‘ಕಾಮ’ವೆಂದರೆ ಲೈಂಗಿಕತೆಯಲ್ಲ; ಅದು ಸೃಷ್ಟಿಯ ಚಾಲಕ ಶಕ್ತಿ

ಕಾಮ ಸೃಷ್ಟಿಯ ಕೇಂದ್ರಬಿಂದು. ಕ್ಷಣಕ್ಷಣವೂ ಕ್ಷಯವಾಗುತ್ತಲೇ ಇರುವ ಸೃಷ್ಟಿಯನ್ನು ಸಮತೋಲನದಲ್ಲಿ ಇಡಲು ಕಾಮದ ಇರುವು ಅತ್ಯಗತ್ಯ. ಇದು ಕೇವಲ ಜೀವಿಗಳ ಸಂಖ್ಯೆಯ ಹೆಚ್ಚಳಕ್ಕೆ ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಮೊದಲಾದ ಸಂಗತಿಗಳಿಗೂ ಅನ್ವಯ. “ಹೀಗಾಗಬೇಕು, ಇಷ್ಟಾಗಬೇಕು” ಅನ್ನುವ ಕಾಮನೆಯೇ ಇಲ್ಲದೆ ಆ ನಿಟ್ಟಿನಲ್ಲಿ ಪ್ರಯತ್ನವಾಗಲೀ ಕಾರ್ಯವಾಗಲೀ ಸಾಧ್ಯವಿಲ್ಲ. ಹೀಗಾಗಿ ಕಾಮ ಒಟ್ಟಾರೆಯಾಗಿ ಸೃಷ್ಟಿಯನ್ನು ಕಾಯುವ ಊರುಗೋಲು. ~ ಸಾ.ಹಿರಣ್ಮಯಿ

ಬೇಲೂರು ಚೆನ್ನಕೇಶವ ದೇಗುಲದ ಭಿತ್ತಿಯಲ್ಲಿ ರತಿ - ಮನ್ಮಥರು

~ ಸಾ.ಹಿರಣ್ಮಯೀ
ರಬ್ರಹ್ಮವು “ಒಬ್ಬನೇ ಇರುವ ನಾನು ಮತ್ತಷ್ಟು ರೂಪಗಳಲ್ಲಿ ವಿಸ್ತರಣೆಗೊಳ್ಳುತ್ತೇನೆ” ಎಂದು ಬಯಸಿತು. ಆ ಬಯಕೆಯೊಂದಿಗೇ ‘ಕಾಮ’ ಹುಟ್ಟಿಕೊಂಡಿತು. ನಾನು ಒಬ್ಬನೇ ಇದ್ದೇನೆ, ಬಹುವಾಗಿ ವಿಸ್ತರಣೆಗೊಳ್ಳಬೇಕು ಎಂದು ಪರಬ್ರಹ್ಮವು ಬಯಸಿತಲ್ಲ, ಅದೇ ಕಾಮ. ಅದು ಪರಬ್ರಹ್ಮದ ‘ಸ್ವಯಂಕಾಮ’. ಹಾಗೆ ಕಾಮಿಸಿದ ಅತವಾ ಬಯಸಿದ ನಂತರ ಅದು ಹಲವು ತತ್ತ್ವಗಳನ್ನು ಪ್ರವೇಶಿಸಿ ಹಲವಾಗಿ ಪ್ರಕಟಗೊಂಡಿತು. ಸೃಷ್ಟಿ ವಿಸ್ತರಣೆಯಾಯಿತು.

ಲೌಕಿಕದ ಉದಾಹರಣೆಯನ್ನೆ ನೋಡೋಣ. ಲೌಕಿಕದಲ್ಲಿಯೂ ಜೀವಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾಮವೇ ಮೂಲ. ಗಂಡು ಅಥವಾ ಹೆಣ್ಣು ಸಂತಾನದ ಮೂಲಕ ತನ್ನ ನಿರಂತರತೆಯನ್ನು ಬಯಸುತ್ತಾರೆ. ಈ ಪ್ರಕ್ರಿಯೆಗೆ ಪೂರಕವಾದುದು ಕಾಮ. ಒಬ್ಬ ವ್ಯಕ್ತಿ ಎರಡಾಗುವ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುವುದು ಕಾಮ.

