‘ತ್ರಿಶಂಕು’ ಯಾರು? ‘ತ್ರಿಶಂಕು ಸ್ವರ್ಗ’ ಎಂದರೇನು?

ಆಚೆಗೂ ಸಲ್ಲದೆ, ಈಚೆಗೂ ಸಲ್ಲದೆ ನಡುವೆ ಸಿಲುಕಿಕೊಂಡವರ ಪಾಡು ನೋಡಿ ‘ತ್ರಿಶಂಕು ಸ್ವರ್ಗ’ ‘ತ್ರಿಶಂಕುವಿನ ಸ್ಥಿತಿ’ ಎಂದು ಹೇಳುವುದು ರೂಢಿಯಲ್ಲಿದೆ. ಈ ನುಡಿಗಟ್ಟು ಚಾಲ್ತಿಗೆ ಬಂದುದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ ~ ಗಾಯತ್ರಿ

ಇಕ್ಷ್ವಾಕು ವಂಶದಲ್ಲಿ ತ್ರಿಶಂಕು ಎಂಬ ರಾಜನಿದ್ದ. ಅವನಿಗೆ ಶರೀರದ ಮೇಲಿನ ವ್ಯಾಮೋಹದಿಂದ ಸಶರೀರವಾಗಿ ಸ್ವರ್ಗ ಪ್ರವೇಶ ಮಾಡಬೇಕೆಂಬ ಬಯಕೆಯಾಯಿತು. ತಕ್ಷಣವೇ ತನ್ನ ಕುಲಗುರುಗಳಾದ ವಸಿಷ್ಠರಿಗೆ ತನ್ನ ಆಸೆಯನ್ನು ತಿಳಿಸಿದ. ಆಗ ವಸಿಷ್ಠರು, “ನೀನು ಎಷ್ಟೇ ಶ್ರೇಷ್ಠ ರಾಜನಾದರೂ, ಎಷ್ಟೇ ಶ್ರೇಷ್ಠ ಯಾಗಗಳನ್ನುಮಾಡಿದ್ದರೂ, ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಧರ್ಮಶಾಸ್ತ್ರದಲ್ಲಿ ಹೇಳಿಲ್ಲ.ಯಾರಾದರೂ ಸರಿ, ಶರೀರವನ್ನು ತ್ಯಜಿಸುವುದು ಅನಿವಾರ್ಯ, ಅದರ ನಂತರವೇಸ್ವರ್ಗ ಲೋಕದ ಪ್ರವೇಶ ಸಿಗುತ್ತದೆ. ಹಾಗಾಗಿ ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಅಸಾಧ್ಯ” ಎಂದು ಅವನ ಕೋರಿಕೆಯನ್ನು ನಿರಾಕರಿಸಿದರು.

ಆಗ ತ್ರಿಶಂಕು ವಸಿಷ್ಠರ ಮಕ್ಕಳ ಬಳಿ ಹೋಗಿ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ. ಅವರು, “ನಮ್ಮ ತಂದೆಯವರು ಸಾಧ್ಯವಿಲ್ಲ ಎಂದ ಮೇಲೆ ಅದು ಸಾಧ್ಯವಿಲ್ಲ, ಯಾರೂ ಸಶರೀರವಾಗಿ ಸ್ವರ್ಗ ಸೇರಲು ಆಗುವುದಿಲ್ಲ” ಎಂದು ಹೇಳಿಬಿಟ್ಟರು. ಅಸಮಾಧಾನಗೊಂಡ ತ್ರಿಶಂಕು ತಾನು ಬೇರೆ ಗುರುಗಳನ್ನು ಹುಡುಕಿ ತನ್ನ ಕೋರಿಕೆಯನ್ನು ಈಡೇರಿಸಿಕೊಳ್ಳುತ್ತೇನೆ ಎಂದು ಹೇಳಿ ಹೋರಟುಹೋದ. ಆಗ ಅವರು, “ನೀನು ನಮ್ಮ ತಂದೆಯಾದ, ನಿನ್ನ ಗುರುಗಳೂ ಆದ ವಸಿಷ್ಠರ ಮಾತನ್ನು ಧಿಕ್ಕರಿಸಿ ಮತ್ತೊಬ್ಬ ಗುರುವನ್ನು ಹುಡುಕಲು ಹೊರಟಿರುವೆ. ನಿನ್ನಿಂದ ಗುರುವಾಕ್ಯ ಉಲ್ಲಂಘನೆ ಮತ್ತು ಅವಮಾನ ನಡೆದಿದೆ. ಅದಕ್ಕೆ ತಕ್ಕ ಶಿಕ್ಷೆಯಾಗಲಿ” ಎಂದು ಶಪಿಸಿದರು.

