ನೀನು ಏನಾಗಿದ್ದೀಯೋ ಅದುವೇ ಜಗತ್ತಿಗೆ ನಿನ್ನ ಕೊಡುಗೆಯಾಗಿರುತ್ತದೆ

photo.jpgಗುಲಾಮರು ಮತ್ತೊಬ್ಬ ಗುಲಾಮನನ್ನು ಹುಟ್ಟುಹಾಕಬಲ್ಲರಷ್ಟೆ. ಸ್ವತಂತ್ರ ವ್ಯಕ್ತಿಯು ಸ್ವಾತಂತ್ರ್ಯವನ್ನು ಹುಟ್ಟುಹಾಕುವನು. ಜ್ಞಾನಿಯು ನಿಮ್ಮನ್ನೂ ಅರಿವಿನ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತಾನೆ. ಯಾರು ಸ್ವತಃ ಬಂಧಿತರಾಗಿರುತ್ತಾರೋ ಅವರು ನಿಮ್ಮನ್ನೂ ಸಿಲುಕಿಸಲು ಪ್ರಯತ್ನಿಸುತ್ತಾರೆ. ನಾನು ಏನಾಗಿದ್ದೀನೋ ಜಗತ್ತಿಗೆ ನನ್ನ ಕೊಡುಗೆ ಅದೇ ಆಗಿರುತ್ತದೆ. ನಾನು ಏನಲ್ಲವೋ ಅದನ್ನು ಹೇಗೆ ತಾನೆ ಜಗತ್ತಿಗೆ ಕೊಡಲು ಸಾಧ್ಯ? ನನ್ನ ಬಳಿ ಏನಿಲ್ಲವೋ ಅದನ್ನು ನಾನು ಹೇಗೆ ತಾನೆ ಕೊಡಬಲ್ಲೆ!?

~ Whosoever

 ನಾವು ಬೇಸರದಲ್ಲಿ ಮುಳುಗಿದ್ದೇವೆ. ನಮಗೆ ವಿಪರೀತ ಬೋರ್ ಹೊಡೆಯುತ್ತದೆ. ಬೇಸರವನ್ನೆ ಹಾಸು ಹೊದ್ದಿರುವ ವ್ಯಕ್ತಿ ಮಿತ್ರರನ್ನು ಹುಡುಕಿ ಹೊರಡುತ್ತಾನೆ. ದುರದೃಷ್ಟ! ಆತನೂ ಬೋರ್ ಆಗಿರುತ್ತಾನೆ. ಇಬ್ಬರ ಬೇಸರವೂ ಸೇರಿ ಬೇಸರ ಮತ್ತಷ್ಟು ಹೆಚ್ಚುತ್ತದೆ ಹೊರತು ಕಡಿಮೆಯಂತೂ ಆಗುವುದಿಲ್ಲ.

