ಮಲ್ಲಿಕಾಳನ್ನು ಹರಸುವಾಗ ಬುದ್ಧನ ಮುಖದಲ್ಲಿ ನಗೆಯ ಸುಳಿಯೊಂದು ಹಾದು ಹೋದುದು ಆತನ ಪ್ರಮುಖ ಶಿಷ್ಯನೊಬ್ಬ ಗಮನಿಸಿದ. ಮಧ್ಯಾಹ್ನದ ವಿರಾಮದಲ್ಲಿ ಬುದ್ಧನನ್ನು ಕುರಿತು, `ಭಗವಾನ್, ಆ ಹೂ ಮಾರುವ ಹುಡುಗಿಯನ್ನು ಹರಸುವಾಗ ನೀವು ನಕ್ಕಿದ್ದೇಕೆ?’ ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಬುದ್ಧ, `ಹೂ ಮಾರುವ ಹುಡುಗಿ ಎಂದು ಯಾರನ್ನು ಕುರಿತು ಹೇಳುತ್ತಿರುವೆಯೋ ಅವಳು ಇಂದು – ನಾಳೆಯೊಳಗೆ ಕೋಸಲದ ಪಟ್ಟದರಸಿಯಾಗುವಳು’ ಎಂದು ನುಡಿದ…
~ ಚೇತನಾ ತೀರ್ಥಹಳ್ಳಿ
ಶ್ರಾವಸ್ತಿಯ ಪ್ರಮುಖ ಬೀದಿಯ ಇಕ್ಕೆಲಗಳು ಸದಾ ಕಾಲ ವಿವಿಧ ಚಿಕ್ಕ ಪುಟ್ಟ ವ್ಯಾಪಾರಿಗಳಿಂದ ತುಂಬಿರುತ್ತಿತ್ತು. ಆ ವ್ಯಾಪಾರಿಗಳ ನಡುವೆ ಅದೃಷ್ಟವಂತ ಹೂಗಾರನೊಬ್ಬನಿದ್ದ. ಅವನ ಮಗಳೇ ಮಲ್ಲಿಗೆಯಷ್ಟು ಸೂಕ್ಷ್ಮವೂ ಸುಂದರವೂ ಆದ ಮಲ್ಲಿಕಾ. ಅವಳು ಉತ್ತಮ, ಸುಗಂಧ ಭರಿತ ಹೂಗಳನ್ನೆ ಆಯ್ದು ತಂದು ಮಾಲೆ ಕಟ್ಟುತ್ತಿದ್ದಳು. ಹಾಗೆ ಕಟ್ಟುವಾಗೆಲ್ಲ ಸುಶ್ರಾವ್ಯವಾಗಿ ಹಾಡು ಗುನುಗುತ್ತಿದ್ದಳು. ಅವಳ ಚಿಗುರೆಲೆಯಂಥ ಬೆರಳ ತುದಿಯಲ್ಲಿ ಹೂ ದಂಟುಗಳು ಸುಕೋಮಲವಾಗಿ ಹೊರಳಿಕೊಳ್ಳುತ್ತ ದಾರಕ್ಕೆ ತನಗೆ ತಾನೇ ಎಂಬಂತೆ ಪೋಣಿಸಿಕೊಳ್ಳುತ್ತಿದ್ದವು.
ಮಲ್ಲಿಕಾ ಯಾವಾಗಲೂ ಹಸನ್ಮುಖಿಯಾಗಿರುತ್ತ, ಸುಮನಸ್ಕಳಾಗಿಯೇ ಇರುತ್ತಿದ್ದಳು. ಇಂಥಾ ಮನಸ್ಥಿತಿಯಲ್ಲಿಯೇ ಅವಳು ಹೂ ಪೋಣಿಸುತ್ತಿದ್ದರಿಂದ ಆಕೆ ಕಟ್ಟಿದ ಮಾಲೆಗಳು ಬೇಗ ಬಾಡುತ್ತಿರಲಿಲ್ಲ. ಆದ್ದರಿಂದ ಮಲ್ಲಿಕಾಳ ತಂದೆ ಮಾರುವ ಹೂಮಾಲೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ತಾನು ಸುಂದರಿಯೂ ಸದಾಚಾರಿಣಿಯೂ ಆದ ಇಂಥ ಮಗಳ ತಂದೆಯಾಗಿರುವುದಕ್ಕೆ ಆತ ಹೆಮ್ಮೆ ಪಡುತ್ತಿದ್ದ.
