ಎಲ್ಲ ಧರ್ಮಗಳೂ, ಧರ್ಮಶಾಸ್ತ್ರಜ್ಞರೂ ಮತ್ತು ಸಂತರೆಲ್ಲರೂ ಕುಳಿತುಕೊಂಡು, ಇದು ಸರಿಯೋ ತಪ್ಪೋ ಎಂದು ಆಲೋಚಿಸುತ್ತಿರುತ್ತಾರೆ. ನೀವು ಅವರ ಮಾತುಗಳನ್ನು ಕೇಳುತ್ತಾ ಹೋದರೆ, ಬದುಕುವುದೇ ಅಸಾಧ್ಯವೆನಿಸುತ್ತದೆ. ಏಕೆಂದರೆ ಎಲ್ಲವೂ ತಪ್ಪು ಎಂಬಂತೆ ಕಾಣತೊಡಗುತ್ತದೆ — ಓಶೋ / Beyond Enlightenment । ಕನ್ನಡಕ್ಕೆ : ಚಿದಂಬರ ನರೇಂದ್ರ
“ನೀವು ಎಲ್ಲವನ್ನೂ ಜಡ್ಜ್ ಮಾಡುವ ಪ್ರವೃತ್ತಿಯನ್ನು ಬಿಟ್ಟುಬಿಡಬೇಕು ಮತ್ತು ಯಾವುದೇ ತೀರ್ಪು ನೀಡದೆ, ಬದುಕನ್ನು ಅದರ ಸಂಪೂರ್ಣತೆಯಲ್ಲಿ ಬದುಕಬೇಕು ಎಂದು ನಾನು ಬಯಸುತ್ತೇನೆ. ಆಗ ನಿಮಗೆ ಒಂದು ಆಶ್ಚರ್ಯಕರವಾದ ಸಂಗತಿ ಅರಿವಾಗುತ್ತದೆ. ಅದೇನೆಂದರೆ, ಸಮಗ್ರತೆ ಎನ್ನುವುದು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಸಮಗ್ರತೆ ಇವೆರಡನ್ನೂ ಮೀರಿದ್ದಾಗಿದೆ. ಅದು ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ದ್ವಂದ್ವಗಳ ಆಚೆಗಿದೆ.
ಮಾನವ ಇತಿಹಾಸದಲ್ಲಿ ಕೇವಲ ಒಬ್ಬನೇ ಒಬ್ಬ ವ್ಯಕ್ತಿ, ಫ್ರೆಡ್ರಿಕ್ ನೀಷೆ , ‘ಒಳ್ಳೆಯದರ ಮತ್ತು ಕೆಟ್ಟದರ ಆಚೆಗೆ’ (Beyond Good and Evil) ಎಂಬ ಪುಸ್ತಕವನ್ನು ಬರೆದಿದ್ದಾನೆ. ನನ್ನ ಒಳನೋಟ ಮತ್ತು ತಿಳಿವಳಿಕೆಯ ಪ್ರಕಾರ, ಜಡ್ಜ್ ಮಾಡುವ ಪ್ರವೃತ್ತಿಯನ್ನು ಅದರ ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ದು ನೋಡಿದ ಏಕೈಕ ವ್ಯಕ್ತಿ ಅವನು.
ಒಬ್ಬ ನೈಜ ವ್ಯಕ್ತಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಪರಿಕಲ್ಪನೆಗಳನ್ನು ಮೀರಿದ ಬದುಕನ್ನು ಬದುಕಬೇಕು. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದರ ಬಗ್ಗೆ ಅವನು ತಲೆಕೆಡಿಸಿಕೊಳ್ಳುವುದಿಲ್ಲ. ಅವನು ತೀವ್ರತೆ ಮತ್ತು ಸಂಪೂರ್ಣತೆಯಿಂದ ಬದುಕುತ್ತಾನೆ. ಆ ಕ್ಷಣವು ತನಗೆ ಏನನ್ನು ಮಾಡಲು ಅವಕಾಶ ನೀಡುತ್ತದೆಯೋ, ಮತ್ತು ತನ್ನೊಳಗೆ ಏನನ್ನು ಮಾಡಬೇಕೆಂಬ ಭಾವನೆ ಮೂಡುತ್ತದೆಯೋ, ಅದನ್ನು ಅವನು ಮಾಡುತ್ತಾನೆ.
