ಹಲೋ ಮಿಸ್ಟರ್! ನೀನು ಆರನೆಯವನಾಗಿ ಬರುವೆಯಾ!?

ಗ್ರೀಕ್ ದೇಶದ ಕ್ರೀಟ್ ದ್ವೀಪದಲ್ಲಿ ಬಿಷಪ್ ಕ್ರೆಟಿನ್’ನ ಒಂದು ಪುಟ್ಟ ಚರ್ಚ್ ಇತ್ತು. ಆರಕ್ಕಿಂತ ಕಡಿಮೆ ಜನರಿದ್ದರೆ ಚರ್ಚ್ ತನ್ನ ಸೇವಾ ಪ್ರಾರ್ಥನೆಗಳನ್ನು ನಡೆಸಲಾಗುವುದಿಲ್ಲ ಎಂಬುದು ಆ ಗ್ರೀಕ್ ಸಾಂಪ್ರದಾಯಿಕ ಚರ್ಚಿನ ನಿಯಮಗಳಲ್ಲಿ ಒಂದಾಗಿತ್ತು.

ಅದರಂತೆ ದಿನಾಲೂ ಆ ಊರಿನ ಆರು ಮುದುಕಿಯರು ಸಂಜೆಯ ಪ್ರಾರ್ಥನೆಗೆ ಬರುತ್ತಿದ್ದರು.

ಒಂದು ದಿನ ಅವರಲ್ಲೊಬ್ಬ ಮುದುಕಿ ಸತ್ತುಹೋದಳು.

ಮಾರನೆ ದಿನ ಸಂಜೆ ಪ್ರಾರ್ಥನೆಗೆ ಕೇವಲ ಐವರು ಮುದುಕಿಯರಿದ್ದಾರೆ!

ಬಿಷಪ್ ಚಿಂತಿತನಾದ. ಅವರಲ್ಲೊಬ್ಬ ಮುದುಕಿಯನ್ನು ಕರೆದು, “ಈಗಿಂದೀಗಲೇ ಹೊರಗೆ ಹೋಗಿ ರಸ್ತೆಯಲ್ಲಿ ಕಾದು ನಿಲ್ಲು. ಯಾರಾದರೊಬ್ಬ ದಾರಿಹೋಕನಾದರೂ ಸರಿ, ಆರನೆಯವನನ್ನಾಗಿ ಪ್ರಾರ್ಥನೆಗೆ ಕರೆದು ತಾ. ಆರು ಜನ ಸೇರದೆ ಪ್ರಾರ್ಥನೆ ನಡೆಸಲು ಅವಕಾಶವಿಲ್ಲ” ಅಂದ.

ಅದರಂತೆ, ಮಿಸಸ್ ಸಫ್ಲಾಕಿ ಎಂಬ ಹೆಸರಿನ ಆ ಮುದುಕಿ ರಸ್ತೆಯ ಬದಿಯಲ್ಲಿ ಕಾದು ನಿಂತಳು. ಹತ್ತು ನಿಮಿಷ ಕಳೆಯುವ ಹೊತ್ತಿಗೆ ಒಬ್ಬ ಜರ್ಮನ್ ಪ್ರವಾಸಿ ನಡೆದು ಬರುತ್ತಿರುವುದು ಕಾಣಿಸಿತು. ಅವನು ಹತ್ತಿರ ಬರುತ್ತಿದ್ದಂತೆಯೇ ಮುದುಕಿ ಮಿಸಸ್ ಸಫ್ಲಾಕಿ ಕೈಬೀಸಿ, “ಹೆಲೋ ಮಿಸ್ಟರ್! ನೀನು ಆರನೆಯವನಾಗಿ ಬರುವೆಯಾ!?” ಅಂತ ಕೇಳಿದಳು.

ಆ ಪ್ರವಾಸಿ ಕಾಲುಗಳ ವೇಗ ಹೆಚ್ಚಿಸುತ್ತಾ, “ಅಯ್ಯೋ! ಆರನೆಯವನಾಗಿಯೇ!? ನಾನು ಮೊದಲನೆಯವನಾಗಿಯೂ ಬರಲಾರೆ!!” ಅನ್ನುತ್ತಾ ಹೆಚ್ಚೂಕಡಿಮೆ ಓಡಿಯೇ ಹೋದ!!

(ಓಶೋ ರಜನೀಶ್ ಹೇಳಿದ ದೃಷ್ಟಾಂತ ಕಥೆ)

Leave a Reply