ನಿಯಂತ್ರಣವನ್ನು ಸಾಧಿಸುವ ಬಗೆ ಯಾವುದು?

ಅಂಟಿಕೊಳ್ಳುವ ಪ್ರವೃತ್ತಿಯನ್ನು ಬದಿಗಿಟ್ಟು ನಾವಿಬ್ಬರೂ ಭಿನ್ನ ವ್ಯಕ್ತಿತ್ವವುಳ್ಳವರು, ಭಿನ್ನವಾಗಿ ಆಲೋಚಿಸಬಲ್ಲವರು, ಲೋಕಗ್ರಹಿಕೆಗಳೂ ಭಿನ್ನ ಎಂಬ ವಾಸ್ತವಕ್ಕೆ ಎದುರಾದರೆ ಅಹಂ ಮೀರಿದ ಸಂಬಂಧವೊಂದು ಹುಟ್ಟಿಕೊಳ್ಳುತ್ತದೆ. ಇದು ಹೆಚ್ಚು ಶಾಶ್ವತವೂ ಜಗಳಗಳಿಂದ ಮುಕ್ತವಾದುದೂ ಆಗಿರುತ್ತದೆ   ~ ಅಚಿಂತ್ಯ ಚೈತನ್ಯ

achintya chaitanyaನಿಯಂತ್ರಿಸುವುದಕ್ಕೆ ಬಹಳ ಕಷ್ಟವಾದ ಭಾವನೆಗಳು ಯಾವುವು?
ಈ ಪ್ರಶ್ನೆಗೆ ಒಂದು ಬಗೆಯ ಉತ್ತರವಿರುವುದಿಲ್ಲ. ಹೇಗೆಂದರೆ ಈ ಪ್ರಶ್ನೆಯನ್ನು ಮತ್ಯಾರಾದರೂ ನಮಗೆ ಕೇಳಿದರೆ ನಾವು ಕೊಡುವ ಉತ್ತರಗಳು ಬೇರೆ. ನಮಗೆ ನಾವೇ ಉತ್ತರ ಕಂಡುಕೊಳ್ಳಲು ಹೊರಟಾಗ ಸಿಗುವ ಉತ್ತರಗಳು ಬೇರೆ. ಈ ಎರಡೂ ಉತ್ತರಗಳಲ್ಲಿ ಸಾಮಾನ್ಯವಾದ ಒಂದು ಅಂಶವಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಅದು ‘ಕೋಪ’ ಅಥವಾ ‘ಸಿಟ್ಟು’. ಇದೊಂದನ್ನು ನಿಯಂತ್ರಿಸಲಾಗದ ಭಾವನೆ ಎಂಬುದನ್ನು ನಾವು ನಮ್ಮಷ್ಟಕ್ಕೆ ನಾವು ಒಪ್ಪಿಕೊಳ್ಳುವಂತೆಯೇ ಇತರರ ಎದುರೂ ಒಪ್ಪಿಕೊಳ್ಳುತ್ತೇವೆ. ಅಂದರೆ ಇದು ನಿಯಂತ್ರಣಕ್ಕೆ ಒಳಪಡಲೇಬೇಕಾದ ಭಾವನೆ.

ಹೌದು. ನಾವು ಕೋಪವನ್ನು ತಡೆಯಬೇಕಾಗಿಲ್ಲ. ಅದನ್ನು ನಾವು ನಿಯಂತ್ರಿಸಬೇಕು. ಕೋಪಕ್ಕೆ ಸಂಬಂಧಿಸಿದಂತೆ ಗೀತಾಚಾರ್ಯನ ಮಾತುಗಳು ಬಹಳ ಮಾರ್ಮಿಕವಾಗಿವೆ. ಇದು ಮಹಾಭಾರತದ ವಿಧುರ ನೀತಿಯಲ್ಲಿ ಮತ್ತೊಂದು ಬಗೆಯಲ್ಲಿ ಬರುತ್ತದೆ. ಗೀತೆಯ ಎರಡನೇ ಅಧ್ಯಾಯದ 62 ಮತ್ತು 63ನೇ ಶ್ಲೋಕಗಳು ಇದನ್ನು ವಿವರಿಸುವುದು ಹೀಗೆ:
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋsಭಿಜಾಯತೇ (62)
ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ
ಸ್ಮೃತಿಭ್ರಂಶಾತ್ ಬುದ್ಧಿನಾಶೋ ಬುದ್ಧಿನಾಶಾತ್ ವಿನಶ್ಯತಿ (63)

