ಬೆರಳನ್ನು ಮರೆತುಬಿಡು; ಅದು ಯಾವ ಕಡೆಗೆ ತೋರಿಸುತ್ತಿದೆಯೋ ಆ ಕಡೆ ನೋಡು – ಓಶೋ / Ah, This! ; ಕನ್ನಡಕ್ಕೆ: ಚಿದಂಬರ ನರೇಂದ್ರ
ಗುರುಗಳು ಸತ್ಯವನ್ನು ಬೋಧಿಸುವುದಿಲ್ಲ; ಏಕೆಂದರೆ ಸತ್ಯವನ್ನು ಬೋಧಿಸಲು ಯಾವ ಮಾರ್ಗವೂ ಇಲ್ಲ. ಅದು ಶಾಸ್ತ್ರಗಳನ್ನೂ, ಪದಗಳನ್ನೂ ಮೀರಿದ ಒಂದು ಸಂವಹನ. ಅದೊಂದು ಶಕ್ತಿಯ ಪ್ರಸರಣ. ನಿನ್ನೊಳಗಿನ ಶಕ್ತಿಯನ್ನು ಜಾಗೃತಗೊಳಿಸುವ ಶಕ್ತಿಯ ಸಂವಹನ. ಅದನ್ನು ಒಂದು ರೀತಿಯ ಸಹಕಾಲಿಕತೆ (Synchronicity) ಎನ್ನಬಹುದು.
ಗುರುಗಳು ಅಹಂಕಾರವೆಂಬ ಅಸ್ತಿತ್ವದಿಂದ ಸಂಪೂರ್ಣವಾಗಿ ಕಣ್ಮರೆಯಾಗಿರುತ್ತಾರೆ; ಅವರು ಶುದ್ಧ ಆನಂದವಾಗಿರುತ್ತಾರೆ. ಶಿಷ್ಯನು ಗುರುವಿನ ಪಕ್ಕದಲ್ಲಿ ಕುಳಿತುಕೊಂಡು, ನಿಧಾನವಾಗಿ ನಿಧಾನವಾಗಿ ಅವರ ಆನಂದದಲ್ಲಿ, ಅವರ ಅಸ್ತಿತ್ವದಲ್ಲಿ ಪಾಲುದಾರನಾಗುತ್ತಾನೆ. ಎಂದಿಗೂ ಬತ್ತದ, ಅಕ್ಷಯವಾದ ಆನಂದದ ಆ ಮೂಲದಿಂದಲೇ ಆಹಾರವನ್ನೂ ಪಾನವನ್ನೂ ಸ್ವೀಕರಿಸುತ್ತಾನೆ.
ಏಸ ಧಮ್ಮೋ ಸನಂತನೋ (AIS DHAMMO SANANTANO) — ಇದೇ ಸನಾತನ ಧರ್ಮ.
ಮತ್ತು ಒಂದು ದಿನ… ಆ ದಿನ ಯಾವಾಗ ಬರುತ್ತದೆ ಎಂದು ಯಾರೂ ಊಹಿಸಲಾರರು; ಅದು ಸಂಪೂರ್ಣ ಅನಿರೀಕ್ಷಿತ. ಒಂದು ದಿನ ಇದ್ದಕ್ಕಿದ್ದಂತೆ ನಿನ್ನೊಳಗೆ ಒಂದು ಪ್ರಕ್ರಿಯೆ ಆರಂಭವಾಗಿರುತ್ತದೆ. ಅದು ನಿನ್ನ ನೈಜ ಅಸ್ತಿತ್ವದ ಸತ್ಯವನ್ನು ನಿನಗೇ ಅನಾವರಣಗೊಳಿಸುತ್ತದೆ. ನೀನು ನಿನ್ನ ನೈಜ ಸ್ವರೂಪದೊಂದಿಗೆ ಮುಖಾಮುಖಿಯಾಗುತ್ತೀಯೆ.
ದೇವರು ಎಲ್ಲೋ ಬೇರೆಡೆ ಇಲ್ಲ; ಅವನು ಈಗ, ಇಲ್ಲಿಯೇ ಇದ್ದಾನೆ.
ಗುರುಗಳು ನಿನ್ನಲ್ಲಿ ಅರಿವಿನ ಬೆಳಕನ್ನು ಚೆಲ್ಲುತ್ತಾರೆ ಮತ್ತು ನಿನಗೆ ಉಂಟಾದ ಸಾಕ್ಷಾತ್ಕಾರವನ್ನು ದೃಢಪಡಿಸುತ್ತಾರೆ. ಅವರು ಸಾವಿರಾರು ರೀತಿಯಲ್ಲಿ ಬೆಳಕನ್ನು ಚೆಲ್ಲುತ್ತಾ, ಸತ್ಯದ ಕಡೆಗೆ ನಿರಂತರವಾಗಿ ಬೆರಳು ತೋರಿಸುತ್ತಿರುತ್ತಾರೆ. ಚಂದ್ರನತ್ತ ತೋರುವ ಬೆರಳುಗಳಂತೆ.
ಆದರೆ ಅನೇಕ ಮೂರ್ಖರು ಆ ಬೆರಳುಗಳನ್ನೇ ಹಿಡಿದುಕೊಂಡುಬಿಡುತ್ತಾರೆ. ನೆನಪಿರಲಿ, ಬೆರಳನ್ನು ಹಿಡಿದುಕೊಂಡ ಮಾತ್ರಕ್ಕೆ ಚಂದ್ರನನ್ನು ನೋಡಲು ಸಾಧ್ಯವಿಲ್ಲ. ಇನ್ನೂ ದೊಡ್ಡ ಮೂರ್ಖರು ಆ ಬೆರಳುಗಳನ್ನೇ ಕಚ್ಚಲು ಪ್ರಾರಂಭಿಸುತ್ತಾರೆ. ಅದರಿಂದ ನಿನಗೆ ಯಾವ ಪೋಷಣೆಯೂ ದೊರೆಯುವುದಿಲ್ಲ. ಬೆರಳನ್ನು ಮರೆತುಬಿಡು; ಅದು ಯಾವ ಕಡೆಗೆ ತೋರಿಸುತ್ತಿದೆಯೋ ಆ ಕಡೆ ನೋಡು.
