ಹುದುಗಿ ಕುಳಿತ ಭಾವನೆಗಳನ್ನು, ಕೋಪತಾಪಗಳನ್ನು ಹೊರಹಾಕುವುದು ಒಂದೆಡೆಯಾದರೆ; ಅವೆಲ್ಲವನ್ನೂ ಸಾಕ್ಷಿಯಾಗಿ ನೋಡಿಕೊಳ್ಳುತ್ತಾ ಅವು ನಿಜಕ್ಕೂ ಅಸ್ತಿತ್ವದಲ್ಲಿಲ್ಲ, ಅವೆಲ್ಲವೂ ಭ್ರಮೆಯಷ್ಟೇ ಎಂದು ಕಂಡುಕೊಳ್ಳುವುದು ಮತ್ತೊಂದೆಡೆ. ಈ ಎರಡನೇ ಬಗೆಯು ನಮ್ಮೊಳಗೆ ಶಾಂತಿ ನೆಮ್ಮದಿಯನ್ನು ಕಾಯ್ದುಕೊಳ್ಳಲು ಸಮರ್ಥ ವಿಧಾನವಾಗಿದೆ.
ಒಂದು ಕಥೆಯಿಂದ ಶುರು ಮಾಡೋಣ. ಒಂದೂರಿನಲ್ಲಿ ಒಬ್ಬಳು ಅನಾಥ ಮುದುಕಿ. ವಯಸ್ಸಿನ ಭಾರಕ್ಕಿಂತ ಮನಸ್ಸಿನ ಭಾರಕ್ಕೇ ಕುಗ್ಗಿ ಹೋದವಳಾಕೆ. ಒಮ್ಮೆ ಅವಳು ಮುಲ್ಲಾ ನಸ್ರುದ್ದೀನನ ಬಳಿ ಹೋಗುತ್ತಾಳೆ. ತನ್ನಿಂದ ಜೀವನ ಸಾಗಿಸಲು ಸಾಧ್ಯವೇ ಆಗುತ್ತಿಲ್ಲ ಎನ್ನುತ್ತಾಳೆ. ಮುಲ್ಲಾ ಆಕೆಯ ಕಿವಿಯಲ್ಲೊಂದು ಗುಟ್ಟು ಹೇಳಿ, ತಿಂಗಳು ಕಳೆದು ಬರುವಂತೆ ಹೇಳುತ್ತಾನೆ. ಅದರಂತೆ ಆಕೆ ತಿಂಗಳು ಕಳೆದು ಅವನ ಬಳಿ ಬಂದಾಗ ಹಕ್ಕಿಯ ಹಾಗೆ ತೇಲುತ್ತಿರುತ್ತಾಳೆ. ಏನಿಲ್ಲವೆಂದರೂ ಹತ್ತು ವರ್ಷ ಚಿಕ್ಕವಳಂತೆ ಕಾಣುತ್ತ ಇರುತ್ತಾಳೆ. ಕಳೆದ ಸಾರ್ತಿ ಅವಳನ್ನು ನೋಡಿದವರೆಲ್ಲರಿಗೂ ಮುದುಕಿಯ ಹೊಸ ಅವತಾರ ಕಂಡು ಅಚ್ಚರಿ. ಅವರು ಮುಲ್ಲಾ ನಸ್ರುದ್ದೀನನ್ನು ಮುತ್ತಿಕ್ಕಿಕೊಂಡು ಕೇಳುತ್ತಾರೆ, `ನೀನು ಅವಳಿಗೆ ಹೇಳಿದ ಗುಟ್ಟು ಯಾವುದು? ಆಕೆ ಇಷ್ಟೊಂದು ಬದಲಾಗಿಬಿಟ್ಟಿದ್ದಾಳಲ್ಲ!?’ ಮುಲ್ಲಾ ನಕ್ಕು ಹೇಳುತ್ತಾನೆ, `ಹೆಚ್ಚೇನಿಲ್ಲ, ಪ್ರತಿ ಸಂಜೆ ಗೋಡೆಗಳ ಜೊತೆ ಮಾತಾಡು ಅಂದೆ ಅಷ್ಟೇ!’