ವಿಷಯಗಳನ್ನೇ ಸದಾ ನೆನಪಿಸಿಕೊಳ್ಳುತ್ತಿದ್ದರೆ ಅದರಲ್ಲಿಯೇ ತೊಡಗಿಕೊಳ್ಳುತ್ತಿದ್ದರೆ ಅವುಗಳ ಜೊತೆಗೊಂದು ಬಂಧ ಅಥವಾ ನಂಟು ಬೆಳೆಯುತ್ತದೆ. ಇದೊಂದು ಬಗೆಯ ಆಸೆಗೆ ಕಾರಣವಾಗುತ್ತದೆ. ಈ ಆಸೆ ಈಡೇರುವುದಿಲ್ಲ ಎಂದ ಕ್ಷಣದಲ್ಲಿ ಕೋಪ ಬರುತ್ತದೆ. ಅಥವಾ ವ್ಯಕ್ತಿ ಸಿಟ್ಟಿಗೇಳುತ್ತಾನೆ. ಕೋಪದ ಫಲಿತಾಂಶವಾಗಿ ಅವನು ಮಾಡಬಾರದ್ದನ್ನು ತನಗರಿವಿಲ್ಲದೆಯೇ ಮಾಡಿಬಿಡುತ್ತಾನೆ. ಯಾವುದಕ್ಕೆಲ್ಲಾ ವಿಧಿ – ನಿಷೇಧಗಳಿವೆಯೋ ಅವುಗಳಲ್ಲಿ ವ್ಯಕ್ತಿ ತೊಡಗಿಕೊಳ್ಳುತ್ತಾನೆ. ತಿಳಿಗೇಡಿಯಂತೆ ವರ್ತಿಸುವುದರಿಂದಾಗಿ ನಾಶ ಸಂಭವಿಸುತ್ತದೆ ಎಂದು ಈ ಶ್ಲೋಕಗಳನ್ನು ಸರಳವಾಗಿ ಅರ್ಥೈಸಬಹುದು.

ವಾಹನ ಚಾಲನೆ ಮಾಡುತ್ತಿರುವಾಗ ರಸ್ತೆಯಲ್ಲಿ ಅಡ್ಡಬಂದ ವಾಹನದವನ ಜೊತೆ ಜಗಳಕ್ಕಿಳಿಯುವ ಉದಾಹರಣೆಯನ್ನೇ ನೋಡಿ. ಸ್ವಲ್ಪ ಸಹನೆಯಿಂದ ಯೋಚಿಸಿದ್ದರೆ ಜಗಳಕ್ಕೆ ಕಾರಣವೇ ಇರುವುದಿಲ್ಲ. ಎದುರಿಗಿರುವವನದ್ದು ಮಹಾಪರಾಧವೇ ಆಗಿದ್ದರು ಅದಕ್ಕಾಗಿ ನಾವು ಸಿಟ್ಟಿಗೇಳುವುದಕ್ಕೆ ಕಾರಣವಿರುವುದಿಲ್ಲ. ಆದರೆ ನಾವು ಕುಳಿತಿರುವ ವಾಹನ ಮತ್ತು ಅದರ ಮೂಲಕ ನಾವು ಭಾವಿಸುವ ರಸ್ತೆಯ ಅಧಿಕಾರದ ಅಹಂಕಾರಗಳೆರಡೂ ಜಗಳಕ್ಕೆ ಹೇತುವಾಗುತ್ತವೆ.

