ಯಾಕೆ ಯಾವ ಧರ್ಮದ ಕತೆಗಳೂ ಸೃಷ್ಟಿಯ ನಶ್ವರತೆಯನ್ನು ಮನದಟ್ಟು ಮಾಡಿಸಲು ಹಲವು ಹೆಂಡಿರನ್ನುಳ್ಳ ಗಂಡಸರ ನಿದರ್ಶನ ಕೊಡುವುದಿಲ್ಲ? ಕೊಟ್ಟರೂ, ಸುಂದರಿಯರಾದ ಹೆಂಡತಿಯರನ್ನು ಬಿಟ್ಟು ಕುರೂಪಿಯನ್ನು ಪ್ರೇಮಿಸುವ ಗಂಡಸಿನ ಕತೆ ಬಾಹ್ಯ ರೂಪಕ್ಕಿಂತ ಅಂತರಂಗದ ಸೌಂದರ್ಯಕ್ಕೆ ಬೆಲೆ ಕೊಡುವ ಉದಾತ್ತ ಚಿಂತನೆಯಾಗಿ ಶಿಫ್ಟ್ ಆಗುವುದು ಯಾಕೆ? ಇದು ಎಂತಹ ರಾಜಕಾರಣ? ~ ಚೇತನಾ ತೀರ್ಥಹಳ್ಳಿ
ಮನುಷ್ಯ ಜೀವಿಗಳಲ್ಲಿ ಪುರುಷಜಾತಿಗೆ ಕಾಮನಿಗ್ರಹವೊಂದು ಬಹಳ ದೊಡ್ಡ ಸಮಸ್ಯೆ. ಸಾವಿರಾರು ವರ್ಷಗಳ ಹಿಂದೆಯೇ ಇದನ್ನು ಕಂಡುಕೊಂಡ ವಿಕಸಿತ ಪುರುಷರು, ಅಂದರೆ ಜ್ಞಾನೋದಯ ಪಡೆದವರು ಬಾಲಸನ್ಯಾಸ ಮತ್ತು ಬ್ರಹ್ಮಚರ್ಯಗಳನ್ನು ಪರಿಚಯಿಸಿದರು. ಆದರೆ, ಕಾಲಾನಂತರದಲ್ಲಿ ಬ್ರಹ್ಮಚರ್ಯ ಕೇವಲ ತೋರಿಕೆಗೆ, ಸನ್ಯಾಸವಂತೂ ವಂಚನೆಗೆ ರಹದಾರಿಯಂತಾಗಿದ್ದು ದುರಂತ. (ಇದು ಜನರಲೈಸ್ಡ್ ಹೇಳಿಕೆ ಅಲ್ಲ, ನೈಜ ಸನ್ಯಾಸಿಗಳ ಬಗ್ಗೆ ಗೌರವ ಇದೆ)
ಆದರೆ, ಎಲ್ಲ ದೇಶ – ಕಾಲ – ಮತಗಳಲ್ಲೂ ಗಂಡಸರಲ್ಲಿ ಕಾಮವಾಂಛೆಯ ಬಗ್ಗೆ ಜಿಗುಪ್ಸೆ ತರಿಸಲು, ಐಹಿಕ ಭೋಗಗಳ ನಶ್ವರತೆಯನ್ನು ಮನದಟ್ಟು ಮಾಡಿಸಲು ಹೆಣ್ಣಿನ ಕತೆಗಳನ್ನು ಬಳಸುವುದು; ಅವಳನ್ನು ಅತೃಪ್ತಕಾಮಿಯಂತೆ ಚಿತ್ರಿಸಿರುವುದು ಮಾತ್ರ ದುರಂತ.
ಇಂಡಿಯನ್, ಗ್ರೀಕ್, ಸಿನೋ ಸೇರಿದಂತೆ ಜಗತ್ತಿನ ಉದ್ದಗಲಕ್ಕೂ ಪುರಾಣ ಕತೆಗಳಲ್ಲಿ ಇಂಥ ಸಾಕಷ್ಟು ಕತೆಗಳಿವೆ. ಹಿಂದೂ, ಬೌದ್ಧ, ಕ್ರೈಸ್ತ, ಇಸ್ಲಾಂ, ಜೈನ, – ಎಲ್ಲ ಮತಧರ್ಮಗಳಲ್ಲೂ ಹೆಣ್ಣೊಂದು ಮಾಯೆ, ಸಾಧನೆಗೆ ಮಹಾ ಗೋಡೆ. ಅವಳೊಂದು ವ್ಯಭಿಚಾರದ ಮುದ್ದೆ. (ಇನ್ಯಾವ ಅಧಿಕೃತ ಧರ್ಮಗಳಿವೆಯೋ ತಿಳಿದಿಲ್ಲ, ಅವುಗಳ ಬಗ್ಗೆ ಓದಿಕೊಂಡಿಲ್ಲ).
