ಜನಪದ ಯುಗಾದಿ : ಗ್ರಾಮೀಣ ಆಟಗಳ ಸಂಭ್ರಮ

ಗ್ರಾಮೀಣ ಭಾಗದ ಯುಗಾದಿಯನ್ನು ನೆನಪಿಸಿಕೊಂಡಾಗ ಅದರ ಮೈಗೆ ಕೆಲವಾದರೂ ಜನಪದ ಆಟಗಳು ಅಂಟಿಕೊಳ್ಳುತ್ತವೆ. ಹಾಗೆ ಅಂಟಿಕೊಂಡ ಆಟಗಳನ್ನು ಬಿಡಿಸಿ ನೋಡತೊಡಗಿದರೆ ಆ ಆಟಗಳ ಝಲಕ್ಕು ರೋಮಾಂಚನಗೊಳಿಸುತ್ತದೆ. ಈಗಲೂ ಗ್ರಾಮೀಣ ಭಾಗದ ಯುಗಾದಿಗೆ ಅಂತಹ ಆಟಗಳು ರಂಗೇರುತ್ತವೆ. ದಶಕದ ಹಿಂದೆ ಸರಿದರೆ ಈ ಅಬ್ಬರ ಕೆಲ ಪ್ರದೇಶಗಳಲ್ಲಿ ಮಂಕಾದರೂ, ಮತ್ತೆ ಕೆಲವು ಪ್ರದೇಶಗಳಲ್ಲಿ ಹೊಸ ಚಲನೆ ಪಡೆದಿವೆ. ಅಂತಹ ಆಟಗಳ ಮೈದಡವಿ ಮಾತನಾಡಿಸಿದರೆ, ಅವುಗಳು ತಮ್ಮ ಇರುವಿಕೆಯನ್ನು ಪಿಸುಮಾತಲ್ಲಿ ಹೇಳಬಲ್ಲವು. ನಾವು ಕಿವಿತೆರೆದು ಕೇಳಬೇಕಷ್ಟೆ.

~ ಡಾ. ಅರುಣ್ ಜೋಳದಕೂಡ್ಲಿಗಿ

folk games in Yugadi (4)ಪ್ರತಿ ಹಬ್ಬಗಳಲ್ಲಿ ಮೈದಳೆವ ಜನಪದ ಆಟಗಳು ಗ್ರಾಮವೊಂದು ತನ್ನ ಮನರಂಜನೆಯನ್ನು ತಾನೇ ಸೃಷ್ಟಿಸಿಕೊಂಡಿದ್ದರ ಫಲ. ಆಗ ಗ್ರಾಮಗಳು ಸ್ವಾವಲಂಬಿಗಳಾಗಿದ್ದವು. ಹಾಗಾಗಿ ಮನರಂಜನೆ ಕೂಡ ಹಳ್ಳಿಯೊಳಗೇ ರೂಪುಗೊಳ್ಳುತ್ತಿತ್ತು. ಮನರಂಜನೆ ವ್ಯಾಪಾರಿ ಸರಕಾಗಿ ಕೊಳ್ಳಬೇಕಾಗಿರುವ ಈ ಸಂದರ್ಭದಲ್ಲಿ ಗ್ರಾಮಗಳ ಹೊಸ ಚೈತನ್ಯದ ಸೆಲೆಯಾಗಿದ್ದ ಜನಪದ ಆಟಗಳತ್ತ ಕಣ್ತೆರೆದು ನೋಡಬೇಕಾಗಿದೆ. ಪ್ರತೀ ಊರಿನ ಹಬ್ಬಗಳಲ್ಲೂ ಅಲ್ಲಿಯದೇ ಪ್ರಾದೇಶಿಕ ಆಟಗಳು ಜೀವಂತಿಕೆ ಪಡೆಯುತ್ತಿದ್ದವು. ಕೆಲವು ಆಟಗಳು ಆಯಾ ಹಬ್ಬಗಳಿಗೆ ವಿಶೇಷವಾದರೆ ಉಳಿದ ಕೆಲವು ಎಲ್ಲಾ ಹಬ್ಬಗಳಲ್ಲೂ ಹೊಸ ಉತ್ಸಾಹವನ್ನು ತುಂಬಿಕೊಳ್ಳುತ್ತಿದ್ದವು.