ಇದು ಕಾಮ ತತ್ತ್ವ. ಕಾಮ ಸೃಷ್ಟಿಯ ಕೇಂದ್ರಬಿಂದು. ಕ್ಷಣಕ್ಷಣವೂ ಕ್ಷಯವಾಗುತ್ತಲೇ ಇರುವ ಸೃಷ್ಟಿಯನ್ನು ಸಮತೋಲನದಲ್ಲಿ ಇಡಲು ಕಾಮದ ಇರುವು ಅತ್ಯಗತ್ಯ. ಇದು ಕೇವಲ ಜೀವಿಗಳ ಸಂಖ್ಯೆಯ ಹೆಚ್ಚಳಕ್ಕೆ ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಮೊದಲಾದ ಸಂಗತಿಗಳಿಗೂ ಅನ್ವಯ. “ಹೀಗಾಗಬೇಕು, ಇಷ್ಟಾಗಬೇಕು” ಅನ್ನುವ ಕಾಮನೆಯೇ ಇಲ್ಲದೆ ಆ ನಿಟ್ಟಿನಲ್ಲಿ ಪ್ರಯತ್ನವಾಗಲೀ ಕಾರ್ಯವಾಗಲೀ ಸಾಧ್ಯವಿಲ್ಲ. ಹೀಗಾಗಿ ಕಾಮ ಒಟ್ಟಾರೆಯಾಗಿ ಸೃಷ್ಟಿಯನ್ನು ಕಾಯುವ ಊರುಗೋಲು.

ಇಂಥ ಕಾಮಕ್ಕೊಂದು ವೈಯಕ್ತಿಕ ‘ಅಭಿವ್ಯಕ್ತಿ’ಯನ್ನು ಆರೋಪಿಸಿದಾಗ ಅದು ಮನಮೋಹಕ ಪುರುಷನ ರೂಪ ತಳೆಯಿತು. ಮದನ, ಮನ್ಮಥನೆಂಬ ಹೆಚ್ಚುವರಿ ಹೆಸರುಗಳೂ ದೊರೆತವು. ಬರಿ ಪುರುಷನಿಂದ ಕಾರ್ಯಸಾಧನೆಯಾದೀತೆ? ಪ್ರಕೃತಿಯ ಬೆಂಬಲ ಬೇಕೇಬೇಕು. ಹೀಗಾಗಿ ರತಿ ಜೊತೆಯಾದಳು. ಆದರೆ ಇವರು ಕೇವಲ ದೈಹಿಕ ಕಾಮನೆಯ ಸಂಕೇತವಾದರು. ಸಂಭೋಗಕ್ಕಾಗಲೀ ಯಾವುದೇ ಕ್ಷೇತ್ರದಲ್ಲಿನ ಸಾಧನೆಗಾಗಲೀ ಆಯಾ ನಿಟ್ಟಿನಲ್ಲಿ ಪ್ರೀತಿ ಇರಬೇಕು. ಇಲ್ಲವಾದರೆ ಅದೊಂದು ಅರ್ಥಹೀನ ಭೌತಿಕ ಪ್ರಕ್ರಿಯೆಯಾಗಿ ಮುಗಿದುಹೋಗುವುದು. ಹಾಗೆಂದೇ ಕಾಮನಿಗೆ ಎರಡನೆಯ ಹೆಂಡತಿಯನ್ನೂ ತಂದರು. ಅವಳು ‘ಪ್ರೀತಿ’. ರತಿ ಮತ್ತು ಪ್ರೀತಿಯ ನಡುವೆ ಸವತಿ ಮತ್ಸರವಿಲ್ಲದಂಥ ಸೌಹಾರ್ದ ಸಂಬಂಧ ಹೆಣೆಯಲಾಯಿತು.

ಈ ಕಾಮ ಪರಿವಾರಕ್ಕೆ ಒಂದು ಜೀವವನ್ನು ಎರಡಾಗಿ ವಿಸ್ತರಿಸಲು ಪ್ರಚೋದಿಸುವುದಷ್ಟೆ ಕೆಲಸವಲ್ಲ. ಎರಡು ಜೀವಗಳನ್ನು ದೇಹವೆರಡಿದ್ದೂ ಒಂದಾಗಿಸುವ ಜವಾಬ್ದಾರಿಯೂ ಅದಕ್ಕಿದೆ. ಪ್ರೀತಿಯ ಸಹಾಯದಿಂದ ಕಾಮ ಇದನ್ನು ಸಾಧಿಸಬೇಕಿದೆ. ಹಾಗೆಂದೇ ಅವನಿಗೊಂದು ಮುದ್ದಾದ ಆಯುಧ ಕೊಡಲಾಗಿದೆ. ವಿವಿಧ ಹೂಗಳ ಪಂಚ ಬಾಣಗಳು ಮತ್ತು ಕಬ್ಬಿನ ಜಲ್ಲೆಯ ಬಿಲ್ಲು! ಜೊತೆಗೆ ಪಂಚವರ್ಣದ ಗಿಳಿಯ ವಾಹನ. ಇಷ್ಟರಿಂದಲೇ ಕಾಮ ಕೆಲಸ ನೆರವೇರಿಸುತ್ತಾನೆ.

