ಚಿಂತನ ಮನನದ ಧ್ಯಾನ ವಿಧಿ: ಶಿವೋsಹಮ್ ಸರಣಿ ~1

photo

ಇಲ್ಲೊಂದು ತಮಾಷೆಯಿದೆ… ಈ ಹಾಡನ್ನು ನೀವು ಎಷ್ಟು ಬೇಕಾದರೂ ಕೇಳಿ. ಉರು ಹೊಡೆಯಿರಿ. ಕಂಟಸ್ಥಗೊಳಿಸಿಕೊಳ್ಳಿ. ಇದನ್ನು ನೀವು ಹಾಡುತ್ತಲೇ ಇರಿ. ಅಷ್ಟಾದರೂ ನಿಮಗೆ ನೀವು ಯಾರೆಂದು ಅರಿವಾಗುವುದಿಲ್ಲ! ಮತ್ತೊಬ್ಬರ ಹೇಳಿಕೆಯಿಂದ ನಮಗಿದು ಗೊತ್ತಾಗಿಬಿಡುವ ಹಾಗೆ ಇದ್ದಿದ್ದರೆ, ನಮಗೆಲ್ಲರಿಗೂ ನಾವಾರೆಂದು ಯಾವತ್ತೋ ತಿಳಿದುಹೋಗಿರುತ್ತಿತ್ತು. ಆದರೆ ಈ ಅನುಭಾವ ಗೀತೆಯನ್ನು ಕೇಳಿ – ಅರ್ಥೈಸಿಕೊಂಡ ನಂತರವೂ ನಮಗೆ ನಾವು ಯಾರೆಂದು ಅರಿವಾಗುವುದಿಲ್ಲ. ~ Whosoever Ji

ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ

ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ |

ನ ಚ ವ್ಯೋಮ ಭೂಮಿರ್-ನ ತೇಜೋ ನ ವಾಯುಃ

ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 1 ||

ಅಹಂ ಪ್ರಾಣ ಸಂಙ್ಞೋ ನ ವೈಪಂಚ ವಾಯುಃ

ನ ವಾ ಸಪ್ತಧಾತುರ್-ನ ವಾ ಪಂಚ ಕೋಶಾಃ |

ನವಾಕ್ಪಾಣಿ ಪಾದೌ ನ ಚೋಪಸ್ಥ ಪಾಯೂ

ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 2 ||

ನ ಮೇ ದ್ವೇಷರಾಗೌ ನ ಮೇ ಲೋಭಮೋಹೋ

ಮದೋ ನೈವ ಮೇ ನೈವ ಮಾತ್ಸರ್ಯಭಾವಃ |

ನ ಧರ್ಮೋ ನ ಚಾರ್ಧೋ ನ ಕಾಮೋ ನ ಮೋಕ್ಷಃ

ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 3 ||

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ

ನ ಮಂತ್ರೋ ನ ತೀರ್ಧಂ ನ ವೇದಾ ನ ಯಙ್ಞಃ |

ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ

ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 4 ||

ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ

ವಿಭೂತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ |

ನ ವಾ ಬಂಧನಂ ನೈವ ಮುಕ್ತಿ ನ ಬಂಧಃ |

ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 5 ||

ನ ಮೃತ್ಯುರ್-ನ ಶಂಕಾ ನ ಮೇ ಜಾತಿ ಭೇದಃ

ಪಿತಾ ನೈವ ಮೇ ನೈವ ಮಾತಾ ನ ಜನ್ಮ |

ನ ಬಂಧುರ್-ನ ಮಿತ್ರಂ ಗುರುರ್ನೈವ ಶಿಷ್ಯಃ

ಚಿದಾನಂದ ರೂಪಃ ಶಿವೋಹಂ ಶಿವೋಹಮ್ || 6 ||

lach

ದು ಆದಿ ಶಂಕರಾಚಾರ್ಯರು ರಚಿಸಿದ ಸಾಂಖ್ಯ ಗೀತೆ. ಸಾಂಖ್ಯ ಎಂದರೆ ಶುದ್ಧ ಜ್ಞಾನ ಮಾರ್ಗ. ಜ್ಞಾನ ಮಾರ್ಗದ ಸಾಧಕರು “ನೇತಿ ನೇತಿ” ಮಾರ್ಗವನ್ನು ಅನುಸರಿಸುತ್ತಾರೆ. ತಮ್ಮನ್ನು ಹುಡುಕಾಡುತ್ತ “ಇದೂ ಅಲ್ಲ, ಇದೂ ಅಲ್ಲ” ಎನ್ನುತ್ತ ಒಂದೊಂದನ್ನೆ ಪ್ರತ್ಯೇಕಿಸುತ್ತ ನಡೆಯುವ ಮಾರ್ಗವಿದು. ಈ ಮಾರ್ಗಿಗಳು ಧ್ಯಾನ ಮುದ್ರೆಯಲ್ಲಿ ಕುಳಿತು ತಮ್ಮ ಸ್ವ-ಸ್ವರೂಪದ ಚಿಂತನೆ ನಡೆಸುತ್ತಾರೆ. ವಸ್ತುತಃ ನಾನು ಏನಾಗಿದ್ದೇನೆ, ಯಾರಾಗಿದ್ದೇನೆ, ನನ್ನ ವಾಸ್ತವಿಕತೆಯಾದರೂ ಏನು? ನೈಜ ಸ್ವರೂಪವೇನು? ಇತ್ಯಾದಿಗಳ ಕುರಿತು ಗಹನವಾಗಿ ಧ್ಯಾನಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ತಾವಲ್ಲದ ಪ್ರತಿಯೊಂದನ್ನೂ ಪ್ರತ್ಯೇಕಿಸಿ ನೋಡುತ್ತ ನೋಡುತ್ತ ಅಂತಿಮವಾಗಿ ಇನ್ನು ವಿಭಜಿಸಲು, ಪ್ರತ್ಯೇಕಿಸಲು ಸಾಧ್ಯವೇ ಇಲ್ಲದಂತಹ ಸ್ಥಿತಿಯನ್ನು ತಲುಪಿಕೊಳ್ಳುತ್ತಾರೆ. ಇನ್ನು ತಿಳಿಯಲಿಕ್ಕಾಗಲೀ ಅನುಭವಿಸಲಿಕ್ಕಾಗಲೀ ಏನೂ ಉಳಿದಿರುವುದಿಲ್ಲವೋ ಅಂತಹ ಹಂತವನ್ನು ತಲುಪುವ ಅವರು ತಮ್ಮಲ್ಲೇ ತಾವು ಮುಳುಗಿ ಹೋಗುತ್ತಾರೆ. ಮತ್ತು ಮರಳಿ ಬಂದು “ಅಹಂ ಬ್ರಹ್ಮಾಸ್ಮಿ” ಎಂದು ಘೋಷಿಸುತ್ತಾರೆ.

ಅಂತಹ ಸ್ಥಿತಿಯಿಂದ ಮರಳಿ ಬಂದ ಅವರು ತಮ್ಮ ಸತ್ ಸ್ವರೂಪವನ್ನು, ನೈಜ ಸ್ವರೂಪವನ್ನು “ಚಿದಾನಂದ ರೂಪಶ್ಶಿವೋಹಮ್ ಶಿವೋಹಮ್” ಎಂದು ಬಣ್ಣಿಸುತ್ತಾರೆ. ಅವರು ತಮ್ಮ ಸತ್ ಚಿತ್ ಆನಂದ – ಸಚ್ಚಿದಾನಂದ ಸ್ವರೂಪವನ್ನು ಕಂಡುಕೊಂಡಿರುತ್ತಾರೆ. ಅದೇ ತಮ್ಮ ವಾಸ್ತವಿಕ ರೂಪವೆಂದು ಮನಗಂಡಿರುತ್ತಾರೆ. ಇನ್ನು ಶಂಕರಾಚಾರ್ಯರ ಈ ಗೀತೆ –

ಮನೋಬುದ್ಧಿಯಹಂಕಾರಚಿತ್ತಾನಿ ನಾಹಂ…. ಅರ್ಥಾತ್ ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳು ನಾನಲ್ಲ. ಶಂಕರರು ಹೀಗೆನ್ನುತ್ತಾರೆ. ಅದನ್ನವರು ಅವಾನುಭವದಿಂದ ಅರಿತು ಹೇಳುತ್ತಿದ್ದಾರೆ. ಮೊದಲು ಅವರು ತಾವು ಏನಾಗಿಲ್ಲವೋ ಅದನ್ನು ಹೇಳುತ್ತಿದ್ದಾರೆ. ಅನಂತರವಷ್ಟೆ ಅವರು ತಾವು ಯಾರೆಂದು ಹೇಳುತ್ತಾರೆ. ಇದೇ `ನೇತಿ’ ವಿಧಾನ.

