ಬಂಡಾಯಗಾರನ ಗುಣಲಕ್ಷಣಗಳು ಬಹು ಆಯಾಮಗಳನ್ನು ಹೊಂದಿವೆ. ಓಶೋ ತಮ್ಮ “ದಿ ರೆಬೆಲ್” ಕೃತಿಯಲ್ಲಿ ಬಂಡಾಯಗಾರನ ಮೂರು ಪ್ರಮುಖ ಆಯಾಮಗಳನ್ನು ವಿವರಿಸುತ್ತಾರೆ… । ಕನ್ನಡಕ್ಕೆ : ಚಿದಂಬರ ನರೇಂದ್ರ
ಬಂಡಾಯಗಾರನ ಗುಣಲಕ್ಷಣಗಳು ಬಹು ಆಯಾಮಗಳನ್ನು ಹೊಂದಿವೆ. ಓಶೋ ತಮ್ಮ “ದಿ ರೆಬೆಲ್” ಕೃತಿಯಲ್ಲಿ ಬಂಡಾಯಗಾರನ ಮೂರು ಪ್ರಮುಖ ಆಯಾಮಗಳನ್ನು ವಿವರಿಸುತ್ತಾರೆ.
- ಬಂಡಾಯಗಾರನು ತನ್ನ ಸ್ವಂತ ಅನುಭವವನ್ನು ಮಾತ್ರ ನಂಬುತ್ತಾನೆ.
- ಬಂಡಾಯಗಾರನು ಸಾಧ್ಯವಾದಷ್ಟು ಎಚ್ಚರಿಕೆ ಮತ್ತು ಪ್ರಜ್ಞಾಪೂರ್ವಕತೆಯಿಂದ ವರ್ತಮಾನದಲ್ಲಿ ಬದುಕುತ್ತಾನೆ.
- ಬಂಡಾಯಗಾರನಿಗೆ ಇತರರ ಮೇಲೆ ಪ್ರಭುತ್ವ ಸಾಧಿಸುವ ಆಸಕ್ತಿಯಿಲ್ಲ. ಅವನಿಗೆ ಅಧಿಕಾರದ ದಾಹವಿಲ್ಲ.
- ಬಂಡಾಯಗಾರನು ತನ್ನ ಸ್ವಂತ ಅನುಭವವನ್ನು ಮಾತ್ರ ನಂಬುತ್ತಾನೆ.
ಮೊದಲನೆಯದಾಗಿ, ಬಂಡಾಯಗಾರನು ತನ್ನ ಸ್ವಂತ ಅನುಭವವನ್ನು ಹೊರತುಪಡಿಸಿ ಬೇರಾವುದನ್ನೂ ಕುರುಡಾಗಿ ನಂಬುವುದಿಲ್ಲ. ಅವನ ಸತ್ಯ ಅವನದೇ ಆದ ಸತ್ಯ.
ಯಾವುದೇ ಪ್ರವಾದಿ, ಧರ್ಮದೂತ, ಮೋಕ್ಷದಾತ, ಪವಿತ್ರ ಗ್ರಂಥ ಅಥವಾ ಪುರಾತನ ಸಂಪ್ರದಾಯ ಅವನಿಗೆ ಅವನ ಸತ್ಯವನ್ನು ನೀಡಲಾರದು.
ಅವು ಸತ್ಯದ ಬಗ್ಗೆ ಮಾತನಾಡಬಹುದು, ಸತ್ಯದ ಕುರಿತು ದೊಡ್ಡ ದೊಡ್ಡ ಮಾತುಗಳನ್ನಾಡಬಹುದು. ಆದರೆ ಸತ್ಯದ ಬಗ್ಗೆ ತಿಳಿದುಕೊಳ್ಳುವುದು ಬೇರೆ, ಸತ್ಯವನ್ನು ಸ್ವತಃ ಅನುಭವಿಸುವುದೇ ಬೇರೆ.
- ಬಂಡಾಯಗಾರನು ವರ್ತಮಾನದಲ್ಲಿ ಎಚ್ಚರಿಕೆಯಿಂದ ಬದುಕುತ್ತಾನೆ.
ಅವನ ಎರಡನೆಯ ಆಯಾಮವೆಂದರೆ, ಈಗಾಗಲೇ ಕಳೆದುಹೋಗಿರುವ ಭೂತಕಾಲದಲ್ಲಿ ಮತ್ತು ಇನ್ನೂ ಬಂದೇ ಇಲ್ಲದ ಭವಿಷ್ಯದಲ್ಲಿ ಬದುಕದಿರುವುದು.
