‘ಬೈಪಾಸಿಂಗ್ ತಂತ್ರ’ದಲ್ಲಿ, ತಳೀಯವಾಗಿ ಮಾರ್ಪಡಿಸಿದ ಜೀವಿಗಳ (GMOs) ಬಗ್ಗೆ ನಕಾರಾತ್ಮಕವಾದ ವಾದಗಳನ್ನು ಖಂಡಿಸುವ ಬದಲು, ಅವುಗಳಲ್ಲಿರುವ ಸಕಾರಾತ್ಮಕ ಅಂಶಗಳನ್ನು ಎತ್ತಿ ತೋರಿಸುವಂತೆ ಹೇಳಲಾಗುತ್ತದೆ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಕೆಲವೊಮ್ಮೆ ಜೀವನದಲ್ಲಿ ನಿಮಗೆ ತಪ್ಪಾದ ನಂಬಿಕೆಯನ್ನು ಹೊಂದಿರುವ ವ್ಯಕ್ತಿಯೊಬ್ಬರು ಎದುರಾಗಬಹುದು. ಅದಕ್ಕಿಂತಲೂ ಕೆಟ್ಟದ್ದೆಂದರೆ, ಅವರ ನಂಬಿಕೆ ಅವರಿಗೆ ತಾವೇ ಹಾನಿ ಮಾಡಿಕೊಳ್ಳುವಂತೆ ಅಥವಾ ಇತರರಿಗೆ ಹಾನಿ ಉಂಟುಮಾಡುವಂತೆ ಇರಬಹುದು. ಇಂತಹ ಸಂದರ್ಭಗಳಲ್ಲಿ ನೀವು ಏನು ಮಾಡುತ್ತೀರಿ? ಯಾರದ್ದಾದರೂ ನಂಬಿಕೆಯನ್ನು ಬದಲಾಯಿಸಲು ನೀವು ಎಂದಾದರೂ ಪ್ರಯತ್ನಿಸಿದ್ದರೆ, ಅದು ಎಷ್ಟು ಕಷ್ಟ ಎನ್ನುವುದು ನಿಮಗೆ ಅರಿವಾಗಿರುತ್ತದೆ. ಏಕೆಂದರೆ, ತರ್ಕಬದ್ಧವಾದ ಚರ್ಚೆಯೂ ಅನೇಕ ಬಾರಿ ವಾದ-ವಿವಾದವಾಗಿ, ಪರಸ್ಪರ ಸಂಘರ್ಷಕ್ಕೆ ತಿರುಗಿಬಿಡುತ್ತದೆ.
ಆದರೆ, 2024ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಒಂದು ಸಂಶೋಧನಾ ತಂಡ ಇದಕ್ಕೊಂದು ಸಂಭಾವ್ಯ ಪರಿಹಾರವನ್ನು ಸೂಚಿಸಿತು. ಅದನ್ನು ‘ಬೈಪಾಸಿಂಗ್ ತಂತ್ರ’ (Bypassing Technique) ಎಂದು ಕರೆಯಲಾಗುತ್ತದೆ.
ಈ ತಂತ್ರದಲ್ಲಿ, ಒಬ್ಬರ ವಾದವನ್ನು ನೇರವಾಗಿ ಖಂಡಿಸುವ ಅಥವಾ ಅದರಲ್ಲಿರುವ ತಪ್ಪುಗಳನ್ನು ಎತ್ತಿ ತೋರಿಸುವ ಬದಲು, ಆ ವಿಷಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕವಾದ ಪ್ರತಿವಾದಗಳನ್ನು ಮಂಡಿಸಲಾಗುತ್ತದೆ.
ಉದಾಹರಣೆಗೆ, ಯಾರಾದರೂ ನಿಮ್ಮ ಬಳಿ ಬಂದು, ‘ತಳೀಯವಾಗಿ ಮಾರ್ಪಡಿಸಿದ ಜೀವಿಗಳು (GMOs) ಅಲರ್ಜಿಯನ್ನು ಉಂಟುಮಾಡುತ್ತವೆ’ ಎಂದು ಹೇಳುತ್ತಾರೆ ಎಂದು ಕಲ್ಪಿಸಿಕೊಳ್ಳಿ. ಆಗ ನೀವು ಅವರಿಗೆ, ‘G7 ರಾಷ್ಟ್ರಗಳಲ್ಲಿನ ಎಲ್ಲಾ ಆರೋಗ್ಯ ಸಂಸ್ಥೆಗಳೂ ತಳೀಯವಾಗಿ ಮಾರ್ಪಡಿಸಿದ ಜೀವಿಗಳು ಅಲರ್ಜಿಯನ್ನು ಉಂಟುಮಾಡುವುದಿಲ್ಲ ಎನ್ನುವುದನ್ನು ಒಪ್ಪಿಕೊಂಡಿವೆ’ ಎಂದು ಹೇಳಬಹುದು. ಇಂತಹ ಉತ್ತರ ಕೆಲವೊಮ್ಮೆ ಕೆಲಸ ಮಾಡಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಅದು ಪರಿಣಾಮಕಾರಿಯಾಗುವುದಿಲ್ಲ. ಏಕೆಂದರೆ, ಎದುರಾಳಿಯ ನಂಬಿಕೆಯನ್ನು ನೇರವಾಗಿ ಪ್ರಶ್ನಿಸುವ ಇಂತಹ ವಿಧಾನವು ಸಂಘರ್ಷಕ್ಕೆ ಕಾರಣವಾಗಬಹುದು. ಪರಿಣಾಮವಾಗಿ, ತಮ್ಮ ನಿಲುವನ್ನು ಮರುಪರಿಶೀಲಿಸುವ ಬದಲು, ಜನರು ತಾವು ಈಗಾಗಲೇ ನಂಬಿರುವ ಅಭಿಪ್ರಾಯಕ್ಕೆ ಇನ್ನಷ್ಟು ಬಿಗಿಯಾಗಿ ಅಂಟಿಕೊಳ್ಳುತ್ತಾರೆ.