ನೀವು ಯಾವತ್ತಾದರೂ ಯೋಚಿದ್ದೀರೇನು, ಯಾಕಾಗಿ ಇಷ್ಟು ಬೋರ್ ಆಗುತ್ತದೆ ಎಂದು? ನಿಮಗೆ ಎಲ್ಲದರ ಬಗ್ಗೆ ಮಾಹಿತಿಯಿದೆ, ನೀವು ಸಾಕಷ್ಟು ಮಾಹಿತಿಯುಳ್ಳವರಾಗಿದ್ದೀರಿ ಅನ್ನೋದನ್ನ ಒಪ್ಪಿಕೊಳ್ಳೋಣ; ಆದರೆ ನೀವು ಇದರಿಂದ ಏನು ತಿಳಿದಂತಾಯ್ತು? ಮಾಹಿತಿಯ ರಾಶಿ ಮತ್ತಷ್ಟು ಬೋರ್ ಹೊಡೆಸುತ್ತದೆಯಷ್ಟೆ. ಮಾಹಿತಿಗಳನ್ನ ಕಲೆಹಾಕಿಕೊಂಡು ನಾವು ಸುಸ್ತಾಗುತ್ತೇವೆ. ಅದರಿಂದೇನೂ ಉಪಯೋಗವಿಲ್ಲ. ಆದರೆ, ಇಲ್ಲೊಂದು ವಿಚಿತ್ರವಿದೆ. ಬೇಸರಗೊಂಡಿರುವ ವ್ಯಕ್ತಿ ಮತ್ತಷ್ಟು ಮಾಹಿತಿಗಳನ್ನು ಒಟ್ಟುಮಾಡಲು ತೊಡಗುತ್ತಾನೆ.  ಮಾಹಿತಿಗಳಲ್ಲಿ ಜೀವವೇ ಇರೋದಿಲ್ಲ. ಜೀವಂತಿಕೆ ಇರುವುದು ಅನುಭವದಲ್ಲಿ, ನಮ್ಮ ತಿಳಿವಿನಲ್ಲಿ. ಆದ್ದರಿಂದಲೇ ಯಾರಾದರೂ ತಿಳಿವಳಿಕೆ ಉಳ್ಳವರ, ಸಾಧು ಸಜ್ಜನರ, ಪ್ರಬುದ್ಧರ ಆಸುಪಾಸಿನಲ್ಲಿ ಇರುವಾಗ ಬೇಸರ ನಮ್ಮನ್ನು ಬಾಧಿಸುವುದಿಲ್ಲ. ಇಂಥವರ ಸಂಗದಲ್ಲಿ ಯಾವತ್ತೂ ಬೋರ್ ಎನ್ನಿಸುವುದಿಲ್ಲ.

ಆದರೆ ನೀವು ಅವರ ಮೇಲೆ ಅವಲಂಬಿತರಾಗತೊಡಗಿದರೆ, ಪ್ರಬುದ್ಧ ವ್ಯಕ್ತಿಯೂ ನಿಮಗೆ ಬಂಧನವಾಗಿಬಿಡುತ್ತಾನೆ. ನೀವು ನಿಮ್ಮ ಹಣತೆ ಹೊತ್ತಿಸಿಕೊಳ್ಳುವ ಬದಲು ಅವರ ಬೆಳಕಿನಡಿಯಲ್ಲೆ ಕೆಲಸ ಮಾಡಿಕೊಳ್ಳಲು ಮುಂದಾಗುತ್ತೀರಿ. ಅವರ ಬಳಿ ಒಂದು ಹಣತೆ ಇದೆ. ಅವರೇ ಸ್ವತಃ ಒಂದು ಹಣತೆಯಾಗಿದ್ದಾರೆ. “ನಿನ್ನ ಬಳಿ ಹಣತೆ ಇಲ್ಲವಾದ್ದರಿಂದ ನನ್ನ ಹಣತೆಯ ಬೆಳಕನ್ನೆ ಬಳಸಿಕೋ” ಎಂದವರು ಹೇಳುತ್ತಾರೆ. ನೀವಾದರೋ… ನಿಮ್ಮ ಹಣತೆ ಬೆಳಗಿಕೊಳ್ಳುವ ಚಿಂತೆಯನ್ನು ಸಂಪೂರ್ಣ ಬದಿಗೊತ್ತಿ ಅವರ ಹಣತೆ ಬೆಳಕಿನ ಮೇಲೇ ಸಂಪೂರ್ಣ ಅವಲಂಬನೆ ಬೆಳೆಸಿಕೊಂಡುಬಿಡುತ್ತೀರಿ. ನಿಮ್ಮ ಹಣತೆ ಹೊತ್ತಿಸಿಕೊಳ್ಳುವುದು ಕಷ್ಟದ ಕೆಲಸವೆನ್ನಿಸುತ್ತದೆ ನಿಮಗೆ. ನೀವನ್ನುತ್ತೀರಿ, ‘ಗುರುವೇ ನೀವಿದ್ದೀರಲ್ಲ! ನಿಮ್ಮ ಬೆಳಕೇ ಸಾಕು ನನಗೆ.’ ಎಂದು. ಆಗ ಪ್ರಬುದ್ಧನಾದ ಗುರುವು ನಿಮ್ಮನ್ನು ಓಡಿಸಬೇಕಾಗುತ್ತದೆ. ನೀವು ಅವರ ಮೇಲೆ ಅವಲಂಬಿತರಾಗೋದನ್ನ ಗುರುವು ಬಯಸೋದಿಲ್ಲ. ನಿಮ್ಮನ್ನು ಸ್ವತಂತ್ರಗೊಳಿಸುವುದು ಅವರ ಉದ್ದೇಶವಾಗಿರುತ್ತದೆ. ನಿಮ್ಮನ್ನು ಸ್ವಾವಲಂಬಿಯಾಗಿಸೋದು ಅವರ ಧ್ಯೇಯವಾಗಿರುತ್ತದೆ. ಆದರೆ ನೀವು ಅವರ ಮೇಲೆ ಅವಲಂಬನೆ ಬೆಳೆಸಿಕೊಳ್ಳುತ್ತ ಅವರನ್ನೆ ನಿಮ್ಮ ಸೇವಕರಾಗಿಸಿಕೊಳ್ಳಲು ಹವಣಿಸುತ್ತೀರಿ. ಅಂದರೆ, ನಿಮಗಾಗಿ ಅವರು ಇರಬೇಕೆಂದು ಬಯಸತೊಡಗುತ್ತೀರಿ!

