“ನಮ್ಮ ನಂಬಿಕೆಗಳು ನಮ್ಮ ವ್ಯಕ್ತಿತ್ವವನ್ನು ಸಾಬೀತುಪಡಿಸುವುದಿಲ್ಲ. ನಮ್ಮ ನಮ್ಮ ವರ್ತನೆಗಳೇ ನಮ್ಮ ವ್ಯಕ್ತಿತ್ವಕ್ಕೆ ಒರೆಗಲ್ಲಾಗುತ್ತವೆ”
ಬಹಳ ಬಾರಿ ನಾವು ಇಂಥ ನಿರೀಕ್ಷೆ ಇಟ್ಟುಕೊಂಡಿರುತ್ತೇವೆ. “ನಾವು ಮಹಾನ್ ಆಸ್ತಿಕರು. ದೇವರು, ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಅಥವಾ ನಮ್ಮಲ್ಲಿ ಗುರುವಿನ ಕುರಿತಾಗಿ ವಿಪರೀತ ಶ್ರದ್ಧೆ ಇದೆ. ಅಥವಾ, ನಮ್ಮ ಸಾಮಾಜಿಕ ಜೀವನದಲ್ಲಿ ನಾವು ನಿರ್ದಿಷ್ಟ ತತ್ವ – ಸಿದ್ಧಾಂತವನ್ನು ಪ್ರತಿಪಾದಿಸುತ್ತೇವೆ. ಅದನ್ನು ಬೆಂಬಲಿಸುತ್ತೇವೆ. ನಾನು ಪ್ರತಿಪಾದಿಸುವ ಸಿದ್ಧಾಂತ ಅತ್ಯಂತ ಶ್ರೇಷ್ಠ ಸಿದ್ದಾಂತ. ಆದ್ದರಿಂದ, ನೀವು ನನ್ನನ್ನು ಗೌರವಿಸಬೇಕು” ಎಂದು ಬಯಸುತ್ತೇವೆ.
ಆದರೆ, ನಾವು ಕೇವಲ ಧರ್ಮವನ್ನು ‘ನಂಬಿದರೆ’, ಸಿದ್ಧಾಂತವನ್ನು ‘ನಂಬಿದರೆ’ ಸಾಲದು. ನಮ್ಮ ನಡೆನುಡಿಗಳು ಮಾನವೀಯವಾಗಿರಬೇಕು. ಜೀವಪರವಾಗಿರಬೇಕು. ಆಗ ಮಾತ್ರ ನಿಮ್ಮ ವ್ಯಕ್ತಿತ್ವ ಗೌರವವನ್ನು ಪಡೆಯುವುದು.
ವಂಚನೆ, ಕಳ್ಳತನ, ಸುಳ್ಳು ಹೇಳುವುದು, ಹಿಂಸೆಗಿಳಿಯುವುದು ಮತ್ತು ಇತರರನ್ನು ಅವಮಾನಿಸುವುದು – ಈ ಯಾವುವೂ ಸನ್ನಡತೆಗಳಲ್ಲ. ನೀವು ನಿಮ್ಮ ನಂಬಿಕೆಗಳ ಕುರುಹುಗಳನ್ನು ಧರಿಸಿಕೊಂಡೇ ಈ ಯಾವುದಾದರೊಂದು ದುರ್ಗುಣ ತೋರುತ್ತೀರೆಂದರೆ, ನಿಮ್ಮ ನಂಬಿಕೆಯಿಂದ ಪ್ರಯೋಜನವೇನು? ಸಮಾಜಕ್ಕೆ ಬೇಕಿರುವುದು ನೀವು ಸಮಾಜದಲ್ಲಿ ಹೇಗೆ ಇರುತ್ತೀರಿ ಎಂಬುದೇ ಹೊರತು, ನೀವು ಏನನ್ನು ನಂಬುತ್ತೀರಿ ಎಂದಲ್ಲ!
ನೀವು ಗಾಂಧಿವಾದಿಯಾಗಿದ್ದೀರಿ. ಗಾಂಧಿ ಹೆಸರಿನ ಸಂಘಟನೆಯಲ್ಲಿ ತೊಡಗಿಕೊಂಡಿದ್ದೀರಿ… ಆದರೆ, ನಿಮ್ಮದು ಆಡಂಬರದ ಬದುಕು. ನಿಮ್ಮ ಮನಸ್ಥಿತಿ ಒಳಗೊಳ್ಳದ ಮನಸ್ಥಿತಿ. ಇದರಿಂದ ಏನುಪಯೋಗ?
ನೀವು ಧಾರ್ಮಿಕ ಪ್ರವೃತ್ತಿಯವರಾಗದ್ದೀರಿ. ನಿಮ್ಮ ಮನೆ ಬಾಗಿಲಲ್ಲೇ ನಿಮ್ಮ ಧರ್ಮದ ಸಂಕೇತವಿದೆ. ಆದರೆ, ನಿಮಗೆ ಮನುಷ್ಯರನ್ನು ಪ್ರೀತಿಸಲು ಬರುವುದಿಲ್ಲ. “ಎಲ್ಲರಲ್ಲೂ ನೆಲೆಸಿರುವುದು ಒಬ್ಬನೇ ಪರಮಾತ್ಮ” ಎಂದರಿತು ನಡೆದುಕೊಳ್ಳುವುದಿಲ್ಲ. ಹೀಗಿರುವಾಗ, ನಿಮ್ಮ ಧಾರ್ಮಿಕ ಪ್ರವೃತ್ತಿ ಯಾವ ಪುರುಷಾರ್ಥಕ್ಕೆ!?
ಆದ್ದರಿಂದ, ನಂಬಿಕೆಯನ್ನು ಕ್ರಿಯೆಗಿಳಿಸಲು ಪ್ರಯತ್ನಿಸಿ. ನಿಮ್ಮ ವರ್ತನೆಯೇ ನಿಮ್ಮ ವ್ಯಕ್ತಿತ್ವವನ್ನು ಬೆಳೆಸುವುದು.