ಸಾಮಾಜಿಕವಾಗಿ ಪ್ರತ್ಯೇಕಗೊಂಡು ಬದುಕುವುದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ದೀರ್ಘಕಾಲ ಒಂಟಿಯಾಗಿದ್ದಾಗ, ಅದು ನಮ್ಮ ದೇಹದಲ್ಲಿ ನಿರಂತರ ಒತ್ತಡದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಸಾಮಾಜಿಕವಾಗಿ ಪ್ರತ್ಯೇಕಗೊಂಡಿರುವುದನ್ನು ನಮ್ಮ ಮೆದುಳು ಮತ್ತು ದೇಹವು ಒತ್ತಡದ ಅನುಭವವೆಂದೇ ಗ್ರಹಿಸಿ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತವೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಶಿಕ್ಷಣ ತಜ್ಞ ಡೇನಿಯಲ್ ಕಾಕ್ಸ್ ಅವರು, ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಇಂದಿನ ಜನರಿಗೆ ಆಪ್ತ ಸ್ನೇಹಿತರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ವಿವರಿಸಲು ‘ಸ್ನೇಹದ ಹಿಂಜರಿತ’ (Friendship Recession) ಎನ್ನುವ ಪದವನ್ನು ಬಳಸಿದ್ದಾರೆ. ಒಂಟಿತನ ಮತ್ತು ಸ್ನೇಹಿತರಿಲ್ಲದ ಸ್ಥಿತಿ ಕೊನೆಗೆ ನಮ್ಮ ಸಾವಿಗೂ ಕಾರಣವಾಗಬಹುದು. ಚಿಂತಕ ಬೆನ್ ರೈನ್ ಹೇಳುವಂತೆ, ಪ್ರಾಚೀನ ಗ್ರೀಕರಿಗೆ, ಸಂತೋಷದಿಂದ ಕೂಡಿದ, ಪರಿಪೂರ್ಣವಾದ ಮತ್ತು ಸಾರ್ಥಕವಾದ ಬದುಕಿಗೆ ಒಬ್ಬ ಆಪ್ತ ಸ್ನೇಹಿತನಿರುವುದು ಅತ್ಯಗತ್ಯ ಎನ್ನುವುದು ಚೆನ್ನಾಗಿ ತಿಳಿದಿತ್ತು.
ಉದಾಹರಣೆಗೆ, ಎಪಿಕ್ಯೂರಸ್ ನ ಪ್ರಕಾರ, ಸ್ನೇಹಿತರು ನಮಗೆ ಎರಡು ಸಂಗತಿಗಳನ್ನು ನೀಡುತ್ತಾರೆ. ಮೊದಲನೆಯದು, ಅವರ ಒಡನಾಟದಿಂದ ದೊರೆಯುವ ಆನಂದ ಮತ್ತು ಸಂತೋಷ. ಎರಡನೆಯದು, ಬದುಕಿನಲ್ಲಿ ಪ್ರತಿಕೂಲ ಪರಿಸ್ಥಿತಿಗಳು ಎದುರಾದಾಗ ನಮ್ಮ ನೆರವಿಗೆ ಯಾರೋ ಇದ್ದಾರೆ ಎನ್ನುವ ಅರಿವಿನಿಂದ ದೊರೆಯುವ ನೆಮ್ಮದಿ.
ಆಶ್ಚರ್ಯಕರ ಸಂಗತಿಯೆಂದರೆ, ಎಪಿಕ್ಯೂರಸ್ ಹೇಳಿದ್ದು ನಿಜವೆನ್ನುವುದನ್ನು ಇಂದಿನ ಸಂಶೋಧನೆಗಳೂ ದೃಢಪಡಿಸುತ್ತಿವೆ. ಈ ಕುರಿತು ಬೆನ್ ರೈನ್ ಏನು ಹೇಳುತ್ತಾರೆಂದರೆ: “ಜನರನ್ನು ಹತ್ತು ವರ್ಷಗಳ ಕಾಲ ನಿರಂತರವಾಗಿ ಗಮನಿಸಿದ ಅಧ್ಯಯನಗಳ ಪ್ರಕಾರ, ಕಡಿಮೆ ಜನರೊಂದಿಗೆ ಬೆರೆಯುವವರು ಮತ್ತು ದುರ್ಬಲವಾದ ಸಾಮಾಜಿಕ ಸಂಬಂಧಗಳನ್ನು ಹೊಂದಿರುವವರು, ಆ ಹತ್ತು ವರ್ಷಗಳ ಅವಧಿಯಲ್ಲಿ ಯಾವುದೇ ಕಾರಣದಿಂದ ಸಾವನ್ನಪ್ಪುವ ಸಾಧ್ಯತೆ ಶೇಕಡಾ 50ರಷ್ಟು ಹೆಚ್ಚಾಗಿತ್ತು ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ನಂಬಲಸಾಧ್ಯವಾದ ಅಂಕಿಅಂಶ!