ಇಲ್ಲೊಂದು ತಮಾಷೆಯಿದೆ. ಈ ಹಾಡನ್ನು ನೀವು ಎಷ್ಟು ಬೇಕಾದರೂ ಕೇಳಿ. ಉರು ಹೊಡೆಯಿರಿ. ಕಂಟಸ್ಥಗೊಳಿಸಿಕೊಳ್ಳಿ. ಇದನ್ನು ನೀವು ಹಾಡುತ್ತಲೇ ಇರಿ. ಅಷ್ಟಾದರೂ ನಿಮಗೆ ನೀವು ಯಾರೆಂದು ಅರಿವಾಗುವುದಿಲ್ಲ! ಮತ್ತೊಬ್ಬರ ಹೇಳಿಕೆಯಿಂದ ನಮಗಿದು ಗೊತ್ತಾಗಿಬಿಡುವ ಹಾಗೆ ಇದ್ದಿದ್ದರೆ, ನಮಗೆಲ್ಲರಿಗೂ ನಾವಾರೆಂದು ಯಾವತ್ತೋ ತಿಳಿದುಹೋಗಿರುತ್ತಿತ್ತು. ಆದರೆ ಈ ಅನುಭಾವ ಗೀತೆಯನ್ನು ಕೇಳಿ – ಅರ್ಥೈಸಿಕೊಂಡ ನಂತರವೂ ನಮಗೆ ನಾವು ಯಾರೆಂದು ಅರಿವಾಗುವುದಿಲ್ಲ.

“ಮನೋಬುದ್ಧಿ ಚಿತ್ತಾಹಂಕಾರಗಳು ನಾನಲ್ಲ” – ಶಂಕರರು ಹೀಗೆ ಹೇಳುತ್ತಿದ್ದಾರೆ ಎಂದ ಮೇಲೆ, ಅವರಿಗೂ ಅದು ತಿಳಿದಿಲ್ಲದೆ ಇದ್ದ ಸಮಯವೊಂದಿತ್ತು ಅನ್ನಿಸುತ್ತದೆ. ಮೊದಲು ಅವರಿಗೆ – ನಾನು ಯಾರು? ನಾನು ಏನಾಗಿದ್ದೇನೆ? ಅನ್ನುವ ಪ್ರಶ್ನೆಗಳೆದ್ದಿರಬೇಕು. ಅನಂತರ ಅವರು ಆ ಪ್ರಶ್ನೆಯ ಆಳಕ್ಕಿಳಿದು ಚಿಂತನೆ ನಡೆಸಿದ್ದಿರಬೇಕು. ಅನಂತರ ಸ್ವಾನುಭವದಿಂದಲೇ ಅವರಿಗೆ ತಮ್ಮ ವಾಸ್ತವಿಕತೆಯ ದರ್ಶನವಾಗಿದ್ದಿರಬೇಕು. ಆಮೇಲಷ್ಟೆ ಅವರು ನಾನು ಮನಸ್ಸೂ ಅಲ್ಲ, ಬುದ್ಧಿಯೂ ಅಲ್ಲ, ಚಿತ್ತವೂ ಅಲ್ಲ, ಅಹಂಕಾರವೂ ಅಲ್ಲ ಎಂದು ಹೇಳಲು ಸಾಧ್ಯವಾಗಿರಬೇಕು. ನೆನಪಿರಲಿ, ನಾನು ಏನಾಗಿದ್ದೇನೆ ಎನ್ನುವುದನ್ನು ಕಂಡುಕೊಂಡರೂ ಅದನ್ನು ಹೇಳುವುದು ಸುಲಭವಲ್ಲ. ಆದ್ದರಿಂದಲೇ ಅವರು ನಾನು ಏನಾಗಿದ್ದೇನೆ ಎಂದು ಹೇಳುತ್ತಿಲ್ಲ. ಬದಲಿಗೆ ನಾನು ಏನಾಗಿಲ್ಲ ಅನ್ನುವುದನ್ನು ಹೇಳುತ್ತಿದ್ದಾರೆ. ಯಾವಾಗ ನೀನು ಇದನ್ನು ಅನುಭವಿಸುತ್ತೀಯೋ ಆಗ ನೀನು ಎಷ್ಟು ಇಚ್ಛಿಸಿದರೂ ಅದನ್ನು ಮಾತಲ್ಲಿ ವಿವರಿಸಲಾರೆ. ಏಕೆಂದರೆ ಈ ಅನುಭವವು ಅನುಭೋಕ್ತನಿಗಿಂತ ಭಿನ್ನವಾಗಿರುವುದಿಲ್ಲ. ಇದನ್ನನು ಕಂಡುಕೊಳ್ಳೂವ ಹಂತದಲ್ಲಿ ಅನುಭವವೂ ಅನುಭೋಕ್ತನೂ ಒಂದೇ ಆಗಿಬಿಟ್ಟಿರುತ್ತಾರೆ. ಅನುಭೋಕ್ತನು ಅನುಭವದಲ್ಲಿ ಲೀನವಾಗಿಬಿಟ್ಟಿರುತ್ತಾನೆ. ಅದರಲ್ಲಿ ಸಂಪೂರ್ಣ ಮುಳುಗಿ ತಾನೇ ಸ್ವಯಂ ಅನುಭವವಾಗಿಬಿಟ್ಟಿರುತ್ತಾನೆ.