ಮೇಲಿನ ಕಥೆ ಏನು ಹೇಳುತ್ತದೆ? ಮುಲ್ಲಾ ಯಾಕೆ ಆ ಮುದುಕಿಗೆ ಗೋಡೆಗಳ ಜತೆ ಮಾತಾಡಲು ಹೇಳಿದ? ಉತ್ತರ ಸುಲಭ. ಆ ಮುದುಕಿಯ ಕಷ್ಟಗಳೆಲ್ಲ ಆಕೆಯಿಂದಲೇ ಹುಟ್ಟಿಕೊಂಡಂಥವಾಗಿದ್ದವು. ಆಕೆಯ ಕಾಲಗಟ್ಟಲೆಯ ಯೋಚನೆಗಳು ಪದರಗಟ್ಟಿ ಆಕೆಯ ನೈಜ ಆನಂದ ಸ್ಥಿತಿಗೆ ಮಂಕು ಕವಿಯುವಂತೆ ಮಾಡಿಬಿಟ್ಟಿದ್ದವು. ಆಕೆ ತನ್ನ ದುಗುಡಗಳನ್ನು, ತುಮುಲಗಳನ್ನು ಹೊರಹಾಕಲೇಬೇಕಾದ ಅನಿವಾರ್ಯತೆ ಇತ್ತು. ಅನಾಥ ಮುದುಕಿಯ ಮಾತು ಕೇಳಲು ಯಾರೂ ಜನವೇ ಇದ್ದಿಲ್ಲ. ಅದಕ್ಕೇ ಮುಲ್ಲಾ ಆಕೆಗೆ ಗೋಡೆಗಳೊಂದಿಗಾದರೂ ಮಾತಾಡುವಂತೆ ಹೇಳಿದ. ಪ್ರತಿ ಸಂಜೆ ಊರ ಹೊರಗಿನ ಮುರುಕು ಮನೆಗೆ ತೆರಳುತ್ತಿದ್ದ ಮುದುಕಿ, ಗೋಡೆಗಳ ಎದುರು ನಿಂಂತು ತನ್ನ ಅಷ್ಟೂ ಸುಖ ದುಃಖಗಳನ್ನು ಹರಟುತ್ತಿದ್ದಳು. ಎಲ್ಲವನ್ನೂ ಹೇಳಿಕೊಂಡು ಹಗುರಾದಳು. ತನ್ನೊಳಗೆ ಅದುಮಿಟ್ಟುಕೊಂಡಿದ್ದ ನಿಟ್ಟುಸಿರು ಹೊರ ಚೆಲ್ಲಿದಳು. ಕಣ್ಣೀರಿಟ್ಟಳು. ತಿಂಗಳ ಕೊನೆ ಅನ್ನುವ ಹೊತ್ತಿಗೆ ಆಕೆ ಸಾಕಷ್ಟು ನಿರಾಳವಾಗಿದ್ದಳು.
ನಾವೂ ಇದನ್ನು ಸಾಕಷ್ಟು ಅನುಭವಿಸಿದ್ದೇವೆ ಅಲ್ಲವೆ? ಏನಾದರೂ ಸಂಗತಿಯನ್ನು, ಅದರಲ್ಲೂ ನೋವಿನ ಸಂಗತಿಯನ್ನು ಯಾರೊಂದಿಗಾದರೂ ಹಂಚಿಕೊಂಡರಷ್ಟೆ ಸಮಾಧಾನವಾಗುವುದು. ಮನಸ್ಸು ಮುಚ್ಚಿಕೊಂಡಷ್ಟೂ ಮುದುಡಿಹೋಗುತ್ತದೆ. ಅದು ಅರಳಿಕೊಳ್ಳಬೇಕು ಎಂದರೆ ಜಗತ್ತಿಗೆ ತೆರೆದುಕೊಳ್ಳಬೇಕು.
