ವಿಜ್ಞಾನಿಗಳು ತಮ್ಮ ಆಲೋಚನೆಗಳನ್ನು ಇತರರಿಗೆ ಸ್ಪಷ್ಟವಾಗಿ ವ್ಯಕ್ತಪಡಿಸುವುದನ್ನು ಕಲಿಸಲು ಅಲನ್ ಆಲ್ಡಾ Rule of Three ಯನ್ನು ಸಜೆಸ್ಟ್ ಮಾಡುತ್ತಾರೆ.. । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಇತರರಿಗೆ ಒಂದು ವಿಚಾರವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಸುವುದು ಹೇಗೆ? ನೀವು ವಿವರಿಸುತ್ತಿರುವಾಗ ಎದುರಿನವರ ಮುಖದಲ್ಲಿ ಅರ್ಥವಾಗದ ಭಾವನೆ ಕಾಣಿಸಿಕೊಂಡರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಅಂಥ ಸಂದರ್ಭದಲ್ಲಿ ಹೇಗೆ ಮುಂದುವರಿಯಬೇಕು? ಇದಕ್ಕೆ ಅಲನ್ ಆಲ್ಡಾ ಸಹಾಯ ಮಾಡಬಲ್ಲರು.
ವಿಜ್ಞಾನಿಗಳು ತಮ್ಮ ಆಲೋಚನೆಗಳನ್ನು ಇತರರಿಗೆ ಸ್ಪಷ್ಟವಾಗಿ ವ್ಯಕ್ತಪಡಿಸುವುದನ್ನು ಕಲಿಸಲು ಅಲನ್ ಆಲ್ಡಾ Rule of Three ಯನ್ನು ಸಜೆಸ್ಟ್ ಮಾಡುತ್ತಾರೆ.
ಮೊದಲನೆಯ ನಿಯಮ: ನೀವು ಇತರರಿಗೆ ತಿಳಿಸಬೇಕಾದ ಪ್ರಮುಖ ವಿಚಾರಗಳು ಮೂರಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಿ. ಏಕೆಂದರೆ ಮೂರಕ್ಕಿಂತ ಹೆಚ್ಚಿನ ವಿಚಾರಗಳನ್ನು ಹೇಳಲು ಹೋದಾಗ, ಹೊಸದಾಗಿ ಸೇರಿಸುವ ಪ್ರತಿಯೊಂದು ವಿಚಾರವೂ ಈಗಾಗಲೇ ಹೇಳಿರುವ ಇತರ ವಿಚಾರಗಳನ್ನು ಜನರ ನೆನಪಿನಿಂದ ಹೊರದೂಡುವ ಅಪಾಯವಿರುತ್ತದೆ.
ಎರಡನೆಯ ನಿಯಮ: ಕಷ್ಟಕರವಾದ ಅಥವಾ ಗೊಂದಲ ಉಂಟುಮಾಡುವ ವಿಚಾರಗಳನ್ನು ವಿವರಿಸುವಾಗ, ಪ್ರತಿಯೊಂದು ವಿಚಾರವನ್ನೂ ಮೂರು ವಿಭಿನ್ನ ರೀತಿಗಳಲ್ಲಿ ವಿವರಿಸಲು ಪ್ರಯತ್ನಿಸಿ. ಪ್ರತಿಬಾರಿಯೂ ಬೇರೆ ವಿಧಾನವನ್ನು ಅನುಸರಿಸಿ.
ಮೊದಲನೆಯ ಬಾರಿ ಅತ್ಯಂತ ಸರಳವಾಗಿ ವಿವರಿಸಿ. ಎರಡನೆಯ ಬಾರಿ ರೂಪಕಗಳನ್ನು ಬಳಸಿ ವಿವರಿಸಿ. ಮೂರನೆಯ ಬಾರಿ ಆ ವಿಚಾರವನ್ನು ವಿವರವಾಗಿ ತಿಳಿಸಿ.
ಏಕೆಂದರೆ ಪ್ರತಿಯೊಬ್ಬರೂ ಒಂದೇ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದಿಲ್ಲ. ಕೆಲವರಿಗೆ ಸರಳವಾದ ವಿವರಣೆ ಬೇಕಾಗಬಹುದು, ಇನ್ನು ಕೆಲವರಿಗೆ ರೂಪಕಗಳ ಮೂಲಕ ವಿವರಿಸಿದಾಗ ಚೆನ್ನಾಗಿ ಅರ್ಥವಾಗಬಹುದು. ಮತ್ತಷ್ಟು ಜನರಿಗೆ ವಿವರವಾದ ವಿವರಣೆ ಅಗತ್ಯವಾಗಬಹುದು.