ಗುರುಗಳು ನಿನ್ನೊಳಗೆ ಬೆಳಕನ್ನು ಹರಿಸುತ್ತಾರೆ. ಅವರು ಮಹಾನ್ ಬೆಳಕಿನ ಮಳೆಯನ್ನು ಸುರಿಸುತ್ತಾರೆ; ಅವರೇ ಬೆಳಕಾಗಿರುತ್ತಾರೆ. ಅವರು ಒಂದು ಶೋಧಕ ದೀಪದಂತೆ (Searchlight) ತಮ್ಮ ಅಸ್ತಿತ್ವದ ಬೆಳಕನ್ನು ನಿನ್ನ ಅಸ್ತಿತ್ವದ ಮೇಲೆ ಕೇಂದ್ರೀಕರಿಸುತ್ತಾರೆ.
ನೀನು ಶತಮಾನಗಳಿಂದ, ಕೋಟ್ಯಂತರ ಜನ್ಮಗಳಿಂದ ಕತ್ತಲೆಯಲ್ಲಿ ಬದುಕಿದ್ದೀಯೆ. ಇದ್ದಕ್ಕಿದ್ದಂತೆ ಗುರುವಿನ ಶೋಧಕ ದೀಪ ನಿನ್ನೊಳಗೆ ಮರೆತುಹೋಗಿದ್ದ ಕೆಲವು ಪ್ರದೇಶಗಳನ್ನು ಅನಾವರಣಗೊಳಿಸಲು ಆರಂಭಿಸುತ್ತದೆ.
ಅವೆಲ್ಲವೂ ನಿನ್ನೊಳಗೇ ಇವೆ. ಗುರು ಅವುಗಳನ್ನು ಎಲ್ಲಿಂದಲೋ ತಂದುಕೊಡುವುದಿಲ್ಲ. ಅವರು ಕೇವಲ ತಮ್ಮ ಬೆಳಕನ್ನು ತರುತ್ತಾರೆ; ತಮ್ಮ ಅಸ್ತಿತ್ವದ ಬೆಳಕನ್ನು ನಿನ್ನ ಮೇಲೆ ಕೇಂದ್ರೀಕರಿಸುತ್ತಾರೆ.
ಆದರೆ ಗುರು ತನ್ನ ಬೆಳಕನ್ನು ಕೇಂದ್ರೀಕರಿಸುವುದು ಯಾವಾಗ ಗೊತ್ತೇ?
ಶಿಷ್ಯನು ತೆರೆದುಕೊಂಡಾಗ, ಸಂಪೂರ್ಣವಾಗಿ ಶರಣಾದಾಗ, ವಾದಿಸುವುದಕ್ಕಾಗಿ ಅಲ್ಲ, ಕಲಿಯುವುದಕ್ಕಾಗಿ ಸಿದ್ಧನಾದಾಗ; ಜ್ಞಾನವನ್ನು ಸಂಗ್ರಹಿಸುವುದಕ್ಕಾಗಿ ಅಲ್ಲ, ಸತ್ಯವನ್ನು ಅರಿಯುವುದಕ್ಕಾಗಿ ಗುರುವಿನ ಬಳಿಗೆ ಬಂದಾಗ ಮಾತ್ರ.
ಶಿಷ್ಯನು ಕೇವಲ ಕುತೂಹಲದಿಂದ ಬಂದವನಾಗಿರಬಾರದು; ಅವನು ನಿಜವಾದ ಅನ್ವೇಷಕನಾಗಿರಬೇಕು. ಸತ್ಯದ ಹುಡುಕಾಟಕ್ಕಾಗಿ ಎಲ್ಲವನ್ನೂ ಪಣಕ್ಕಿಡಲು ಸಿದ್ಧನಾಗಿರಬೇಕು. ತನ್ನ ಬದುಕನ್ನೇ ಪಣಕ್ಕಿಡಬೇಕಾದರೂ, ಅದನ್ನು ತ್ಯಾಗ ಮಾಡಬೇಕಾದರೂ ಶಿಷ್ಯನು ಸಿದ್ಧನಾಗಿರಬೇಕು.
ವಾಸ್ತವವಾಗಿ, ನೀನು ನಿನ್ನ ನಿದ್ರಾವಸ್ಥೆಯ ಬದುಕನ್ನು ಪಣಕ್ಕಿಟ್ಟು, ಆ ನಿದ್ರಾವಸ್ಥೆಯ ಬದುಕನ್ನೇ ತ್ಯಾಗ ಮಾಡಿದಾಗ, ಸಂಪೂರ್ಣವಾಗಿ ವಿಭಿನ್ನವಾದ ಒಂದು ಬದುಕಿನ ಗುಣಮಟ್ಟವನ್ನು ಪಡೆದುಕೊಳ್ಳುತ್ತೀಯ.
ಅದು ಬೆಳಕಿನ ಬದುಕು, ಪ್ರೀತಿಯ ಬದುಕು. ಮರಣವನ್ನೂ, ಕಾಲವನ್ನೂ, ಬದಲಾವಣೆಯನ್ನೂ ಮೀರಿದ ಬದುಕು.
**************************************