ಗುಲಾಮರು ಮತ್ತೊಬ್ಬ ಗುಲಾಮನನ್ನು ಹುಟ್ಟುಹಾಕಬಲ್ಲರಷ್ಟೆ. ಸ್ವತಂತ್ರ ವ್ಯಕ್ತಿಯು ಸ್ವಾತಂತ್ರ್ಯವನ್ನು ಹುಟ್ಟುಹಾಕುವನು. ಜ್ಞಾನಿಯು ನಿಮ್ಮನ್ನೂ ಅರಿವಿನ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತಾನೆ. ಯಾರು ಸ್ವತಃ ಬಂಧಿತರಾಗಿರುತ್ತಾರೋ ಅವರು ನಿಮ್ಮನ್ನೂ ಸಿಲುಕಿಸಲು ಪ್ರಯತ್ನಿಸುತ್ತಾರೆ. ನಾನು ಏನಾಗಿದ್ದೀನೋ ಜಗತ್ತಿಗೆ ನನ್ನ ಕೊಡುಗೆ ಅದೇ ಆಗಿರುತ್ತದೆ. ನಾನು ಏನಲ್ಲವೋ ಅದನ್ನು ಹೇಗೆ ತಾನೆ ಜಗತ್ತಿಗೆ ಕೊಡಲು ಸಾಧ್ಯ? ನನ್ನ ಬಳಿ ಏನಿಲ್ಲವೋ ಅದನ್ನು ನಾನು ಹೇಗೆ ತಾನೆ ಕೊಡಬಲ್ಲೆ!?

ಹೇಗೆ ಅಶಾಂತ ಮನಸ್ಕನು ಮತ್ತೊಬ್ಬರಿಗೆ ಶಾಂತಿ ನೀಡಲು ಸಾಧ್ಯವಿಲ್ಲವೋ, ಹಿಂಸ್ರ ಸ್ವಭಾವದವನು ಮತ್ತೊಬ್ಬರನ್ನು ಅಹಿಂಸೆ ಆಚರಿಸುವಂತೆ ಸೂಚಿಸಲು ಸಾಧ್ಯವಿಲ್ಲವೋ…. ಹಾಗೆಯೇ; ಭಯಭೀತನು ಮತ್ತೊಬ್ಬರ ಭಯವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ನಿರ್ಭಯನಾದ ವ್ಯಕ್ತಿಯಷ್ಟೆ ಮತ್ತೊಬ್ಬರ ಭಯ ಹೋಗಲಾಡಿಸಬಲ್ಲನು, ಶಾಂತ ಮನಸ್ಕನಷ್ಟೆ ಮತ್ತೊಬ್ಬರಲ್ಲಿ ಶಾಂತಿ ತುಂಬಬಲ್ಲನು, ಅಹಿಂಸಾ ಮಾರ್ಗಿಯಷ್ಟೇ ಮತ್ತೊಬ್ಬರನ್ನು ಅಹಿಂಸಾ ಮಾರ್ಗದಲ್ಲಿ ನಡೆಸಬಲ್ಲನು.