ಮರುದಿನ ತ್ರಿಶಂಕು ನಿದ್ದೆಯಿಂದ ಏಳುವ ವೇಳೆಗೆ, ಅವನ ಮುಖದಲ್ಲಿನ ಕಾಂತಿಯು ಕುಂದಿ, ಮುಖವೆಲ್ಲಾ ಕಪ್ಪಾಗಿತ್ತು. ಅವನ ಬಂಗಾರದ ಆಭರಣಗಳುಹಿತ್ತಾಳೆಯಾಗಿದ್ದವು. ಕೂದಲು, ಕಣ್ಣುಗಳು ಕೆಂಪಾಗಿ, ನೋಡಲು ಭಯಂಕರವಾಗಿದ್ದವು. ಅವನ ಭೀಕರ ರೂಪವನ್ನು ನೋಡಿ ಅರಮನೆಯಲ್ಲಿದ್ದವರೂ, ರಾಜಪರಿವಾರದವರೂ  ಭಯದಿಂದ ಓಡಿಹೋದರು. 

ತ್ರಿಶಂಕು ಅದೇ ರೂಪದಲ್ಲಿ ತಿರುಗುತ್ತಾ ಕೊನೆಗೆ ರಾಜರ್ಷೀಯಾಗಿದ್ದ ವಿಶ್ವಾಮಿತ್ರರ ಬಳಿ ಬಂದ.ವಸಿಷ್ಠರ ಮೇಲೆ ವಿಶ್ವಾಮಿತ್ರರಿಗೆ ಮೊದಲೇ ಕೋಪವಿತ್ತು. ಹೇಗಾದರೂ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಕಾದಿದ್ದರು. ಈಗ ತ್ರಿಶಂಕುವಿಗೆ ಸಹಾಯ ಮಾಡುವ ಮೂಲಕ ವಸಿಷ್ಠರನ್ನು ಅವಮಾನಿಸಬಹುದೆಂದು ಭಾವಿಸಿದ ವಿಶ್ವಾಮಿತ್ರ, ಅವನನ್ನು ಸ್ವರ್ಗಕ್ಕೆ ಕಳಿಸಲು ಒಪ್ಪಿದ.

ಅದರಂತೆ ಸ್ವರ್ಗಾರೋಹಣ ಯಾಗ ಪ್ರಾರಂಭವಾಯಿತು. ಆದರೆ ಯಾಗಾಗ್ನಿಯಲ್ಲಿ ಹವಿಸ್ಸನ್ನು ಸ್ವೀಕರಿಸಲು ಯಾವ ದೇವತೆಯೂ ಬರಲಿಲ್ಲ. ಯಾರೂ ಬರದಿರುವುದನ್ನು ಕಂಡು, ವಿಶ್ವಾಮಿತ್ರರುಕೋಪಗೊಂಡು ತನ್ನ ತಪಃಶಕ್ತಿಯಿಂದ ತ್ರಿಶಂಕುವನ್ನು ಮೇಲಕ್ಕೆ ಕಳಿಸತೊಡಗಿದ.

ಅದರಂತೆ ತ್ರಿಶಂಕುವು ಆಕಾಶ ಮಾರ್ಗವಾಗಿ ಪ್ರಯಾಣಿಸುತ್ತಾ ಸ್ವರ್ಗದಕಡೆಗೆ ವೇಗವಾಗಿ ಸಾಗತೊಡಗಿದ. 

ಈವಿಷಯ ತಿಳಿದ ದೇವೇಂದ್ರ ಕೋಪದಿಂದ, “ತ್ರಿಶಂಕೋ ಗಚ್ಛ ಭೂಯಾಃ ತ್ವಂ ಅಸಿ ಸ್ವರ್ಗ ಕೃತ ಆಲಯಂ” – ತ್ರಿಶಂಕು, ಗುರು ಶಾಪಕ್ಕೆ ಗುರಿಯಾದ ನಿನಗೆ ಸ್ವರ್ಗದಲ್ಲಿ ಪ್ರವೇಶವಿಲ್ಲ, ನೀನು ತಲೆ ಕೆಳಗಾಗಿ ಭೂಮಿಯ ಮೇಲೆ ಬೀಳು” ಎಂದು ತ್ರಿಶಂಕುವನ್ನು ತಿರಸ್ಕರಿಸಿಬಿಟ್ಟ.