ಆದರೆ ಎಲ್ಲ ಧರ್ಮಗಳೂ, ಧರ್ಮಶಾಸ್ತ್ರಜ್ಞರೂ ಮತ್ತು ಸಂತರೆಲ್ಲರೂ ಕುಳಿತುಕೊಂಡು, ಇದು ಸರಿಯೋ ತಪ್ಪೋ ಎಂದು ಆಲೋಚಿಸುತ್ತಿರುತ್ತಾರೆ. ನೀವು ಅವರ ಮಾತುಗಳನ್ನು ಕೇಳುತ್ತಾ ಹೋದರೆ, ಬದುಕುವುದೇ ಅಸಾಧ್ಯವೆನಿಸುತ್ತದೆ. ಏಕೆಂದರೆ ಎಲ್ಲವೂ ತಪ್ಪು ಎಂಬಂತೆ ಕಾಣತೊಡಗುತ್ತದೆ.
ಜಗತ್ತಿನ ಎಲ್ಲ ಧರ್ಮಗ್ರಂಥಗಳನ್ನೂ ನಾನು ಕೇವಲ ಒಂದೇ ಒಂದು ಸಂಗತಿಯನ್ನು ಕಂಡುಹಿಡಿಯುವ ಉದ್ದೇಶದಿಂದ ಪರಿಶೀಲಿಸಿದ್ದೇನೆ. ಬಹುಶಃ ಯಾರಿಂದಲೂ ಖಂಡಿಸಲ್ಪಡದ ಒಂದಾದರೂ ವಿಷಯ ಇರಬಹುದೇ ಎಂದು ಹುಡುಕಿದ್ದೇನೆ. ಆದರೆ ಅಂತಹ ಒಂದೂ ವಿಷಯ ನನಗೆ ಸಿಗಲಿಲ್ಲ. ಯಾವುದಾದರೊಂದು ವಿಷಯವನ್ನು ಯಾರಾದರೊಬ್ಬರು ಖಂಡಿಸಿಯೇ ಇರುತ್ತಾರೆ. ಅದೇ ರೀತಿ, ಯಾವುದಾದರೊಂದು ವಿಷಯವನ್ನು ಯಾರಾದರೊಬ್ಬರು ಸಮರ್ಥಿಸಿಯೂ ಇರುತ್ತಾರೆ.
ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು ಯಾವುದೇ ಅಂತಿಮ ಮಾನದಂಡವಿಲ್ಲ.
ನನ್ನ ದೃಷ್ಟಿಯಲ್ಲಿ, ನನ್ನೊಂದಿಗೆ ಇರುವ ನನ್ನ ಜನರು ತಮ್ಮ ಬದುಕನ್ನು ಪೂರ್ಣ ಹೃದಯದಿಂದ ಬದುಕಬೇಕು. ಹಗಲನ್ನೂ ಬದುಕಿ, ರಾತ್ರಿಯನ್ನೂ ಬದುಕಿ. ಯಾವುದನ್ನೂ ಕಳೆದುಕೊಳ್ಳಬೇಡಿ.
ನಿಮ್ಮ ಬದುಕನ್ನು ಹೀಗೆ ರೂಪಿಸಿಕೊಳ್ಳಿ: ಅದರ ಪ್ರತಿಯೊಂದು ಅಂಶವೂ ಮತ್ತೊಂದಕ್ಕೆ ಪೂರಕವಾಗಿರಲಿ. ಎಲ್ಲವೂ ಒಂದಕ್ಕೊಂದು ಹೊಂದಿಕೊಂಡು, ನಿಮ್ಮ ಬದುಕು ಒಂದು ಕಲಾಕೃತಿಯಂತೆ, ಒಂದು ಸುಂದರವಾದ ಅನುಭವದಂತೆ ಅರಳಲಿ.”