ಹಾಗೆಂದ ಮಾತ್ರಕ್ಕೆ ನಮ್ಮ ಖಾಸಗಿ ಬದುಕಿನ ವಿವರಗಳೆಲ್ಲವನ್ನೂ ಹೇಳಿಕೊಳ್ಳಬೇಕು ಎಂದಲ್ಲ. ಈ ಕಾಲದ ನಾವು ನಮ್ಮ ಸುಖದುಃಖಗಳನ್ನು ಫೇಸ್ ಬುಕ್ ಗೋಡೆಯ ಮೇಲೆ ಬರೆಯತೊಡಗಿದ್ದೇವೆ. ಇದರಿಂದ ಸಾಕಷ್ಟು ಸಮಸ್ಯೆಗೂ ಒಳಗಾಗುತ್ತಿದ್ದೇವೆ. ನಾವು ನಮ್ಮ ಬದುಕಿನ ವಿವರಗಳನ್ನು, ಯಾವುದೇ ಸಂಗತಿಯನ್ನು ಬರೆಯುವಾಗ ಅವು ನಮ್ಮ ಘನತೆಗೆ ಕುಂದು ಉಂಟುಮಾಡದಂತೆ ಎಚ್ಚರವಹಿಸುವುದು ಅಗತ್ಯ. ಇಷ್ಟಕ್ಕೂ ಮನಸ್ಸು ಬಿಚ್ಚಿಡುವ ಪ್ರಕ್ರಿಯೆಗೆ ಮಾತೊಂದೇ ಮಾರ್ಗವಲ್ಲ. ಸೃಜನಶೀಲವಾದ ಯಾವ ಮಾಧ್ಯಮವನ್ನಾದರೂ ಬಳಸಿಕೊಳ್ಳಬಹುದು. ನಮ್ಮ ಪೂರ್ವಜರು ಹಾಡು, ನೃತ್ಯಗಳನ್ನು, ಚಿತ್ರ ಕಲೆಯನ್ನು ಕಂಡುಕೊಂಡಿದ್ದು ಅಂತರಂಗದ ಅಭಿವ್ಯಕ್ತಿಯ ಮಾಧ್ಯಮವಾಗಿಯೇ.
ಅಂತರಂಗದಲ್ಲಿ ಹುದುಗಿದ ಭಾವನೆಗಳನ್ನು ನಾವಾಗಿಯೇ ಹೊರಹಾಕದಿದ್ದರೆ ಅವು ಒಂದಲ್ಲ ಒಂದು ರೂಪದಲ್ಲಿ ಹೊರಗೆ ಬಂದೇಬರುತ್ತವೆ. ಇದು ದೇವಾಧಿದೇವತೆಗಳನ್ನೂ ಬಿಟ್ಟಿಲ್ಲ. ನಮ್ಮ ಪೌರಾಣಿಕ ಕತೆಗಳಲ್ಲಿ ದೇವ ದೇವತೆಗಳ ಅಭಿವ್ಯಕ್ತಿಯು ವ್ಯಕ್ತಿ ರೂಪದಲ್ಲಿ ಹೊಮ್ಮುತ್ತಿದ್ದುದನ್ನು ನಾವು ಓದಿರುತ್ತೇವೆ. ಬ್ರಹ್ಮ – ವಿಷ್ಣು – ಮಹೇಶ್ವರರ ಕೋಪ, ಪ್ರೇಮ, ಕಾಮ, ಹಾಸ್ಯಗಳ ಅಭಿವ್ಯಕ್ತಿಯೂ ಅಸುರಾದಿ ರೂಪದಲ್ಲಿ ವ್ಯಕ್ತಗೊಂಡ ಕಥೆಗಳಿವೆ. ನಕಾರಾತ್ಮಕ ಭಾವಗಳು ಆಸುರೀ ರೂಪ ತಾಳಿ ಎಂತಹ ಕೆಡುಕುಗಳನು ಉಂಟುಮಾಡುತ್ತವೆ ಎಂಬುದನ್ನು ಈ ಕತೆಗಳು ಸಂಕೇತಿಸುತ್ತವೆ. ಅಂತಹ ಅಸುರರನ್ನು ಸಂಹರಿಸಲು ದೈವೀ ಶಕ್ತಿಯೇ ಅವತರಿಸಬೇಕಾಗುತ್ತದೆ. ನಕಾರಾತ್ಮಕ ಚಿಂತನೆಗಳಿಗೆ ಜನ್ಮ ನೀಡುವ ನಾವು, ಅವುಗಳ ಉಪಶಮನಕ್ಕಾಗಿ ನಮ್ಮೊಳಗಿನದೇ ಸಚ್ಚಿಂತನೆಗಳ ಮೊರೆ ಹೋಗಬೇಕು ಎಂಬುದನ್ನು ಈ ಕಥೆಗಳ ಒಟ್ಟಾರೆ ಬೋಧನೆಯಾಗಿ ನಾವು ಗ್ರಹಿಸಬಹುದು.