ಇದೊಂದು ಅತ್ಯಂತ ಸರಳ ನಿಯಮ. ನೀನು ಏನಾಗಿದ್ದೀಯೋ ಅದುವೇ ಜಗತ್ತಿಗೆ ನಿನ್ನ ಕೊಡುಗೆಯಾಗಿರುತ್ತದೆ. ನೀವು ಈ ಜಗತ್ತಿಗೆ ಏನನ್ನು ನೀಡಲು ಬಯಸುತ್ತೀರೋ ನೀವು ಅದೇ ಆಗಿರಲು ಪ್ರಯತ್ನಿಸಿ. ನೀವು ಶಾಂತಿ, ಪ್ರೇಮಾನಂದಗಳಿಂದ ತುಂಬಿದ್ದೀರಿ ಎಂದಾದರೆ, ನಿಶ್ಚಿತವಾಗಿ ಶಾಂತಿ, ಪ್ರೇಮಾನಂದಗಳ ತರಂಗ ನಿಮ್ಮಿಂದ ನಿರಂತರವಾಗಿ ಹೊಮ್ಮುತ್ತಿರುತ್ತದೆ. ನೀವು ಮಹತ್ವಾಕಾಂಕ್ಷೆ, ಕ್ರೋಧ, ಕಾಮನೆ, ವಾಸನೆ, ಲೋಭಗಳಿಂದ ತುಂಬಿಕೊಂಡಿದ್ದೀರಿ ಎಂದಾದರೆ, ನಿಮ್ಮಿಂದ ಹೊಮ್ಮುವ ತರಂಗಗಳೂ ಅವೇ ಆಗಿರುತ್ತವೆ. ನೀವು ಯಾವುದರಿಂದ ಆವೃತವಾಗಿರುತ್ತೀರೋ ನಿಮ್ಮಿಂದ ಹೊಮ್ಮುವುದೂ ಅದೇ ಆಗಿರುತ್ತದೆ.

ನೀವು ಎಂತಹ ಜಗತ್ತಿನಲ್ಲಿ ಇರಲು ಬಯಸುತ್ತೀರೋ ಅದನ್ನು ಮೊದಲು ನೀವು ನಿಮ್ಮೊಳಗೇ ಸೃಷ್ಟಿಸಿಕೊಳ್ಳಬೇಕು. ನೀವು ಹೇಗೆ ಇರುತ್ತೀರೋ ಜಗತ್ತೂ ಹಾಗೇ ಇರುತ್ತದೆ. ಇಷ್ಟಂತೂ ನಿಖರವಾಗಿ ಹೇಳಬಹುದು –  ನೀವು ಬೆಳಕಿನ ಪುಂಜವಾಗಿದ್ದೀರಾದರೆ, ಯಾರ ಬದುಕಲ್ಲೂ ನೀವು ಕತ್ತಲನ್ನು ಉಂಟು ಮಾಡಲಾರಿರಿ!

 

 

1 Comment

  1. ಇದು ಸುಳ್ಳು ನಾವು ಪ್ರೀತಿ ಕೊಟ್ಟಾಗ ಅದನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಪ್ರೀತಿಗೆ ಪ್ರೀತಿ ತೋರಿಸುವುದಿಲ್ಲ. ತಂದೆ ತಾಯಿ ಮಕ್ಕಳನ್ನು ಪ್ರೀತಿಯಿಂದ ಬೆಳೆಸುತ್ತಾರೆ ಆದರೆ ಅದೇ ಮಕ್ಕಳು ತಂದೆ ತಾಯಿಯನ್ನು ಆಚೆ ಹಾಕುತ್ತಾರೆ.

Leave a Reply