ಉತ್ತರ ಕರ್ನಾಟಕದ ಗದಗ ಜಿಲ್ಲೆ ಕುರ್ತಕೋಟಿ ಮೊದಲಾದ ಪ್ರದೇಶಗಳಲ್ಲಿ ಯುಗಾದಿ ಪಾಡ್ಯಕ್ಕೆ ಸೂರ್ಯೋದಯಕ್ಕೂ ಮುಂಚೆ ರೈತರು ಹೊಲದಲ್ಲಿರುತ್ತಾರೆ. ಸೂರ್ಯ ಕಂಡೊಡನೆ ಏಕಕಾಲಕ್ಕೆ ಗಳೇವು ಹೂಡುತ್ತಾರೆ, ಹೊಲಕ್ಕೆ ಹೋಗುವಾಗ ರತ್ನಪಕ್ಷಿ ಕಂಡರೆ ಒಳ್ಳೆ ಬೆಳೆ ಎಂದು ನಂಬುತ್ತಾರೆ ಎಂದು ಈ ಭಾಗದ ಕರಿಯಪ್ಪ ಕೊರವಳ್ಳಿ ನೆನೆಯುತ್ತಾರೆ. ಈ ದೃಶ್ಯ ಉತ್ತರ ಕರ್ನಾಟಕ ಮತ್ತು ಹೈದರಾಬಾದ ಕರ್ನಾಟಕದ ಬಹುಪಾಲು ಹಳ್ಳಿಗಳಲ್ಲಿ ಯುಗಾದಿಗೆ ಕಾಣುತ್ತದೆ. ರೈತ ಸಮುದಾಯ ಕೃಷಿಯನ್ನು ಆರಂಭಿಸುವ ದಿನವಾಗಿ ಯುಗಾದಿ ಉತ್ಸಾಹ ತುಂಬುವ ಹಬ್ಬವಾಗಿದೆ. ಹೀಗೆ ನೇಗಿಲ ಹೂಡುವ ಖುಷಿಯ ಭಾಗವಾಗಿ ಜನಪದ ಆಟಗಳು ಚಿಗುರೊಡೆಯುತ್ತವೆ.

ಯುಗಾದಿ ಬೇಸಿಗೆಯಲ್ಲಿ ಬರುವ ಕಾರಣ ಗ್ರಾಮೀಣರಿಗೆ ಕೊಂಚ ಬಿಡುವಿನ ಕಾಲವೂ ಹೌದು. ಈ ಬಿಡುವಿನ ಕಾಲದಲ್ಲಿ ಜನಪದ ಆಟಗಳು ತಮ್ಮ ಪಾದವೂರುತ್ತವೆ. ಹಾಗಾಗಿ ಚಿನ್ನೆಕೋಲು, ಗೋಲಿ, ಕಾಲ್ಚೆಂಡು, ಹುಲಿಮನೆಯಾಟ, ಬುಗುರಿ ಮುಂತಾಟ ಆಟಗಳೆಲ್ಲಾ ಜೀವತಳೆದು ಚಲನೆಗೊಳ್ಳುತ್ತವೆ. ಹೀಗೆ ಚಲನೆಗೊಳ್ಳದ ಎಷ್ಟೋ ಆಟಗಳು ಹೀಗಿದ್ದವು ಎನ್ನುವಲ್ಲಿಗೆ ಮುಟ್ಟಿವೆ. ಈಗಲೂ ಕೆಲವು ಆಟಗಳು ಎಂದಿನ ಆಕರ್ಷಣೆಯನ್ನು ಉಳಿಸಿಕೊಂಡು ಪುಟಿದೇಳುವ ಉತ್ಸಾಹವನ್ನು ತೋರುತ್ತವೆ. ಅಂತಹ ಕೆಲವು ಆಟಗಳ ಜತೆ

