ಅಹಂಕಾರಕ್ಕೆ ವಿರುದ್ಧವಾದುದು ಅಹೋಭಾವ. ಇಲ್ಲಿ ನಾನು ಅನ್ನುವ ಪ್ರಶ್ನೆಯೇ ಇರುವುದಿಲ್ಲ. ಮಹತ್ತು ಮಾತ್ರ ಇದೆ, ಅದು ಎಲ್ಲವನ್ನೂ ವ್ಯಾಪಿಸಿಕೊಂಡಿದೆ ಎನ್ನುವ ಚಿಂತನೆ. ~ ವಿದ್ಯಾಧರ
ಅಹಂಕಾರ – ಅಹೋಭಾವಕ್ಕೆ ತದ್ವಿರುದ್ಧವಾದದ್ದು. ‘ಅದ್ವೈತವಳಿದು ಅಹಂಕಾರಿಯಾದೆ…’ ಯಾವಾಗ ನಮ್ಮಲ್ಲಿ ಭಗವಂತನೊಂದಿಗಿನ ತಾದಾತ್ಮ್ಯ, ಗುರುತು ಮರೆಯುತ್ತದೆಯೋ ಆಗ ನಾವು ಅಹಂಕಾರಿಯಾಗುತ್ತೇವೆ.
ಅಹಂಕಾರಿ ಅಂದ್ರೆ ನಾವು ತಿಳಿದಿರುವ ಹಾಗೆ ಅರೋಗೆನ್ಸ್, ಕೊಬ್ಬು, ಇತ್ಯಾದಿಯಲ್ಲ. ಆಧ್ಯಾತ್ಮಿಕ ಅರ್ಥದಲ್ಲಿ ಅಹಂಕಾರ ಅಂದ್ರೆ ‘ಈ ದೇಹವೇ ನಾನು’ ಅನ್ನುವ ಭ್ರಮೆ. ನಾನು ಇಂಥವರ ಮಗ, ಇಂಥ ಹೆಸರುಳ್ಳ ವ್ಯಕ್ತಿ, ಈ ದೇಹದ ಆರೋಗ್ಯ ನನ್ನ ಆರೋಗ್ಯ, ಈ ದೇಹದ ವಿದ್ಯಾಭ್ಯಾಸ ನನ್ನ ವಿದ್ಯಾಭ್ಯಾಸ, ಈ ದೇಹದ ಶ್ರೀಮಂತಿಕೆ ನನ್ನ ಶ್ರೀಮಂತಿಕೆ, ಈ ದೇಹದ ಮನೆಯೇ ನನ್ನ ಮನೆ ಎಂದೆಲ್ಲ ಈ ದೇಹವನ್ನು ಆಧಾರವಾಗಿಟ್ಟುಕೊಂಡು ಮಾಡುವ ಎಲ್ಲ ಯೋಚನೆಗಳು ‘ಅಹಂಕಾರ’. ನಾನು ಈ ದೇಹ ಅನ್ನುವ ಕಲ್ಪನೆ ಉಂಟುಮಾಡುವ ಎಲ್ಲ ಚಿಂತನೆಗಳು ಅಹಂಕಾರ.
ಈ ಅಹಂಕಾರಕ್ಕೆ ವಿರುದ್ಧವಾದುದು ಅಹೋಭಾವ. ಇಲ್ಲಿ ನಾನು ಅನ್ನುವ ಪ್ರಶ್ನೆಯೇ ಇರುವುದಿಲ್ಲ. ಮಹತ್ತು ಮಾತ್ರ ಇದೆ, ಅದು ಎಲ್ಲವನ್ನೂ ವ್ಯಾಪಿಸಿಕೊಂಡಿದೆ ಎನ್ನುವ ಚಿಂತನೆ. ಎಲ್ಲ ಜಡ ಚೇತನಗಳಲ್ಲಿ ಯಾವುದು ತತ್ತ್ವಸ್ವರೂಪಿಯಾಗಿ ಅಡಗಿದೆ, ಮತ್ತು ಗೋಚರವಾಗಿಯೂ ತೋರುತ್ತಿದೆ’ ಯಾವ ‘ಒಂದು’ ಎಲ್ಲದೊರಳಗೂ ಇದೆ – ಹಾಗೆ ಇದೆ ಅನ್ನುವ ಅರಿವು ಅಹೋಭಾವ.
ಉದಾಹರಣೆಗೆ ಈ ಬೀಜ. ಈ ಬೀಜ ಮಣ್ಣಲ್ಲಿ ಮೊಳೆಯೋದು, ಅದು ಗಿಡವಾಗೋದು, ಹೂ ಬಿಟ್ಟು ಕಾಯಾಗಿ ಹಣ್ಣಾಗೋದು, ಮತ್ತೆ ಅದರ ಬೀಜ ಮಣ್ಣಿಗೆ ಬಿದ್ದು ಮೊಳೆಯೋದು… ಇವೆಲ್ಲ ಹೇಗೆ ಘಟಿಸುತ್ತದೆ? ಅದು ಹೇಗೆ ನಾವು ಉಸಿರಾಡುವ ಆಕ್ಸಿಜನ್ ಅನ್ನು ಗಿಡಗಳು ನಮಗೆ ನೀಡುತ್ತವೆ? ಅವು ಯಾಕೆ ನೀಡಬೇಕು? ಏನು ಈ ವ್ಯವಸ್ಥೆ? ಈ ಯೋಜನೆ ರೂಪಿಸಿದವರಾರು? ಈ ಎಲ್ಲವನ್ನು ಒಳಗೊಂಡ ಚಿಂತನೆಯೇ ‘ಅಹೋಭಾವ’.
ಈ ಚಲನಶೀಲ ಜಗತ್ತು ಒಂದರೊಳಗೊಂದು ಹೆಣೆದುಕೊಂಡು ನಡೆಯುತ್ತಲೇ ಇದೆ. ಇದು ಗಿಡದಲ್ಲಿಯೂ ನಡೆಯುತ್ತಿದೆ, ನಮ್ಮೊಳಗೂ ನಡೆಯುತ್ತಿದೆ, ಮತ್ತೆಲ್ಲೋ ಕೂಡಾ ನಡೆಯುತ್ತಲೇ ಇದೆ. ನಾನು ಈ ಒಟ್ಟು ನಡಿಗೆಯ ಭಾಗವಾಗಿದ್ದೇನೆ ಎನ್ನುವ ಅರಿವು ‘ಅಹೋಭಾವ’. ನಾನು ನನ್ನ ದೇಹ ಅನ್ನುವ ಗುರುತು ‘ಅಹಂಕಾರ’. ನಾನು ಮಹತ್ತಿನೊಳಗೆ ಅಡಕವಾಗಿರುವ ಒಟ್ಟು ಚಲನೆಯ ಭಾಗ ಎನ್ನುವ ತಿಳಿವು ‘ಅಹೋಭಾವ’.