ನಿಜವಾದ ಶಕ್ತಿ

ತತ್ವಜ್ಞಾನಿ ಫ್ರೆಡ್ರಿಕ್ ನೀಷೆಯ ಪ್ರಕಾರ, ನಿಜವಾದ ಶಕ್ತಿ ಎನ್ನುವುದು ಕಂಡುಕೊಳ್ಳುವುದಕ್ಕೂ ಬೆಳೆಸಿಕೊಳ್ಳುವುದಕ್ಕೂ ಬಹಳ ಕಷ್ಟವಾದ ಸಂಗತಿ. ತನ್ನ ದೃಷ್ಟಿಯಲ್ಲಿ, ಸರಳರು, ಸೌಮ್ಯರು ಅಥವಾ ಸ್ನೇಹಪರರು ಎಂದು ನಾವು ಕರೆಯಬಹುದಾದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ತಾನು ನಿಜವಾದ ಶಕ್ತಿಯನ್ನು ಕಂಡಿದ್ದೇನೆ ಎಂದು ನೀಷೆ ಹೇಳುತ್ತಾನೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ನಾವು ಸಾಮಾನ್ಯವಾಗಿ ಶಕ್ತಿ ಮತ್ತು ಅಧಿಕಾರವನ್ನು ಒಂದೇ ಎಂದು ತಪ್ಪಾಗಿ ಭಾವಿಸುತ್ತೇವೆ. ಒಬ್ಬ ಬಾಸ್, ಒಬ್ಬ ನಾಯಕ, ಅಥವಾ ಕೈಯಲ್ಲಿ ಬಂದೂಕು ಹಿಡಿದಿರುವ ಅಥವಾ ಕಿಕ್ ಮಾಡುವಷ್ಟು ಬಲವಿರುವ ದೇಹದಾರ್ಢ್ಯದ ವ್ಯಕ್ತಿ , ಇಂಥವರನ್ನೇ ನಾವು ಶಕ್ತಿವಂತರು ಎಂದು ಭಾವಿಸುತ್ತೇವೆ.

ಆದರೆ, ತತ್ವಜ್ಞಾನಿ ಫ್ರೆಡ್ರಿಕ್ ನೀಷೆಯ ಪ್ರಕಾರ, ನಿಜವಾದ ಶಕ್ತಿ ಎನ್ನುವುದು ಕಂಡುಕೊಳ್ಳುವುದಕ್ಕೂ ಬೆಳೆಸಿಕೊಳ್ಳುವುದಕ್ಕೂ ಬಹಳ ಕಷ್ಟವಾದ ಸಂಗತಿ. ತನ್ನ ದೃಷ್ಟಿಯಲ್ಲಿ, ಸರಳರು, ಸೌಮ್ಯರು ಅಥವಾ ಸ್ನೇಹಪರರು ಎಂದು ನಾವು ಕರೆಯಬಹುದಾದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ತಾನು ನಿಜವಾದ ಶಕ್ತಿಯನ್ನು ಕಂಡಿದ್ದೇನೆ ಎಂದು ನೀಷೆ ಹೇಳುತ್ತಾನೆ. ಅಂಥವರಿಗೆ ಇತರರ ಮೇಲೆ ಆಳ್ವಿಕೆ ನಡೆಸುವ ಯಾವ ಬಯಕೆಯೂ ಇರಲಿಲ್ಲ. ಏಕೆಂದರೆ, ಇತರರನ್ನು ಆಳಬೇಕೆಂಬ ಹಂಬಲವೇ ಆಂತರಿಕ ದೌರ್ಬಲ್ಯದ ಸಂಕೇತ ಎಂದು ನೀಷೆ ಭಾವಿಸಿದ್ದ.

ಅನಗತ್ಯವಾಗಿ ಠೀವಿಯಿಂದ ನಡೆದುಕೊಂಡು, ಇತರರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಬಯಸುವವರು ತಮ್ಮೊಳಗಿನ ಗುಲಾಮ ಮನಸ್ಥಿತಿಗೆ ಹೆದರುತ್ತಾರೆ. ಅದನ್ನು ಮರೆಮಾಚಲು ಅವರು ರಾಜವೈಭವದ ಮೇಲಂಗಿಯನ್ನು ಹೊದ್ದುಕೊಳ್ಳುತ್ತಾರೆ. ಆದರೆ ಕೊನೆಗೆ, ಅಂಥವರು ತಮ್ಮ ಅನುಯಾಯಿಗಳಿಗೆ, ತಮ್ಮನ್ನು ಪಳಗಿಸಿಕೊಂಡಿರುವ ಜನರಿಗೆ, ತಾವು ಹೊಂದಿರುವ ಅಧಿಕಾರಕ್ಕೆ ಮತ್ತು ಪ್ರತಿಯೊಂದು ಸಂದರ್ಭದಲ್ಲೂ ಇತರರಿಗಿಂತ ಒಂದು ಹೆಜ್ಜೆ ಮುಂದಿರಬೇಕೆಂಬ ನಿರಂತರ ಹಂಬಲಕ್ಕೆ ತಾವೇ ಗುಲಾಮರಾಗುತ್ತಾರೆ ಎಂದು ನೀಷೆ ವಾದಿಸುತ್ತಾನೆ.