ಮಲ್ಲಿಕಾ ಹೂ ಕಟ್ಟುವುದು ಮಾತ್ರವಲ್ಲ, ಆಗಾಗ ಮುಖ್ಯಬೀದಿಯಲ್ಲಿ ಅವನೊಡನೆ ವ್ಯಾಪಾರಕ್ಕೂ ಕೂರುತ್ತಿದ್ದಳು. ಹೀಗೊಮ್ಮೆ ಅವಳು ವ್ಯಾಪಾರಕ್ಕೆ ತೆರಳಿದ್ದಾಗ ಮುಖ್ಯ ಬೀದಿಯಲ್ಲಿ ಭಂತೇಗಣ ಭಿಕ್ಷೆಗೆ ಹೊರಟಿತ್ತು. ವೈರಾಗ್ಯ ಸಾಗರವೇ ಹರಿಯುತ್ತಿದೆಯೇನೋ ಎನ್ನುವಂತೆ ಮುಂದೆ ಬುದ್ಧ, ಹಿಂದೆ ಶಿಷ್ಯರು ಕಾವಿಯುಡುಗೆಯಲ್ಲಿ ಗಂಭೀರವಾಗಿ, ಆದರೆ ಮುಗುಳ್ನಗೆ ಸೂಸುತ್ತಾ ನಡೆದು ಬರುತ್ತಿದ್ದರು. ಈ ದೃಶ್ಯ ಮಲ್ಲಿಕಾಳ ಮನದಲ್ಲಿ ಚಮತ್ಕಾರವನ್ನೆ ಮಾಡಿತು. ಆ ಕ್ಷಣದಿಂದಲೇ ಅವಳು ಬುದ್ಧಾನುಯಾಯಿಯಾಗಿ ಬಿಟ್ಟಳು. ಬುದ್ಧ ಆಕೆಯಿರುವ ಸ್ಥಳದಲ್ಲಿ ಹಾದು ಹೋಗುತ್ತಲೇ ಆತನ ಮುಂದೋಡಿ ನಿಂತು, ತಾನು ಕಟ್ಟಿದ್ದ ಮಾಲೆಗಳಲ್ಲಿಯೇ ಉತ್ಕೃಷ್ಟವಾದುದನ್ನು ತೆಗೆದು ಆತನ ಪಾದಗಳಿಗೆ ಅರ್ಪಿಸಿದಳು. ಅನಂತರ ಮಧ್ಯಾಹ್ನದ ಊಟಕ್ಕೆಂದು ತಂದಿದ್ದ ಬುತ್ತಿಯನ್ನೂ ಭಗವಾನನಿಗೆ ನೀಡಿದಳು.
ಮಲ್ಲಿಕಾಳನ್ನು ನೋಡುತ್ತಲೇ ಬುದ್ಧನಿಗೆ ಆಕೆಯ ಜನ್ಮಾಂತರಗಳು ತಿಳಿದುಹೋದವು. ಆಕೆಯನ್ನ ಹರಸಿ ತನ್ನ ಶಿಷ್ಯರೊಂದಿಗೆ ಮುನ್ನಡೆದನು. ಮಲ್ಲಿಕಾಳನ್ನು ಹರಸುವಾಗ ಬುದ್ಧನ ಮುಖದಲ್ಲಿ ನಗೆಯ ಸುಳಿಯೊಂದು ಹಾದು ಹೋದುದು ಆತನ ಪ್ರಮುಖ ಶಿಷ್ಯನೊಬ್ಬ ಗಮನಿಸಿದ. ಮಧ್ಯಾಹ್ನದ ವಿರಾಮದಲ್ಲಿ ಬುದ್ಧನನ್ನು ಕುರಿತು, `ಭಗವಾನ್, ಆ ಹೂ ಮಾರುವ ಹುಡುಗಿಯನ್ನು ಹರಸುವಾಗ ನೀವು ನಕ್ಕಿದ್ದೇಕೆ?’ ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಬುದ್ಧ, `ಹೂ ಮಾರುವ ಹುಡುಗಿ ಎಂದು ಯಾರನ್ನು ಕುರಿತು ಹೇಳುತ್ತಿರುವೆಯೋ ಅವಳು ಇಂದು – ನಾಳೆಯೊಳಗೆ ಕೋಸಲದ ಪಟ್ಟದರಸಿಯಾಗುವಳು’ ಎಂದು ನುಡಿದ.