ನೀರುಗ್ಗೋ ಆಟ

ಕೆಲವು ಕಡೆ ಗ್ರಾಮೀಣ ಭಾಗದಲ್ಲಿ ಹೋಳಿ ಹಬ್ಬವನ್ನು ಆಚರಿಸುವುದಿಲ್ಲ. ಈ ಹಬ್ಬದ ಒಂದು ಎಳೆಯನ್ನು ಜನರು ಯುಗಾದಿ ಹಬ್ಬದಲ್ಲಿ ಬೆಸೆದಂತಿದೆ. ಅದೆ ‘ನೀರುಗ್ಗೋ ಆಟ’. ಇದು ಹೋಳಿಯನ್ನು ಹೋಲುತ್ತದೆ. ಯುಗಾದಿಯ ಮೂರನೆ ದಿನ ಚಂದ್ರನನ್ನು ನೋಡಿದ ತಕ್ಷಣ ನೀರುಗ್ಗೋ ಆಟ ಶುರುವಾಗುತ್ತದೆ. ಇದು ವಿಶೇಷವಾಗಿ ಯುವಕ ಯುವತಿಯರಲ್ಲಿ ರಂಗೇರುವ ಆಟ. ಅತ್ತೆ ಅಳಿಯನಿಗೆ, ಮಾವ ಸೊಸೆಗೆ, ಸೊಸೆ ಅತ್ತೆ ಮಾವಂದರಿಗೆ, ಹೀಗೆ ಬೀಗರ ಸಂಬಂಧದಲ್ಲಿ ಈ ನೀರುಗ್ಗೋ ಆಟ ಚಾಲ್ತಿಗೆ ಬರುತ್ತದೆ. ಚಂದ್ರ ಕಂಡೊಡನೆ ಊರೆಂಬ ಊರೇ ನೀರಾಟದಲ್ಲಿ ಮುಳುಗುತ್ತದೆ. ಊರು ಮಳೆ ನಿಂತ ಮೇಲೆ ಒದ್ದೆಯಾದಂತೆ ಕಾಣುತ್ತದೆ. ಈಗೀಗ ನೀರಿನ ಜತೆ ಬಣ್ಣವೂ ಸೇರಿ ಇದು ಹೋಳಿಯನ್ನು ಹೋಲುವಂತಿದೆ.

ಸರಮನಿ ಆಟ

ಹೈದರಾಬಾದ ಕರ್ನಾಟಕದ ಬಹುಭಾಗಗಳಲ್ಲಿ ಈಗಲೂ ಯುಗಾದಿಯಲ್ಲಿ ರಂಗೇರುವ ಆಟಗಳಲ್ಲಿ ಸರಮನಿ ಆಟವೂ ಒಂದು. ಈ ಆಟಕ್ಕೆ ಉಪ್ಪಿನ ಮನೆ ಆಟ ಎನ್ನುತ್ತಾರೆ. ಇದು ಮಹಿಳೆಯರ ಕುಂಟೋಬಿಲ್ಲೆಯನ್ನು ಹೋಲುತ್ತದೆ. ಚೌಕಾಕಾರದ ಉದ್ದ ಗೆರೆ ಹಾಕಿ ಅದರೊಳಗೆ ೬ ಮನೆಗಳನ್ನು ಮಾಡಿ ಅದರಲ್ಲಿ ಹಿಟ್ಟು ಹಾಕುತ್ತಾರೆ. ಅದರಲ್ಲಿ ಆರು ಜನ ರಕ್ಷಕ ತಂಡವಿರುತ್ತದೆ. ಹೊರಗಡೆ ಆಕ್ರಮಣದ ತಂಡವಾಗಿ ಆರು ಜನರಿರುತ್ತಾರೆ. ಇದರಲ್ಲಿ ಒಬ್ಬ ಉಪ್ಪಿಡಿದವ ೨೦-೨೫ ಅಡಿ ಉದ್ದದ ಚೌಕದ ಮನೆಯಲ್ಲಿ ಒಳಗಿನವರನ್ನು ತಪ್ಪಿಸಿ ದಾಟಬೇಕಾಗುತ್ತದೆ. ಹೀಗೆ ದಾಟಲು ಒಂದು ಗಂಟೆ ಬೇಕಾಗುತ್ತದೆ. ಉಪ್ಪಿಡಿದಾತ ಮೆನೆಯೊಳಗಿನ ಆರು ಜನರ ಕೈಗೆ ಸಿಕ್ಕರೆ ಆತ ಔಟಾದಂತೆ. ನಂತರ ಹೊರಗಿನ ಐದು ಜನರಲ್ಲಿ ಒಬ್ಬರು ಉಪ್ಪಿಡಿದು ಆಟ ಶುರು ಮಾಡುತ್ತಾರೆ. ಹೀಗೆ ಆರು ಜನರು ಔಟಾದರೆ, ಮನೆಯೊಳಗಿನವರು ಗೆದ್ದಂತೆ. ಮನೆಯೊಳಗಿನವರ ಕೈತಪ್ಪಿಸಿ ಆರು ಮನೆಗಳನ್ನು ಆರು ಜನರೂ ದಾಟಿದರೆ ಆಕ್ರಮಣ ತಂಡ ಗೆದ್ದಂತೆ. ಇದೊಂದು ರೀತಿ ಗೆರಿಲ್ಲ ಯುದ್ದ ಮಾದರಿಯ ಅನುಕರಣೆಯಂತೆ ಕಾಣುತ್ತದೆ. ಈ ಆಟ ರೋಮಾಂಚನಕಾರಿಯಾಗಿರುತ್ತದೆ. ನೋಡುಗರು ಕೇಕೆ, ಶಿಳ್ಳೆಯ ಮೂಲಕ ಆಟಗಾರರನ್ನು ಹುರಿದುಂಬಿಸುತ್ತಾರೆ.

