ಕೆಲವೊಮ್ಮೆ ಯಾವುದಾದರೂ ವಿಷಯದಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸಲು, “ಮಾಡುವುದೂ ಮಾಡದಿರುವುದೂ ಒಂದಾಗಿರುವ ಒಂದು ವಿಚಿತ್ರ ಕಲೆಯನ್ನು” ಕಲಿಯಬೇಕಾಗುತ್ತದೆ. ಅಂದರೆ, ಚಟುವಟಿಕೆಯೊಂದಿಗೆ ವಿಶ್ರಾಂತಿಯನ್ನು ಬೆರೆಸುವುದು; ಬಿಟ್ಟುಬಿಡುವುದು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನೀವು ಹಾಸಿಗೆಯಲ್ಲಿ ಮಲಗಿ, ಮೇಲ್ಛಾವಣಿಯನ್ನು ನೋಡುತ್ತಾ, ಹೇಗಾದರೂ ನಿದ್ರೆ ಬರಲಿ ಎಂದು ಹಾತೊರೆಯುತ್ತಿರುವುದನ್ನು ಕಲ್ಪಿಸಿಕೊಳ್ಳಿ. ಗಂಟೆಗಟ್ಟಲೆ ನೀವು ಹೀಗೆಯೇ ಪ್ರಯತ್ನ ಮಾಡುತ್ತಿದ್ದೀರಿ. ಕೊನೆಗೆ ಕಣ್ಣುಗಳನ್ನು ಮುಚ್ಚಿಕೊಂಡು, “ನಿದ್ರೆ ಮಾಡು!” ಎಂದು ನಿಮ್ಮನ್ನು ನೀವೇ ಒತ್ತಾಯಿಸುತ್ತೀರಿ. ನಿದ್ರೆ ಬರಲೇಬೇಕು ಎನ್ನುವಂತೆ ನಿಮ್ಮ ದೇಹವನ್ನು ಬಲವಂತವಾಗಿ ಯಾವುದೋ ವಿಶ್ರಾಂತಿಯ ಸ್ಥಿತಿಗೆ ತರುತ್ತೀರಿ. ಆದರೆ, ಸಹಜವಾಗಿಯೇ, ಏನೂ ಆಗುವುದಿಲ್ಲ. ನಿದ್ರೆಯ ಬಗ್ಗೆ ಯೋಚಿಸದವರಿಗೆ ಮಾತ್ರ ನಿದ್ರೆ ಎನ್ನುವುದು ಮೀಸಲಾಗಿರುವಂತಿದೆ.
ಇದು ಆಲ್ಡಸ್ ಹಕ್ಸ್ಲಿ ಹೇಳುವ Law of Reversed Effort ನ ಒಂದು ಉದಾಹರಣೆ. ಆದರೆ ಇದೇ ಕಲ್ಪನೆ ಅನೇಕ ಪ್ರಾಚೀನ ಪರಂಪರೆಗಳಲ್ಲಿಯೂ ಕಂಡುಬರುತ್ತದೆ; ಉದಾಹರಣೆಗೆ ಸ್ಟೋಯಿಸಿಸಂ ಮತ್ತು ದಾವೋಯಿಸಂನಲ್ಲಿ.
ಇದರ ಮೂಲಭೂತ ಅರ್ಥವೆಂದರೆ, ಕೆಲವು ವಿಷಯಗಳನ್ನು ಸಾಧಿಸಲು ನಾವು ಎಷ್ಟು ಹೆಚ್ಚು ಪ್ರಯತ್ನಿಸುತ್ತೇವೋ, ಅಷ್ಟೇ ಹೆಚ್ಚು ಅವು ನಮ್ಮ ಕೈತಪ್ಪುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಯಾವುದಾದರೂ ವಿಷಯದಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸಲು, “ಮಾಡುವುದೂ ಮಾಡದಿರುವುದೂ ಒಂದಾಗಿರುವ ಒಂದು ವಿಚಿತ್ರ ಕಲೆಯನ್ನು” ಕಲಿಯಬೇಕಾಗುತ್ತದೆ. ಅಂದರೆ, ಚಟುವಟಿಕೆಯೊಂದಿಗೆ ವಿಶ್ರಾಂತಿಯನ್ನು ಬೆರೆಸುವುದು; ಬಿಟ್ಟುಬಿಡುವುದು — ಏಕೆಂದರೆ ಆಗ ಯಾವುದೋ ನಮಗೆ ತಿಳಿಯದ ಶಕ್ತಿ ತನ್ನ ಕೆಲಸವನ್ನು ಮಾಡಲು ಅವಕಾಶ ಪಡೆಯುತ್ತದೆ.
