ಭಾವನೆಗಳ ಪರಿಣಾಮ

ಸ್ಪಿನೋಜಾನ ಪ್ರಕಾರ, ಪ್ರತಿಯೊಂದು ಭಾವನೆಯೂ ಎರಡು ಕೆಲಸಗಳಲ್ಲಿ ಒಂದನ್ನು ಮಾಡುತ್ತದೆ. ಅದು ಒಂದೋ ನಮ್ಮ ಕಾರ್ಯಶಕ್ತಿಯನ್ನು ಹೆಚ್ಚಿಸುತ್ತದೆ, ಇಲ್ಲವೇ ಅದನ್ನು ಕುಗ್ಗಿಸುತ್ತದೆ | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಇತರರನ್ನು ನಿಂದಿಸುವವರು, ಹಿಂಸಿಸುವವರು ಅಥವಾ ಮಾನಸಿಕವಾಗಿ ಪೀಡಿಸುವವರು, ನೀವು ದುಃಖದಲ್ಲಿರಬೇಕು, ಭಯದಲ್ಲಿರಬೇಕು, ಆತ್ಮವಿಶ್ವಾಸ ಕಳೆದುಕೊಂಡಿರಬೇಕು ಮತ್ತು ಆತಂಕದಿಂದ ಬಳಲುತ್ತಿರಬೇಕು ಎಂದು ಏಕೆ ಬಯಸುತ್ತಾರೆ? ಕಠಿಣ ಶಿಸ್ತು ಹೇರುವ ಶಾಲೆಗಳು, ಕೆಟ್ಟ ಧೋರಣೆಯ ಮೇಲಧಿಕಾರಿಗಳು ಅಥವಾ ಧಾರ್ಮಿಕ ಪಂಥಗಳಂತಹ ಜನರನ್ನು ನಿಯಂತ್ರಿಸುವ ಸಂಸ್ಥೆಗಳು ಭಯ, ಅಪರಾಧಪ್ರಜ್ಞೆ ಮತ್ತು ನಿರಂತರವಾದ ಮಾನಸಿಕ ಯಾತನೆಯನ್ನೇ ಆಧಾರವಾಗಿಟ್ಟುಕೊಂಡು ಏಕೆ ಕಾರ್ಯನಿರ್ವಹಿಸುತ್ತವೆ?

ಇದಕ್ಕೆ ಸುಮಾರು 350 ವರ್ಷಗಳ ಹಿಂದೆಯೇ ಸ್ಪಿನೋಜಾ ಒಂದು ಉತ್ತರವನ್ನು ನೀಡಿದ್ದ.

ಸ್ಪಿನೋಜಾನ ಪ್ರಕಾರ, ಪ್ರತಿಯೊಂದು ಭಾವನೆಯೂ ಎರಡು ಕೆಲಸಗಳಲ್ಲಿ ಒಂದನ್ನು ಮಾಡುತ್ತದೆ. ಅದು ಒಂದೋ ನಮ್ಮ ಕಾರ್ಯಶಕ್ತಿಯನ್ನು ಹೆಚ್ಚಿಸುತ್ತದೆ, ಇಲ್ಲವೇ ಅದನ್ನು ಕುಗ್ಗಿಸುತ್ತದೆ. ನಮ್ಮ ಕಾರ್ಯಶಕ್ತಿಯನ್ನು ಹೆಚ್ಚಿಸುವ ಭಾವನೆಗಳನ್ನು ಅವನು ಆನಂದದ ಭಾವನೆಗಳು ಎಂದು ಕರೆದ. ಅದನ್ನು ಕುಗ್ಗಿಸುವ ಭಾವನೆಗಳನ್ನು ದುಃಖದ ಭಾವನೆಗಳು ಎಂದು ಗುರುತಿಸಿದ. ಆದ್ದರಿಂದ ಭಯವೂ ಒಂದು ದುಃಖದ ಭಾವನೆ; ಅಪರಾಧಪ್ರಜ್ಞೆ ಮತ್ತು ದ್ವೇಷವೂ ಹಾಗೆಯೇ. ಏಕೆಂದರೆ ಇವೆಲ್ಲವೂ ನಮ್ಮ ಕಾರ್ಯಶಕ್ತಿಯನ್ನು ಹೀರಿಕೊಳ್ಳುತ್ತವೆ.

ಸೋನಿಯಾ ಎಂಬ ಮಹಿಳೆಯನ್ನು ಕಲ್ಪಿಸಿಕೊಳ್ಳಿ. ಅವಳು ಭಯದ ವಾತಾವರಣದಲ್ಲಿ ನಡೆಯುವ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಾಳೆ. ಅವಳ ವಿಭಾಗವನ್ನು ಮುಚ್ಚುವ ಸಾಧ್ಯತೆಯಿದೆ ಮತ್ತು ಅವಳ ಕಾರ್ಯಕ್ಷಮತೆಯ ಮೌಲ್ಯಮಾಪನವೂ ತೃಪ್ತಿಕರವಾಗಿಲ್ಲ ಎಂದು ಅವಳಿಗೆ ತಿಳಿಸಲಾಗುತ್ತದೆ. ಹಾಗಾಗಿ, ಕನಿಷ್ಠ ಈ ಕೆಲಸವಾದರೂ ಉಳಿದಿದೆಯಲ್ಲ ಎಂದು ಅವಳು ಕೃತಜ್ಞಳಾಗಿರಬೇಕು ಎಂಬ ಸಂದೇಶವನ್ನು ನೀಡಲಾಗುತ್ತದೆ.