ಇದನ್ನು ಅರ್ಥಮಾಡಿಕೊಳ್ಳಲು, ಗ್ಯಾರಿ ಎಂಬ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಿ. ಆತನಿಗೆ ಈಗಷ್ಟೇ ಮ್ಯಾನೇಜರ್ ಹುದ್ದೆಗೆ ಬಡ್ತಿ ಸಿಕ್ಕಿದೆ. ಹಾಗಾಗಿ, ಪ್ರತಿಯೊಂದು ಇ-ಮೇಲ್‌ನಲ್ಲೂ ತನ್ನನ್ನು ಸೇರಿಸಬೇಕೆಂದು ಅವನು ಬಯಸುತ್ತಾನೆ. ಪ್ರತಿಯೊಂದು ಮೀಟಿಂಗ್ ನಲ್ಲೂ ಎಲ್ಲ ಕೆಲಸಗಳ ಕ್ರೆಡಿಟ್ ತಾನೇ ಪಡೆದುಕೊಳ್ಳುತ್ತಾನೆ. ತನ್ನ ಕಾಮೆಡಿಗೆ ಯಾರು ನಕ್ಕರು, ಯಾವಾಗ ಯಾರು ತನಗೆ ಬೆಂಬಲವಾಗಿ ನಿಂತರು, ಎಲ್ಲಿ ಯಾರು ತನ್ನ ಪರವಾಗಿ ಮಾತನಾಡಿದರು ಎಂಬುದನ್ನೆಲ್ಲ ಗಮನಿಸುತ್ತಿರುತ್ತಾನೆ.

ಗ್ಯಾರಿ ತಾನು ಒಂದು ತಂಡವನ್ನು ಮುನ್ನಡೆಸುತ್ತಿದ್ದೇನೆ ಎಂದು ಭಾವಿಸುತ್ತಾನೆ. ಆದರೆ ವಾಸ್ತವದಲ್ಲಿ ಆ ತಂಡವೇ ಗ್ಯಾರಿಯನ್ನು ನಿಯಂತ್ರಿಸುತ್ತಿರುತ್ತದೆ. ಇದೇ ಸಂದರ್ಭದಲ್ಲಿ, ಅಲ್ಲಿಂದ ಮೂರು ಟೇಬಲ್ ಆಚೆ ಆಲಿವ್ ಎಂಬ ವ್ಯಕ್ತಿ ಕೆಲಸ ಮಾಡುತ್ತಿದ್ದಾಳೆ ಎಂದುಕೊಳ್ಳಿ. ಆಕೆಗೆ ಎಂದಿಗೂ ಮ್ಯಾನೇಜರ್ ಆಗುವ ಅವಕಾಶ ಸಿಕ್ಕಿಲ್ಲ. ಆದರೂ, ಏನಾದರೂ ಸಮಸ್ಯೆ ಎದುರಾದಾಗ ಎಲ್ಲರೂ ಮೊದಲು ಹೋಗಿ ಆಶ್ರಯಿಸುವ ವ್ಯಕ್ತಿ ಆಕೆಯೇ ಆಗಿರುತ್ತಾಳೆ.

ನೀಷೆ ಇಲ್ಲಿ ದೀನತೆಯನ್ನು ಅಥವಾ ಅತಿಯಾದ ವಿಧೇಯತೆಯನ್ನು ಹೊಗಳುತ್ತಿಲ್ಲ. ಹೀಗೆ ನಡೆದುಕೊಳ್ಳುವವರ ಬಗ್ಗೆಯೂ ಆತ ಬೇರೆಡೆ ಕಟುವಾಗಿ ಟೀಕಿಸಿದ್ದಾನೆ. ತಮ್ಮ ಬಲಿಪಶು ಸ್ಥಿತಿಯನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುವವರು, ತಮ್ಮ ಅಂಜುಬುರುಕತನವನ್ನೇ ಒಂದು ಸದ್ಗುಣವೆಂಬಂತೆ ಬಿಂಬಿಸುವವರು, ಅಂಥವರನ್ನು ಆತ ಖಂಡಿಸಿದ್ದಾನೆ. ಆದರೆ ಇಲ್ಲಿ ಆತ ಹೇಳುತ್ತಿರುವುದೇನೆಂದರೆ, ಈ ನಿಯಮ ಎರಡೂ ದಿಕ್ಕುಗಳಲ್ಲೂ ಅನ್ವಯಿಸುತ್ತದೆ. ಹೀಗಾಗಿ, ಒಂದು ಕೋಣೆಯಲ್ಲಿರುವ ಅತ್ಯಂತ ಶಕ್ತಿವಂತ ವ್ಯಕ್ತಿ ಅತ್ಯಂತ ಸೌಮ್ಯನಾಗಿರಬಹುದು. ಅದೇ ರೀತಿ, ಅತಿ ಹೆಚ್ಚು ಗದ್ದಲ ಮಾಡುವ ವ್ಯಕ್ತಿಯೇ ಒಳಗೊಳಗೆ ಅತ್ಯಂತ ಭಯಭೀತನಾಗಿರಬಹುದು.

ಆದ್ದರಿಂದ, ನಿಜವಾದ ಶಕ್ತಿಯ ಪ್ರಶ್ನೆ ಎಂದಿಗೂ ಅಧಿಕಾರ ಅಥವಾ ಇತರರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ್ದಲ್ಲ. ನಿಜವಾದ ಶಕ್ತಿ ಎಂದರೆ, ಇತರರ ನಿರೀಕ್ಷೆಗಳಿಗೆ ತಕ್ಕಂತೆ ಬದುಕುವ ಬದಲು, ತನ್ನದೇ ಆದ ಲಯಕ್ಕೆ ಅನುಗುಣವಾಗಿ, ತನ್ನ ಜೀವನವನ್ನು ತಾನೇ ರೂಪಿಸಿಕೊಂಡು ಬದುಕುವ ಸಾಮರ್ಥ್ಯ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.