‘ಬೈಪಾಸಿಂಗ್ ತಂತ್ರ’ದಲ್ಲಿ, ತಳೀಯವಾಗಿ ಮಾರ್ಪಡಿಸಿದ ಜೀವಿಗಳ (GMOs) ಬಗ್ಗೆ ನಕಾರಾತ್ಮಕವಾದ ವಾದಗಳನ್ನು ಖಂಡಿಸುವ ಬದಲು, ಅವುಗಳಲ್ಲಿರುವ ಸಕಾರಾತ್ಮಕ ಅಂಶಗಳನ್ನು ಎತ್ತಿ ತೋರಿಸುವಂತೆ ಹೇಳಲಾಗುತ್ತದೆ.
ಉದಾಹರಣೆಗೆ, ನೀವು ಹೀಗೆ ಹೇಳಬಹುದು:
‘ಅಂದಹಾಗೆ, ತಳೀಯವಾಗಿ ಮಾರ್ಪಡಿಸಿದ ಜೀವಿಗಳು ಜಗತ್ತಿನ ಹಸಿವಿನ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತವೆ ಮತ್ತು ಪ್ರತಿವರ್ಷ ಲಕ್ಷಾಂತರ ಜನರ ಜೀವವನ್ನು ಉಳಿಸುತ್ತವೆ ಎನ್ನುವುದು ನಿಮಗೆ ಗೊತ್ತೇ?’ ಇಲ್ಲಿ ನೀವು ಯಾರನ್ನೂ ಟೀಕಿಸಿಲ್ಲ, ಅವರ ಮಾತು ಮೂರ್ಖತನದ್ದು ಎಂದು ಅವರಿಗೆ ಅನಿಸುವಂತೆ ಮಾಡಿಲ್ಲ. ಬದಲಾಗಿ, ಅವರನ್ನು ತಾರ್ಕಿಕವಾಗಿ ಆಲೋಚಿಸಬಲ್ಲ, ಬುದ್ಧಿವಂತ ವ್ಯಕ್ತಿಯೆಂದೇ ಪರಿಗಣಿಸಿದ್ದೀರಿ.
ತಪ್ಪು ಮಾಹಿತಿಯನ್ನು ಎದುರಿಸುವುದು ಮನೋವಿಜ್ಞಾನದ ದೃಷ್ಟಿಯಿಂದ ಒಂದು ಸಂಕೀರ್ಣವಾದ ವಿಷಯ. ಇದಕ್ಕೆ ಎಲ್ಲ ಸಂದರ್ಭಗಳಲ್ಲಿಯೂ ಅನ್ವಯವಾಗುವ ಒಂದೇ ಪರಿಹಾರವಿಲ್ಲ. ಆದರೆ, ‘ಬೈಪಾಸಿಂಗ್ ತಂತ್ರ’ವು ಈ ಪ್ರಯತ್ನದಲ್ಲಿ ನಮ್ಮ ಬಳಿಯಿರುವ ಇನ್ನೊಂದು ಪರಿಣಾಮಕಾರಿ ಅಸ್ತ್ರವಾಗಬಹುದು. ತಪ್ಪು-ಸರಿಗಳನ್ನು ಪರಿಶೀಲಿಸಲು ಹೋಗಬೇಡಿ; ಜನರನ್ನು ತಿದ್ದಲು ಪ್ರಯತ್ನಿಸಬೇಡಿ; ಅವರು ಹಾಕಿಕೊಟ್ಟ ವಾದದ ಅಖಾಡದಲ್ಲೇ ಇಳಿದು ಹೋರಾಡಬೇಡಿ. ಅದರ ಬದಲು, ಇನ್ನೊಂದು ದೃಷ್ಟಿಕೋನವನ್ನು ಎಷ್ಟು ಸಮರ್ಥವಾಗಿ ಮಂಡಿಸಬೇಕೆಂದರೆ, ಅದಕ್ಕೆ ಹೋಲಿಸಿದಾಗ ಎದುರಿನವರ ನಿಲುವು ದುರ್ಬಲವಾಗಿ ಕಾಣುವಂತಿರಲಿ.