ಅವಳು ಅಲ್ಲಿಯೇ ಕೆಲಸ ಮುಂದುವರಿಸಬೇಕೆಂದು ಯಾರೂ ಬಲವಂತ ಮಾಡುತ್ತಿಲ್ಲ. ಆದರೂ, ಸೋನಿಯಾ ಈಗ ತಡರಾತ್ರಿಯವರೆಗೂ ಕೆಲಸ ಮಾಡುತ್ತಾಳೆ. ಸಭೆಗಳಲ್ಲಿ ಏನನ್ನೂ ಮಾತನಾಡುವುದಿಲ್ಲ. ತನಗೆ ಹೇಳಿದ್ದನ್ನೆಲ್ಲ ಚಾಚೂತಪ್ಪದೆ ಮಾಡುತ್ತಾಳೆ. ಏಕೆಂದರೆ, ಭಯಭೀತಳಾದ ವ್ಯಕ್ತಿ ತನ್ನ ಮೇಲೆಯೇ ತಾನೇ ನಿಯಂತ್ರಣ ಹೇರಿಕೊಳ್ಳುತ್ತಾಳೆ.

ದುಃಖವು ರಾಜಕೀಯ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಸ್ಪಿನೋಜಾ ಭಾವಿಸಿದ್ದಕ್ಕೆ ಇದೇ ಕಾರಣ. ಏಕೆಂದರೆ, ದಬ್ಬಾಳಿಕೆಯ ಆಡಳಿತದ ಅತ್ಯಂತ ದೊಡ್ಡ ರಹಸ್ಯವೆಂದರೆ ಜನರನ್ನು ಸದಾ ಭಯದಲ್ಲಿಟ್ಟುಕೊಳ್ಳುವುದು ಮತ್ತು ಆ ಭಯಕ್ಕೆ ಧರ್ಮದ ರೂಪವನ್ನು ಕೊಡುವುದು ಎಂದು ಅವನು ವಾದಿಸುತ್ತಾನೆ.

ಸುಮಾರು 300 ವರ್ಷಗಳ ನಂತರ, ತತ್ವಜ್ಞಾನಿ ಗಿಲ್ಲೆಸ್ ಡೆಲ್ಯೂಜ್ ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. . ಅವನ ಪ್ರಕಾರ, ನಿರಂಕುಶ ಆಡಳಿತಗಾರನಿಗೆ ದುಃಖದಲ್ಲಿರುವ ಜನರು ಬೇಕು; ಏಕೆಂದರೆ ದುಃಖದಲ್ಲಿರುವ ಜನರೇ ತಮ್ಮನ್ನು ಆಳುವ ಒಬ್ಬ ನಿರಂಕುಶ ವ್ಯಕ್ತಿಯನ್ನು ಹುಡುಕಿಕೊಂಡು ಹೋಗುತ್ತಾರೆ.

ಹೀಗಾಗಿ, ಸ್ಪಿನೋಜಾ ನಮಗೆ ಇತರರೊಂದಿಗಿನ ಸಂಬಂಧಗಳನ್ನು ಮತ್ತು ವಿವಿಧ ಸಂಸ್ಥೆಗಳನ್ನು ಅರ್ಥಮಾಡಿಕೊಳ್ಳಲು ಒಂದು ಸರಳವಾದ ಪರೀಕ್ಷೆಯನ್ನು ನೀಡುತ್ತಾನೆ.

ಈ ವ್ಯಕ್ತಿ ಅಥವಾ ಈ ವ್ಯವಸ್ಥೆ ನನ್ನ ಕಾರ್ಯಶಕ್ತಿಯನ್ನು ಹೆಚ್ಚಿಸುತ್ತಿದೆಯೇ, ಅಥವಾ ನನ್ನಿಂದ ಕಾರ್ಯನಿರ್ವಹಿಸುವ ಶಕ್ತಿಯನ್ನೇ ಕಸಿದುಕೊಳ್ಳುತ್ತಿದೆಯೇ? ಏಕೆಂದರೆ, ನಿಮ್ಮನ್ನು ನಿಯಂತ್ರಿಸಲು ಬಯಸುವ ಯಾವುದಾದರೂ ವ್ಯಕ್ತಿ ಅಥವಾ ವ್ಯವಸ್ಥೆ, ನೀವು ಶಕ್ತಿಹೀನರಾಗಿರುವುದನ್ನೇ ಯಾವಾಗಲೂ ಬಯಸುತ್ತದೆ.

************************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.