ಇನ್ನೊಬ್ಬರ ಅಭಿಪ್ರಾಯವನ್ನು ಅನುಮೋದಿಸುವಾಗ ಅದು ಮೊದಲು ನಮಗೆ ಸಂಪೂರ್ಣ ಸಮ್ಮತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಗುಂಪಿನಲ್ಲಿ ಸುಮ್ಮನೆ ಕೈಯೆತ್ತುವುದರಿಂದ ನಿಮಗೆ ನೀವೇ ದ್ರೋಹ ಮಾಡಿಕೊಂಡಂತಾಗುತ್ತದೆ.
ಜನರು ಸಾಮಾನ್ಯವಾಗಿ ತಮ್ಮ ಸ್ವಂತ ಕಿವಿಗಳಿಂದ ಕೇಳುವುದಿಲ್ಲ. ಬದಲಿಗೆ ಬೇರೆಯವರ ಕಿವಿಗಳಿಂದ ಕೇಳುತ್ತಾರೆ. ಅವರು ತಮ್ಮ ಸ್ವಂತ ಕಣ್ಣುಗಳಿಂದ ನೋಡುವುದಿಲ್ಲ. ಬದಲಿಗೆ ಬೇರೆಯವರ ಕಣ್ಣುಗಳಿಂದ ನೋಡುತ್ತಾರೆ. ಅವರು ತಮ್ಮ ರಸನೇಂದ್ರಿಯಗಳಿಗೆ ಬದಲಾಗಿ ಇತರರ ರಸನೇಂದ್ರಿಯಗಳ ರುಚಿ ಅರುಚಿಗಳನ್ನು ತಮ್ಮದಾಗಿ ಭಾವಿಸುತ್ತಾರೆ. ಪ್ರಪಂಚದ ಜನರು ಇರುವುದೇ ಹೀಗೆ! ಅವರು ತಮಗೇನು ಬೇಕೋ ಅದನ್ನು ಮಾಡುವುದಿಲ್ಲ. ಇತರರಿಗೆ ಏನು ಬೇಕೋ ಅದನ್ನು ಮಾಡಲು ಹೋಗುತ್ತಾರೆ ಮತ್ತು ಆ ಕಾರಣದಿಂದಾಗಿಯೇ ಸದಾ ಕಾಲ ಅತೃಪ್ತ ಮನಸ್ಕರಾಗಿದ್ದುಕೊಂಡು ಗೊಣಗಾಡುತ್ತ ಇರುತ್ತಾರೆ. ಸಮೂಹ ಸನ್ನಿ ಬಂದಡರವುದು ಇಂಥವರಿಗೇ. ಇಂಥವರನ್ನು ಕಂಡು ಸ್ವಾಮಿ ರಾಮತೀರ್ಥರು ಹೇಳುತ್ತಾರೆ, `ಪ್ರಾಪಂಚಿಕರೇ! ನಿಮ್ಮ ಕಿವಿಗಳನ್ನೆ, ನಿಮ್ಮ ಕಣ್ಣುಗಳನ್ನೆ, ನಿಮ್ಮ ನಾಲಿಗೆಯನ್ನೆ ಪ್ರತಿಯೊಂದು ಸಂದರ್ಭದಲ್ಲಿಯೂ ಬಳಸಿ. ಎಂಥ ಪ್ರಸಂಗ ಬಂದರೂ ನಿಮ್ಮ ತಿಳಿವಳಿಕೆಯನ್ನೆ ಉಪಯೋಗಿಸಿರಿ. ಇತರರ ಮೇಲೆ ಅವಲಂಬಿತರಾಗಬೇಡಿ.’ ಎಂದು.
