ಜರತುಷ್ಟ್ರನು ನಿಮ್ಮ ಬದುಕು ಒಂದು ಸುಂದರ ಉದ್ಯಾನವನವಾಗಿರಬೇಕೆಂದು ಬಯಸುತ್ತಾನೆ. ಅಲ್ಲಿ ಹಕ್ಕಿಗಳು ಹಾಡಬೇಕು, ಹೂವುಗಳು ಅರಳಬೇಕು, ಮರಗಳು ನರ್ತಿಸಬೇಕು, ಸೂರ್ಯನು ಆನಂದದಿಂದ ಉದಯಿಸಬೇಕು. ಜರತುಷ್ಟ್ರನು ಸಂಪೂರ್ಣವಾಗಿ ಜೀವನದ ಪರವಾಗಿದ್ದಾನೆ. ಬಹುಶಃ ಅದಕ್ಕಾಗಿಯೇ ಅವನಿಗೆ ಹೆಚ್ಚು ಅನುಯಾಯಿಗಳಿಲ್ಲ ~ ಓಶೋ Zarathustra: A God That Can Dance
ವಿಶ್ವದ ಯಾವುದೇ ವಿಶ್ವವಿದ್ಯಾಲಯವೂ ಮನುಷ್ಯರಿಗೆ ಬದುಕುವ ಕಲೆಯನ್ನು, ಪ್ರೀತಿಸುವ ಕಲೆಯನ್ನು ಮತ್ತು ಧ್ಯಾನಿಸುವ ಕಲೆಯನ್ನು ಕಲಿಸುವುದಿಲ್ಲ ಎನ್ನುವುದು ಒಂದು ದೊಡ್ಡ ಮೂರ್ಖತನ. ನನ್ನ ದೃಷ್ಟಿಯಲ್ಲಿ ಪ್ರೀತಿ, ಜೀವನ, ಧ್ಯಾನ ಮತ್ತು ನಗುವಿಗಿಂತ ಮಿಗಿಲಾದದ್ದು ಬೇರೊಂದಿಲ್ಲ. ಉಳಿದ ಎಲ್ಲವೂ ಇವುಗಳಿಗಿಂತ ಕೆಳಮಟ್ಟದವು.
ನೀವು ಒಬ್ಬ ಶ್ರೇಷ್ಠ ಶಸ್ತ್ರಚಿಕಿತ್ಸಕರಾಗಿರಬಹುದು, ಮಹಾನ್ ಇಂಜಿನಿಯರ್ ಆಗಿರಬಹುದು, ಪ್ರಸಿದ್ಧ ವಿಜ್ಞಾನಿಯಾಗಿರಬಹುದು. ಆದರೂ ನಿಮ್ಮ ಬದುಕಿನಲ್ಲಿ ಹಾಸ್ಯಪ್ರಜ್ಞೆ ಬೇಕು, ಪ್ರೀತಿಸುವ ಕಲೆ ಬೇಕು, ಬದುಕುವ ಕಲೆ ಬೇಕು ಮತ್ತು ಈ ಎಲ್ಲ ಉನ್ನತ ಮೌಲ್ಯಗಳೂ ಬೇಕು. ಆದರೆ ನಿಮಗೆ ಆಶ್ಚರ್ಯವಾಗಬಹುದು. ನಾನು ಇಲ್ಲಿ ಕಲಿಸುವುದು ಇವುಗಳನ್ನೇ, ಪ್ರೀತಿ, ಜೀವನ ಮತ್ತು ನಗು. ಇವೆಲ್ಲಕ್ಕೂ ಹಿನ್ನೆಲೆಯಾಗಿ ಧ್ಯಾನವನ್ನು ಕಲಿಸುತ್ತೇನೆ. ಆದರೆ ಭಾರತ ಸರ್ಕಾರ ಈ ಶಾಲೆಯನ್ನು ಒಂದು ಶಿಕ್ಷಣ ಸಂಸ್ಥೆಯೆಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ.
