ಮನುಷ್ಯ ಉಳಿದೆಲ್ಲ ಚರಾಚರಗಳಿಗಿಂತ ಹೇಗೆ ಭಿನ್ನ? : ಸ್ವಾಮಿ ರಾಮತೀರ್ಥ

ಚರಾಚರ ಜಗತ್ತನ್ನು ಮುಖ್ಯವಾಗಿ ನಾಲ್ಕು ಭಾಗವನ್ನಾಗಿ ಮಾಡಬಹುದು. ಧಾತುವರ್ಗ, ಸಸ್ಯವರ್ಗ, ಪ್ರಾಣಿವರ್ಗ ಹಾಗೂ ಮನುಷ್ಯ ವರ್ಗ. ಈ ಲೋಕದಲ್ಲಿ ಮನುಷ್ಯನು ಪಶುಪ್ರಾಣಿಗಳಿಗಿಂತಲೂ ಹೆಚ್ಚು ಶಕ್ತಿಯನ್ನೂ ಉತ್ತಮ ರೀತಿಯಾದ ಚಲನೆಯನ್ನೂ ಕ್ರಿಯೆಯನ್ನೂ ತೋರಿಸುತ್ತಾನೆ. ದೈಹಿಕ ಚಲನೆಯಷ್ಟೇ, ಅಥವಾ ಅದಕ್ಕಿಂತ ಮನುಷ್ಯನ ಬೌದ್ಧಿಕ ಚಲನೆ ಅತ್ಯದ್ಭುತವಾದದ್ದು. ಆತ ತೋರ್ಪಡಿಸುವ ಬೌದ್ಧಿಕ ಶಕ್ತಿಸಾಮರ್ಥ್ಯಗಳು ಪ್ರಾಣಿಗಳಲ್ಲಿ ಇಲ್ಲ. ಆದ್ದರಿಂದ ಜೀವಶಕ್ತಿಯ ಬೆಳವಣಿಗೆಯ ನಿಚ್ಚಣಿಕೆಯಲ್ಲಿ ಪ್ರಾಣಿಗಳು ಮನುಷ್ಯನಿಗಿಂತಲೂ ಬಹಳ ಕೆಳಗಿನ ಮೆಟ್ಟಿಲಿನಲ್ಲಿವೆ ಎಂದು ವಿಜ್ಞಾನಿ ಸಂತ, ಗಣಿತಜ್ಞ, ಸ್ವಾಮಿ ರಾಮತೀರ್ಥರು ವಿವರಿಸುತ್ತಾರೆ.

ಅವರು ಹೇಳುವಂತೆ, ಸಸ್ಯಜಾತಿಯೂ ಚಲನೆಯನ್ನು ತೋರುತ್ತದೆ. ಆದರೆ ಆ ಚಲನೆಯು ಕೆಳಗಿನಿಂದ ಮೇಲಕ್ಕೆ – ಒಂದೇ ಪರಿಮಾಣದಲ್ಲಿ ಆಗುವಂಥ ಚಲನೆ. ಬೇರುಗಳನ್ನು ಆಳವಾಗಿ ಇಳಿಸಿ, ತನ್ನ ರೆಂಬೆ ಕೊಂಬೆಗಳನ್ನು ಸುತ್ತಮುತ್ತಲೂ ಚಾಚುವಂಥ ಚಲನೆ. ಪ್ರಾಣಿ ಲೋಕದಲ್ಲಿ ಚಲನೆಯ ಪ್ರಮಾಣ ಸಸ್ಯಜಾತಿಗಿಂತ ಹೆಚ್ಚು ಮತ್ತು ಶಕ್ತಿಯುತವಾದದ್ದು. ಆದ್ದರಿಂದ ಜೀವಶಕ್ತಿ ವಿಕಾಸದ ನಿಚ್ಚಣಿಕೆಯಲ್ಲಿ ಸಸ್ಯವು ಬಹಳ ಕೆಳಗಿನ ಹಂತದಲ್ಲಿದೆ.