ಬುದ್ಧ ಹೇಳುತ್ತಿರುವಂತೆಯೇ, ಅತ್ತ ನೆರೆಹೊರೆಯ ರಾಜರುಗಳ ಉಪಟಳ ಮಟ್ಟಹಾಕುವ ಕುರಿತು ಯೋಚಿಸುತ್ತಾ ರಾಜಾ ಪಸೇನದಿಯು ಸಚಿವರೊಡನೆ ಮುಖ್ಯ ಬೀದಿಯಲ್ಲಿ ಹೊರಟಿದ್ದ. ಮಾನಸಿಕವಾಗಿ ಬಳಲಿದ್ದ ಆತನ ಕಿವಿಗೆ ರಾಗದ ಅಲೆಯೊಂದು ತೇಲಿಬಂದು ತಂಪೂಡಿತು. ಬುದ್ಧನಿಂದ ಹರಸಲ್ಪಟ್ಟಿದ್ದ ಮಲ್ಲಿಕಾ, ಅದರಿಂದ ಉಂಟಾದ ಸಂತೋಷದ ತೀವ್ರತೆಯನ್ನು ಹಾಡುತ್ತ ಮೈಮರೆತಿದ್ದಳು. ಮರದ ಕೆಳಗೆ ಧ್ಯಾನಸ್ಥ ಭಂಗಿಯಲ್ಲಿ ಕುಳಿತು ಹಾಡುತ್ತಿದ್ದ ತರುಣಿಯನ್ನು ಕಂಡು ಪಸೇನದಿಯ ವಿಹ್ವಲ ಮನಸ್ಸು ಸಮಾಧಾನಗೊಂಡಿತು. ಆಕೆಯನ್ನು ನೋಡುತ್ತ, ಅವಳ ಗಾನಸುಧೆಯಲ್ಲಿ ತನ್ಮಯನಾಗಿ ನಿಂತುಬಿಟ್ಟ. ಇತ್ತ ಮಲ್ಲಿಕಾ ತನ್ನ ಭಾವತೀವ್ರತೆ ಕಳೆದು ಕಣ್ಬಿಟ್ಟಾಗ ಎದುರಲ್ಲಿ ರಾಜನನ್ನು ಕಂಡು ದಂಗಾದಳು. ಹಾಗೆಯೇ ಲಜ್ಜೆ ಆವರಿಸಿ ತಲೆತಗ್ಗಿಸಿ ಕುಳಿತುಬಿಟ್ಟಳು. ರಾಜಪರಿವಾರ ಪಸೇನದಿಯ ವರ್ತನೆಯಿಂದ ಆತನ ಅಂತರಂಗವನ್ನು ತಿಳಿದುಕೊಂಡಿತು. ಪಸೇನದಿ ತಾನು ಆಕೆಯನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ ಅವರ ಊಹೆಯನ್ನು ಖಾತ್ರಿಪಡಿಸಿದ. ಆಕೆಯೇ ತನ್ನ ಪಟ್ಟದರಸಿಯಾಗುವಳು ಎಂದೂ ಘೋಷಿಸಿದ. ಆ ಕ್ಷಣವೇ ಮಲ್ಲಿಕಾಳ ತಂದೆಯನ್ನೂ ಕರೆಸಿದ. ಮರುದಿನಕ್ಕೇ ಮುಹೂರ್ತ ನಿಗದಿಯಾಗಿ ಮಲ್ಲಿಕಾಳನ್ನು ಮದುವೆಯಾಗಿಯೂಬಿಟ್ಟ!
ಪಸೇನದಿ ಕೂಡಾ ಬುದ್ಧಾನುಯಾಯಿ. ಹೆಚ್ಚೂಕಡಿಮೆ ಬುದ್ಧ ಭಗವಾನನ ವಯಸ್ಸಿನವನೇ ಆಗಿದ್ದ ಆತ ಬಹಳಷ್ಟು ವಿಷಯಗಳಲ್ಲಿ ಆತನ ಸಲಹೆ ಪಡೆಯುತ್ತಿದ್ದ. ಮದುವೆಯ ನಂತರ ಭಗವಾನನ ದರ್ಶನ ಪಡೆದುಬರೋಣವೆಂದು ಮಲ್ಲಿಕಾಳಿಗೆ ಹೇಳಿದಾಗ ಅವಳು ತನಗೆ ಒದಗಿ ಬಂದ ಭಾಗ್ಯಕ್ಕೆಲ್ಲ ಆತನೇ ಕಾರಣ ಎಂದು ನುಡಿದಳು. ಕೃತಜ್ಞತೆಯ ವಿನಯದಿಂದ ಬಾಗುತ್ತಾ ಪಸೇನದಿಯೊಂದಿಗೆ ತೆರಳಿ ಮತ್ತೊಮ್ಮೆ ಆಶೀರ್ವಾದ ಪಡೆದಳು.
