ಧ್ಯಾನ, ಗುರುಗಳು, ಆಚರಣೆಗಳು ಮತ್ತು ವಿವಿಧ ಸಾಧನಾ ವಿಧಾನಗಳು ನಮ್ಮ ಜೀವನದಲ್ಲಿ ಅತ್ಯಂತ ಮೌಲ್ಯಯುತವಾದವು. ಅವು ಕತ್ತಲೆಯ ಸಮಯದಲ್ಲಿ ನಮ್ಮ ದಾರಿಯನ್ನು ಬೆಳಗಿಸುತ್ತವೆ. ಆದರೆ ಅವೇ ಅಂತಿಮ ಗುರಿಯಲ್ಲ. .. । ಡಾ. ಸಹನಾ ಪ್ರಿಯದರ್ಶಿನಿ
ಒಂದು ದಿನ ಒಬ್ಬ ಯುವ ಶಿಷ್ಯನು ತನ್ನ ಝೆನ್ ಗುರುಗಳನ್ನು ಕೇಳಿದನು, “ಗುರುಗಳೇ, ನನಗೆ ಜ್ಞಾನೋದಯ ಯಾವಾಗ ಆಗುತ್ತದೆ?”
ಗುರುಗಳು ಯಾವುದೇ ಉತ್ತರ ನೀಡಲಿಲ್ಲ.ಅವರು ಒಂದು ಪುಟ್ಟ ಮೇಣದ ಬತ್ತಿಯನ್ನು ಹಚ್ಚಿದರು. ಕತ್ತಲೆಯ ಕೋಣೆಯಲ್ಲಿ ಅದರ ಜ್ವಾಲೆ ಮೃದುವಾಗಿ ಹೊಳೆಯತೊಡಗಿತು.
ಗುರುಗಳು ಶಿಷ್ಯನನ್ನು ಕೇಳಿದರು, “ಈ ಮೇಣದ ಬತ್ತಿ ಏನು ಮಾಡುತ್ತಿದೆ?”
ಶಿಷ್ಯನು ಉತ್ತರಿಸಿದನು, “ಇದು ಬೆಳಕನ್ನು ನೀಡುತ್ತಿದೆ.”
ಗುರುಗಳು ತಲೆಯಾಡಿಸಿದರು. ಇಬ್ಬರೂ ಇಡೀ ರಾತ್ರಿ ಮೌನವಾಗಿ ಕುಳಿತರು. ಸ್ವಲ್ಪ ಹೊತ್ತಿನ ನಂತರ ಮುಂಜಾವಿನ ಮೊದಲ ಕಿರಣಗಳು ಕಿಟಕಿಯ ಮೂಲಕ ಕೋಣೆಯೊಳಗೆ ಹರಿಯತೊಡಗಿದವು. ನಿಧಾನವಾಗಿ ಇಡೀ ಕೋಣೆ ಬೆಳಕಿನಿಂದ ತುಂಬಿತು. ಗುರುಗಳು ಮೃದುವಾಗಿ ಮೇಣದ ಬತ್ತಿಯನ್ನು ಊದಿ ಆರಿಸಿದರು.
ಶಿಷ್ಯನು ಆಶ್ಚರ್ಯದಿಂದ ಕೇಳಿದನು, “ಗುರುಗಳೇ, ಅದನ್ನು ಏಕೆ ಆರಿಸಿದಿರಿ? ಅದು ಇನ್ನೂ ಹೊತ್ತಿ ಉರಿಯುತ್ತಿತ್ತಲ್ಲ.”
ಗುರುಗಳು ಮುಗುಳ್ನಗುತ್ತಾ ಕೇಳಿದರು, “ಆ ಮೇಣದ ಬತ್ತಿ ತಪ್ಪು ಮಾಡಿತೇ?”
“ಇಲ್ಲ.”
“ಅದು ತನ್ನ ಕೆಲಸದಲ್ಲಿ ವಿಫಲವಾಯಿತೇ?”
“ಇಲ್ಲ.”
“ಹಾಗಾದರೆ ಈಗ ಅದು ಏಕೆ ಅಗತ್ಯವಿಲ್ಲ?”
ಶಿಷ್ಯನು ಕೋಣೆಯನ್ನು ತುಂಬಿದ ಸೂರ್ಯನ ಬೆಳಕಿನತ್ತ ನೋಡಿದನು. ಅವನಿಗೆ ಉತ್ತರ ಸಿಕ್ಕಿತು.
ಗುರುಗಳು ನಿಧಾನವಾಗಿ ಹೇಳಿದರು, “ಪ್ರತಿಯೊಂದು ಸಾಧನೆಯೂ ಈ ಮೇಣದ ಬತ್ತಿಯಂತೆಯೇ. ನಿನ್ನೊಳಗೆ ಇನ್ನೂ ದೊಡ್ಡ ಬೆಳಕು ಉದಯಿಸುವವರೆಗೆ ಅದು ನಿನಗೆ ದಾರಿತೋರಿಸುತ್ತದೆ.” “ಧ್ಯಾನ, ಪುಸ್ತಕಗಳು, ಗುರುಗಳು, ಇವೆಲ್ಲವೂ ಅಮೂಲ್ಯ. ಆದರೆ ಎಂದಿಗೂ ಮೇಣದ ಬತ್ತಿಯನ್ನೇ ಸೂರ್ಯೋದಯ ಎಂದು ತಪ್ಪಾಗಿ ಭಾವಿಸಬೇಡ.”
ಶಿಷ್ಯನು ಕೇಳಿದನು, “ಹಾಗಾದರೆ ನಾನು ಸಾಧನೆಯನ್ನು ನಿಲ್ಲಿಸಬೇಕೇ?”