ಜೀವಶಾಸ್ತ್ರ  ವಿಜ್ಞಾನಿಗಳ ದೃಷ್ಟಿಯಿಂದ ಧಾತು – ಲೋಹ – ಕಲ್ಲುಗಳಲ್ಲಿ ಜೀವ ಇಲ್ಲದಂತೆ ತೋರಿದರೂ ಅವು ಕೂಡ ಚಲನೆಯನ್ನು ತೋರುತ್ತವೆ. ಅವು ಕೂಡ ಕಾಲಾಂತರದಲ್ಲಿ ಬದಲಾವಣೆಯನ್ನು ಹೊಂದುತ್ತವೆ. ಧಾತುವರ್ಗ ಎಂದು ಕರೆಯುವ ಈ ವರ್ಗದ ಚಲನೆ ಅತ್ಯಂತ ಮಂದಗತಿಯಲ್ಲಿ ನಡೆಯುವುದರಿಂದ ಅದು ಸ್ಪಷ್ಟವಾಗಿ ತೋರುವುದಿಲ್ಲ. ಆದರೆ ಚಲಿಸದೆ ಇರಲು ಮತ್ತು ಬದಲಾವಣೆ ಹೊಂದದೆ ಇರಲು ಧಾತುವರ್ಗಕ್ಕೂ ಸಾಧ್ಯವಿಲ್ಲ. ಚಲನಶಕ್ತಿಯು ಅತ್ಯಲ್ಪವಾಗಿರುವುದರಿಂದ ಈ ಧಾತುವರ್ಗವು ಸಸ್ಯವರ್ಗಕ್ಕಿಂತಲೂ ಕೆಳಗಿನ ಸ್ಥಾನವನ್ನು ಪಡೆದಿದೆ.

ಹೀಗೆ ಚಲನ ಲಕ್ಷಣದಿಂದ ತೋರಿಕೊಳ್ಳುವ ಜೀವಶಕ್ತಿಯು ಚಲನ ಶಕ್ತಿಗಳ ತೀವ್ರತೆಯ ಆಧಾರದ ಮೇಲೆ ವರ್ಗೀಕರಣ ಮಾಡಲ್ಪಟ್ಟಿವೆ.

ಪ್ರಕೃತಿಯ ಪುನರಾವರ್ತನೆ

ಸೂರ್ಯನೇ ಸರ್ವಸಾಕ್ಷಿಯಾದ ಜಗತ್ತಿನಲ್ಲಿ ಯಾವುದೂ ಹೊಸದಿರಬಾರದು ಎಂಬುದೇ ಪ್ರಕೃತಿಯ ಯೋಜನೆಯಾಗಿದೆ. ಹೊರಗಿನ ನೋಟಕ್ಕೆ ಸಾವಿರಾರು ಬಗೆಬಣ್ಣಗಳು ಕಾಣುತ್ತಿದ್ದರೂ ಪ್ರಕೃತಿಯ ನಿಯಮಶೀಲತೆಯಲ್ಲಿ ಅತಿದಾರಿದ್ರ್ಯವಿದೆ. ಪ್ರೇಮಿಯ ಕಣ್ಣಿನಿಂದ ಒಂದು ಕಂಬನಿ ಕೆಳಗುದುರಲು ಯಾವ ನಿಯಮವು ಕಾರಣವೋ ಅದೇ ನಿಯಮವು ಸೂರ್ಯ ಚಂದ್ರ ನಕ್ಷತ್ರಾದಿಗಳ ಪರಿಭ್ರಮಣಕ್ಕೂ ಕಾರಣವಾಗಿದೆ.  ಅತ್ಯಂತ ಸೂಕ್ಷ್ಮವಾದ ಪರಮಾಣುವಿನಿಂದ ಹಿಡಿದು ಅತ್ಯಂತ ದೂರದಲ್ಲಿರುವ ಮಹಾದ್ಭುತವಾದ ನಕ್ಷತ್ರದವರೆಗೂ ಕೈಬೆರಳುಗಳಲ್ಲಿ ಎಣಿಸಬಹುದಾದಷ್ಟು, ಒಂದೇ ಬಗೆಯ ಸರಳ ಸಾಮಾನ್ಯ ನಿಯಮಗಳೇ ಈ ವಿಶ್ವದಲ್ಲಿ ಸಕಲವನ್ನೂ ಸ್ವಾಧೀನದಲ್ಲಿಟ್ಟುಕೊಂಡು ಅಧಿಕಾರ ನಡೆಸುತ್ತಿವೆ.