ಧರ್ಮಾತ್ಮಳೂ ಉದಾರಿಯೂ ಆಗಿದ್ದ ಮಲ್ಲಿಕಾ ಬುದ್ಧ ಶ್ರಾವಸ್ತಿಗೆ ಬಂದಾಗಲೆಲ್ಲ ಉತ್ಕೃಷ್ಟ ಆಥಿತ್ಯ ನೀಡುತ್ತಿದ್ದಳು. ಬಿಕ್ಖುಗಳಿಗಾಗಿ ಭವ್ಯವಾದ ಧಮ್ಮ ಸಭಾಂಗಣವನ್ನು ಕಟ್ಟಿಸಿದಳು. ಬುದ್ಧನ ಪ್ರಧಾನ ಪೋಷಕರಲ್ಲಿ ಆಕೆಯು ಪ್ರಧಾನಳಾಗಿದ್ದಳು. ಆಕೆ ಮಾಡಿದ ಸಂಘದಾನಕ್ಕೆ ಮಿತಿಯೆಂಬುದೇ ಇರಲಿಲ್ಲ. ಅತೀವ ಧಮ್ಮಾಸಕ್ತಳಾಗಿದ್ದ ಮಲ್ಲಿಕಾ ಬುದ್ಧನೊಂದಿಗೆ ಅಮೂಲ್ಯ ಪ್ರಶ್ನೆಗಳನ್ನು ಕೇಳಿ ಸಂವಾದವನ್ನೂ ನಡೆಸುತ್ತಿದ್ದಳು. ರಾಜಾ ಪಸೇನದಿಯು ಧರ್ಮಾತ್ಮಳಾದ ತನ್ನ ಪತ್ನಿಯ ಕಾರಣದಿಂದಾಗಿ ಹೆಚ್ಚಿನ ನೆಮ್ಮದಿಯನ್ನು ಪಡೆದು ಸಂತಸದಿಂದ ಇರುವಂತಾಯಿತು. ಈ ದಂಪತಿಗೆ `ವಾಜಿರಾ’ ಎಂಬ ಮಗಳು ಹುಟ್ಟಿದಳು.
ಒಮ್ಮೆ ಪಸೇನದಿಯು `ನಮಗೆ ಯಾರು ಅತ್ಯಂತ ಆಪ್ತರೋ ಅವರ ಕಾರಣದಿಂದಾಗಿಯೇ ದುಃಖಗಳು ಉಂಟಾಗುವವು’ ಎಂದು ಬುದ್ಧನು ಹೇಳಿದ್ದನ್ನು ನೆನೆದನು. ಆದರೆ ಆಪ್ತೇಷ್ಟರು ಸದಾ ಸಂತಸವನ್ನೆ ಕೊಡುವಂಥವರು. ಅವರು ಹೇಗೆ ತಾನೆ ದುಃಖವನ್ನು ತರಬಲ್ಲರು ಎಂದು ಯೋಚಿಸತೊಡಗಿದನು. ಅವನಿಗೆ ಬುದ್ಧನ ಈ ಮಾತು ಸಮಾಧಾನ ಕೊಡಲಿಲ್ಲ. ಮಲ್ಲಿಕಾಳಿಗೆ ಅದನ್ನು ಹೇಳಿ, `ನೀನು ಭಗವಾನನ ಈ ಮಾತನ್ನು ಒಪ್ಪುತ್ತೀಯಾ?’ ಎಂದು ಕೇಳಿದನು. ಅದಕ್ಕೆ ಪ್ರತಿಯಾಗಿ ಮಲ್ಲಿಕಾ, `ಭಗವಾನನ ಮಾತುಗಳೆಂದರೆ ಅದರಲ್ಲಿ ಸಂದೇಹಪಡುವಂಥದ್ದು ಏನಿದೆ? ಅದು ಖಂಡಿತವಾಗಿಯೂ ನಿಜವೇ ಇದ್ದೀತು’ ಎಂದಳು. ಇದರಿಂದ ಪಸೇನದಿಯ ಗೊಂದಲ ಹೆಚ್ಚಿತೇ ವಿನಾ ಬಗೆಹರಿಯಲಿಲ್ಲ. ಬುದ್ಧ ಭಗವಾನನ ಮಾತುಗಳನ್ನು ವಿವರಿಸಿ ಅರ್ಥೈಸುವಂತೆ ಮಲ್ಲಿಕಾಳಲ್ಲಿ ಕೇಳಿದ. ಸ್ವಲ್ಪ ಕಾಲಾವಕಾಶ ಪಡೆದ ಮಲ್ಲಿಕಾ ಸಂಜೆಯ ವಿರಾಮದಲ್ಲಿ ರಾಜನನ್ನು ಪ್ರಶ್ನಿಸಿದಳು; `ನಮ್ಮ ವಾಜಿರಾ ನಿಮಗೆಷ್ಟು ಪ್ರೀತಿ?’