ನಾನು ಭೂಗೋಳ, ಇತಿಹಾಸ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಂತಹ ಲೌಕಿಕ ವಿಷಯಗಳನ್ನು ಕಲಿಸುತ್ತಿದ್ದರೆ ಮಾತ್ರ ಈ ಸಂಸ್ಥೆಯನ್ನು ಶಿಕ್ಷಣ ಸಂಸ್ಥೆಯೆಂದು ಒಪ್ಪಿಕೊಳ್ಳಲು ಅವರು ಸಿದ್ಧರಿರುತ್ತಿದ್ದರು. ಈ ವಿಷಯಗಳನ್ನು ಕಲಿಸಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಅವುಗಳೇ ಶಿಕ್ಷಣದ ಏಕೈಕ ಉದ್ದೇಶವಾಗಬಾರದು. ಅವು ಕೆಳಮಟ್ಟದ ಶಿಕ್ಷಣವಾಗಿರಬೇಕು. ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿಯೂ ಜೀವನದ ನೈಜ ಮೌಲ್ಯಗಳನ್ನು ಕಲಿಸುವ ಉನ್ನತ ಶಿಕ್ಷಣ ವಿಭಾಗವೊಂದು ಇರಬೇಕು. ಏಕೆಂದರೆ ಭೂಗೋಳಶಾಸ್ತ್ರವು ನಿಮ್ಮನ್ನು ಉತ್ತಮ ಮನುಷ್ಯನನ್ನಾಗಿ ಮಾಡಲಾರದು. ಇತಿಹಾಸವು ನಿಮ್ಮನ್ನು ಉತ್ತಮ ಪ್ರೇಮಿಯನ್ನಾಗಿ ಮಾಡಲಾರದು. ರಸಾಯನಶಾಸ್ತ್ರವು ನಿಮ್ಮನ್ನು ಧ್ಯಾನಶೀಲರನ್ನಾಗಿ ಮಾಡಲಾರದು.
ವಿಶ್ವವಿದ್ಯಾಲಯಗಳಲ್ಲಿ ಇಂದು ಕಲಿಸಲಾಗುತ್ತಿರುವ ಯಾವುದೇ ವಿಷಯವೂ ನಿಮ್ಮಲ್ಲಿ ಹಾಸ್ಯಪ್ರಜ್ಞೆಯನ್ನು ಬೆಳೆಸಲಾರದು. ನಿಮಗೆ ನಗಲು ಬರುವುದಿಲ್ಲ, ಕುಣಿಯಲು ಬರುವುದಿಲ್ಲ, ಹಾಡಲು ಬರುವುದಿಲ್ಲ. ಅಂತಿಮವಾಗಿ ನಿಮ್ಮ ಬದುಕು ಬಹುತೇಕ ಒಂದು ಮರುಭೂಮಿಯಂತಾಗುತ್ತದೆ.
ಜರತುಷ್ಟ್ರನು ನಿಮ್ಮ ಬದುಕು ಒಂದು ಸುಂದರ ಉದ್ಯಾನವನವಾಗಿರಬೇಕೆಂದು ಬಯಸುತ್ತಾನೆ. ಅಲ್ಲಿ ಹಕ್ಕಿಗಳು ಹಾಡಬೇಕು, ಹೂವುಗಳು ಅರಳಬೇಕು, ಮರಗಳು ನರ್ತಿಸಬೇಕು, ಸೂರ್ಯನು ಆನಂದದಿಂದ ಉದಯಿಸಬೇಕು.
ಜರತುಷ್ಟ್ರನು ಸಂಪೂರ್ಣವಾಗಿ ಜೀವನದ ಪರವಾಗಿದ್ದಾನೆ. ಬಹುಶಃ ಅದಕ್ಕಾಗಿಯೇ ಅವನಿಗೆ ಹೆಚ್ಚು ಅನುಯಾಯಿಗಳಿಲ್ಲ.
ವಿಷವನ್ನು ಬಿತ್ತುವ, ವಿನಾಶವನ್ನು ಬಯಸುವ ಜನರಿಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ. ಆದರೆ ಪ್ರೀತಿ ಮತ್ತು ಜೀವನವೇ ತನ್ನ ಸಂಪೂರ್ಣ ಸಂದೇಶವಾಗಿರುವ ಅಪೂರ್ವ ಗುರು ಮತ್ತು ಅಪೂರ್ವ ಮಿಸ್ಟಿಕ್ಗೆ ಜಗತ್ತಿನಲ್ಲಿಯೇ ಅತಿ ಕಡಿಮೆ ಅನುಯಾಯಿಗಳಿರುವ ಧರ್ಮವಿದೆ. ಜರತುಷ್ಟ್ರನ ಧರ್ಮವೊಂದೇ ನಿಜವಾದ ಧರ್ಮವಾಗಬೇಕು. ಉಳಿದ ಎಲ್ಲ ಧರ್ಮಗಳನ್ನೂ ಸ್ಮಶಾನದಲ್ಲಿ ಹೂಳಬೇಕು.
ಏಕೆಂದರೆ,
ಜೀವನವನ್ನು ಹೊರತುಪಡಿಸಿ ಬೇರೆ ದೇವರಿಲ್ಲ; ಪ್ರೀತಿಯನ್ನು ಹೊರತುಪಡಿಸಿ ಬೇರೆ ಪ್ರಾರ್ಥನೆಯಿಲ್ಲ
ಹೀಗೆ ನುಡಿದವನು ಜರತುಷ್ಟ್ರ.