ಗುಂಡೆತ್ತೋ ಕಸರತ್ತು

ಊರ ಮುಂದಣ ಚಾವಡಿಯ ಮುಂದೆಯೋ, ಗ್ರಾಮ ದೇವತೆಯ ಗುಡಿಯ ಮುಂದೆಯೋ ಬೇರೆ ಬೇರೆ ಸೈಜಿನ ಮೂರ‍್ನಾಲ್ಕು ಗುಂಡುಗಳು ಬಿದ್ದಿರುತ್ತವೆ. ಇವು ವರ್ಷವಿಡೀ ಚಳಿ ಮಳೆ ಬಿಸಿಲಿಗೆ ಮೈಯೊಡ್ಡಿ ಸತ್ತಂತಿದ್ದರೂ, ಯುಗಾದಿ ಸಮೀಪಿಸುತ್ತಿದ್ದಂತೆ ಮೈಕೊಡಲಿ ಮೇಲೇಳುತ್ತವೆ. ಆಯಾ ಗುಂಡಿಗೆ ಒಂದೊಂದು ಹೆಸರಿರುತ್ತದೆ. ಆ ಹೆಸರಿನ ಹಿಂದೊಂದು ಕಥೆಯೂ ಇರುತ್ತದೆ. ಬಾರಿಕರ ಮೈಲಪ್ಪ ಒಂದೇ ಒಗೆತಕ್ಕೆ ದೊಡ್ಡ ಗುಂಡನ್ನು ಲೀಲಾಜಾಲವಾಗಿ ಎತ್ತಿದ್ದನಂತೆ. ಹಾಗಾಗಿ ಅದಕ್ಕೆ ಮೈಲಪ್ಪನ ಗುಂಡೆಂದು ಹೆಸರು ನಿಂತಿದೆ. ಈ ಗುಂಡನ್ನು ಮತ್ತೆ ಯಾರೂ ಎತ್ತೆಸೆವ ಸಾಹಸ ಮಾಡಿಲ್ಲ. ಗುಂಡು ಎತ್ತೋ ಸ್ಪರ್ಧೆಯ ಆಟ ಯುಗಾದಿಗೆ ನಡೆಯುತ್ತದೆ. ಹೀಗಾಗಿ ವಯಸ್ಸಿನ ಹುಡುಗರು ಬೆಳಗಿನ ಜಾವ ಕಲ್ಲೆತ್ತುವ ಸಾಹಸ ಶುರು ಮಾಡುತ್ತಾರೆ. ಯುಗಾದಿಗೆ ಬಹಿರಂಗ ಗುಂಡೆತ್ತಾಟ ಇರುತ್ತದೆ. ಗ್ರಾಮೀಣ ಭಾಗದ ಯುವಕರು ಯುವತಿಯರನ್ನು ಸೆಳೆಯಲು ಈ ಕಸರತ್ತು ಮಹತ್ವ ಪಡೆದಿದೆ. ಒಮ್ಮೆಮ್ಮೆ ಮಾವ ಅಳಿಯ ಆಗೋನಿಗೆ ಈ ಗುಂಡೆತ್ತು, ಮಗಳನ್ನ ಕೊಟ್ಟು ಮದ್ವೆ ಮಾಡ್ತೀನಿ ಎನ್ನುವಂತಹ ಸವಾಲು ಪಾಟಿ ಸವಾಲುಗಳೂ ಈ ಸ್ಪರ್ಧೆಯಲ್ಲಿರುತ್ತವೆ.

