ಹುಟ್ಟಿ ಬೆಳೆದ ಮರವನ್ನು ಬಿಡಲೊಪ್ಪದ ಗಿಳಿ ಮತ್ತು ದೇವೇಂದ್ರ

giLi 2

ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನೆ ಮಾಡಿ ಚಿಲಿಪಿಲಿಗುಟ್ಟುತ್ತ ಹರ್ಷಿಸುತ್ತಿದ್ದ ಹಕ್ಕಿಗಳು, ಚಿನ್ನಾಟವಾಡುತ್ತಿದ್ದ ಮೃಗ ಸಮೂಹ ಇವೆಲ್ಲವೂ ಶಚೀಪತಿಯ ಮನಸ್ಸನ್ನು ಉಲ್ಲಾಸಗೊಳಿಸಿತ್ತು.
ಹೀಗಿರಲಾಗಿ, ದಾರಿಯಲ್ಲೊಂದು ದೈತ್ಯಾಕಾರದ ವೃಕ್ಷವೊಂದು ಎದುರಾಯ್ತು. ಆದರೆ ಅದು ಪೂರ್ತಿಯಾಗಿ ಒಣಗಿ, ಬೋಳಾಗಿಹೋಗಿತ್ತು. ಜೀವವಿಲ್ಲದ ತೊಗಟೆಗಳನ್ನು ಹೊದ್ದು ನಿಂತಿದ್ದ ಆ ಮರ ವಿಕಾರವಾಗಿಯೂ ಭಯಾನಕವಾಗಿಯೂ ತೋರುತ್ತಿತ್ತು. ಅದರ ಕೆಳ ಟೊಂಗೆಯ ತುದಿಯಲ್ಲೊಂದು ಸೊರಗಿದ ಗಿಳಿ. ಅದಂತೂ ನಿಶ್ಶಕ್ತಿಯಿಂದ ಪೂರಾ ಬಳಲಿಹೋಗಿತ್ತು. ಆದರೂ ಏನೋ ಧ್ಯಾನಿಸುತ್ತ ಕುಳಿತಿದ್ದ ಅದರ ಮುಖದಲ್ಲಿ ತೇಜಸ್ಸು ಹೊಮ್ಮುತ್ತಿತ್ತು.

ದೇವೇಂದ್ರ ಒಣಗಿದ ಮರದಲ್ಲಿ ಕುಳಿತು ಈ ಗಿಳಿ ಏನು ಮಾಡುತ್ತಿದೆ? ಎಂದು ಅಚ್ಚರಿಪಟ್ಟ. ಅದನ್ನು ಕುರಿತು ಮಾತನಾಡಿಸಿದ.
“ಶುಕ ರಾಜ, ಸತ್ತುಹೋಗಿರುವ ಈ ಮರದಲ್ಲಿ ಇನ್ನೂ ಯಾಕೆ ನೆಲೆಸಿದ್ದೀ? ಹಣ್ಣು ಹಂಪಲುಗಳಿಲ್ಲದ ನೀನು ಅದೆಷ್ಟು ಕೃಶವಾಗಿ ಹೋಗಿದ್ದೀ ನೋಡಿಕೊಳ್ಳಬಾರದೆ? ಮತ್ತೆರಡು ದಿನ ನೀನು ಇಲ್ಲೇ ನಿಂತೀಯಾದರೆ ಖಂಡಿತ ಜೀವ ಕಳೆದುಕೊಳ್ಳುವೆ. ಹೋಗು. ಯಾವುದಾದರೂ ಸಂಪದ್ಭರಿತ ಮರಕ್ಕೆ ಹೋಗು. ಬೇಕಾದಲ್ಲಿ ನನ್ನ ಭಟರು ನಿನಗೆ ಸಹಾಯ ಮಾಡುವರು” ಎಂದು ತಿಳಿ ಹೇಳಿದ.