ನಿಮಗೆ ಸೊಳ್ಳೆ ಕಚ್ಚಿ ತುರಿಕೆ ಉಂಟಾದರೆ, ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ, ಅಥವಾ ಮೂಳೆ ಮುರಿದಿದ್ದರೆ, ಅದನ್ನು ಹಾಗೆಯೇ ಇರಲು ಬಿಡಬೇಕು. ಏಕೆಂದರೆ ಅದನ್ನು ಪದೇಪದೇ ಕೆರೆಯುವುದು, ಪರೀಕ್ಷಿಸುವುದು, ಮುಟ್ಟುವುದು ಅಥವಾ ಅತಿಯಾಗಿ ಚುಚ್ಚಾಡುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅದೇ ರೀತಿ, ನೀವು ಸೈಕಲ್ ಓಡಿಸುತ್ತಿದ್ದರೆ, ಹಾಡು ಹಾಡುತ್ತಿದ್ದರೆ, ಪುಸ್ತಕ ಬರೆಯುತ್ತಿದ್ದರೆ, ಅಥವಾ ಸ್ನೇಹಿತರೊಂದಿಗೆ ಒಂದು ಸುಂದರವಾದ ಸಂಭಾಷಣೆಯಲ್ಲಿ ತೊಡಗಿದ್ದರೆ, ಅದನ್ನು ಸಹಜವಾಗಿ ನಡೆಯಲು ಬಿಡಿ. ಹರಿವಿನೊಂದಿಗೆ ಸಾಗಿರಿ. ಏಕೆ, ಹೇಗೆ, ಏನು ಎನ್ನುವುದರ ಬಗ್ಗೆ ಅತಿಯಾಗಿ ಯೋಚಿಸುವುದು ಆ ಸಹಜ ಹರಿವನ್ನು ಮುರಿದುಬಿಡಬಹುದು.
ಕೆಲವೊಮ್ಮೆ ನಮ್ಮ ಸಂಬಂಧಗಳು, ಉದ್ಯೋಗಗಳು ಮತ್ತು ನಮ್ಮ ಹವ್ಯಾಸಗಳಿಗೂ ಈ “ರಿವರ್ಸ್ ಎಫರ್ಟ” ಎನ್ನುವ ಅಂಶದ ಅಗತ್ಯವಿರುತ್ತದೆ. ಏಕೆಂದರೆ ನಾವು ಮಾಡುತ್ತಿರುವ ಕೆಲಸದ ಬಗ್ಗೆಯೇ ಅತಿಯಾಗಿ ಯೋಚಿಸಲು ಆರಂಭಿಸಿದಾಗ, ಆ ಕೆಲಸ ಕೃತಕವಾಗಿ ಹಾಗೂ ವಿಚಿತ್ರವಾಗಿ ಅನಿಸತೊಡಗುತ್ತದೆ. ಅದನ್ನು ಮಾಡುವುದು ಕಷ್ಟವಾಗುತ್ತದೆ.
ಹಾಗಾದರೆ, ನೀವು ಇದನ್ನು ಯಾವಾಗ ಪ್ರಯತ್ನಿಸಿದ್ದೀರಿ?
ಯಾವುದಾದರೂ ಒಂದು ವಿಷಯವನ್ನು ಬಲವಂತವಾಗಿ ಹಿಡಿದುಕೊಳ್ಳುವುದನ್ನು ಬಿಟ್ಟು, ಅದನ್ನು ಹಾಗೆಯೇ ಬಿಟ್ಟುಬಿಟ್ಟಾಗ, ನೀವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಸಹಜವಾಗಿ, ಹೆಚ್ಚು ಉತ್ತಮವಾಗಿ ಅದನ್ನು ಮಾಡಲು ಸಾಧ್ಯವಾಯಿತು ಎಂದು ಯಾವಾಗ ನಿಮಗೆ ಅನಿಸಿದೆ?