ಇದನ್ನು ಸ್ತ್ರೀ-ಪುರುಷ ಸಂಬಂಧದ ಸಂದರ್ಭಕ್ಕೂ ಅನ್ವಯಿಸಿ ನೋಡಬಹುದು. ನಮ್ಮ ಅಂಟಿಕೊಳ್ಳುವ ಪ್ರವೃತ್ತಿಯೇ ಇಲ್ಲೊಂದು ಸಮಸ್ಯೆಗೆ ಕಾರಣವಾಗಿರುತ್ತದೆ. ಒಂದನ್ನು ಹೊಂದಬೇಕು ಮತ್ತು ಅದು ನನ್ನ ನಿಯಂತ್ರಣದಲ್ಲಿರಬೇಕು ಎಂಬ ಆಸೆಯೇ ಅಲ್ಲಿ ಕ್ರೋಧ ಜನಕವಾಗಿಬಿಡುತ್ತದೆ.
ಈ ಅಂಟಿಕೊಳ್ಳುವ ಪ್ರವೃತ್ತಿಯನ್ನು ಬದಿಗಿಟ್ಟು ನಾವಿಬ್ಬರೂ ಭಿನ್ನ ವ್ಯಕ್ತಿತ್ವವುಳ್ಳವರು, ಭಿನ್ನವಾಗಿ ಆಲೋಚಿಸಬಲ್ಲವರು, ಲೋಕಗ್ರಹಿಕೆಗಳೂ ಭಿನ್ನ ಎಂಬ ವಾಸ್ತವಕ್ಕೆ ಎದುರಾದರೆ ಅಹಂ ಮೀರಿದ ಸಂಬಂಧವೊಂದು ಹುಟ್ಟಿಕೊಳ್ಳುತ್ತದೆ. ಇದು ಹೆಚ್ಚು ಶಾಶ್ವತವೂ ಜಗಳಗಳಿಂದ ಮುಕ್ತವಾದುದೂ ಆಗಿರುತ್ತದೆ.

ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬ ಪರಿಕಲ್ಪನೆಯನ್ನು ನಾವು ಸದಾ ಸನ್ಯಾಸಕ್ಕೆ ಮಾತ್ರ ಅನ್ವಯಿಸಿ ಅರ್ಥೈಸುತ್ತಿರುತ್ತೇವೆಯೇ ಹೊರತು ಅದನ್ನು ವೈಯಕ್ತಿಕ ಸ್ವಾತಂತ್ರ್ಯದ ಪರಿಕಲ್ಪನೆಯಂತೆ ನೋಡುವುದೇ ಇಲ್ಲ. ಸಂಬಂಧಗಳಲ್ಲಿ ಪರಸ್ಪರರಿಗೆ ಅವರವರ space ಕಂಡುಕೊಳ್ಳುವಂತೆ ಇದನ್ನು ಅರ್ಥಮಾಡಿಕೊಂಡರೆ ನಮ್ಮ ಸಂಬಂಧಗಳು ಮಧುರವಾಗುತ್ತವೆ. ಇದು ಕೇವಲ ಸ್ತ್ರೀ-ಪುರುಷ ಸಂಬಂಧವಷ್ಟೇ ಅಲ್ಲ, ವೃತ್ತಿ ಬಾಂಧವ್ಯಗಳ ಮಟ್ಟಿಗೂ ನಿಜವೇ.
ಇದನ್ನು ಅರ್ಥ ಮಾಡಿಕೊಂಡರೆ, ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿ ಅಥವಾ ನಿಮ್ಮ ಕೆಳಗಿರುವ ನೌಕರರ ಜೊತೆಗೆ ನೀವು ವ್ಯವಹರಿಸುವ ಮಾದರಿಯೇ ಬದಲಾಗಿಬಿಡುತ್ತದೆ. ಅವರ ಸ್ಥಾನದಲ್ಲಿ ನಿಂತು ನೀವು ಆಲೋಚಿಸ ತೊಡಗುತ್ತೀರಿ. ನಿಮಗಾಗುತ್ತಿರುವ ತೊಂದರೆಯನ್ನು ಸಿಟ್ಟಿನ ಬದಲಿಗೆ ಅನುನಯದಲ್ಲಿ ವಿವರಿಸುವ ಶಕ್ತಿ ನಿಮಗೆ ತಾನೇ ತಾನಾಗಿ ಪ್ರಾಪ್ತವಾಗಿಬಿಡುತ್ತದೆ.

Leave a Reply