ವ್ಯಕ್ತಿಗಳಿಗೆ ಎಂದಿಗೂ ಅತಿಯಾಗಿ ಅಂಟಿಕೊಳ್ಳಬೇಡಿ. ಅವರು ವಿಶ್ವವ್ಯಾಪಿಯಾದ ಅನಂತತೆಯನ್ನು ಅನುಭವಿಸಲು ತೆರೆದಿರುವ ಪುಟ್ಟ ಕಿಟಕಿಗಳಷ್ಟೇ ~ ಓಶೋ /ದರ್ಶನ ಡೈರಿ — Going All The Way । ಕನ್ನಡಕ್ಕೆ : ಚಿದಂಬರ ನರೇಂದ್ರ
ತಂತ್ರದ ಮೂಲಭೂತ ರಹಸ್ಯವೇನೆಂದರೆ: ನೀವು ಯಾರೊಂದಿಗಾದರೂ ಪ್ರೇಮದಲ್ಲಿ ಒಂದಾಗುವಾಗ, ಆ ವ್ಯಕ್ತಿ ಕೇವಲ ಒಂದು ಕಿಟಕಿ ಮಾತ್ರ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಕಿಟಕಿಯ ಚೌಕಟ್ಟಿನ ಮೇಲೆಯೇ ಅತಿಯಾದ ಆಸಕ್ತಿ ಬೆಳೆಸಿಕೊಳ್ಳಬೇಡಿ. ಆ ವ್ಯಕ್ತಿ ಕೇವಲ ಒಂದು ಕಿಟಕಿ. ನೀವು ಆ ವ್ಯಕ್ತಿಯೊಂದಿಗೆ ಪ್ರೇಮದಲ್ಲಿ ಒಂದಾಗುವ ಮೂಲಕ ಒಂದಾಗುತ್ತಿದ್ದೀರಿ ಇಡೀ ವಿಶ್ವದೊಂದಿಗೇ!
ಆದ್ದರಿಂದ ಆ ಕಿಟಕಿಗೆ ಅಂಟಿಕೊಳ್ಳಬೇಡಿ. ಬೇರೆ ಕಿಟಕಿಗಳಿವೆ, ಬೇರೆ ಬಾಗಿಲುಗಳಿವೆ. ಇನ್ನೂ ಧೈರ್ಯವಿದ್ದರೆ ಕಿಟಕಿಗಳೂ ಬಾಗಿಲುಗಳೂ ಬೇಕಿಲ್ಲ; ನೇರವಾಗಿ ತೆರೆದ ಆಕಾಶಕ್ಕೆ ಬರಬಹುದು. ಇಡೀ ಆಕಾಶವೇ ನಿಮಗಾಗಿ ತೆರೆದಿದೆ, ನಕ್ಷತ್ರಗಳೊಂದಿಗೆ, ಆಕಾಶದೊಂದಿಗೆ, ಮೋಡಗಳೊಂದಿಗೆ ಪ್ರೇಮಿಸುವುದು. ಇದು ಸ್ವಲ್ಪ ಹುಚ್ಚುತನದಂತೆ ಕಾಣಬಹುದು. ಆದರೆ ಇದರಿಂದ ಅಪಾರ ಆನಂದ ದೊರೆಯುತ್ತದೆ. ಭೂಮಿಯನ್ನು ಪ್ರೀತಿಸುವುದು, ಹುಲ್ಲನ್ನು ಪ್ರೀತಿಸುವುದು, ಮರಗಳನ್ನು ಪ್ರೀತಿಸುವುದು, ಅಸ್ತಿತ್ವದಲ್ಲಿರುವ ಪ್ರತಿಯೊಂದರೊಂದಿಗೂ ಪ್ರೀತಿಯಿಂದ ಇರುವುದು . ಹೀಗೆ ನೀವು ವಿಶ್ವಪ್ರೇಮಿಯ ಕಾಮನಾತ್ಮಕ ಸಂಗಾತಿಯಾಗುತ್ತೀರಿ.
ಕ್ರಮೇಣ, ನೀವು ವಿಶ್ವದಲ್ಲಿಯೇ ಲೀನವಾಗುತ್ತೀರಿ.
ಈ ರಹಸ್ಯವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು: ವ್ಯಕ್ತಿಗಳಿಗೆ ಎಂದಿಗೂ ಅತಿಯಾಗಿ ಅಂಟಿಕೊಳ್ಳಬೇಡಿ. ಅವರು ವಿಶ್ವವ್ಯಾಪಿಯಾದ ಅನಂತತೆಯನ್ನು ಅನುಭವಿಸಲು ತೆರೆದಿರುವ ಪುಟ್ಟ ಕಿಟಕಿಗಳಷ್ಟೇ. ವ್ಯಕ್ತಿಯನ್ನು ನೆನಪಿಸಿಕೊಳ್ಳಿ, ಆದರೆ ವಿಶ್ವವ್ಯಾಪಿಯಾದ ಅನಂತತೆಯನ್ನು ಮರೆಯಬೇಡಿ. ಆ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿ, ಆದರೆ ವಿಶ್ವವ್ಯಾಪಿಯಾದ ಅನಂತತೆಯನ್ನು ನೆನಪಿನಲ್ಲಿಟ್ಟುಕೊಳ್ಳಿ.
ಆ ವ್ಯಕ್ತಿಗೆ ಕೃತಜ್ಞರಾಗಿರಿ; ಆದರೆ ಅವರ ಮೇಲಿನ ಮೋಹಕ್ಕೆ ಬಂಧಿಯಾಗಬೇಡಿ, ಸ್ವಾಮ್ಯಭಾವ ಬೆಳೆಸಿಕೊಳ್ಳಬೇಡಿ, ಹಾಗೆಯೇ ಇನ್ನೊಬ್ಬರ ಸ್ವಾಮ್ಯಕ್ಕೆ ನಿಮ್ಮನ್ನು ಒಪ್ಪಿಸಿಕೊಳ್ಳಬೇಡಿ.
ಇತರರ ಸ್ವಾಮ್ಯಕ್ಕೆ ಒಳಗಾಗುವುದನ್ನೂ, ಇತರರ ಮೇಲೆ ಸ್ವಾಮ್ಯ ಸಾಧಿಸುವುದನ್ನೂ ತಪ್ಪಿಸಿಕೊಳ್ಳಲು ಸಾಧ್ಯವಾದರೆ, ಒಂದರ ಹಿಂದೆ ಒಂದರಂತೆ ಬಾಗಿಲುಗಳು ತೆರೆದುಕೊಳ್ಳುತ್ತವೆ. ಒಂದು ದಿನ ಎಲ್ಲ ಗೋಡೆಗಳೂ ಕಣ್ಮರೆಯಾಗುತ್ತವೆ. ಆಗ ನೀವು ಇದ್ದಕ್ಕಿದ್ದಂತೆ ವಿಶಾಲವಾದ ಆಕಾಶದ ಅಡಿಯಲ್ಲಿ ನಿಂತಿರುತ್ತೀರಿ. ಆಗ ಇಡೀ ಅಸ್ತಿತ್ವವೇ ನಿಮ್ಮ ಪ್ರೇಮದ ಅನುಭವವಾಗಿ ಮಾರ್ಪಡುತ್ತದೆ.
*************************************