ಪ್ರಕೃತಿಯಲ್ಲಿ ನಿಯಮಗಳು ಪುನಃ ಆವರ್ತನಗೊಳ್ಳುತ್ತವೆ. ಒಂದೇ ಮಾದರಿಯ ಮರುಸುತ್ತಿನ ಮೊಳೆಗೋ ಸುರುಳಿಗೋ ನೀರುಳ್ಳಿಗೋ ಈ ವಿಶ್ವವನ್ನು ಹೋಲಿಸಬಹುದು. ಈರುಳ್ಳಿಯ ಮೇಲಿನ ಸಿಪ್ಪೆ ಸುಲಿದರೆ ಅದರೊಳಗೆ ಮತ್ತೊಂದು ಪದರ, ಆ ಪದರದ ಸಿಪ್ಪೆಯನ್ನು ಸುಲಿದರೆ ಮತ್ತೊಂದು ಸುತ್ತು ಸಿಪ್ಪೆ… ಹೀಗೆ ಸುಲಿಯುತ್ತಾ ಹೋದಂತೆಲ್ಲಾ ಸಿಪ್ಪೆಗಳೇ ಸಿಗುತ್ತವೆ. ಈ ಪ್ರಕಾರ ಇಡೀ ಒಂದು ವರ್ಷದಲ್ಲಿ ಕಾಣುವುದನ್ನೇ ಇಪ್ಪತ್ನಾಲ್ಕು ಗಂಟೆಗಳ ಒಂದು ದಿನದಲ್ಲಿ, ಅಲ್ಪಪ್ರಮಾಣದಲ್ಲಿ ಕಾಣುತ್ತೇವೆ. ಬೆಳಗನ್ನು ವಸಂತ ಋತುವಿಗೂ ಮಧ್ಯಾಹ್ನವನ್ನು ಗ್ರೀಷ್ಮಕ್ಕೂ ಸಾಯಂಕಾಲವನ್ನು ಶರದೃತುವಿಗೂ ರಾತ್ರಿಯನ್ನು ಶಿಶಿರ ಋತುವಿಗೂ ಹೋಲಿಸಬಹುದಾಗಿದೆ.

ಮನುಷ್ಯನು ತಾಯಿಯ ಗರ್ಭದಲ್ಲಿರುವಾಗ ಹೀಗೆ ವಿವಿಧ ಪ್ರಾಣಿಗಳ ರೂಪಾಕಾರಗಳನ್ನು ತಳೆದು, ಅಂತಿಮವಾಗಿ ಮನುಷ್ಯರೂಪವನ್ನು ಪಡೆಯುತ್ತಾನೆ. ಅಂತೆಯೇ, ಜೀವವಿಕಾಸದ ಯೋಜನೆಯಂತೆಯೂ ಹಾಗೂ ಇಡೀ ವಿಶ್ವವನ್ನು ನಡೆಸುತ್ತಿರುವ ಸಾಮಾನ್ಯ ನಿಯಮದ ಪ್ರಕಾರವೂ ಮನುಷ್ಯ ದೇಹದಲ್ಲಿ ಖನಿಜ, ಸಸ್ಯ, ಪ್ರಾಣಿಲೋಕಗಳ ಸ್ವಭಾವಗಳು ಪುನರಾವರ್ತನೆಗೊಂಡಿವೆಯೇ? ಮನುಷ್ಯರೂಪದಲ್ಲಿದ್ದೂ ಖನಿಜ ಜಾತಿಗೆ ಸೇರಿದ ಜನರಿಲ್ಲವೆ? ಮನುಷ್ಯ ರೂಪದಲ್ಲಿ ತೋರುತ್ತಿದ್ದೂ ಸಸ್ಯವರ್ಗ ಅಥವಾ ಪ್ರಾಣಿವರ್ಗದ ಸ್ಥಿತಿಯಲ್ಲಿರುವ ಜನರಿದ್ದಾರೆ ಅಲ್ಲವೆ? ಮನುಷ್ಯ ರೂಪದಲ್ಲಿ ಇರುವವರೆಲ್ಲರೂ ನಿಜವಾದ ಮನುಷ್ಯರೇ? ಮತ್ತು, ಮನುಷ್ಯ ರೂಪದ ಜನರಲ್ಲಿ ದೇವರಾಗಿರುವ ಮನುಷ್ಯರೂ ಇದ್ದಾರೆಯೇ? –  ಈ ಪ್ರಶ್ನೆಗಳಿಗೆ ಸ್ವಾಮಿ ರಾಮತೀರ್ಥರ ವಿವರಣೆಗಳನ್ನು ಮುಂದೆ ನೋಡೋಣ. 

(ಮುಂದುವರೆಯುವುದು…. )

Leave a Reply