ಕುಸ್ತಿ

ಯುಗಾದಿಗೆ ಉತ್ತರ ಕರ್ನಾಟಕದ ಕೆಲವೆಡೆ ಕುಸ್ತಿ ಪಂದ್ಯಗಳು ನಡೆಯುತ್ತವೆ. ಇದು ಕೂಡ ಗುಂಡೆತ್ತುವ ಕಸರತ್ತಿನ ಆಟಗಳಂತೆ ಶಕ್ತಿ ಪ್ರದರ್ಶನದ ಆಟವಾಗಿದೆ. ಕುಸ್ತಿ ನಡೆವ ಕಡೆಯಲ್ಲೆಲ್ಲಾ ಯುಗಾದಿಗೆ ಒಂದು ತಿಂಗಳು ಮೊದಲು ಗರಡಿ ಮನೆಗಳು ರೀಚಾರ್ಜ್ ಆಗುತ್ತವೆ. ಬೆಳಗಿನ ಜಾವ ಗರಡಿ ಮನೆಗಳಲ್ಲಿ ಸಾಮು ತೆಗೆಯುವ ಕಸರತ್ತುಗಳು ಜೀವಂತವಾಗುತ್ತವೆ. ಹಳೆಯ ಪೈಲ್ವಾನರು ಹೊಸ ಹುಡುಗರನ್ನು ಹುರುಪಿನಿಂದ ತಯಾರು ಮಾಡುತ್ತಾರೆ. ಯುಗಾದಿ ಹಬ್ಬದ ದಿನಗಳಲ್ಲಿ ಸಾರ್ವಜನಿಕ ಕುಸ್ತಿಯನ್ನು ಏರ್ಪಡಿಸಲಾಗುತ್ತದೆ. ಗೆದ್ದವರ ಕೈಗೆ ಕಡಗ ತೊಡಿಸಲಾಗುತ್ತದೆ. ಇದು ಕೂಡ ಯುವಕರ ಚಿಮ್ಮುವ ಉತ್ಸಾಹಕ್ಕೆ ನೀರೆರೆವ ಸ್ಪರ್ಧೆಯಾಗಿದೆ. ಈಚಿನ ದಿನಗಳಲ್ಲಿ ಯುಗಾದಿಗೂ ಕುಸ್ತಿ ಚೂರು ಮಂಕಾದಂತೆ ಕಾಣುತ್ತದೆ.

ಕುರಿ ಕೋಳಿ ಕಾದಾಟ

folk games in Yugadi (3)ಯುಗಾದಿಗೆ ಮನುಷ್ಯರಷ್ಟೇ ಆಟವಾಡುವುದಿಲ್ಲ. ಕುರಿ ಕೋಳಿಗಳೂ ಆಟಕ್ಕೆ ಸಜ್ಜಾಗುತ್ತವೆ. ಹುಂಜಗಳು ಎದುರಾಳಿ ಹುಂಜವನ್ನು ಕುಕ್ಕಿ ಕೊಂದೇನು ಎಂದು ಬೀಗಿದರೆ, ಟಗರು ಕೊಂಬನ್ನು ಮೀಸೆ ತಿರುವಿದಂತೆ ತಿರುವಿಕೊಂಡು ಎದುರಾಳಿಗೆ ಗುಟುರು ಹಾಕಿ ತೊನೆಯುತ್ತದೆ. ಈ ಕೋಳಿ ಕುರಿ ಸಾಕುದಾರರು ಅವುಗಳಷ್ಟೇ ಉತ್ಸಾಹದಲ್ಲಿ ಕಾದಾಟಕ್ಕೆ ಅವುಗಳನ್ನು ಅಣಿಗೊಳಿಸುತ್ತಾರೆ. ಇದರಲ್ಲಿಯೂ ಚಾಂಪಿಯನ್ ಗಳಿರುತ್ತವೆ. ಪ್ರತಿ ವರ್ಷವೂ ಆಖಾಡದಲ್ಲಿ ಹೊಸ ಹೊಸ ಪ್ರತಿಭೆಗಳು ಸಜ್ಜಾಗುತ್ತವೆ. ಹೀಗೆ ಸಜ್ಜುಗೊಳಿಸುವ ಮಾಲಿಕರ ಕಥನಗಳೇ ಕುತೂಹಲಕರ ಸಂಗತಿ. ಕುರಿ ಕೋಳಿ ಕಾದಾಟದ ಆಟಗಳು ಇಡೀ ಊರನ್ನು ರೋಮಾಂಚನಗೊಳಿಸುತ್ತವೆ.

