ನಮ್ಮ ಜೀವಕೋಶಗಳು ಸತ್ತು ಹೊಸತು ಹುಟ್ಟದೆ, ಬದಲಾವಣೆ ಘಟಿಸದೆ, ನಮ್ಮ ದೇಹದ ನಿರಂತರತೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ, ನಾವು ಯಾವ ನಾವಾಗಿ ಉಳಿದಿಲ್ಲವೋ ಆ ನಾವು ಇದ್ದ ಭೂತಕಾಲದ ಬಗ್ಗೆ ಚಿಂತಿಸುವುದು ಏತಕ್ಕಾಗಿ? ಇದನ್ನು ಮನದಟ್ಟು ಮಾಡಿಸುವುದು ಹೆರಾಕ್ಲೀಟಸ್’ನ ಮಾತುಗಳ ಹಿಂದಿನ ಉದ್ದೇಶ.
ಒಂದೇ ನದಿಗೆ ಒಬ್ಬ ಮನುಷ್ಯ ಎರಡು ಸಲ ಕಾಲಿಡಲು ಸಾಧ್ಯವಿಲ್ಲ.
ಯಾಕೆಂದರೆ ಅದು ಅದೇ ನದಿಯಾಗಿರುವುದಿಲ್ಲ, ಮನುಷ್ಯ ಕೂಡಾ.
ಇದು ಕ್ರಿ.ಪೂ 4 – 5 ನೇ ಶತಮಾನದಲ್ಲಿ ಆಗಿಹೋದ ಗ್ರೀಕ್ ತತ್ತ್ವಜ್ಞಾನಿ ಹೆರಾಕ್ಲೀಟಸ್ ಹೇಳಿದ ಮಾತು. ನದಿಯ ಪ್ರತಿ ಕಣವೂ ನಿರಂತರ ಚಲನೆಯಲ್ಲಿ ಇರುತ್ತದೆಯಾದ್ದರಿಂದ, ಅದು ಒಮ್ಮೆ ಕಾಲಿಟ್ಟಾಗ ಯಾವುದಿತ್ತೋ, ಮತ್ತೊಮ್ಮೆ ಕಾಲಿಟ್ಟಾಗ ಅದಕ್ಕಿಂತ ಬೇರೆಯದಾಗಿರುತ್ತದೆ. ಹಾಗೆಯೇ ಮನುಷ್ಯನ ದೇಹದಲ್ಲಿಯೂ ಪ್ರತಿ ಜೀವಕೋಶಗಳು ನವೀಕರಣಗೊಳ್ಳುತ್ತಲೇ ಇರುವುದರಿಂದ, ಮನುಷ್ಯ ಕೂಡಾ ಹಿಂದಿನ ಘಳಿಗೆ ಏನಿದ್ದನೋ ಅವನಾಗಿ ಉಳಿದಿರುವುದಿಲ್ಲ. ಆದ್ದರಿಂದ ಯಾವುದೇ ಒಬ್ಬ ವ್ಯಕ್ತಿ ಒಂದು ನದಿಗೆ ಎರಡು ಬಾರಿ ಕಾಲಿಡಲು ಸಾಧ್ಯವಿಲ್ಲ! – ಇದು ಹೆರಾಕ್ಲೀಟಸ್ ಮಾತಿನ ಸರಳ ವಿವರಣೆ.
