್ಮ ಪ್ರಬಂಧದಲ್ಲಿ, ಮೂರ್ಖತನದ ಐದು ನಿಯಮಗಳನ್ನು ವಿವರಿಸಿದರು. ಅವುಗಳಲ್ಲಿ ಅತ್ಯಂತ ಮಹತ್ವದ, ‘ಬಂಗಾರದ ನಿಯಮ’ವೆಂದು ಕರೆಯಬಹುದಾದ ಮೂರನೆಯ ನಿಯಮ ಹೀಗಿದೆ:
“ತಾನೂ ಯಾವುದೇ ಪ್ರಯೋಜನ ಪಡೆಯದೆ, ಅಥವಾ ತಾನೇ ನಷ್ಟ ಅನುಭವಿಸುವ ಸಾಧ್ಯತೆಯಿದ್ದರೂ, ಮತ್ತೊಬ್ಬ ವ್ಯಕ್ತಿಗೆ ಅಥವಾ ಜನರ ಗುಂಪಿಗೆ ನಷ್ಟ ಉಂಟುಮಾಡುವ ವ್ಯಕ್ತಿಯೇ ಮೂರ್ಖ.”
ಸಿಪೊಲ್ಲಾ ಅವರ ದೃಷ್ಟಿಯಲ್ಲಿ ಮೂರ್ಖತನ ಎನ್ನುವುದು ಬುದ್ಧಿಮತ್ತೆಯ ಕೊರತೆಯ IQಗೆ ಸಮಾನವಲ್ಲ. ಹಾಗೆಯೇ ಅದು ಸಾಮಾನ್ಯ ಅರ್ಥದಲ್ಲಿನ ದಡ್ಡತನವೂ ಅಲ್ಲ; ಅಪಾಯಗಳನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದಿರುವ ಅವಿವೇಕವೂ ಅಲ್ಲ. ಸಿಪೊಲ್ಲಾ ಅವರ ಪ್ರಕಾರ, ಮೂರ್ಖತನವೆನ್ನುವುದು ಒಬ್ಬ ವ್ಯಕ್ತಿಯ ಕ್ರಿಯೆಯಿಂದ ಉಂಟಾಗುವ ಪರಿಣಾಮಗಳ ಆಧಾರದ ಮೇಲೆ ನಿರ್ಧರಿಸಲ್ಪಡುವ ಗುಣ. ಈ ವ್ಯಾಖ್ಯಾನವನ್ನು ಆಧಾರವಾಗಿಟ್ಟುಕೊಂಡರೆ, ಜನರನ್ನು ನಾಲ್ಕು ವಿಧಗಳಾಗಿ ವಿಂಗಡಿಸಬಹುದು.
ಮೊದಲನೆಯವರು — ಅಸಹಾಯಕರು.
ಇವರು ಇತರರಿಗೆ ಸಹಾಯ ಮಾಡುತ್ತಾರೆ, ಆದರೆ ಅದಕ್ಕಾಗಿ ತಾವೇ ನಷ್ಟ ಅನುಭವಿಸುತ್ತಾರೆ.
ಎರಡನೆಯವರು — ದರೋಡೆಕೋರರು.
ಇವರು ತಮಗೆ ಪ್ರಯೋಜನವಾಗುವಂತೆ ನಡೆದುಕೊಳ್ಳುತ್ತಾರೆ, ಆದರೆ ಅದಕ್ಕಾಗಿ ಅವರು ಇತರರಿಗೆ ನಷ್ಟ ಉಂಟುಮಾಡುತ್ತಾರೆ.
ಮೂರನೆಯವರು — ಮೂರ್ಖರು.
ಇವರು ಇತರರಿಗೆ ನಷ್ಟ ಉಂಟುಮಾಡುತ್ತಾರೆ ಅಷ್ಟೇ ಅಲ್ಲ, ಅದರಿಂದ ಅವರಿಗೆ ಕೂಡ ಯಾವುದೇ ಪ್ರಯೋಜನ ಆಗುವುದಿಲ್ಲ. ಕೆಲವೊಮ್ಮೆ ಅವರಿಗೂ ನಷ್ಟವಾಗುತ್ತದೆ.
ನಾಲ್ಕನೆಯವರು — ಬುದ್ಧಿವಂತರು.
ಇವರು ತಮಗೂ ಮತ್ತು ಇತರರಿಗೂ ಒಂದೇ ಸಮಯದಲ್ಲಿ ಪ್ರಯೋಜನವಾಗುವ ರೀತಿಯಲ್ಲಿ ನಡೆದುಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ.
ಜೀವನದಲ್ಲಿ ದರೋಡೆಕೋರರಿಂದ ತಪ್ಪಿಸಿಕೊಳ್ಳಬೇಕು ಎನ್ನುವುದು ಸಹಜ. ಆದರೆ ಒಂದು ರೀತಿಯಲ್ಲಿ ನೋಡಿದರೆ, ಅವರಿಂದ ತಪ್ಪಿಸಿಕೊಳ್ಳುವುದು ಮೂರ್ಖರಿಂದ ತಪ್ಪಿಸಿಕೊಳ್ಳುವುದಕ್ಕಿಂತ ಸುಲಭ. ಆದರೆ ಮೂರ್ಖತನ ಸ್ವಲ್ಪ ಹೆಚ್ಚು ಸೂಕ್ಷ್ಮವಾದದ್ದು. ಆದ್ದರಿಂದ ನಾವು ಅದರ ಬಗ್ಗೆ ಹೆಚ್ಚು ಗಮನವಿರಿಸಬೇಕು.
ಯಾವಾಗಲೂ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಅಭ್ಯಾಸವಿರುವ ಜನರನ್ನು ನಾವು ಪದೇಪದೇ ಗಮನಿಸಬೇಕು. ತಮ್ಮ ಜೀವನವನ್ನೂ, ಇತರರ ಜೀವನವನ್ನೂ ಮತ್ತಷ್ಟು ಕಷ್ಟಕರವಾಗಿಸುವ ಜನರನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಂತರ, ಸಾಧ್ಯವಾದಷ್ಟು ಅಂತಹ ಜನರಿಂದ ದೂರವಿರಲು ಪ್ರಯತ್ನಿಸಬಹುದು.
ನಿಧಾನವಾಗಿ, ಆದರೆ ಖಚಿತವಾಗಿ, ಅಂತಹವರನ್ನು ನಮ್ಮ ಜೀವನದಿಂದ ದೂರ ಮಾಡಬಹುದು, ಮತ್ತು ನಮ್ಮ ಸುತ್ತಲಿನ ಬೇರೆ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಬಹುದು.

