ಮೀನಿನಿಂದ ಫಜೀತಿಗೊಳಗಾದ ಹದ್ದು

ಒಮ್ಮೆ ಹದ್ದೊಂದು ಕೆರೆಯ ದಡದಲ್ಲಿ ಬೆಸ್ತನು ಹಿಡಿದಿಟ್ಟ ಮೀನನ್ನು ಎತ್ತಿಕೊಂಡು ಹಾರಿತು. ಹದ್ದಿನ ಕೊಕ್ಕಿನಲ್ಲಿ ಮೀನನ್ನು ಕಂಡೊಡನೆ ಹತ್ತಾರು ಕಾಗೆಗಳು ಕಾವ್ ಕಾವ್ ಅನ್ನುತ್ತಾ ಅದರ ಸುತ್ತ ಸುತ್ತುವರಿದವು. ಹದ್ದು ಎತ್ತ ಹೋದರೂ ಕಾಗೆಗಳ ಹಿಂಡು ಅದನ್ನು ಹಿಂಬಾಲಿಸಿದವು.

ಹತ್ತರಷ್ಟಿದ್ದ ಹಿಂಡಿಗೆ ನೂರಾರು ಕಾಗೆಗಳು ಸೇರಿಕೊಂಡವು. ಅವುಗಳ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲು ಹದ್ದು ಪರದಾಡಿತು. ಈ ಪರದಾಟದಲ್ಲಿ ಅದರ ಕೊಕ್ಕಿನಲ್ಲಿದ್ದ ಮೀನು ಕೆಳಗೆ ಬಿತ್ತು. ಮೀನು ಕೆಳಗೆ ಬೀಳುತ್ತಿದ್ದಂತೆಯೇ ಹದ್ದನ್ನು ಬಿಟ್ಟು ಕಾಗೆಗಳು ಅದರತ್ತ ಮುಗಿಬಿದ್ದವು.

ಈ ಎಲ್ಲ ಧಾವಂತದಿಂದ ಸುಸ್ತಾದ ಹದ್ದು ಸುಧಾರಿಸಿಕೊಳ್ಳಲು ಒಂದು ಮರದ ಮೇಲೆ ಕುಳಿತಿತು. ಆಗ ಅದಕ್ಕೆ, ‘ಆ ಅನಿಷ್ಟ ಮೀನಿನಿಂದಲೇ ಇಷ್ಟೆಲ್ಲ ಫಜೀತಿ ಆಗಿದ್ದು. ಅದನ್ನು ಎಸೆದ ನಂತರ ಎಷ್ಟೊಂದು ಶಾಂತಿ!” ಎಂಬ ಯೋಚನೆ ಮೂಡಿತು.

“ಎಲ್ಲಿಯವರೆಗೆ ವ್ಯಕ್ತಿಗೆ ಪ್ರಾಪಂಚಿಕ ಆಸೆ ಆಕಾಂಕ್ಷೆಗಳಿರುತ್ತವೆಯೋ ಅಲ್ಲಿಯವರೆಗೆ ತಾಪತ್ರಯಗಳು ಮುತ್ತಿಕೊಳ್ತವೆ. ಅದನ್ನು ಬಿಸುಟಿದೊಡನೇ ಆತನಲ್ಲಿ ಶಾಂತಿ ನೆಲೆಗೊಳ್ಳುತ್ತದೆ” ಎಂಬುದನ್ನು ವಿವರಿಸಲು ರಾಮಕೃಷ್ಣ ಪರಮಹಂಸರು ಈ ದೃಷ್ಟಾಂತವನ್ನು ಹೇಳಿದರು.

(ಆಧಾರ: ಕಥೆಗಾರ ಶ್ರೀರಾಮಕೃಷ್ಣ)

Leave a Reply