ಸ್ವಾಮಿ ರಾಮತೀರ್ಥರು ಈ ವಿಷಯವನ್ನು ಮತ್ತಷ್ಟು ವಿಸ್ತರಿಸುತ್ತಾ ಅನೇಕ ಸೂಚನೆಗಳನ್ನು ನೀಡುತ್ತಾರೆ. `ವಿಚಾರಶೀಲರಾಗಿರಿ. ನಿಮ್ಮ ವರ್ತಮಾನ ಪತ್ರಿಕೆಗಳು ಯಾರ ವಿಷಯದಲ್ಲಿಯಾದರೂ ಅನುಕೂಲವಾಗಿಯೋ ಪ್ರತಿಕೂಲವಾಗಿಯೋ ಬರೆದರೆ ನಿಮ್ಮ ಇಡೀ ಜನಾಂಗವೇ ಆ ಪ್ರಕಾರವಾಗಿಯೇ ಯೋಚಿಸುವುದಕ್ಕೆ, ಭಾವಿಸುವುದಕ್ಕೆ ತೊಡಗುತ್ತದೆ. ನೀವು ಯಾವಾಗಲೂ ವರ್ತಮಾನ ಪತ್ರಿಕೆಗಳು ಹೀಗೆ ಹೇಳುತ್ತವೆ, ಹಾಗೆ ಹೇಳುತ್ತವೆ ಎಂದು ಹೇಳುತ್ತ ಇರುತ್ತೀರಿ. ಈ ವೃತ್ತ ಪತ್ರಿಕೆಗಳಲ್ಲಿ ಬರೆಯುವವರಾದರೂ ಯಾರೆಂದು ಸ್ವಲ್ಪ ಯೋಚಿಸಿ. ಅವರ್ಯಾರೂ ಸಮಚಿತ್ತದ ಜ್ಞಾನಿಗಳಲ್ಲ. ನಿಷ್ಪಕ್ಷಪಾತಿಗಳಲ್ಲ. ಸುದ್ದಿ ಕಳುಹಿಸುವವರು ತಾವು ಏನನ್ನು ಗ್ರಹಿಸಿರುತ್ತಾರೋ ಅದನ್ನೆ ಬರೆದು ಕಳಿಸುತ್ತಾರೆ. ಪತ್ರಿಕೆಯಲ್ಲಿ ಪ್ರಕಟವಾಗುವುದೂ ಅದೇ. ಅದನ್ನು ಓದಿಕೊಳ್ಳುವ ನೀವು ಅವರ ಅಭಿಪ್ರಾಯವನ್ನು ಮೈಮೇಲೆ ಹೇರಿಕೊಳ್ಳುತ್ತೀರಿ. ಅದನ್ನೆ ಪ್ರತಿಧ್ವನಿಸತೊಡಗುತ್ತೀರಿ. ಇದು ಸ್ವಾತಂತ್ರ್ಯವಲ್ಲ. ಪ್ರಜಾಸ್ವಾತಂತ್ರ್ಯ ಎಂದರೆ, ಹಕ್ಕು ಬಾಧ್ಯತೆಗಳ ಸ್ವಾತಂತ್ರ್ಯ ಎಂದರೆ ಪ್ರತಿಯೊಂದು ಸಂದರ್ಭದಲ್ಲಿಯೂ ನಿಮ್ಮ ಕಿವಿಗಳನ್ನೆ, ನಿಮ್ಮ ಕಣ್ಣುಗಳನ್ನೆ ಉಪಯೋಗಿಸುವುದಾಗಿದೆ‘ ಎಂದು ರಾಮತೀರ್ಥರು ಕರೆ ನೀಡುತ್ತಾರೆ.