ವಾಸ್ತವದಲ್ಲಿ ಹೇಳಬೇಕೆಂದರೆ, ಇದನ್ನು ಅನುಭವವೆಂದು ಕರೆಯುವುದು, ತಾಂತ್ರಿಕವಾಗಿ ಸರಿ ಎನ್ನಿಸುವುದಿಲ್ಲ. ಭಾಷೆಗೆ ತನ್ನದೇ ಆದ ಮಿತಿಯಿದೆ. ಯಾವುದನ್ನು ಮನೋಬುದ್ಧಿ ಚಿತ್ತಾಹಂಕಾರಗಳ ಮೂಲಕ ತಿಳಿಯಲು, ಅರ್ಥೈಸಿಕೊಳ್ಳಲು ಅಥವಾ ಅನುಭವಿಸಲು ಸಾಧ್ಯವಾಗುತ್ತದೆಯೋ ಅದನ್ನು ಮಾತ್ರ ಭಾಷೆಯ ಮೂಲಕ ವ್ಯಕ್ತಪಡಿಸಬಹುದು. ಆದರೆ ಸ್ವ ಸ್ವರೂಪವು ಮನಸಿನಾಚೆಗಿನ ಅವಸ್ಥೆಯಾಗಿದೆ. ಅಲ್ಲಿ ಮನಸ್ಸಿಗೆ ಪ್ರವೇಶವಿರುವುದಿಲ್ಲ. ಅದನ್ನು ಶಬ್ದವಾಗಲೀ ಭಾಷೆಯಾಗಲೀ ಸ್ಪರ್ಶಿಸುವುದು ಕೂಡ ಸಾಧ್ಯವಿಲ್ಲ. ಆ ಸ್ಥಿತಿಯ ಬಳಿ ಸಾರುತ್ತ ಸಾರುತ್ತ ಮನೋಬುದ್ಧಿ ಚಿತ್ತಾಹಂಕಾರಗಳೆಲ್ಲ ಕಳಚಿಕೊಳ್ಳುತ್ತ ಹಿಂದಕ್ಕೇ ಉಳಿದುಬಿಡುತ್ತವೆ.

ಯಾವುದು ಇದೆಯೋ, ವಸ್ತುತಃ ಇದೆಯೋ, ಅದು ಕೇವಲ – ನಿರಾಶ್ರಿತ, ನಿಃಸಂಗ, ಅರಚಿತ, ಅವಿಭಜಿತ, ಅವಿಚಾರಣೀಯ, ದಕ್ಕುವಾಚೆಗಿನ ಸ್ಥಿತಿ. ಶಬ್ದ, ಭಾಷೆ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳ ಯಂತ್ರದಿಂದ ಅದನ್ನು ಅರಿಯಲಾಗದು. ಅಳತೆಯ ಈ ಯಂತ್ರಗಳು ಅತ್ಯಂತ ಚಿಕ್ಕವಾಗಿವೆ. ಯಾವುದನ್ನು ಅಳೆಯಲು ಹೊರಟಿದ್ದೇವೋ ಅದು ಅನಂತ – ಅಸೀಮವೂ ಅನಾಮ – ಅರೂಪವೂ ಆಗಿದೆ.

(ಮುಂದುವರಿಯುವುದು….)

4 Comments

  1. Thank you so much beloved…. 🙏….
    Thank you dear____ for beautiful translation….

Leave a Reply to ದಯಾ ದಯಾನಂದCancel reply