ಗುರುಗಳು ನಗುತ್ತಾ ಹೇಳಿದರು, “ಇಲ್ಲ. ಮೇಣದ ಬತ್ತಿ ಮುಂಜಾವನ್ನು ಸೃಷ್ಟಿಸುವುದಿಲ್ಲ. ಆದರೆ ರಾತ್ರಿ ಕಳೆಯುವವರೆಗೆ ಅದು ನಿನಗೆ ನಿಷ್ಠೆಯಿಂದ ಜೊತೆಗಿರುತ್ತದೆ.”
ಶಿಷ್ಯನು ಗುರುಗಳಿಗೆ ಆಳವಾಗಿ ನಮಸ್ಕರಿಸಿದ. ಆ ದಿನದಿಂದ ಅವನು ಜ್ಞಾನೋದಯವನ್ನು ಬೆನ್ನಟ್ಟುವುದನ್ನು ನಿಲ್ಲಿಸಿದ. ಬದಲಾಗಿ, ತಾಳ್ಮೆಯಿಂದ ತನ್ನ ಪಯಣವನ್ನು ಮುಂದುವರಿಸಿದ.
*****************
ಧ್ಯಾನ, ಗುರುಗಳು, ಆಚರಣೆಗಳು ಮತ್ತು ವಿವಿಧ ಸಾಧನಾ ವಿಧಾನಗಳು ನಮ್ಮ ಜೀವನದಲ್ಲಿ ಅತ್ಯಂತ ಮೌಲ್ಯಯುತವಾದವು. ಅವು ಕತ್ತಲೆಯ ಸಮಯದಲ್ಲಿ ನಮ್ಮ ದಾರಿಯನ್ನು ಬೆಳಗಿಸುತ್ತವೆ. ಆದರೆ ಅವೇ ಅಂತಿಮ ಗುರಿಯಲ್ಲ. ಸತ್ಯವನ್ನು ಕೇವಲ ವಿಧಾನಗಳ ಮೂಲಕ ಪಡೆಯಲು ಸಾಧ್ಯವಿಲ್ಲ. ಅದನ್ನು ನೇರವಾಗಿ ಅನುಭವಿಸಬೇಕು. ಸಾಧನೆ ನಮ್ಮನ್ನು ಬೆಳಕಿನೆಡೆಗೆ ಕರೆದೊಯ್ಯಲಿ; ಆದರೆ ಸಾಧನೆಯೇ ನಮ್ಮ ಬಂಧನವಾಗದಿರಲಿ!.
೧. ಸಂಗೀತ ಕಲಿಯುವುದು
ಒಬ್ಬ ವಿದ್ಯಾರ್ಥಿ ಪ್ರತಿದಿನ ಸ್ವರಾಭ್ಯಾಸ ಮಾಡುತ್ತಾನೆ.
ಮೇಣದ ಬತ್ತಿ: ತಂತ್ರ ಮತ್ತು ಅಭ್ಯಾಸ.
ಸೂರ್ಯೋದಯ: ಸಂಗೀತವನ್ನು ಸ್ವಾತಂತ್ರ್ಯದಿಂದ ಮತ್ತು ಆನಂದದಿಂದ ಅಭಿವ್ಯಕ್ತಿಸುವುದು.
೨. ಪರೀಕ್ಷೆಗೆ ಓದುವುದು
ಒಬ್ಬ ವಿದ್ಯಾರ್ಥಿ ಅನೇಕ ವಿಷಯಗಳನ್ನು ಕಂಠಪಾಠ ಮಾಡುತ್ತಾನೆ.
ಮೇಣದ ಬತ್ತಿ: ಮಾಹಿತಿ.
ಸೂರ್ಯೋದಯ: ನಿಜವಾದ ಅರ್ಥೈಸುವಿಕೆ ಮತ್ತು ಜ್ಞಾನ.
೩. ಧ್ಯಾನ
ಒಬ್ಬ ವ್ಯಕ್ತಿ “ಪರಿಪೂರ್ಣ ಧ್ಯಾನದ ವಿಧಾನವನ್ನೇ ಹುಡುಕುತ್ತಾ ಕಾಲ ಕಳೆಯುತ್ತಾನೆ.
ಮೇಣದ ಬತ್ತಿ: ವಿಧಾನ.
ಸೂರ್ಯೋದಯ: ಸಹಜವಾಗಿ ಜಾಗೃತಿಯಿಂದ ಬದುಕುವ ಶಾಂತ ಮನಸ್ಸು.
೪. ವ್ಯಕ್ತಿತ್ವ ವಿಕಸನ
ಒಬ್ಬ ವ್ಯಕ್ತಿ ನೂರಾರು ಸ್ವ-ವಿಕಾಸದ ಪುಸ್ತಕಗಳನ್ನು ಓದುತ್ತಾನೆ.ಆದರೆ ತನ್ನ ಜೀವನದಲ್ಲಿ ಯಾವುದನ್ನೂ ಅನುಸರಿಸುವುದಿಲ್ಲ.
ಮೇಣದ ಬತ್ತಿ: ಜ್ಞಾನವನ್ನು ಸಂಗ್ರಹಿಸುವುದು.
ಸೂರ್ಯೋದಯ: ಕಲಿತದ್ದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು.
“ಗುರಿ ತಲುಪಲು ಮೆಟ್ಟಿಲುಗಳನ್ನು ಹತ್ತುತ್ತೇವೆ ; ಆದರೆ ತಲುಪಿದ ಮೇಲೂ ಮೆಟ್ಟಿಲುಗಳನ್ನೇ ಪೂಜಿಸುತ್ತಾ ನಿಲ್ಲಬಾರದು !”
(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