ರಾಜ ಮಗಳನ್ನೆ ಮುದ್ದಿನಿಂದ ನೋಡುತ್ತಾ ಅಂದ, `ಅವಳಿಗಾಗಿ ಸ್ವರ್ಗವನ್ನೆ ಪದತಲಕ್ಕೆ ತಂದು ಇಟ್ಟೇನು!’
`ಅಕಸ್ಮಾತ್ ಅವಳು ನಿಮಗೆ ಅವಿಧೇಯಳಾಗಿ ನಡೆದರೆ ಕೋಪ ಬರುತ್ತದೆಯೇ?’
`ಕೋಪ ಬರುವುದಿಲ್ಲ. ಆದರೆ ವಿಪರೀತ ಯಾತನೆಯಾದೀತು. ಮನಸ್ಸು ನೋಯುವುದು’.
`ವಾಜಿರಾಗೆ ಏನಾದರೂ ಅವಘಡ ಸಂಭವಿಸಿದರೆ, ಏನಾದರೂ ಸಮಸ್ಯೆ ಬಂದರೆ ಏನನ್ನಿಸುತ್ತದೆ?’
`ಮಲ್ಲಿಕಾ! ನಿನಗೆ ಹುಚ್ಚು ಹಿಡಿದಿದೆಯಾ!? ಮಗುವಿನ ಬಗ್ಗೆ ಅಪಶಕುನವೇಕೆ ಆಡುತ್ತಿದ್ದೀಯ? ನನ್ನ ಮಗಳಿಗೆ ಏನಾದರೂ ಅವಘಡ ಉಂಟಾದರೆ ನಾನು ಶೋಕ ಸಾಗರದಲ್ಲಿ ಮುಳುಗಿಹೋಗುವೆನು!’
ಈ ಸಂವಾದದ ಕೊನೆಯಲ್ಲಿ ಮಲ್ಲಿಕಾ ಹೇಳಿದಳು, `ರಾಜನ್! ವಾಜಿರಾ ನಿಮಗೆ ಅತ್ಯಂತ ಪ್ರೀತಿ ಪಾತ್ರಳು. ಆದ್ದರಿಂದಲೇ ನೀವು ಅವಳು ನಿಮಗೆ ನೋವು ಉಂಟು ಮಾಡುವಳು. ಭಗವಾನರು ಹೇಳಿದ್ದು ಇದನ್ನೇ’.
ಮಲ್ಲಿಕಾಳ ವಿವರಣೆಯಿಂದ ಪಸೇನದಿಗೆ ಸಮಾಧಾನವಾಯಿತು. ನಿನ್ನಂಥ ಬುದ್ಧಿವಂತಳೂ ಧರ್ಮಾತ್ಮಳೂ ಆದ ಪತ್ನಿಯಿದ್ದರೆ ಬೇರೇನು ತಾನೆ ಏಕೆ ಬೇಕು ಎಂದು ಹೆಮ್ಮೆಯಿಂದ ಅವಳನ್ನು ಹೊಗಳಿದ.
ವಯಸ್ಸಾಗುತ್ತ ಹೋದಂತೆ ಮಲ್ಲಿಕಾಳ ಆರೋಗ್ಯ ಕ್ಷೀಣಿಸಿ ಆಕೆ ಸಾವನ್ನಪ್ಪಿದಳು. ಮುಂದೆ `ತುಸಿತಾ’ ಎಂಬ ದೇವಲೋಕದಲ್ಲಿ ಜನಿಸಿ ಅಪೂರ್ವ ಫಲಗಳನ್ನು ಪಡೆದಳು.