ದುಃಖಕ್ಕೆ ಎರಡು ಬಾರಿ ಗೆಲ್ಲುವ ಅವಕಾಶ ನೀಡಬಾರದು

ದುಃಖವು ಮೊದಲ ಬಾರಿಗೆ ಏನನ್ನು ಕಸಿದುಕೊಂಡಿತೋ, ಅದನ್ನು ಕಸಿದುಕೊಂಡಿತು. ಆದರೆ ಅದರ ನಂತರ ನಿಮ್ಮ ಬದುಕಿನ ಸಂತೋಷವನ್ನೂ ಕಸಿದುಕೊಳ್ಳಲು ನೀವು ಅವಕಾಶ ಮಾಡಿಕೊಟ್ಟರೆ, ಅದು ನಿಮ್ಮ ಬದುಕನ್ನೂ ಕಸಿದುಕೊಂಡಂತೆಯೇ ಅಲ್ಲವೇ? ಆದ್ದರಿಂದ, ದುಃಖಕ್ಕೆ ಎರಡು ಬಾರಿ ಗೆಲ್ಲುವ ಅವಕಾಶವನ್ನು ನಾವು ನೀಡಬಾರದು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಒಂದು ರಾತ್ರಿ ಆಲ್ಬರ್ಟ್ ಕಾಮು ಮತ್ತು ಸಿಮೋನ್ ದ ಬೋವಾ ಒಟ್ಟಿಗೆ ಡ್ರಿಂಕ್ಸ್ ಮಾಡುತ್ತಾ ಕುಳಿತಿದ್ದರು. ಆಗ ಸಿಮೋನ್, ಕಾಮುವನ್ನು ಪ್ರಶ್ನೆ ಮಾಡುತ್ತಾಳೆ :

“ದುಃಖದಿಂದ ತುಂಬಿರುವ ಈ ಜಗತ್ತಿನಲ್ಲಿ ಯಾರಾದರೂ ಹೇಗೆ ಸಂತೋಷವಾಗಿರಲು ಸಾಧ್ಯ? ಲಕ್ಷಾಂತರ ಜನರು ಕೊಲ್ಲಲ್ಪಡುತ್ತಿರುವಾಗ, ದೌರ್ಜನ್ಯಕ್ಕೆ ಒಳಗಾಗುತ್ತಿರುವಾಗ, ಜನರು ಹೇಗೆ ನಗಬಲ್ಲರು, ಡ್ರಿಂಕ್ಸ್ ಮಾಡಬಲ್ಲರು ಮತ್ತು ಡಾನ್ಸ್ ಮಾಡಬಲ್ಲರು?”

ಆಗ ಕಾಮು ಉತ್ತರಿಸುತ್ತಾನೆ,
“ಸಂತೋಷವನ್ನು ನಿರಾಕರಿಸುವುದರಿಂದ ಜಗತ್ತಿನ ದುಃಖವೇನೂ ಕಡಿಮೆಯಾಗುವುದಿಲ್ಲ. ಬದಲಿಗೆ, ಅದು ನಿಮ್ಮ ದುಃಖವನ್ನೂ ಜಗತ್ತಿನ ಒಟ್ಟು ದುಃಖಕ್ಕೆ ಸೇರಿಸುತ್ತದೆ.”

2005ರಲ್ಲಿ ಕವಿ ಜ್ಯಾಕ್ ಗಿಲ್ಬರ್ಟ್ ‘A Brief for the Defense’ ಎನ್ನುವ ಕವಿತೆಯನ್ನು ರಚಿಸಿದ. ಅದರಲ್ಲಿ ಅವನು ಸಂತೋಷವಾಗಿರುವ ಅಪರಾಧಕ್ಕಾಗಿ ಆರೋಪಿಸಲ್ಪಟ್ಟ ಒಬ್ಬ ವ್ಯಕ್ತಿಯನ್ನು ಕಲ್ಪಿಸಿಕೊಳ್ಳುತ್ತಾನೆ.

ಈ ಜಗತ್ತಿನಲ್ಲಿ ಕ್ಷಾಮವಿದೆ, ಚಿತ್ರಹಿಂಸೆಯಿದೆ, ನೀವು ಎಂದಿಗೂ ನೋಡಲಾರದ ದೂರದ ಪ್ರದೇಶಗಳಲ್ಲಿ ಮಕ್ಕಳು ಸಾಯುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿರುವಾಗ ನೀವು ನಗಲು ಹೇಗೆ ಧೈರ್ಯ ಮಾಡುತ್ತೀರಿ? ರಾತ್ರಿ ನೆಮ್ಮದಿಯಿಂದ ಹೇಗೆ ನಿದ್ರಿಸಬಲ್ಲಿರಿ? ಕಾಮುವಿನಂತೆಯೇ ಗಿಲ್ಬರ್ಟ್ ಕೂಡ ಒಂದು ಪ್ರಶ್ನೆಯನ್ನು ಮುಂದಿಡುತ್ತಾನೆ. ದುಃಖ ಅಸ್ತಿತ್ವದಲ್ಲಿದೆ ಎಂಬ ಕಾರಣಕ್ಕೆ ನೀವು ನಿಮ್ಮ ಸಂತೋಷವನ್ನೇ ಕಡಿಮೆ ಮಾಡಿಕೊಂಡರೆ, ಆ ದುಃಖವು ಒಂದರ ಬದಲಿಗೆ ಎರಡು ನಷ್ಟಗಳನ್ನು ಉಂಟುಮಾಡಿದಂತಾಗುವುದಿಲ್ಲವೇ?