ಉದಾಹರಣೆಗೆ ಬೌದ್ಧರ ಜಾತಕ ಕತೆಯನ್ನೇ ತೆಗೆದುಕೊಳ್ಳಿ. ಈ ಕಥಾಸರಣಿಯಲ್ಲೊಂದು ಕುಣಾಲ ಜಾತಕ. ಅದರಲ್ಲೊಂದು ಕನ್ಹಾಳ ಕತೆ. ಇದು ಸ್ವಲ್ಪಮಟ್ಟಿಗೆ ಜೈನರ ಮಹಾಕಾವ್ಯದಲ್ಲಿನ ಅಮೃತಮತಿಯ ಕತೆಯನ್ನು ಹೋಲುತ್ತದೆ.
**
ಕನ್ಹಾ ಒಬ್ಬಳು ರಾಜಕುಮಾರಿ. ಕೋಸಲದ ರಾಜ ಇವಳ ಸ್ವಂತ ತಂದೆಯಾದರೆ, ದತ್ತು ಪಡೆದು ಸಾಕಿದವನು ವಾರಣಾಸಿಯ ರಾಜರಾಜ. ಆದ್ದರಿಂದ ಅವಳನ್ನು ‘ದ್ವೇಪಿತಿಕಾ’ ಎಂದೂ ಕರೆಯಲಾಗುತ್ತಿತ್ತು.
ಮದುವೆಯ ವಯಸ್ಸಿಗೆ ಬಂದಾಗ ಕನ್ಹಾಳನ್ನು ಸಾಕಿ ಬೆಳೆಸಿದ ತಂದೆ, ಅವಳ ಬಯಕೆಯಂತೆ ಸ್ವಯಂವರ ಏರ್ಪಡಿಸುತ್ತಾನೆ. ಅದರಂತೆ, ಮದುವೆ ವಯಸ್ಸಿನ ತರುಣರೆಲ್ಲ ರಾಜಬೀದಿಯಲ್ಲಿ ನಡೆಯುವುದು, ಕಿಟಕಿಯಲ್ಲಿ ನಿಂತ ಇವಳು ಯಾರು ಇಷ್ಟವಾಗುತ್ತಾರೋ ಅವರ ಮೇಲೆ ಹಾರ ಎಸೆಯುವುದು, ಅವರನ್ನೇ ಮದುವೆಯಾಗುವುದು.
ಹಾಗೆ ಉಪ್ಪರಿಗೆಯಲ್ಲಿ ನಿಂತು ನೋಡುತ್ತಿರುವಾಗ ಪಾಂಡು ರಾಜನ ಐವರು ಮಕ್ಕಳು ಕಾಣುತ್ತಾರೆ. ಐವರೂ ಒಬ್ಬರಿಗಿಂತ ಒಬ್ಬರು ಸುಂದರಾಂಗರು. ಕ್ರಮವಾಗಿ ಅಜ್ಜುನ, ಭೀಮ, ನಕುಲ, ಯುದಿತ್ತಿಲ ಮತ್ತು ಸಹದೇವ (ಪಾಳಿ ಭಾಷೆಯಲ್ಲಿ) ಅವರ ಹೆಸರುಗಳು. ಅವರಲ್ಲಿ ಯಾರನ್ನೂ ಬಿಡಲು ಮನಸ್ಸಾಗದೆ ಅವಳು ದೊಡ್ಡ ಹಾರ ತರಿಸಿ ಐವರ ಕೊರಳಿಗೂ ಒಟ್ಟಿಗೆ ಬೀಳುವಂತೆ ಎಸೆಯುತ್ತಾಳೆ; ನಿಯಮದಂತೆ ಅವರು ಅವಳನ್ನು ಮದುವೆಯಾಗಬೇಕಾಗುತ್ತದೆ.
ಏಳು ಉಪ್ಪರಿಗೆಯ ಮಹಲಿನಲ್ಲಿ ಐವರು ಗಂಡಂದಿರೊಂದಿಗೆ ಸಂಸಾರ ಆರಂಭಿಸುವ ಕನ್ಹಾ, ಐವರನ್ನೂ ಸಮನಾಗಿ ಪ್ರೇಮಿಸುತ್ತಾಳೆ, ಕಾಮಿಸುತ್ತಾಳೆ, ತನ್ನ ಸಿಹಿಯಾದು ಮಾತು ಮತ್ತು ವಯ್ಯಾರಗಳಿಂದ ಅವರನ್ನು ತನ್ನ ಆಕರ್ಷಣೆಯಲ್ಲಿ ಹಿಡಿದಿಟ್ಟುಕೊಳ್ಳುತ್ತಾಳೆ.