ಇಂಥ ಸುಂದರ ತತ್ತ್ವ ಮತ್ತು ಅಭಿವ್ಯಕ್ತಿಯ ಕಾಮವನ್ನು ಅಥವಾ ಕಾಮನನ್ನು ವಿಕೃತಗೊಳಿಸಿರುವ ಜೀವಿಯೆಂದರೆ, ಅದು ಮನುಷ್ಯ. ಮನುಷ್ಯ ಕಾಮನನ್ನು ಖಳನ ಸ್ಥಾನದಲ್ಲಿ ನಿಲ್ಲಿಸಿದ್ದಾನೆ. ಇದಕ್ಕೆ ಕಾರಣ ಆತ ಪ್ರೀತಿಯನ್ನು ಕಡೆಗಣಿಸಿರುವುದು. ಮತ್ತು ಕಾಮವನ್ನು ದೇಹಕ್ಕೆ, ಸಂಭೋಗಕ್ಕೆ ಮಾತ್ರ ಸೀಮಿತ ಸಂಗತಿ ಎಂದು ಭಾವಿಸಿರುವುದು. ಈ ತಪ್ಪು ತಿಳುವಳಿಕೆಯಿಂದ ಹೊರಗೆ ಬಂದು ಕಾಮವನ್ನು ಯಥಾವತ್ತಾಗಿ ಅರಿತುಕೊಂಡರೆ ಬಹುತೇಕ ನಮ್ಮ ಎಲ್ಲ ಸಮಸ್ಯೆಗಳೂ ಪರಿಹಾರಗೊಳ್ಳುವವು.

ಆಧ್ಯಾತ್ಮಿಕವಾಗಿಯೂ ಅಷ್ಟೇ. ಕಾಮ ಪರಬ್ರಹ್ಮದ ಮೊದಲ ವಿಸ್ತರಣೆ. ಮೊದಲ ಸೃಷ್ಟಿ. ಅಥವಾ ಮೊದಲ ಮಗು. ಆದ್ದರಿಂದ ಕಾಮವನ್ನು ತಿಳಿದರೆ ಪರಬ್ರಹ್ಮನನ್ನು ತಲುಪುವುದು ಅಸಾಧ್ಯವೇನಲ್ಲ. ಹಾಗೆಂದೇ ತಾಪಸಿಗಳು ಕಾಮನನ್ನು ಸಾಕ್ಷಿಯಾಗಿ ನೋಡುತ್ತಾ ಧ್ಯಾನ ವಿಲೀನರಾಗಿ ಸಾಕ್ಷಾತ್ಕಾರದ ಪ್ರಯತ್ನಗಳನ್ನು ನಡೆಸಿದ್ದು, ಪಡೆದಿದ್ದು. ಕಾಮನನ್ನು ಒಳಗೊಂಡಾಗ ಅವನನ್ನು ತಿಳಿಯುವುದು ಅಸಾಧ್ಯವೆಂಬ ಚಿಂತನೆ ಇದರ ಹಿಂದಿದೆ. ಕೆಲವರು ದೇಹದಿಂದಲೂ ಕಾಮವನ್ನು ನಿರ್ಬಂಧಿಸಿ ಸಾಧನೆ ನಡೆಸಿದರೆ, ಕೆಲವರು ಅದನ್ನು ಒಳಗೊಂಡಂತೆಯೇ ಸಾಕ್ಷಾತ್ಕಾರ ಪಡೆದಿದ್ದಾರೆ. ಆದರೆ ಈ ಎರಡನೆ ಬಗೆಯ ಸಾಧನೆ ಅತ್ಯಂತ ಕಠಿಣ.

Leave a Reply