ಕೋಶದೊಳಗಿನ ಚಿಟ್ಟೆ : ಜೆನ್ ಕ್ಷಣ #26

ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕಷ್ಟವನ್ನೂ ಶಾಪವೆಂದು ಭಾವಿಸಬೇಡಿ. ಕೆಲವು ಕಷ್ಟಗಳು ನಮ್ಮನ್ನು ಪರೀಕ್ಷಿಸುತ್ತವೆ, ಕೆಲವು ಪಾಠ ಕಲಿಸುತ್ತವೆ, ಇನ್ನು ಕೆಲವು ನಾವು ಊಹಿಸದ ಎತ್ತರಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ । ಡಾ. ಸಹನಾ ಪ್ರಿಯದರ್ಶಿನಿ

ಒಂದು ವಸಂತದ ಬೆಳಿಗ್ಗೆ, ಒಬ್ಬ ಯುವ ಶಿಷ್ಯನು ತನ್ನ ಝೆನ್ ಗುರುಗಳೊಂದಿಗೆ ಶಾಂತವಾದ ಕಾಡಿನಲ್ಲಿ ನಡೆದು ಹೋಗುತ್ತಿದ್ದನು. ಸ್ವಲ್ಪ ದೂರದಲ್ಲಿ ಮರದ ಕೊಂಬೆಯೊಂದಕ್ಕೆ ತೂಗುತಿದ್ದ ಒಂದು ಸಣ್ಣ ಕೋಶ (Cocoon) ಅವರ ಕಣ್ಣಿಗೆ ಬಿತ್ತು. ಅದರೊಳಗಿಂದ ಒಂದು ಚಿಕ್ಕ ಚಿಟ್ಟೆ ಹೊರಬರಲು ಪ್ರಯತ್ನಿಸುತ್ತಿತ್ತು. ಕೋಶದಲ್ಲಿದ್ದ ಅತಿ ಸಣ್ಣ ರಂಧ್ರದ ಮೂಲಕ ಹೊರಬರಲು ಅದು ಬಹಳ ಕಷ್ಟಪಡುತ್ತಿತ್ತು. ಶಿಷ್ಯನು ಅದನ್ನು ನೋಡಿ ಕನಿಕರಪಟ್ಟ.

“ಗುರುಗಳೇ,” ಎಂದನು, “ಈ ಚಿಟ್ಟೆ ಸಿಕ್ಕಿಹಾಕಿಕೊಂಡಂತಿದೆ. ನಾನು ಇದಕ್ಕೆ ಸಹಾಯ ಮಾಡುತ್ತೇನೆ.”

ಗುರುಗಳು ಏನನ್ನಾದರೂ ಹೇಳುವಷ್ಟರಲ್ಲಿ, ಶಿಷ್ಯನು ತನ್ನ ಚಿಕ್ಕ ಚಾಕುವಿನಿಂದ ಕೋಶದ ಬಾಯಿಯನ್ನು ಕತ್ತರಿಸಿ ದೊಡ್ಡದಾಗಿಸಿದ. ಚಿಟ್ಟೆ ಬಹಳ ಸುಲಭವಾಗಿ ಹೊರಬಂದಿತು. ಆದರೆ ಏನೋ ಸರಿಯಿರಲಿಲ್ಲ. ಅದರ ದೇಹ ಉಬ್ಬಿಕೊಂಡಿತ್ತು. ರೆಕ್ಕೆಗಳು ಚಿಕ್ಕದಾಗಿದ್ದವು. ಮಡಚಿಕೊಂಡಿದ್ದವು.

ಶಿಷ್ಯನು ಬಹಳ ಹೊತ್ತು ಕಾಯುತ್ತಿದ್ದ. ಸ್ವಲ್ಪ ಸಮಯದ ನಂತರ ಅದರ ರೆಕ್ಕೆಗಳು ವಿಸ್ತರಿಸಿ ಅದು ಹಾರುತ್ತದೆ ಎಂದು ಅವನು ಭಾವಿಸಿದ. ಆದರೆ ಅದು ಎಂದಿಗೂ ಆಗಲಿಲ್ಲ. ಆ ಚಿಟ್ಟೆಗೆ ನೆಲದ ಮೇಲೆ ತೆವಳುವುದಷ್ಟೇ ಸಾಧ್ಯವಾಯಿತು. ಅದು ಎಂದಿಗೂ ಹಾರಲಿಲ್ಲ. ಶಿಷ್ಯನು ದುಃಖದಿಂದ ಗುರುಗಳತ್ತ ನೋಡಿದನು. “ಗುರುಗಳೇ, ನಾನು ಸಹಾಯ ಸಹಾಯಮಾಡಲೆಂದು  ಹೀಗೆ ಮಾಡಿದೆ.”