ಒಂದು ದಿನ ಗೂನುಬೆನ್ನಿನ ಗುಲಾಮನೊಬ್ಬ ಅವಳ ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ. ಕೂಡಲೇ ಅವನ ಮೇಲೆ ಮೋಹಗೊಳ್ಳುವ ಕಾನ್ಹಾ ಅವನನ್ನು ಒಲಿಸಿಕೊಳ್ಳುತ್ತಾಳೆ. ತನ್ನ ಗಂಡಂದಿರನ್ನು ಮರುಳು ಮಾಡಿ, ಅವರಿಗೆ ತಿಳಿಯದಂತೆ ಗುಟ್ಟಾಗಿ ಅವನ ಜೊತೆ ಸಂಬಂಧ ಬೆಳೆಸುತ್ತಾಳೆ. ಅವನ ಒಲವನ್ನು ಪಡೆಯಲು, ‘ನನ್ನ ಗಂಡಂದಿರನ್ನು ಕೊಂದು ಅವರ ಕೊರಳಿನ ರಕ್ತವನ್ನು ನಿನ್ನ ಪಾದಕ್ಕೆ ಬಳಿಯುತ್ತೇನೆ’ ಎಂದು ಮಾತು ಕೊಡುತ್ತಾಳೆ.
ಅಜ್ಜುನನಿಗೆ (ಈತ ಬೋಧಿಸತ್ವ) ಕನ್ಹಾಳ ಮೇಲೆ ಅನುಮಾನ ಮೂಡಿ, ಒಮ್ಮೆ ಅವಳನ್ನು ಹಿಂಬಾಲಿಸುತ್ತಾನೆ. ಗುಲಾಮನ ಜೊತೆಗಿರುವಾಗಲೇ ಅವಳನ್ನು ಹಿಡಿಯುತ್ತಾನೆ ಮತ್ತು ತನ್ನ ಸೋದರರನ್ನು ಅಲ್ಲಿಗೆ ಕರೆಸಿಕೊಳ್ಳುತ್ತಾನೆ. ಹೆಂಡತಿಯ ಹಾದರ ಅವರಲ್ಲಿ ಐಹಿಕ ಬದುಕಿನ ಬಗ್ಗೆ ಹೇಸಿಗೆ ಹುಟ್ಟಿಸುತ್ತದೆ. ಅವರು ಆ ಕೂಡಲೇ ಸಂಸಾರವನ್ನೂ ರಾಜ್ಯವೈಭೋಗಗಳನ್ನೂ ತೊರೆದು ವೈರಾಗ್ಯದತ್ತ ಮುಖ ಮಾಡುತ್ತಾರೆ.
**
ಈ ಕತೆಯನ್ನು ಬೋಧಿಸತ್ವನು ತನ್ನ ದೂರದ ಸಂಬಂಧಿಗಳೂ ಆಗಿದ್ದ, ಸಂಸಾರ ತೊರೆದು ಸನ್ಯಾಸ ಸ್ವೀಕರಿಸಿದ್ದ ಐವರು ರಾಜಕುಮಾರರಿಗೆ ಹೇಳುತ್ತಾನೆ ಎಂದಿದೆ.
ಹೆಣ್ಣುಗಳಿಗೆ ಸಂಘದಲ್ಲಿ ಆಶ್ರಯ ಕೊಟ್ಟ, ಆಮ್ರಪಾಲಿಯಂಥ ವೇಶ್ಯೆಯರನ್ನೂ (ಸಮಾಜದಲ್ಲಿ ಈ ವೃತ್ತಿಯ ಬಗ್ಗೆ ಪೂರ್ವಾಗ್ರಹಗಳಿವೆಯಲ್ಲ…) ಸಂಘದೊಳಗೆ ಸೇರಿಸಿಕೊಂಡ, ಅತ್ಯಾಚಾರಕ್ಕೊಳಗಾದ ಉತ್ಪಲಾವರ್ಣೆಗೆ, ಗಂಡನನ್ನು ಕೊಂದಿದ್ದ ಕೂಂಡಲಕೇಶಿಗೆಲ್ಲ ದೀಕ್ಷೆ ಕೊಟ್ಟು ಧಮ್ಮಬೋಧನೆ ಮಾಡಿದ ಬುದ್ಧನಂಥ ಬುದ್ಧ ಈ ಕತೆ ಹೇಳಿರಲಾರ.
