ಕಿರ್ಕೆಗಾರ್ಡ್ ಅವರ ವಾದವೇನೆಂದರೆ, ಒಂದು ವಿಚಿತ್ರ ರೀತಿಯಲ್ಲಿ ನಾವು ‘ಸಾರ್ವಜನಿಕರು’ (The Public) ಎನ್ನುವ ಪರಿಕಲ್ಪನೆಯನ್ನೇ ಸೃಷ್ಟಿಸಿದ್ದೇವೆ. ಅದು ನಿಜವಾದ ಜನರ ಗುಂಪಲ್ಲ. ಅದೊಂದು ಅಮೂರ್ತ ಪರಿಕಲ್ಪನೆ. ಅದಕ್ಕೆ ಮುಖವಿಲ್ಲ, ಅದು ತನ್ನ ಅಭಿಪ್ರಾಯಗಳಿಗೆ ಜವಾಬ್ದಾರಿಯನ್ನೂ ಹೊರಬೇಕಾಗಿಲ್ಲ. ಆದರೆ ಇತರರನ್ನು ನಿರಂತರವಾಗಿ ಜಡ್ಜ್ ಮಾಡುವ ಶಕ್ತಿ ಮಾತ್ರ ಅದಕ್ಕಿದೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಯಾರೋ ಒಬ್ಬರು ಧೈರ್ಯದಿಂದ ಏನನ್ನೋ ಮಾಡುತ್ತಿರುವ ವಿಡಿಯೋವೊಂದನ್ನು ನೀವು ನೋಡುತ್ತಿದ್ದೀರಿ ಎಂದುಕೊಳ್ಳಿ. ಆಮೇಲೆ ಕಾಮೆಂಟ್ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡುತ್ತೀರಿ. ಕೇವಲ ಒಂದು ಗಂಟೆಯಷ್ಟೇ ಕಳೆದಿದೆ. ಆದರೆ ಆಗಲೇ ಅರ್ಧದಷ್ಟು ಜನರು, ಅವರು ಮಾಡಿದ್ದು ಎಷ್ಟು ಮೂರ್ಖತನದ ಕೆಲಸವೆಂದು ವಿವರಿಸುತ್ತಿದ್ದಾರೆ. ಉಳಿದ ಅರ್ಧದಷ್ಟು ಜನರು, ತಾವಾಗಿದ್ದರೆ ಅದನ್ನು ಇನ್ನೂ ಚೆನ್ನಾಗಿ ಹೇಗೆ ಮಾಡಬಹುದಿತ್ತು ಎಂದು ಹೇಳುತ್ತಿದ್ದಾರೆ.
1846ರಲ್ಲಿಯೇ ಕಿರ್ಕೆಗಾರ್ಡ್ (Kierkegaard) ಇಂತಹ ವರ್ತನೆ ಏಕೆ ಸಂಭವಿಸುತ್ತದೆ ಎನ್ನುವುದನ್ನು ವಿವರಿಸಿದ್ದ.
ಕಿರ್ಕೆಗಾರ್ಡ್ ನ ವಾದದ ಪ್ರಕಾರ, ನಾವು ಬದುಕುತ್ತಿರುವುದು ವಿಮರ್ಶಾತ್ಮಕ ಚಿಂತನೆಯ ಯುಗದಲ್ಲಿ (Age of Reflection). ಇದಕ್ಕೆ ವಿರುದ್ಧವಾದದ್ದು ಭಾವಾವೇಶದ ಯುಗ (Passionate Age). ಅಲ್ಲಿ ಜನರು ಆಲೋಚಿಸುತ್ತಾ ಕುಳಿತುಕೊಳ್ಳುವುದಕ್ಕಿಂತ ಕಾರ್ಯಪ್ರವೃತ್ತರಾಗುತ್ತಾರೆ. ಅಲ್ಲಿ ಧೈರ್ಯವಿದೆ, ಸಾಹಸವಿದೆ, ಹೊಸ ಅನುಭವಗಳನ್ನು ಅರಸುವ ಉತ್ಸಾಹವಿದೆ. ಆದರೆ ವಿಮರ್ಶಾತ್ಮಕ ಚಿಂತನೆಯ ಯುಗದಲ್ಲಿ ಪ್ರತಿಯೊಂದು ಕೆಲಸವೂ ಒಂದು ಪ್ರದರ್ಶನವಾಗಿ ಬದಲಾಗುತ್ತದೆ; ಆ ಪ್ರದರ್ಶನ ಕೊನೆಗೆ ಚರ್ಚೆಯ ವಿಷಯವಾಗುತ್ತದೆ. ಎಲ್ಲರೂ ವಿಮರ್ಶಕರಾಗುತ್ತಾರೆ.
ಇದನ್ನು ವಿವರಿಸಲು ಕಿರ್ಕೆಗಾರ್ಡ್ ಒಂದು ಕಥೆಯನ್ನು ಹೇಳುತ್ತಾರೆ. ತೆಳುವಾದ ಮಂಜುಗಡ್ಡೆಯ ಮೇಲೆ, ಅಮೂಲ್ಯವಾದ ರತ್ನವೊಂದು ಬಿದ್ದಿದೆ ಎಂದು ಕಲ್ಪಿಸಿಕೊಳ್ಳಿ. ಅದನ್ನು ತರಲು ಯಾರೋ ಒಬ್ಬರು ಮಂಜುಗಡ್ಡೆಯ ಮೇಲೆ ಸ್ಕೇಟಿಂಗ್ ಮಾಡುತ್ತಾ ಮುಂದೆ ಸಾಗುತ್ತಾರೆ. ಭಾವಾವೇಶದ ಯುಗದಲ್ಲಿ, ದಡದ ಮೇಲೆ ನಿಂತಿರುವ ಜನರು ಆತಂಕದಿಂದ ಅವರನ್ನು ನೋಡುತ್ತಿರಬಹುದು. ಆದರೆ ಅವರು ಸುರಕ್ಷಿತವಾಗಿ ಹಿಂದಿರುಗಿದಾಗ, ಸಂತೋಷದಿಂದ ಹರ್ಷೋದ್ಗಾರ ಮಾಡುತ್ತಾ ಅವರನ್ನು ಅಭಿನಂದಿಸುತ್ತಾರೆ.