ದೇವ ರಾಜನ ಮಾತಿಗೆ ಗಿಳಿ ಕಣ್ತೆರೆಯಿತು. ಆ ಮಾತುಗಳಿಂದ ಅದು ವಿಸ್ಮಯಗೊಂಡಿತ್ತು. ವಿನಮ್ರವಾಗಿ ನಮಸ್ಕರಿಸುತ್ತ ಅದು ತನ್ನ ವೃತ್ತಾಂತವನ್ನು ತಿಳಿಸಿತು.
“ ದೇವತೋತ್ತಮ, ನಾನು ಕುಳಿತಿರುವ ಈ ವೃಕ್ಷ ಸಾಮಾನ್ಯವಾದುದಲ್ಲ. ಇದು ಕಲ್ಪ ವೃಕ್ಷ. ನನ್ನ ಪೂರ್ವಜರು ಇಲ್ಲಿಯೇ ಜನಿಸಿ, ಇಲ್ಲಿಯೇ ನೆಲೆ ನಿಂತರು. ಲೆಕ್ಕಕ್ಕೆ ಸಿಗದಷ್ಟು ತಲೆಮಾರುಗಳಿಂದ ನನ್ನ ವಂಶಸ್ಥರು ಇಲ್ಲಿ ಆಗಿ ಹೋಗಿದ್ದಾರೆ. ನಾನೂ ಇಲ್ಲಿಯೇ ಹುಟ್ಟಿದೆ, ಇಲ್ಲಿಯೇ ಈ ಮರದ ಸ್ವಾದಿಷ್ಟ ಫಲಗಳನ್ನು ಉಣ್ಣುತ್ತ, ದಟ್ಟ ಎಲೆಗಳ ತಣ್ಣನೆಯ ಆಸರೆಯಲ್ಲಿ ಬೆಳೆದೆ. ಆದರೆ, ವಿಧಿ ನಿಯಮದಂತೆ ಒಂದು ಕಲ್ಪದ ವರೆಗೆ ಬದುಕಿದ್ದ ಈ ವೃಕ್ಷವು ನಿಯಮಿತ ಅವಧಿ ಮುಗಿಸಿ ಜೀವ ತೊರೆಯಿತು.
ಆದರೇನು? ಈ ವೃಕ್ಷವು ಹೂ ಹಣ್ಣೂಗಳನ್ನು ಕೊಡುವಾಗ ನಾನು ಇಲ್ಲಿಯೇ ಇದ್ದೆನಲ್ಲವೇ? ಈಗ ಅದು ಒಣಗಿಹೋಗಿದೆ ಎಂದಾದಾಗ ಬಿಟ್ಟುಹೋಗುವುದು ಕೃತಘ್ನತೆಯಾಗುವುದಿಲ್ಲವೇ?”

ಗಿಳಿಯ ಮಾತಿನಿಂದ ದೇವೇಂದ್ರನಿಗೆ ಮತ್ತಷ್ಟು ಅಚ್ಚರಿಯಾಯಿತು. ಅವನು ಮತ್ತೆ ತಿಳಿಹೇಳಿದ,
“ ಖಗೋತ್ತಮ, ನೀನು ಜ್ಞಾನಿಯೂ ಮೇಧಾವಿಯೂ ಆಗಿರುವೆ. ಆದರೂ ಹೇಳುತ್ತಿದ್ದೇನೆ ಕೇಳು: ಈ ವನಸ್ಪತಿಯು ತನ್ನ ಸ್ವಧರ್ಮವನ್ನು ( ಹೂ- ಹಣ್ಣುಗಳನ್ನು ನೀಡದೆ ಇರುವ ಮೂಲಕ) ಬಿಟ್ಟುಕೊಟ್ಟಿದೆ. ಆದರೂ ನೀನು ನಿನ್ನ ಸ್ವಭಾವವನ್ನು ಅನುಸರಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ನೀನು ಈ ನಿರ್ಜೀವ ಕಲ್ಪ ವೃಕ್ಷದ ಬದಲು ಯಾವುದಾದರೂ ಫಲ ವೃಕ್ಷವನ್ನು ಆಶ್ರಯಿಸುವುದೇ ಸೂಕ್ತವೆನಿಸುತ್ತದೆ”