ಕೂಡಲೇ ತ್ರಿಶಂಕು ತಲೆಕೆಳಗಾಗಿ ಭೂಮಿಯ ಮೇಲೆ ಬೀಳತೊಡಗಿದ. ಭಯದಿಂದ ವಿಶ್ವಾಮಿತ್ರರನ್ನು ಪ್ರಾರ್ಥಿಸತೊಡಗಿದ. ವಿಶ್ವಾಮಿತ್ರರು ತಮ್ಮ ಶಿಷ್ಯನಿಗೆ ಸ್ವರ್ಗದಲ್ಲಿ ಜಾಗ ಕೊಡದಿದ್ದರೆ ತಾನೆ ಏನು? ಪ್ರತ್ಯೇಕ ಸ್ವರ್ಗವನ್ನೇ ಸೃಷ್ಟಿಸುವೆ ಎಂದು ಹೂಂಕರಿಸಿದರು. ತಮ್ಮ ತಪಃಶಕ್ತಿಯಿಂದ ದಕ್ಷಿಣ ದಿಕ್ಕಿನಲ್ಲಿ ಮತ್ತೊಂದು ನಕ್ಷತ್ರ ಮಂಡಲವನ್ನೂ, ಸಪ್ತರ್ಷಿ ಮಂಡಲವನ್ನೂ ಸೃಷ್ಠಿಸಿದರು. ಅನಂತರ ದೇವತೆಗಳನ್ನು ಕೂಡ ಸೃಷ್ಠಿಸಲು ಮುಂದಾದರು. ಆಗ ದೇವತೆಗಳು ವಿಶ್ವಾಮಿತ್ರನ ಬಳಿ ಬಂದು, “ಶಾಂತನಾಗುವಿಶ್ವಾಮಿತ್ರ!! ನಿನಗೆ ತಪಃ ಶಕ್ತಿ ಇದ್ದ ಮಾತ್ರಕ್ಕೆ ಪ್ರತಿ ಸ್ವರ್ಗದ ಸೃಷ್ಠಿ ಸರಿಯಿಲ್ಲ, ಶಾಸ್ತ್ರದಂತೆ ಸಶರೀರವಾಗಿ ಸ್ವರ್ಗ ಸೇರಲು ಸಾಧ್ಯವಿಲ್ಲ. ಇದೂ ನಿಮಗೆತಿಳಿದಿದೆ, ನಿಮ್ಮಂಥವರು ಹೀಗೆ ನಡೆದುಕೊಳ್ಳುವುದು ಸರಿಯಲ್ಲ, ನೀವು ಸೃಷ್ಠಿಸಿದ ನಕ್ಷತ್ರ ಮಂಡಲವು ಜ್ಯೋತಿಷ್ಯ ಚಕ್ರದಿಂದ ಹೊರಗಿದ್ದು, ತ್ರಿಶಂಕು ಅಲ್ಲಿಯೇ ನೆಲೆಸಲಿ” ಎಂದು ಕೇಳಿಕೊಂಡರು.

ದೇವತೆಗಳ ಆಗ್ರಹಕ್ಕೆ ಮಣಿದ ವಿಶ್ವಾಮಿತ್ರರು ತ್ರಿಶಂಕುವನ್ನು ಅಲ್ಲಿಯೇ ಇರಿಸಿ, ಭೂಮಿಗೂ ಸ್ವರ್ಗಕ್ಕೂ ನಡುವೆ ಇದ್ದ ಆತನ ನೆಲೆಯನ್ನು ‘ತ್ರಿಶಂಕು ಸ್ವರ್ಗ’ವೆಂದು ಕರೆದರು. ತ್ರಿಶಂಕುವಿನ ೆಲ್ಲಿಯೂ ಸಲ್ಲದ ಸ್ಥಿತಿ ‘ತ್ರಿಶಂಕುವಿನ ಸ್ಥಿತಿ’ ಎಂದೇ ಹೆಸರಾಯಿತು!!

(ಈ ಕಥೆ ರಾಮಾಯಣದ ಬಾಲಕಾಂಡದಲ್ಲಿ ಬರುತ್ತದೆ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.