ಆದರೆ ವಿಮರ್ಶಾತ್ಮಕ ಚಿಂತನೆಯ ಯುಗದಲ್ಲಿ, ಅದೇ ಜನರು ಅಸಮಾಧಾನದಿಂದ ತಲೆ ಅಲ್ಲಾಡಿಸುತ್ತಾರೆ.
“ಎಂಥಾ ಬೇಜವಾಬ್ದಾರಿಯ ಕೆಲಸ!” ಎನ್ನುತ್ತಾರೆ.
“ಅಷ್ಟು ಅಪಾಯವನ್ನು ಎದುರಿಸುವ ಅಗತ್ಯವೇ ಇರಲಿಲ್ಲ!” ಎಂದು ಹೇಳುತ್ತಾರೆ. ಹೀಗೆ, ಆ ವ್ಯಕ್ತಿಯ ಸಾಹಸವನ್ನೇ ಇತರರು ತೀರ್ಪು ನೀಡುವ ಒಂದು ಪ್ರದರ್ಶನವನ್ನಾಗಿ ಪರಿವರ್ತಿಸುತ್ತಾರೆ.
ಕಿರ್ಕೆಗಾರ್ಡ್ ಅವರ ವಾದವೇನೆಂದರೆ, ಒಂದು ವಿಚಿತ್ರ ರೀತಿಯಲ್ಲಿ ನಾವು ‘ಸಾರ್ವಜನಿಕರು’ (The Public) ಎನ್ನುವ ಪರಿಕಲ್ಪನೆಯನ್ನೇ ಸೃಷ್ಟಿಸಿದ್ದೇವೆ. ಅದು ನಿಜವಾದ ಜನರ ಗುಂಪಲ್ಲ. ಅದೊಂದು ಅಮೂರ್ತ ಪರಿಕಲ್ಪನೆ. ಅದಕ್ಕೆ ಮುಖವಿಲ್ಲ, ಅದು ತನ್ನ ಅಭಿಪ್ರಾಯಗಳಿಗೆ ಜವಾಬ್ದಾರಿಯನ್ನೂ ಹೊರಬೇಕಾಗಿಲ್ಲ. ಆದರೆ ಇತರರನ್ನು ನಿರಂತರವಾಗಿ ಜಡ್ಜ್ ಮಾಡುವ ಶಕ್ತಿ ಮಾತ್ರ ಅದಕ್ಕಿದೆ. ಮತ್ತು ಈ ಪರಿಕಲ್ಪನೆಯನ್ನು ಸೃಷ್ಟಿಸಿದ್ದು ಪತ್ರಿಕಾ ಮಾಧ್ಯಮ ಎಂದು ಅವನು ಹೇಳುತ್ತಾನೆ. ಪ್ರೇಕ್ಷಕರ ಅಗತ್ಯವಿದ್ದ ಮಾಧ್ಯಮ ವರ್ಗವು ನಮ್ಮೆಲ್ಲರನ್ನೂ ಕೇವಲ ವೀಕ್ಷಕರನ್ನಾಗಿ ಪರಿವರ್ತಿಸಿತು.
ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭಾವಾವೇಶದಿಂದ ಕೂಡಿದ ಯುಗದಲ್ಲಿ ಬದುಕುವ ಜನರಿಗೂ ಕ್ರಮೇಣ ತೀರ್ಪು ನೀಡುವುದನ್ನೇ ಕಲಿಸಲಾಗುತ್ತದೆ. ನಾವೆಲ್ಲರೂ ವಿಮರ್ಶಕರಾಗುವಂತೆ ಪ್ರೋತ್ಸಾಹಿಸಲಾಗುತ್ತದೆ.
ಆದರೆ ಕಿರ್ಕೆಗಾರ್ಡ್ ಒಂದು ಪ್ರಶ್ನೆಯನ್ನು ಎತ್ತುತ್ತಾರೆ:
ನಮ್ಮಂತಹ ವಿಮರ್ಶಾತ್ಮಕ ಚಿಂತನೆಯ ಯುಗದಲ್ಲಿ, ನಿಜವಾಗಿ ಏನನ್ನಾದರೂ ಸಾಧಿಸುವವರು ಯಾರು?
ನಿಜವಾದ ಧೈರ್ಯದಿಂದ ಮುನ್ನುಗ್ಗುವವರು ಯಾರು?
ಮನುಷ್ಯನ ಬದುಕಿಗೆ ಅರ್ಥ ನೀಡುವ ಆಳವಾದ ಭಾವನೆಗಳು, ಉತ್ಸಾಹ ಮತ್ತು ಆವೇಶಗಳೊಂದಿಗೆ ಬದುಕುವ ಸಾಹಸವನ್ನು ನಿಜವಾಗಿಯೂ ಮಾಡುವವರು ಯಾರು?