ದೇವೇಂದ್ರ ಹೆಳಿದಂತೆ, ಗಿಳಿ ನಿಜಕ್ಕೂ ಮೇಧಾವಿ.
“ದೇವ ರಾಜ, ಖಗ- ಮೃಗಗಳು ಚಲನಶೀಲ ಚೈತನ್ಯವನ್ನು ಹೊಂದಿರುತ್ತವೆ. ನಾವು ಕಾಲ ಧರ್ಮಕ್ಕೆ ಒಳಗಾದರೂ ನಮ್ಮ ಸ್ವಭಾವವನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದೇವೆ. ಆದರೆ ವೃಕ್ಶಗಳು ಜಡ ಚೈತನ್ಯಶಾಲಿಗಳು. ಅವುಗಳಿಗೆ ಕಾಲಧರ್ಮಕ್ಕೆ ತಲೆಬಾಗುವ ವಿನಃ ಅನ್ಯ ಮಾರ್ಗವಿಲ್ಲ. ಹೀಗಾಗಿ ಅವು ತಮ್ಮ ಸ್ವಧರ್ಮವನ್ನೂ ಸ್ವಭಾವವನ್ನೂ ತ್ಯಜಿಸಬೇಕಾಗುತ್ತದೆ. ಇಷ್ಟಕ್ಕೂ ಚೈತನ್ಯ ಕಳೆದುಕೊಂಡಿರುವ ವೃಕ್ಷದ ಧರ್ಮ ಕಳೆದಿದೆ ಎಂದ ಮಾತ್ರಕ್ಕೆ ಇನ್ನೂ ಸಚೇತನನಾಗಿರುವ ನಾನು ಸ್ವಭಾವ ಕಳೆದುಕೊಳ್ಳುವುದು ಹೇಗೆ ಸೂಕ್ತವಾದೀತು? ಇಷ್ಟಕ್ಕೂ, ನಿನಗೆ ತಿಳಿಯದ ಸಂಗತಿ ಯಾವುದಿದೆ ಹೇಳು?” ಎಂದು ಮಾರ್ನುಡಿದು ಇಂದ್ರನ ಮೆಚ್ಚುಗೆಗೆ ಪಾತ್ರವಾಯಿತು.

ಶುಕರಾಜನ ಮಾತಿಗೆ ತಲೆದೂಗಿದ ದೇವ ರಜ ಕೇಳಿದ, “ನಿನಗೆ ಈ ಎಲ್ಲ ಸಂಗತಿ ಹೇಗೆ ತಿಳಿಯಿತು? ನೀನು ಹೇಗೆ ಈ ಜ್ಞಾನವನ್ನು ಪಡೆದುಕೊಂಡೆ?”
ಗಿಳಿ ಹೇಳಿತು, ” ನಾನು ಎಂದೂ ಸುಳ್ಳನ್ನಾಡಲಿಲ್ಲ. ಇತರರ ಆಹಾರ ಕಸಿದುಕೊಳ್ಳಲಿಲ್ಲ. ಮಿತ್ರ ದ್ರೋಹ ಮಾಡಲಿಲ್ಲ. ಎಂದೂ ಯಾರನ್ನೂ ಅವಮಾನಿಸಲಿಲ್ಲ. ಈ ಕಾರಣದಿಂದಲೇ ನನಗೆ ಸಹಜವಾದ ನಿರ್ಮಲ ಜ್ಞಾನ ದೊರಕಿದೆ ಎಂದುಕೊಳ್ಳುವೆ”

ಗಿಳಿಯ ವಿನಯವಂತಿಕೆ ಮತ್ತು ಸಚ್ಚರಿತ್ರೆಯಿಂದ ಪ್ರಭಾವಿತನಾದ ದೇವೇಂದ್ರ, ಏನಾದರೊಂದು ವರ ಕೇಳುವಂತೆ ಹೇಳಿದ. ಸ್ವರ್ಗ ಲೋಕದಲ್ಲಿ ಸ್ಥನ ಕೊಡುವೆನೆಂದ. ಅದನ್ನು ನಿರಾಕರಿಸಿದ ಗಿಳಿ, ತನಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ ಕಲ್ಪವೃಕ್ಷದ ಪುನರುಜ್ಜೀವನವನ್ನೇ ಬಯಸಿತು. ಇಂದ್ರ ‘ತಥಾಸ್ತು’ ಎನ್ನುತ್ತಾ, ಕಲ್ಪ ವೃಕ್ಷಕ್ಕೆ ಜೀವದಾನ ಮಾಡಿದ.

 

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a reply to Poorni ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.