ಹೆರಾಕ್ಲೀಟಸ್ ಪ್ರಕಾರ ಬದಲಾವಣೆ ಎಂದರೆ ಮರುಪೂರಣ. ನದಿಯ ಒಂದು ಕಣದ ಜಾಗದಲ್ಲಿ ಇನ್ನೊಂದು ಬರುವುದು ಬದಲಾವಣೆ. ಮನುಷ್ಯನ ದೇಹದಲ್ಲಿ ಜೀವಕೋಶಗಳ ಮರುಪೂರಣವೂ ಬದಲಾವಣೆಯೇ. ಒಂದು ವಸ್ತು ನಶಿಸದೆ ಮತ್ತೊಂದು ವಸ್ತುವಿನ ಉಪಸ್ಥಿತಿ ಸಾಧ್ಯವಿಲ್ಲ. ಒಂದು ವಸ್ತು ಇಲ್ಲವಾಗಿ ಆ ಜಾಗ ಖಾಲಿಯಾದಾಗಲಷ್ಟೆ ಅಲ್ಲಿ ಮತ್ತೊಂದು ವಸ್ತು ಬರುವುದು ಮತ್ತು ಬದಲಾವಣೆ ಸಾಧ್ಯವಾಗುವುದು ಎನ್ನುವುದು ಅವನ ಚಿಂತನೆಯ ಸಾರ. ಬೆಂಕಿಯ ಸಾವು ಗಾಳಿಯ ಹುಟ್ಟಿಗೆ ಕಾರಣವಾಗುತ್ತದೆ. ಗಾಳಿಯ ಸಾವಿನಿಂದ ನೀರು ಹುಟ್ಟಿಕೊಳ್ಳುತ್ತದೆ. ಹಾಗೆಯೇ ವಸ್ತುಗಳ ನಡುವಿನ ಸೌಹಾರ್ದದಿಂದ ಸೃಷ್ಟಿಯ ನಿರಂತರತೆ ಸಾಧ್ಯವಾಗಿದೆ ಎನ್ನುವ ಹೆರಾಕ್ಲೀಟಸ್ ಮುಂದುವರೆದು, `ಪ್ರತಿಯೊಂದೂ ಬೆಂಕಿಗೆ ಬದಲಿಯಾಗಿ ಬರುತ್ತವೆ. ಮತ್ತು ಬೆಂಕಿಯು ಅವೆಲ್ಲಕ್ಕೆ ಬದಲಿಯಾಗುತ್ತದೆ. ಇದು, ಚಿನ್ನಕ್ಕೆ ಬದಲಿಯಾಗಿ ವಸ್ತುವನ್ನೂ ವಸ್ತುವಿಗೆ ಬದಲಿಯಾಗಿ ಚಿನ್ನವನ್ನೂ ಕೊಡುವ ವ್ಯವಹಾರದಂತೆ ನಡೆಯುತ್ತದೆ’ ಎನ್ನುವುದು ಅವನು ನೀಡುವ ವಿವರಣೆ.
ನಾವು ಎಳೆದುಕೊಂಡ ಉಸಿರನ್ನು ಹೊರದಬ್ಬಿ ಹೊಸ ಗಾಳಿಯನ್ನು ಎಳೆದುಕೊಳ್ಳುತ್ತೇವೆ. ಹೃದಯ ಕೂಡ ನಿರಂತರವಾಗಿ ಬಡಿಯುತ್ತ ಹೊಸ – ಶುದ್ಧ ರಕ್ತವನ್ನು ತನ್ನೊಳಗೆ ಸೆಳೆದುಕೊಂಡು ದೇಹದ ಉದ್ದಗಲ ಹಂಚುತ್ತದೆ. ನಾವು ಉಸಿರನ್ನು ಹೊರ ದಬ್ಬದೆ, ಹೊಸ ಗಾಳಿಯನ್ನು ತುಂಬಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜೀವಕೋಶಗಳು ಸತ್ತು ಹೊಸತು ಹುಟ್ಟದೆ, ಬದಲಾವಣೆ ಘಟಿಸದೆ, ನಮ್ಮ ದೇಹದ ನಿರಂತರತೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ, ನಾವು ಯಾವ ನಾವಾಗಿ ಉಳಿದಿಲ್ಲವೋ ಆ ನಾವು ಇದ್ದ ಭೂತಕಾಲದ ಬಗ್ಗೆ ಚಿಂತಿಸುವುದು ಏತಕ್ಕಾಗಿ? ಇದನ್ನು ಮನದಟ್ಟು ಮಾಡಿಸುವುದು ಹೆರಾಕ್ಲೀಟಸ್ ಈ ಮೇಲಿನ ಮಾತುಗಳ ಹಿಂದಿನ ಉದ್ದೇಶ.