ಬಚ್ಚಿಟ್ಟದ್ದು ಹುಡುಕೊ ಹಲಗೆಯಾಟ

ನಾನು ಬಾಲ್ಯದಲ್ಲಿ ಹೆಚ್ಚು ಕುತೂಹಲಭರಿತವಾಗಿ ನೋಡುತ್ತಿದ್ದ ಆಟವಿದು. ಒಂದೆಡೆ ಹಣ ಅಥವಾ ಇನ್ನಾವುದೋ ವಸ್ತುವನ್ನು ಬಚ್ಚಿಡಲಾಗುತ್ತದೆ. ಹೀಗೆ ಬಚ್ಚಟ್ಟವರು ಹಲಗೆ ಬಾರಿಸುವವನ ಕಿವಿಯಲ್ಲಿ ಆ ವಸ್ತು ಎಲ್ಲಿದೆ ಎಂದು ಹೇಳುತ್ತಾರೆ. ನಂತರ ಹುಡುಕುವವನ ಕಣ್ಣು ಕಟ್ಟಿ ಗಿಮ್ಮನೆ ತಿರುಗಿಸಿ ಬಿಡುತ್ತಾರೆ. ಆಗ ಹಲಗೆಯವ ತಮಟೆ ನಾದದಲ್ಲಿ ಬಚ್ಚಿಟ್ಟ ವಸ್ತುವಿನ ದಿಕ್ಕು ತೋರಿಸುತ್ತಾನೆ. ಹೀಗೆ ಹಲಗೆ ತೋರುವ ದಿಕ್ಕನ್ನು ಹಿಂಬಾಲಿಸಿ ನಡೆಯುತ್ತಾ ಕೊನೆಗೆ ಬಚ್ಚಿಟ್ಟ ವಸ್ತುವನ್ನು ಹುಡುಕುತ್ತಾರೆ. ಹೀಗೆ ವಸ್ತು ಬಚ್ಚಿಡುವ ಜಾಗಗಳು ನಗೆ ಹುಕ್ಕಿಸುತ್ತವೆ. ಮನೆ ಮೇಲೆಯೋ, ಮರದ ಪೊಟರೆಯಲ್ಲೋ, ಮನೆ ಒಳಗಿನ ಸೋರೆಯಲ್ಲೋ, ಅಜ್ಜಿಯರ ಸೀರೆ ಸೆರಗಿನಲ್ಲಿ ಗಂಟು ಹಾಕುವುದು ಮುಂತಾಗಿ ಮಾಡುತ್ತಾರೆ. ಇಲ್ಲೊಂದು ವಿಶೇಷವಿದೆ. ದಲಿತನೊಬ್ಬ ತೋರುವ ದಾರಿಯಲ್ಲಿ ಮೇಲುಜಾತಿಯ ಆಟಗಾರರು ನಡೆದಾಡುತ್ತಿರುತ್ತಾರೆ. ಇಡೀ ಆಟವನ್ನು ತಮಟೆ ನಿರ್ದೇಶಿಸುತ್ತಿರುತ್ತದೆ. ವರ್ಷವಿಡೀ ಮೇಲುಜಾತಿಗಳ ಹಿಡಿತದಲ್ಲಿದ್ದು ಕೀಳಿರಿಮೆಯಲ್ಲಿರುವ ಜಾತಿಯೊಂದು ತಾತ್ಕಾಲಿಕವಾಗಿ ಈ ಕಟ್ಟನ್ನು ಮೀರುವಿಕೆ ಈ ಆಟದ ವಿಶಿಷ್ಟತೆಯಾಗಿದೆ.