ಬದಲಾಗಿ, ತನ್ನಿಂದ ಸಾಧ್ಯವಾದಷ್ಟು ಎಚ್ಚರಿಕೆ ಮತ್ತು ಪ್ರಜ್ಞಾಪೂರ್ವಕತೆಯಿಂದ ವರ್ತಮಾನದ ಕ್ಷಣದಲ್ಲಿ ಬದುಕುವುದು.
ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪ್ರತಿಯೊಂದು ಕ್ಷಣವನ್ನೂ ಸಂಪೂರ್ಣ ಅರಿವಿನಿಂದ ಬದುಕುವುದು.
ಸಾಮಾನ್ಯವಾಗಿ ನಾವು ನಿದ್ರೆಯಲ್ಲಿ ನಡೆಯುವವರಂತೆ, ಅರೆಪ್ರಜ್ಞೆಯ ಸ್ಥಿತಿಯಲ್ಲಿ ಬದುಕುತ್ತೇವೆ. ಆದರೆ ಬಂಡಾಯಗಾರನು ಜಾಗೃತಿಯ ಬದುಕನ್ನು ನಡೆಸಲು ಪ್ರಯತ್ನಿಸುತ್ತಾನೆ.
ಜಾಗೃತಿಯೇ ಅವನ ಧರ್ಮ, ಜಾಗೃತಿಯೇ ಅವನ ತತ್ವಶಾಸ್ತ್ರ ಮತ್ತು ಜಾಗೃತಿಯೇ ಅವನ ಜೀವನ ವಿಧಾನ.
- ಬಂಡಾಯಗಾರನಿಗೆ ಅಧಿಕಾರದ ದಾಹವಿಲ್ಲ.
ಅವನ ಮೂರನೆಯ ಆಯಾಮವೆಂದರೆ, ಇತರರ ಮೇಲೆ ಪ್ರಭುತ್ವ ಸಾಧಿಸುವ ಆಸಕ್ತಿ ಅವನಿಗಿರುವುದಿಲ್ಲ. ಅವನಿಗೆ ಅಧಿಕಾರದ ದಾಹವಿಲ್ಲ. ಏಕೆಂದರೆ ಅಧಿಕಾರದ ದಾಹ ಎನ್ನುವುದು ಜಗತ್ತಿನ ಅತ್ಯಂತ ಹೀನವಾದ ಪ್ರವೃತ್ತಿ.
ಅಧಿಕಾರದ ಮೇಲಿನ ದುರಾಸೆಯು ಮಾನವಕುಲವನ್ನು ನಾಶಮಾಡಿದೆ. ಮನುಷ್ಯ ಇನ್ನಷ್ಟು ಸೃಜನಶೀಲನಾಗಲು, ಸುಂದರವಾಗಿ ಬದುಕಲು, ಆರೋಗ್ಯವಂತನಾಗಲು ಮತ್ತು ಪರಿಪೂರ್ಣತೆಯತ್ತ ಸಾಗಲು ಅದು ಅವಕಾಶ ನೀಡಿಲ್ಲ.
ಅಂತಿಮವಾಗಿ, ಅಧಿಕಾರದ ದಾಹವೇ ಸಂಘರ್ಷಗಳಿಗೆ, ಪೈಪೋಟಿಗೆ, ಅಸೂಯೆಗೆ ಮತ್ತು ಕೊನೆಗೆ ಯುದ್ಧಗಳಿಗೆ ಕಾರಣವಾಗುತ್ತದೆ.
ಎಲ್ಲ ಯುದ್ಧಗಳಿಗೂ ಮೂಲಾಧಾರ ಅಧಿಕಾರದ ಮೇಲಿನ ದುರಾಸೆಯೇ.
ಮಾನವ ಇತಿಹಾಸವನ್ನು ಒಮ್ಮೆ ಗಮನಿಸಿ ನೋಡಿ… ಇಡೀ ಮಾನವ ಇತಿಹಾಸವೆನ್ನುವುದು ಯುದ್ಧಗಳ ಇತಿಹಾಸವಲ್ಲದೆ ಮತ್ತೇನೂ ಅಲ್ಲ. ಮನುಷ್ಯನೇ ಮನುಷ್ಯನನ್ನು ಕೊಲ್ಲುತ್ತಾ ಬಂದಿದ್ದಾನೆ. ಕಾರಣಗಳು ಬದಲಾಗಿರಬಹುದು, ಆದರೆ ಕೊಲ್ಲುವ ಪ್ರವೃತ್ತಿ ಮಾತ್ರ ಮುಂದುವರಿದಿದೆ.