ಇದರ ಇನ್ನೊಂದು ಮಗ್ಗುಲೆಂದರೆ, ಸಾಮಾಜಿಕವಾಗಿ ಪ್ರತ್ಯೇಕಗೊಂಡು ಬದುಕುವುದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ದೀರ್ಘಕಾಲ ಒಂಟಿಯಾಗಿದ್ದಾಗ, ಅದು ನಮ್ಮ ದೇಹದಲ್ಲಿ ನಿರಂತರ ಒತ್ತಡದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಸಾಮಾಜಿಕವಾಗಿ ಪ್ರತ್ಯೇಕಗೊಂಡಿರುವುದನ್ನು ನಮ್ಮ ಮೆದುಳು ಮತ್ತು ದೇಹವು ಒತ್ತಡದ ಅನುಭವವೆಂದೇ ಗ್ರಹಿಸಿ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತವೆ!”
ಸ್ನೇಹವನ್ನು ನಾವು ಒಂದು ರೀತಿಯ ಆಹಾರಕ್ರಮದಂತೆ ಪರಿಗಣಿಸಲು ಪ್ರಾರಂಭಿಸಬೇಕು ಎನ್ನುವುದು ರೈನ್ ಅವರ ವಾದ. ಆರೋಗ್ಯಕರ ಆಹಾರಕ್ರಮವಿದೆ, ಅನಾರೋಗ್ಯಕರ ಆಹಾರಕ್ರಮವೂ ಇದೆ. ಅದೇ ರೀತಿ, ದಿನವಿಡೀ ಅತಿಯಾಗಿ ಚಾಕೊಲೇಟ್ ತಿನ್ನುವುದನ್ನಾಗಲಿ ಅಥವಾ ಹಸಿವಿನಿಂದ ನಮ್ಮನ್ನು ನಾವೇ ಬಳಲಿಸುವುದನ್ನಾಗಲಿ ನಾವು ಬಯಸುವುದಿಲ್ಲ ಅಲ್ಲವೆ? ಹಾಗಿರುವಾಗ, ನಿಜವಾದ ಸ್ನೇಹದಿಂದ ನಮ್ಮನ್ನು ವಂಚಿಸಿಕೊಂಡು, ಅದರ ಬದಲಿಗೆ ಕೇವಲ ತಾತ್ಕಾಲಿಕ ತೃಪ್ತಿ ನೀಡುವ ಪರ್ಯಾಯ ಸಂಬಂಧಗಳನ್ನೇ ಅತಿಯಾಗಿ ಅವಲಂಬಿಸುವುದೇಕೆ?
ಎಪಿಕ್ಯೂರಸ್ ಮತ್ತು ಬೆನ್ ರೈನ್ ಇಬ್ಬರೂ ಸ್ನೇಹವನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎನ್ನುವುದನ್ನು ಒತ್ತಿಹೇಳುತ್ತಾರೆ. ಸ್ನೇಹವೆನ್ನುವುದು ಕೇವಲ ಒಟ್ಟಿಗೆ ಸಮಯ ಕಳೆಯುವುದಕ್ಕಾಗಲಿ, ಸಂತೋಷವಾಗಿ ಇರುವುದಕ್ಕಾಗಲಿ ಸೀಮಿತವಾದ ಸಂಗತಿಯಲ್ಲ. ಅದು ನಮ್ಮ ಬದುಕು ಮತ್ತು ಸಾವಿನ ನಡುವಿನ ವ್ಯತ್ಯಾಸವನ್ನೇ ನಿರ್ಧರಿಸಬಲ್ಲ ಸಂಗತಿಯಾಗಿದೆ.

