ಈ ಕನಸಿನ ವ್ಯಾಖ್ಯಾನವೇನು?

ಸೂಫಿಕುರಾನ್ ಬಗ್ಗೆ ತನಗಿರುವಷ್ಟು ಅಗಾಧ ಪಾಂಡಿತ್ಯವನ್ನು ಬೇರಾರಿಗೂ ಇಲ್ಲ ಎಂಬ ಅಹಂಕಾರದಿಂದ ಮೆರೆಯುತ್ತಿದ್ದ ವ್ಯಕ್ತಿಯೊಬ್ಬನಿದ್ದ. ಚಿಸ್ತಿ ಪೀರ್ ನ ಸೂಫಿಯನ್ನು ವಾದಕ್ಕೆಳೆದು ತನ್ನ ಪಾಂಡಿತ್ಯವನ್ನು ಪ್ರದರ್ಶಿಸಬೇಕು ಮತ್ತು ಅವನನ್ನು ವಾದದಲ್ಲಿ ಸೋಲಿಸಬೇಕೆಂದು ಆತ ಬಯಸಿದ್ದ. ಹಾಗೆಂದೇ ಒಂದು ದಿನ ಅವನು ಸೂಫಿಯಲ್ಲಿಗೆ ಬಂದ.

ಆ ಅಹಂಕಾರಿಯ ಆಲೋಚನೆಯನ್ನು ನೋಟದಲ್ಲೇ ಗ್ರಹಿಸಿದ ಸೂಫಿಯು, ಕುರಾನಿನಲ್ಲಿ ಯೂಸಫ಼ನಿಗೆ ಬಿದ್ದಿತೆಂದು ಹೇಳಲಾದ ಕನಸನ್ನು ಪ್ರಸ್ತಾಪಿವುದರೊಂದಿಗೆ ತಾನಾಗಿಯೇ ಸಂಭಾಷಣೆಯನ್ನು ಪ್ರಾರಂಭಿಸಿದ.

ನಂತರ ಆ ವ್ಯಕ್ತಿಯನ್ನು ಕುರಿತು, “ನನಗೂ ಹಾಗೆಯೇ ಒಂದು ಕನಸು ಬಿದ್ದಿತ್ತು. ನೀನು ಅನುಮತಿ ನೀಡಿದರೆ ಅದನ್ನು ಹೇಳುತ್ತೇನೆ. ಅದನ್ನು ಕುರಿತು ನೀನು ನೀಡುವ ವ್ಯಾಖ್ಯಾನಕ್ಕೆ ಸ್ವಾಗತವಿದೆ” ಎಂದ.

ಆ ಅಹಂಕಾರಿಯು ಅದಕ್ಕೆ ಒಪ್ಪಿಕೊಂಡ.

“ನನ್ನ ಕನಸಿನಲ್ಲಿ ನಿನ್ನ ಕೈ ಜೇನುತುಪ್ಪದಲ್ಲಿತ್ತು. ನನ್ನ ಕೈ ಹೊಲಸಿನಲಿತ್ತು..” ಎಂದು ಸೂಫಿ ಶುರು ಮಾಡಿದ.

ಅವನನ್ನು ಅಲ್ಲಿಗೇ ತಡೆದು ಆ ವ್ಯಕ್ತಿಯು, “ಅದರ ಅರ್ಥವಿಷ್ಟೇ. ನಾನು ಉತ್ತಮ ಮಾರ್ಗದಲ್ಲಿದ್ದೇನೆ, ನೀನು ಅಧಮ ಮಾರ್ಗದಲ್ಲಿದ್ದೀಯ” ಎಂದು ಗಹಗಹಿಸಿ ನಗತೊಡಗಿದ.

“ಆದರೆ ನಾನು ಹೇಳಬೇಕಾದದ್ದು ಇನ್ನೂ ಪೂರ್ತಿಯಾಗಿಲ್ಲ” ಎಂದ ಸೂಫಿ

“ಹಾಗಾದರೆ ಹೇಳಿ ಮುಗಿಸು” ಎಂದು ಅಹಂಕಾರಿ ಸವಾಲು ಹಾಕಿದ.

“ನನ್ನ ಕೈಯನ್ನು ನೀನು ನೆಕ್ಕುತ್ತಿದ್ದೆ, ನಿನ್ನ ಕೈಯನ್ನು ನಾನು ನೆಕ್ಕುತ್ತಿದ್ದೆ” ಎಂದು ಸೂಫಿ ಮುಗುಳ್ನಕ್ಕ.

Leave a Reply