ದುಃಖವು ಮೊದಲ ಬಾರಿಗೆ ಏನನ್ನು ಕಸಿದುಕೊಂಡಿತೋ, ಅದನ್ನು ಕಸಿದುಕೊಂಡಿತು. ಆದರೆ ಅದರ ನಂತರ ನಿಮ್ಮ ಬದುಕಿನ ಸಂತೋಷವನ್ನೂ ಕಸಿದುಕೊಳ್ಳಲು ನೀವು ಅವಕಾಶ ಮಾಡಿಕೊಟ್ಟರೆ, ಅದು ನಿಮ್ಮ ಬದುಕನ್ನೂ ಕಸಿದುಕೊಂಡಂತೆಯೇ ಅಲ್ಲವೇ?

ಆದ್ದರಿಂದ, ದುಃಖಕ್ಕೆ ಎರಡು ಬಾರಿ ಗೆಲ್ಲುವ ಅವಕಾಶವನ್ನು ನಾವು ನೀಡಬಾರದು.

ಗಿಲ್ಬರ್ಟ್ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗುತ್ತಾನೆ. ಬಹುತೇಕ ಜನರಿಗೆ ಒಪ್ಪಿಕೊಳ್ಳಲು ಕಷ್ಟವಾಗಬಹುದಾದ ಮಾತೊಂದನ್ನು ಅವರು ಹೇಳುತ್ತಾನೆ. ಅವನ ಪ್ರಕಾರ, ಸಂತೋಷವನ್ನು ಅನುಭವಿಸುವುದು ಕೇವಲ ಅನುಮತಿಸಲ್ಪಟ್ಟ ಸಂಗತಿಯಲ್ಲ; ಸಂತೋಷವನ್ನು ಅನುಭವಿಸುವುದೂ ನಮ್ಮ ಕರ್ತವ್ಯವೇ ಆಗಿದೆ.

ಜಗತ್ತಿನಲ್ಲಿ ಇಷ್ಟೊಂದು ಭೀಕರತೆ ಇರುವಾಗ ಸಂತೋಷವನ್ನು ನಿರಾಕರಿಸುವುದೆಂದರೆ, ಆ ಭೀಕರತೆಯೇ ನಮ್ಮ ಬದುಕಿನ ನಿಯಮಗಳನ್ನು ನಿರ್ಧರಿಸಲು ಅವಕಾಶ ಮಾಡಿಕೊಟ್ಟಂತೆ. ಜಗತ್ತಿನ ಬಹುಭಾಗ ಕತ್ತಲೆಯಿಂದ ಆವೃತವಾಗಿರುವಾಗ, ನಮ್ಮ ಸುತ್ತಲೂ ಸ್ವಲ್ಪವಾದರೂ ಬೆಳಕನ್ನು ಹರಿಸುವ ಜವಾಬ್ದಾರಿ ನಮ್ಮ ಮೇಲೆಯೇ ಇನ್ನಷ್ಟು ಹೆಚ್ಚಾಗುತ್ತದೆ.

ಗಿಲ್ಬರ್ಟ್ ಮತ್ತು ಕಾಮು ಹೇಳಲು ಹೊರಟಿರುವುದು ದುಃಖವನ್ನು ನಿರ್ಲಕ್ಷಿಸಬೇಕು ಎಂದಲ್ಲ. ದುಃಖದಲ್ಲಿರುವವರಿಗೆ ನೆರವಾಗಲು ಪ್ರಯತ್ನಿಸಬಾರದು ಎಂದೂ ಅಲ್ಲ. ಅವರು ಹೇಳುತ್ತಿರುವುದು ಇಷ್ಟೇ:

ದುಃಖಕ್ಕೆ ಸಂಪೂರ್ಣವಾಗಿ ಶರಣಾಗುವುದರಿಂದ ಆ ದುಃಖವು ಇನ್ನಷ್ಟು ತೀವ್ರವಾಗುತ್ತದೆ.

ಜಗತ್ತಿನಲ್ಲಿ ದುಃಖವಿದೆ ಎಂಬ ಕಾರಣಕ್ಕೆ ನಮ್ಮ ಸಂತೋಷವನ್ನೂ ಬಲಿಕೊಡುವ ಅಗತ್ಯವಿಲ್ಲ. ಬದಲಿಗೆ, ಆ ದುಃಖದ ನಡುವೆಯೂ ಸಂತೋಷವನ್ನು ಕಂಡುಕೊಳ್ಳುವುದು, ಬದುಕನ್ನು ಪ್ರೀತಿಸುವುದು ಮತ್ತು ಇತರರ ಬದುಕಿಗೆ ಬೆಳಕಾಗುವುದು ಅತ್ಯಂತ ಮಹತ್ವದ ಸಂಗತಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.