ಮೂರನೆಯ ನಿಯಮ: ಜನರು ಎಲ್ಲಕ್ಕಿಂತ ಹೆಚ್ಚಾಗಿ ನೆನಪಿಟ್ಟುಕೊಳ್ಳಬೇಕೆಂದು ನೀವು ಬಯಸುವ ವಿಚಾರಕ್ಕೆ ಸಂಬಂಧಿಸಿದ್ದು. ನೀವು ಹೇಳುವ ಎಲ್ಲ ವಿಚಾರಗಳ ಪೈಕಿ, ಜನರು ನಿಜವಾಗಿಯೂ ನೆನಪಿನಲ್ಲಿ ಉಳಿಸಿಕೊಳ್ಳಬೇಕು ಎಂದು ಬಯಸುವ ಒಂದೇ ಒಂದು ಮುಖ್ಯ ವಿಚಾರ ಯಾವುದು? ಆ ವಿಚಾರವನ್ನು ನಿಮ್ಮ ಭಾಷಣದುದ್ದಕ್ಕೂ ಮೂರು ಬಾರಿ ಹೇಳಿ. ಮೊದಲನೆಯ ಬಾರಿ ಭಾಷಣದ ಆರಂಭದಲ್ಲಿ, ಎರಡನೆಯ ಬಾರಿ ಮಧ್ಯದಲ್ಲಿ ಮತ್ತು ಮೂರನೆಯ ಬಾರಿ ಕೊನೆಯಲ್ಲಿ.
ಅಲನ್ ಆಲ್ಡಾ ಅವರ ಮಾತುಗಳನ್ನು ಗಮನವಿಟ್ಟು ಕೇಳಬೇಕು. ಏಕೆಂದರೆ ಅವರು ಸಾಮಾನ್ಯವಾಗಿ ನೀಡಲಾಗುವ ಸಾಂಪ್ರದಾಯಿಕ ಸಲಹೆಗಳನ್ನು ಮಾತ್ರ ಅವಲಂಬಿಸುವುದಿಲ್ಲ. ನಿಮ್ಮ ಮಾತಿನ ವೇಗವನ್ನು ಬದಲಾಯಿಸಿ, ಧ್ವನಿಯ ಏರಿಳಿತವನ್ನು ಬದಲಿಸಿ, ಒಂದು ಹಾಸ್ಯದೊಂದಿಗೆ ಭಾಷಣವನ್ನು ಆರಂಭಿಸಿ ಎಂದು ಮುಂತಾದ ಸಲಹೆಗಳನ್ನು ಅವರು ನೀಡುವುದಿಲ್ಲ. ಏಕೆಂದರೆ ಇಂತಹ ನಿಯಮಗಳನ್ನು ಯಾಂತ್ರಿಕವಾಗಿ ಅನುಸರಿಸುವುದರಿಂದ ಭಾಷಣವೇ ಅನೇಕ ಬಾರಿ ನೀರಸವಾಗಬಹುದು.
ನಿಮ್ಮ ಮಾತಿನ ವೇಗ ಮತ್ತು ಹಾವಭಾವಗಳು ನೀವು ಯಾರು, ನೀವು ವಿವರಿಸುತ್ತಿರುವ ವಿಷಯ ಯಾವುದು ಮತ್ತು ನೀವು ಮಾತನಾಡುತ್ತಿರುವ ಸ್ಥಳ ಹಾಗೂ ಪರಿಸರ ಹೇಗಿದೆ ಎನ್ನುವುದಕ್ಕೆ ಅನುಗುಣವಾಗಿ ಸಹಜವಾಗಿ ಬದಲಾಗಬೇಕು.
ಹಾಗಾದರೆ, ನೆನಪಿಡಿ:
* ಮೂರು ಪ್ರಮುಖ ವಿಚಾರಗಳು.
* ಪ್ರತಿಯೊಂದು ವಿಚಾರವನ್ನು ವಿವರಿಸುವ ಮೂರು ವಿಭಿನ್ನ ವಿಧಾನಗಳು.
* ಅತ್ಯಂತ ಮುಖ್ಯವಾದ ವಿಚಾರವನ್ನು ಮೂರು ಬಾರಿ ಪುನರುಚ್ಚರಿಸುವುದು.
ಇವೆಲ್ಲವನ್ನೂ ನೀವು ನಿಜವಾಗಿಯೂ ನೋಡುತ್ತಿರುವ ಮತ್ತು ಕೇಳಿಸಿಕೊಳ್ಳುತ್ತಿರುವ ಜನರ ಅಗತ್ಯಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು. ಏಕೆಂದರೆ, ಒಂದು ವಿಚಾರವನ್ನು ಹೇಳುವುದು ಮಾತ್ರ ಮುಖ್ಯವಲ್ಲ; ಆ ವಿಚಾರವನ್ನು ಎದುರಿನವರು ನಿಜವಾಗಿಯೂ ಅರ್ಥಮಾಡಿಕೊಳ್ಳುವಂತೆ ಹೇಳುವುದೇ ಮುಖ್ಯ.
**********************************