ಗುರುಗಳು ಪ್ರೀತಿಯಿಂದ ತಲೆಯಾಡಿಸಿದರು. “ನಿನ್ನ ಉದ್ದೇಶ ಒಳ್ಳೆಯದೇ. ಆದರೆ ಜ್ಞಾನವಿಲ್ಲದ ಕರುಣೆ ಕೆಲವೊಮ್ಮೆ ಇನ್ನೊಬ್ಬರ ಶಕ್ತಿಯನ್ನೇ ಕಸಿದುಕೊಳ್ಳುತ್ತದೆ.”

ಶಿಷ್ಯನು ಮೌನವಾಗಿ ನಿಂತನು. ಗುರುಗಳು ಮುಂದುವರಿಸಿದರು. “ಆ ಹೋರಾಟ ಚಿಟ್ಟೆಯ ಶತ್ರುವಾಗಿರಲಿಲ್ಲ. ಅದರ ರೆಕ್ಕೆಗಳನ್ನು ಸಿದ್ಧಗೊಳಿಸುತ್ತಿತ್ತು. ಆ ಸಣ್ಣ ರಂಧ್ರದ ಮೂಲಕ ಹೊರಬರಲು ಮಾಡುವ ಪ್ರಯತ್ನವೇ ಅದರ ದೇಹದಲ್ಲಿದ್ದ ಜೀವಶಕ್ತಿಯನ್ನು ರೆಕ್ಕೆಗಳಿಗೆ ಹರಿಯುವಂತೆ ಮಾಡುತ್ತದೆ. ಆ ಹೋರಾಟವಿಲ್ಲದೆ ಅದರ ರೆಕ್ಕೆಗಳು ಎಂದಿಗೂ ಹಾರಲು ಬೇಕಾಗುವಷ್ಟು  ಬಲಿಷ್ಠವಾಗುವುದಿಲ್ಲ.”

ಶಿಷ್ಯನು ನೆಲದ ಮೇಲೆ ತೆವಳುತ್ತಿದ್ದ ಚಿಟ್ಟೆಯನ್ನು ನೋಡಿದನು. ಆ ಕ್ಷಣದಲ್ಲಿ ಅವನಿಗೆ ಒಂದು ಮಹತ್ತರವಾದ ಸತ್ಯ ಅರಿವಾಯಿತು. ಪ್ರತಿಯೊಂದು ಕಷ್ಟವನ್ನೂ ದೂರ ಮಾಡಬೇಕೆಂದಿಲ್ಲ. ಕೆಲವು ಕಷ್ಟಗಳು ನಮ್ಮ ಗುರುಗಳು. ಕೆಲವು ಹೋರಾಟಗಳೇ ನಮ್ಮ ಜೀವನದ ಅಮೂಲ್ಯ ಉಡುಗೊರೆಗಳು.

***

1. ಪೋಷಕರು ಮತ್ತು ಮಕ್ಕಳು

ಒಂದು ಮಗು ಸೈಕಲ್ ಕಲಿಯುವಾಗ ಪದೇಪದೇ ಬೀಳುತ್ತದೆ. ತಕ್ಷಣ ಪೋಷಕರು ಮಗುವನ್ನು ಎತ್ತಿ, ಮತ್ತೆ ಬೀಳದಂತೆ ಸೈಕಲ್ ಓಡಿಸುವುದನ್ನೇ ನಿಲ್ಲಿಸಿದರೆ, ಆ ಮಗು ಎಂದಿಗೂ ಸೈಕಲ್ ಕಲಿಯಲಾರದು. ಆದರೆ ಬೀಳಲು ಅವಕಾಶ ನೀಡಿ, ಮತ್ತೆ ಪ್ರಯತ್ನಿಸಲು ಪ್ರೋತ್ಸಾಹಿಸಿದರೆ, ಒಂದು ದಿನ ಮಗು ಸ್ವತಂತ್ರವಾಗಿ ಸೈಕಲ್ ಓಡಿಸುತ್ತದೆ.

ಮಕ್ಕಳನ್ನು ಪ್ರತಿಯೊಂದು ಕಷ್ಟದಿಂದ ರಕ್ಷಿಸುವುದಕ್ಕಿಂತ, ಕಷ್ಟಗಳನ್ನು ಎದುರಿಸುವ ಧೈರ್ಯವನ್ನು ಕಲಿಸಬೇಕು.

