ನಮ್ಮ ಖರ್ಚುಗಳನ್ನು ಕಡಿಮೆ ಮಾಡುವಂತೆ ಒತ್ತಾಯಿಸುವ ಯಾವುದೇ ವ್ಯವಸ್ಥೆಯು, ನಾವು ಯಾರು ಎನ್ನುವುದನ್ನೂ ಕಡಿಮೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತದೆ ಎಂದು ಮಾರ್ಕ್ಸ್ ವಾದಿಸಿದ್ದರು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಆನ್‌ಲೈನ್‌ನಲ್ಲಿ ಈ ಒಂದು ರೀತಿಯ ಪೋಸ್ಟ್‌ಗಳನ್ನು ನೀವು ಆಗಾಗ್ಗೆ ಕಾಣಬಹುದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ವೈಟ್‌ಬೋರ್ಡ್‌ನ ಮುಂದೆ ನಿಂತುಕೊಂಡು, ನೀವು ಕಾಫಿಗಾಗಿ ನಿಜವಾಗಿಯೂ ಎಷ್ಟು ಹಣ ಖರ್ಚು ಮಾಡುತ್ತಿದ್ದೀರಿ ಎನ್ನುವುದನ್ನು ವಿವರಿಸುತ್ತಿರುತ್ತಾರೆ. ನಿಮ್ಮ subscription ಗಳನ್ನು ರದ್ದುಗೊಳಿಸಿ, ರಜೆಯ ಪ್ರವಾಸವನ್ನು ಕೈಬಿಡಿ, ಇನ್ನೂ ಕೆಲವು ಗಂಟೆಗಳ ಕಾಲ ಹೆಚ್ಚುವರಿಯಾಗಿ ಕೆಲಸ ಮಾಡಿ ಎಂದು ಅವರು ಸಲಹೆ ನೀಡುತ್ತಾರೆ. “ಖರ್ಚು ಮಾಡುವುದನ್ನು ಕಡಿಮೆ ಮಾಡಿ. ಹೆಚ್ಚು ಉಳಿತಾಯ ಮಾಡಲು ಪ್ರಾರಂಭಿಸಿ. ಆಗ ನನ್ನಂತೆಯೇ ನೀವೂ ಒಂದು ಮನೆಯನ್ನು ಖರೀದಿಸಬಹುದು” ಎಂದು ಹೇಳುತ್ತಾರೆ.
ಅವರು ಹೇಳುವುದರಲ್ಲಿ ಸತ್ಯವಿರಬಹುದು. ಆದರೆ, ಕಾರ್ಲ್ ಮಾರ್ಕ್ಸ್ ಅವರ ಪ್ರಕಾರ, ಇದಕ್ಕಾಗಿ ನೀವು ತೆರಬೇಕಾದ ಬೆಲೆ ಇನ್ನೂ ಒಂದು ಇದೆ. ಅದು ಕಣ್ಣಿಗೆ ಕಾಣದ, ಇನ್ನಷ್ಟು ಆಳವಾದ ಬೆಲೆ.
ನಮ್ಮ ಖರ್ಚುಗಳನ್ನು ಕಡಿಮೆ ಮಾಡುವಂತೆ ಒತ್ತಾಯಿಸುವ ಯಾವುದೇ ವ್ಯವಸ್ಥೆಯು, ನಾವು ಯಾರು ಎನ್ನುವುದನ್ನೂ ಕಡಿಮೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತದೆ ಎಂದು ಮಾರ್ಕ್ಸ್ ವಾದಿಸಿದ್ದರು. ಏಕೆಂದರೆ, ನಾವು ಪುಸ್ತಕಗಳನ್ನು ಓದುವುದನ್ನು, ಸಿನಿಮಾ ನೋಡುವುದನ್ನು, ಸ್ನೇಹಿತರೊಂದಿಗೆ ಪಬ್‌ಗೆ ಹೋಗುವುದನ್ನು, ಕುಟುಂಬದವರೊಂದಿಗೆ ಊಟ ಮಾಡುವುದನ್ನು ಅಥವಾ ಜಗತ್ತಿನಾದ್ಯಂತ ಪ್ರವಾಸ ಮಾಡುವುದನ್ನು ತ್ಯಜಿಸಬೇಕಾದಾಗ, ನಮ್ಮ ವ್ಯಕ್ತಿತ್ವದ ಒಂದು ರೂಪವನ್ನೇ ನಾವು ತ್ಯಜಿಸುತ್ತೇವೆ. ಇವೆಲ್ಲವೂ ಸುಲಭವಾಗಿ ಕೈಬಿಡಬಹುದಾದ ಐಷಾರಾಮಿ ಸುಖಗಳಲ್ಲ. ನಾವು ಯಾರು ಎನ್ನುವುದನ್ನು ವ್ಯಕ್ತಪಡಿಸಲು ಮತ್ತು ನಮ್ಮ ನಿಜವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನಮಗಿರುವ ಏಕೈಕ ಮಾರ್ಗಗಳೇ ಇವು.