ಹೊನ್ನೆತ್ತು ಹಿಡಿಯುವ ಆಟ

ಚೆನ್ನಾಗಿ ಮೇಯ್ದು ಮೈತುಂಬಿಕೊಂಡ ಎತ್ತನ್ನು ತೊಳೆದು ಶೃಗರಿಸಿ, ಕತ್ತುರಿ, ಮೂಗುದಾರ ತೆಗೆದು ಊರ ರಂಗದ ಮುಂದೆ ನಿಲ್ಲಿಸುತ್ತಾರೆ. ಅದರ ಕೊಂಬಿಗೆ ಬಿಳಿಯ ಬಟ್ಟೆಯಲ್ಲಿ ಹಣದ ನೋಟನ್ನು ಸುತ್ತಿ ಕಟ್ಟುತ್ತಾರೆ. ಅದು ತೋಚಿದ ಕಡೆ ಓಡುವಂತೆ ಬೆದರಿಸುತ್ತಾರೆ. ಹೀಗೆ ಓಡುವ ಎತ್ತನ್ನು ಹಿಡಿದು ನಿಲ್ಲಿಸುವ ತಾಕತ್ತಿದ್ದವನಿಗೆ ಹಣ ಸೇರುತ್ತದೆ. ವರ್ಷವಿಡೀ ದನಗಳೊಂದಿಗೆ ಹೊಡೆದಾಡುವ ರೈತನಿಗೆ ಹಗ್ಗ ಮೂಗುದಾರಗಳಿಲ್ಲದ ಎತ್ತನ್ನು ಹಿಡಿದು ವಶಕ್ಕೆ ತೆಗೆದುಕೊಳ್ಳುವ ನೈಪುಣ್ಯ ಸಾಧನೆಯ ಸಂಕೇತವಾಗಿ ಈ ಆಟ ಕಾಣಿಸಿಕೊಳ್ಳುತ್ತದೆ. ಇದು ಕೃಷಿ ಆರಂಭಿಸುವಾಗ ಎತ್ತುಗಳ ಜತೆ ಒಂದು ಬಗೆಯ ಸಂಬಂಧವನ್ನು ಬೆಸೆವ ಆಟವಾಗಿಯೂ ಕಾಣುತ್ತದೆ.

ಕೋಲಾಟ

folk games in Yugadi (1)ಮನೆಯ ಮೂಲೆಯಲ್ಲಿದ್ದ ಕೋಲಾಟದ ಕೋಲುಗಳಿಗೆ ಯುಗಾದಿಗೊಮ್ಮೆ ಜೀವ ಬರುತ್ತದೆ. ಅವು ಒಂದಕ್ಕೊಂದು ಬಡಿದುಕೊಂಡು ಸದ್ದು ಮಾಡುತ್ತವೆ. ಹೊದ್ದು ಮಲಗಿದಂತಿದ್ದ ಕೋಲಾಟದ ಪದಗಳು ಆಟಗಾರರ ಗುನಗಿನಲ್ಲಿ ಎಚ್ಚರಗೊಳ್ಳುತ್ತವೆ. ಹೀಗೆ ಅರೆಬರೆ ಮರೆತ ಹಾಡುಗಳನ್ನೂ, ಹೊಂದಿಕೆ ತಪ್ಪಿದ ಹೆಜ್ಜೆ ಮತ್ತು ಗತ್ತುಗಳನ್ನೂ ಹೊಂದಿಸಿಕೊಳ್ಳುವಲ್ಲಿ ಕೋಲಾಟದ ಹುಡುಗರು ಚುರುಕಾಗುತ್ತಾರೆ. ಯುಗಾದಿ ದಿನದಂದು ಹೊಸ ಉತ್ಸಾಹದಲ್ಲಿ ಕೋಲಾಟ ಆಡಲು ಸಜ್ಜಾಗುತ್ತಾರೆ.

ಕಬ್ಬಡ್ಡಿ

ಯುಗಾದಿ ಹೊತ್ತಿಗೆ ಎಚ್ಚರಗೊಳ್ಳುವ ಆಟಗಳಲ್ಲಿ ಕಬ್ಬಡ್ಡಿ ಆಟವೂ ಒಂದು. ಈ ಆಟ ಶಾಲಾ ಕ್ರೀಡೆಯೂ ಆಗಿರುವುದರಿಂದ ಇದರಲ್ಲಿ ಗ್ರಾಮೀಣ ಭಾಗದ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇದರಿಂದಾಗಿಯೂ ಕಬ್ಬಡ್ಡಿ ಆಟಕ್ಕೆ ಹೊಸ ಕಳೆ ಬಂದಿದೆ. ಕ್ರಿಕೆಟ್ ಟೂರ್ನಿಗಳಂತೆ ಕೆಲವೆಡೆ ಕಬ್ಬಡ್ಡಿ ಟೂರ್ನಿಗಳನ್ನೂ ನಡೆಸಲಾಗುತ್ತದೆ. ಇದರಿಂದಾಗಿ ಒಂದು ಊರಿಗೆ ಸುತ್ತಮುತ್ತಣ ಹತ್ತಾರು ಊರುಗಳ ಕಬ್ಬಡ್ಡಿ ತಂಡಗಳು ಬರುತ್ತವೆ. ಪ್ರತಿ ಊರಿನ ತಂಡವೂ ಗೆದ್ದು ತಮ್ಮ ಊರಿನ ಪ್ರತಿಷ್ಠೆಯನ್ನು ಎತ್ತಿ ಹಿಡಿವ ಉತ್ಸಾಹದಲ್ಲಿರುತ್ತಾರೆ. ಈ ಅತಿ ಉತ್ಸಾಹ ಕೆಲವೊಮ್ಮೆ ಗಲಭೆಗಳಿಗೂ ಕಾರಣವಾಗಿ ಟೂರ್ನಿಗಳು ಅರ್ಧಕ್ಕೆ ನಿಂತದ್ದೂ ಇದೆ.