2. ಶಿಕ್ಷಕರು ಮತ್ತು ವಿದ್ಯಾರ್ಥಿಗಳು

ಒಬ್ಬ ವಿದ್ಯಾರ್ಥಿಗೆ ಗಣಿತದ ಸಮಸ್ಯೆ ಬಿಡಿಸಲು ಕಷ್ಟವಾಗುತ್ತದೆ. ಶಿಕ್ಷಕರು ತಕ್ಷಣವೇ ಉತ್ತರವನ್ನು ಹೇಳಿದರೆ, ವಿದ್ಯಾರ್ಥಿಗೆ ಆ ಸಮಸ್ಯೆಯನ್ನು ಬಿಡಿಸುವ ಸಾಮರ್ಥ್ಯ ಬೆಳೆಯುವುದಿಲ್ಲ. ಆದರೆ ಶಿಕ್ಷಕರು ಸುಳಿವು ನೀಡಿ, ವಿದ್ಯಾರ್ಥಿಯೇ ಪ್ರಯತ್ನಿಸಿ ಉತ್ತರ ಕಂಡುಕೊಳ್ಳುವಂತೆ ಮಾಡಿದರೆ, ಅವನಲ್ಲಿ ಆತ್ಮವಿಶ್ವಾಸ ಮತ್ತು ಸ್ವತಂತ್ರ ಚಿಂತನೆ ಬೆಳೆಯುತ್ತದೆ.

ಒಳ್ಳೆಯ ಶಿಕ್ಷಕರು ಉತ್ತರಗಳನ್ನು ನೀಡುವುದಕ್ಕಿಂತ, ಉತ್ತರಗಳನ್ನು ಕಂಡುಕೊಳ್ಳುವ ಮಾರ್ಗವನ್ನು ತೋರಿಸುತ್ತಾರೆ.

3. ಕ್ರೀಡಾಪಟುಗಳ ಪರಿಶ್ರಮ

ಒಬ್ಬ ಓಟಗಾರ ಪ್ರತಿದಿನ ಅಭ್ಯಾಸ ಮಾಡುವಾಗ ದಣಿವು, ನೋವು ಮತ್ತು ಸೋಲನ್ನು ಎದುರಿಸುತ್ತಾನೆ. ಆದರೆ ನಿರಂತರ ಅಭ್ಯಾಸದಿಂದ ಅವನ ದೇಹ ಮತ್ತು ಮನಸ್ಸು ಸ್ಪರ್ಧೆಗೆ ಸಿದ್ಧವಾಗುತ್ತವೆ. ಅಭ್ಯಾಸದ ಸಮಯದಲ್ಲಿ ಅನುಭವಿಸುವ ಕಷ್ಟವೇ ಸ್ಪರ್ಧೆಯ ಸಮಯದಲ್ಲಿ ಅವನ ಶಕ್ತಿಯಾಗುತ್ತದೆ.

ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ. ಅದರ ಹಿಂದೆ ಕಾಣದ ಅನೇಕ ದಿನಗಳ ಹೋರಾಟವಿರುತ್ತದೆ.

ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕಷ್ಟವನ್ನೂ ಶಾಪವೆಂದು ಭಾವಿಸಬೇಡಿ. ಕೆಲವು ಕಷ್ಟಗಳು ನಮ್ಮನ್ನು ಪರೀಕ್ಷಿಸುತ್ತವೆ, ಕೆಲವು ಪಾಠ ಕಲಿಸುತ್ತವೆ, ಇನ್ನು ಕೆಲವು ನಾವು ಊಹಿಸದ ಎತ್ತರಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ.

ಚಿಟ್ಟೆಗೆ ಹಾರಲು ರೆಕ್ಕೆಗಳಿದ್ದರೆ ಸಾಕಾಗುವುದಿಲ್ಲ; ಆ ರೆಕ್ಕೆಗಳಿಗೆ ಬಲ ನೀಡುವ ಹೋರಾಟವೂ ಬೇಕು. ಮನುಷ್ಯನಿಗೆ ಕನಸುಗಳಿದ್ದರೆ ಸಾಲದು; ಆ ಕನಸುಗಳನ್ನು ನನಸಾಗಿಸುವ ಹೋರಾಟದ ಮನೋಭಾವವೂ ಬೇಕು.


(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