ಇನ್ನೊಬ್ಬರ ಅಭಿಪ್ರಾಯವನ್ನು ಅನುಮೋದಿಸುವಾಗ ಅದು ಮೊದಲು ನಮಗೆ ಸಂಪೂರ್ಣ ಸಮ್ಮತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಗುಂಪಿನಲ್ಲಿ ಸುಮ್ಮನೆ ಕೈಯೆತ್ತುವುದರಿಂದ ನಿಮಗೆ ನೀವೇ ದ್ರೋಹ ಮಾಡಿಕೊಂಡಂತಾಗುತ್ತದೆ. ರಾಮತೀರ್ಥರು ಈ ಕುರಿತು ಹೇಳುತ್ತಾ, `ನಿಮ್ಮ ಮೇಲೆ ನಿಮಗೆ ದಯವಿರಲಿ. ನಿಮ್ಮ ಸ್ವಂತ ಬುದ್ಧಿಯಿಂದ ವಿಮರ್ಶೆ ಮಾಡಿ ತೀರ್ಮಾನ ತೆಗೆದುಕೊಳ್ಳಿ. ಅದಕ್ಕಾಗಿ ನಿಮ್ಮ ಪಂಚೇಂದ್ರಿಯಗಳನ್ನು ಬಳಸಿ. ಅವನ್ನು ನಿಮಗಾಗಿಯೇ ಭಗವಂತನು ದಯಪಾಲಿಸಿರುವನು. ಅವನ್ನು ಬಳಸದೆ ದ್ರೋಹ ಮಾಡಬೇಡಿ’ ಎನ್ನುತ್ತಾರೆ.
ಹೌದು. ನಮ್ಮ ಬದುಕಿನ ನಿರ್ಧಾರದ ಹೊಣೆ ನಮ್ಮ ಹೆಗಲ ಮೇಲೆಯೇ ಹೊರಬೇಕು. ವಾಸ್ತವದಲ್ಲಿ ನಮ್ಮ ಪಂಚೇಂದ್ರಿಯಗಳು ನಮಗೆ ಉಪಕರಿಸುತ್ತವೆ. ಆದರೆ ನಾವಾದರೂ ಅವುಗಳ ಸಮರ್ಥ ಬಳಕೆ ಮಾಡದೆ ಅವನ್ನು ಪೇಕ್ಷಿಸುತ್ತೇವೆ. ನಮ್ಮ ಆಲಸ್ಯವು, ಮೌಢ್ಯತೆಯು ಇತರರ ಯೋಚನೆಯ ಮೇಲೆ ಅವಲಂಬಿತರಾಗುವಂತೆ ಮಾಡುತ್ತದೆ. ಹೀಗೆ ಮಾಡುವ ಮೂಲಕ ನಾವು ನಮ್ಮ ಇಂದ್ರಿಯಗಳನ್ನು ಅವಮಾನಿಸುತ್ತ ಇದ್ದೇವೆ. ಪರಿಸ್ಥಿತಿ ಹೀಗಿರುವಾಗ ಅವು ಯಾಕಾದರೂ ನಮಗಾಗಿ ತಮ್ಮ ಕಾರ್ಯ ನಿರ್ವಹಿಸಬೇಕು?
ಭೂಮಿಯ ಮೇಲಿನ ಪ್ರಾಣಿಗಳಲ್ಲಿ ಮನುಷ್ಯ ಯೋಚಿಸಬಲ್ಲ ಗುಣದಿಂದಲೇ ವಿಶಿಷ್ಟವಾಗಿದ್ದಾನೆ. ನಾವು ನಮಗೆ ಲಭ್ಯವಾಗಿರುವ ಈ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರೆ, ಬುದ್ಧಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ನಮ್ಮ ಕಣ್ಣುಗಳಿಂದಲೇ ನೋಡಿ ಗ್ರಹಿಸಿದ್ದನ್ನು , ಕಿವಿಗಳ ಮಥನ ಮಾಡಿ ಅನಂತರವಷ್ಟೆ ಒಪ್ಪಿಕೊಳ್ಳುವ ಅಥವಾ ಬಿಟ್ಟುಹಾಕುವ ಸ್ವಾತಂತ್ರ್ಯ ವಹಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮನುಷ್ಯರಿಗೂ ಮಂದೆಯ ಕುರಿಗೂ ವ್ಯತ್ಯಾಸವೇನೂ ಇರುವುದಿಲ್ಲ ಅಲ್ಲವೆ?