ಬುದ್ಧನ ಜಾತಕ ಕತೆಗಳು, ನಂತರದಲ್ಲಿ ಅನುಯಾಯಿ ಬೌದ್ಧರಿಂದ ಬರೆಯಲ್ಪಟ್ಟವು. ಬುದ್ಧಘೋಷ ಮತ್ತು ಆರ್ಯಸೂರ ಇದರ ಪ್ರಮುಖ ಸಂಕಲನಕಾರರೆಂದು ಹೇಳಲಾಗುತ್ತದೆ. ಇವರು ಬುದ್ಧನ ಕಾಲದ ಸುಮಾರು 8 – 9 ಶತಮಾನಗಳ ನಂತರ ಜನಿಸಿದವರು. ಇವರ ಕಾಲಕ್ಕೆ ಸಂಘದಲ್ಲಿ ಬ್ರಹ್ಮಚರ್ಯ ಪಾಲನೆ ಅಳ್ಳಕವಾಗಿದ್ದಿರಬೇಕು (ಅದು ಸಹಜವೇ ಸರಿ). ಬೌದ್ಧ ಧರ್ಮ ಸ್ವೀಕರಿಸಿ ಸನ್ಯಾಸಿಯಾದವರನ್ನು ಹೆಣ್ಣಿನ ಕಾಮನೆಯಿಂದ ಮತ್ತು ಐಹಿಕ ಭೋಗಗಳಿಂದ ದೂರವಿರಿಸಲು ಸಾಂಕೇತಿಕವಾಗಿ ಇಂತಹ ಕತೆಗಳನ್ನು ಹೆಣೆದಿರಬೇಕು.
ಕಾರಣ ಎಷ್ಟೇ ಉದಾತ್ತವಾಗಿರಲಿ, ಸಾಂಸ್ಥಿಕ ಧರ್ಮಗಳವಿಷಯ ಬಂದಾಗ ಮೊದಲು ಮಸಿ ಮೆತ್ತುವುದು ಹೆಣ್ಣಿಗೆ. ನಮ್ಮ ಕಾಲದ ಪರಮಹಂಸರೂ ‘ಕಾಮಿನಿ ಕಾಂಚನಗಳು ಸರ್ಪಗಳಿದ್ದಂತೆ’ ಅನ್ನುತ್ತಿರಲಿಲ್ಲವೆ?
ಯಾಕೆ ಯಾವ ಧರ್ಮದ ಕತೆಗಳೂ ಸೃಷ್ಟಿಯ ನಶ್ವರತೆಯನ್ನು ಮನದಟ್ಟು ಮಾಡಿಸಲು ಹಲವು ಹೆಂಡಿರನ್ನುಳ್ಳ ಗಂಡಸರ ನಿದರ್ಶನ ಕೊಡುವುದಿಲ್ಲ? ಕೊಟ್ಟರೂ, ಸುಂದರಿಯರಾದ ಹೆಂಡತಿಯರನ್ನು ಬಿಟ್ಟು ಕುರೂಪಿಯನ್ನು ಪ್ರೇಮಿಸುವ ಗಂಡಸಿನ ಕತೆ ಬಾಹ್ಯ ರೂಪಕ್ಕಿಂತ ಅಂತರಂಗದ ಸೌಂದರ್ಯಕ್ಕೆ ಬೆಲೆ ಕೊಡುವ ಉದಾತ್ತ ಚಿಂತನೆಯಾಗಿ ಶಿಫ್ಟ್ ಆಗುವುದು ಯಾಕೆ? ಇದು ಎಂತಹ ರಾಜಕಾರಣ? ಈ ಕತೆಗಳು ಈಗ ಇರ್ರಿಲವೆಂಟ್. ಆದರೆ, ಇವು ಗಂಡಸರಲ್ಲಿ ಹುಟ್ಟುಹಾಕಿರುವ ಆನುವಂಶಿಕ ಚಿಂತನೆಯಿಂದ ಹೆಣ್ಣುಗಳು ಇನ್ನೂ ಸಂಕಟಕ್ಕೆ ಈಡಾಗುತ್ತಿರುವುದು ಸುಳ್ಳಲ್ಲವಲ್ಲ? ಆದ್ದರಿಂದ, ಇಂತಹ ಕತೆಗಳ ಕಾರಣವನ್ನು ಅರ್ಥ ಮಾಡಿಸಿ, ಪುರುಷ ಜಾತಿಯ ಚಿಂತನೆಯಲ್ಲಿ ಬದಲಾವಣೆ ತರದೆ ಹೋದರೆ, ಲಿಂಗತ್ವ ಸಮಾನತೆ ಸಾಧಿಸಲು ಇನ್ನೂ ನಾಲ್ಕೈದು ಶತಮಾನ ಬೇಕಾಗುವುದೇನೋ.