ಹೀಗೆ ಮೇಲೆ ಹೇಳಿದ್ದಕ್ಕಿಂತಲೂ ಭಿನ್ನವಾದ ಆಟಗಳು ಆಯಾ ಪ್ರಾದೇಶಿಕ ವಿಶಿಷ್ಟತೆಯೊಂದಿಗೆ ಯುಗಾದಿಗೆ ಜೀವತಳೆಯುತ್ತವೆ. ಇಂತಹ ಆಟಗಳು ಯುಗಾದಿಗೆ ಹೊಸ ಲವಲವಿಕೆಯನ್ನು ತುಂಬಿ ಹಬ್ಬದ ಕಳೆಯನ್ನು ಹೆಚ್ಚಿಸುತ್ತವೆ. ಈಗ ಬಹುಪಾಲು ರೈತ ಸಮುದಾಯದ ಯುವಕರು ಕೆಲಸ ಅರಸಿ ನಗರ ಮಹಾನಗರಗಳಿಗೆ ವಲಸೆ ಹೋಗುವುದಿದೆ. ಹೀಗೆ ವಲಸೆಯಿಂದ ಹಳ್ಳಿಗೆ ಮರಳಿದ ಕೆಲವು ಯುವಕರಲ್ಲಿ ಸಹಜವಾದ ಗ್ರಾಮೀಣ ಮುಗ್ಧತೆ ಕಡಿಮೆಯಾಗಿ ಆಟಗಳಲ್ಲಿ ಪಾಲ್ಗೊಳ್ಳದಿರುವುದಿದೆ. ಮತ್ತೆ ಕೆಲ ಯುವಕರು ಉತ್ಸಾಹದಿಂದ ಆಟಗಳಲ್ಲಿ ಪಾಲ್ಗೊಳ್ಳುವುದೂ ಇದೆ. ಇದು ಈ ಯುವಕರು ನಗರಗಳಲ್ಲಿ ಯಾವ ಕೆಲಸವನ್ನು ಮಾಡುತ್ತಾರೆ ಎನ್ನುವುದನ್ನು ಅವಲಂಬಿಸಿ ನಿರ್ಧಾರವಾದಂತೆ ಕಾಣುತ್ತದೆ. ಅಂತೆಯೇ ಆಧುನಿಕತೆಯ ಭಾಗವಾಗಿ ಮುಂದುವರಿದ ಕೆಲವು ಆಟಗಳು ಈಗಲೂ ಉಳಿದಿವೆ. ಕುಸ್ತಿ, ಗುಂಡೆತ್ತುವ ಶಕ್ತಿ ಪ್ರದರ್ಶನದ ಆಟಗಳು ಜಿಮ್ನಾಸ್ಟಿಕ್ ಆಟಗಳಾಗಿ ಮುಂದುವರಿದಿವೆ. ಕಬ್ಬಡ್ಡಿ ಶಾಲಾ ಕ್ರೀಡೆಯಾದ್ದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ. ಹೀಗೆ ಜನಪದ ಆಟಗಳಿಗೆ ಆಧುನಿಕ ದಾರಿಗಳು ತೆರೆದುಕೊಂಡರೆ ಅವುಗಳೂ ಹೊಸ ನೆಲೆಗಟ್ಟನ್ನು ಪಡೆದುಕೊಳ್ಳಬಲ್ಲವು.

ಚಿತ್ರಗಳು: ನಿರಂಜನ್

(ಅರುಣ್ ಜೋಳದಕೂಡ್ಲಿಗಿ, ಪೋಸ್ಟ್ ಡಾಕ್ಟರಲ್ ಫೆಲೋ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.)

 

 

 

Leave a Reply