ಭಾವನೆಗಳ ತಾಕಲಾಟವನ್ನು ಅಭಿವ್ಯಕ್ತಿಸುವುದು ಒಂದೆಡೆಯಾದರೆ, ನಮ್ಮ ಕೋಪತಾಪಗಳ ಅಭಿವ್ಯಕ್ತಿ ಇನ್ನೊಂದೆಡೆ. ನಮ್ಮ ಮನಸ್ಸಿನ ಆಕ್ರೋಶ, ವಿಕೃತಿಗಳನ್ನು ವ್ಯಕ್ತ ಪಡಿಸಬೇಕು ಎನ್ನುವುದೇನೋ ಸರಿ. ಆದರೆ ಯಾರ ಮೇಲೆ? ಕೆಲವರು ತಮಗೆ ಯಾರ ಮೇಲೆ ಕೋಪವಿದೆಯೋ ಅವರ ಮೇಲೆಯೇ ಏರಿ ಹೊಗುತ್ತಾರೆ. ಮತ್ತೆ ಕೆಲವರು ಯಾರದೋ ಮೇಲಿನ ಕೋಪವನ್ನು ಇನ್ಯಾರದೋ ಮೇಲೆ ತೀರಿಸಿಕೊಳ್ಳುತ್ತಾರೆ. ಕೆಲವರು ಈ ಯಾವ ಅವಕಾಶವೂ ಇಲ್ಲದವರಾಗಿ ಒಡಲಲ್ಲಿ ಇಟ್ಟುಕೊಂಡು ಪ್ರತಿ ಕ್ಷಣ ಕುದಿಯುತ್ತಾರೆ ಇಲ್ಲವೇ ತಮಗೆ ತಾವೇ ಹಾನಿಯೊಡ್ಡಿಕೊಳ್ಳುತ್ತಾರೆ.
ಈ ಮೂರೂ ವಿಧಾನಗಳು ತಪ್ಪಾಗಿವೆ. ನಮ್ಮೆಲ್ಲ ನಕಾರಾತ್ಮಕ ಭಾವನೆಗಳೂ ನಮ್ಮದೇ ದೇಣಿಗೆ ಎಂಬುದನ್ನು ನಾವು ಮೊದಲು ಅರಿತುಕೊಳ್ಳಬೇಕು. ಯಾರ ಬಗೆಗಾದರೂ ಕೋಪವಿದೆ ಎಂದಾದರೆ ಅದು ನಮ್ಮ ನಿರೀಕ್ಷೆಯಿಂದಲೋ ಸ್ವಾರ್ಥದಿಂದಲೋ ಅಥವಾ ಅಸಹಾಯಕತೆಯಿಂದಲೋ ಹುಟ್ಟಿಕೊಂಡಿರುತ್ತದೆ. ಇದನ್ನು ಅರಿತ ಕ್ಷಣ ನಮ್ಮ ಕೋಪವೂ ಜಾಗ ಖಾಲಿ ಮಾಡುತ್ತದೆ.
ಭಾವನೆಗಳಾಗಲೀ, ಕೋಪತಾಪಗಳಾಗಲೀ ನಮ್ಮದೇ ಚಿಂತನೆಗಳ, ಪ್ರತಿಕ್ರಿಯೆಗಳ ಪರಿಣಾಮ. ಅವನ್ನು ನಾವೇ ಸಾಕ್ಷಿಯಾಗಿ ನಿಂತು ನೋಡಲು ಸಾಧ್ಯವಾದ ಕ್ಷಣದಲ್ಲಿ ಅವು ಇಲ್ಲವಾಗಿಬಿಡುತ್ತವೆ. ಅವೆಲ್ಲವೂ ಭ್ರಮೆಯಾಗಿದ್ದವು ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ಆಗ ನಮ್ಮೊಳಗೆ ಯಾವುದೇ ಭಾವನೆಗಳಾಗಲೀ ಸುಖ ದುಃಖಗಳಾಗಲೀ ಕೋಪ ತಾಪಗಳಾಗಲೀ ಚರಟದಂತೆ ಉಳಿದುಕೊಂಡು ಉಬ್ಬಸಪಡಿಸಲು ಅವಕಾಶವೇ ಇರುವುದಿಲ್ಲ, ಒಂಟಿ ಮುದುಕಿಯ ಹಾಗೆ ನಮಗೆ ಗೋಡೆಗಳ ಆಸರೆಯೂ ಬೇಕಾಗುವುದಿಲ್ಲ!