ವ್ಯತ್ಯಾಸವಿರುವುದು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಗಳ ನಡುವಲ್ಲ. ನಿಜವಾಗಿ ಬದುಕುವುದಕ್ಕೂ, ನಮ್ಮ ನೈಜ ವ್ಯಕ್ತಿತ್ವದಿಂದ ದೂರವಾಗುವುದಕ್ಕೂ ಇರುವ ವ್ಯತ್ಯಾಸವಿದು. ಏಕೆಂದರೆ, ನೀವು ಬಂಡವಾಳಶಾಹಿ ವ್ಯವಸ್ಥೆಯ ನಿಮ್ಮ ಕನಸಿನ ಸ್ವರ್ಗವನ್ನು ತಲುಪಿದರೂ ಸಹ, ಗಾಜಿನ ಗೋಡೆಗಳಿರುವ ನಿಮ್ಮ ಕಚೇರಿಯೊಂದಿಗೆ ಪೆಂಟ್‌ಹೌಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಾ, ವೇಗದ ಕಾರಿನಲ್ಲಿ ಸಂಚರಿಸುತ್ತಿದ್ದರೂ ಸಹ, ದುಬಾರಿ ಉಡುಪು ಧರಿಸಿ ರಸ್ತೆಯಲ್ಲಿ ನಡೆಯುತ್ತಿರುವ ಆ ವ್ಯಕ್ತಿ ಇನ್ನು ಮುಂದೆ ನೀವಾಗಿರುವುದಿಲ್ಲ.
ನೀವು ಆನಂದಿಸುವ ವಿಷಯಗಳನ್ನು ನಿರಂತರವಾಗಿ ಕಡಿಮೆ ಮಾಡಿಕೊಳ್ಳುತ್ತಾ, ಅವುಗಳನ್ನು ಉಸಿರುಗಟ್ಟಿಸುವಂತೆ ಹತ್ತಿಕ್ಕುತ್ತಾ ಹೋದರೆ, ಕೊನೆಗೆ ನಿಮ್ಮ ಅಸ್ತಿತ್ವವನ್ನೇ, ನಿಮ್ಮ ವ್ಯಕ್ತಿತ್ವವನ್ನೇ ನಾಶಮಾಡಿಕೊಂಡಂತಾಗುತ್ತದೆ.
ಹಾಗಾಗಿ, ಖಂಡಿತವಾಗಿಯೂ ಉಳಿತಾಯ ಮಾಡಿ. ಮಿತವ್ಯಯಿಗಳಾಗಿ. ಹಣವನ್ನು ಜಾಗರೂಕತೆಯಿಂದ ಖರ್ಚು ಮಾಡಿ. ಆದರೆ, ಮಾರ್ಕ್ಸ್ ಅವರ ಎಚ್ಚರಿಕೆಯನ್ನು ನೆನಪಿಡಿ: ಎಲ್ಲ ಐಷಾರಾಮಿ ಸುಖಗಳನ್ನೂ ತ್ಯಜಿಸಬೇಕಾದವುಗಳೆಂದು ಭಾವಿಸಬೇಡಿ.
ನೀವು ನಿಮ್ಮ ಸಮಯವನ್ನು ಎಲ್ಲಿ ಕಳೆಯುತ್ತೀರಿ ಮತ್ತು ನಿಮ್ಮ ಹಣವನ್ನು ಯಾವುದಕ್ಕಾಗಿ ಖರ್ಚು ಮಾಡುತ್ತೀರಿ ಎನ್ನುವುದು, ನೀವು ಈಗ ಯಾರು ಮತ್ತು ಮುಂದೆ ಎಂತಹ ವ್ಯಕ್ತಿಯಾಗಲು ಬಯಸುತ್ತೀರಿ ಎನ್ನುವುದರ ಪ್ರತಿಬಿಂಬವಾಗಿದೆ.

